ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಎನ್ನುತ್ತ ಸರ್ಕಾರಗಳು ಫ್ಯಾಮಿಲಿ ಪ್ಲ್ಯಾನಿಂಗ್ ಶಸ್ತ್ರಕ್ರಿಯೆ ಗುರಿ ತಲುಪುವಲ್ಲಿ ಕಸರತ್ತು ಮಾಡುತ್ತಿರುವಾಗಲೇ ಚಿಂಚೋಳಿ ಮೂಲದ ಸ್ತ್ರೀರೋಗ ತಜ್ಞ ಡಾ. ಶಾಂತವೀರ ಸುಂಕದ ಎಲ್ಲರ ಕಣ್ಣರಳಿಸಿದ್ದಾರೆ. ಎರಡೂವರೆ ದಶಕದಲ್ಲಿ 2.14 ಲಕ್ಷ ಜನರಿಗೆ ಯಶಸ್ವಿ ಕುಟುಂಬ ಕಲ್ಯಾಣ ಶಸ್ತ್ರಕ್ರಿಯೆ ನೆರವೇರಿಸಿ ಬೆರಗುಗೊಳಿಸಿದ್ದಾರೆ.
1985ರಿಂದಲೇ ಈ ಸೇವೆ ಶುರುಹಚ್ಚಿಕೊಂಡ ಡಾ. ಸುಂಕದ 70ರ ಇಳಿ ವಯಸ್ಸಿನಲ್ಲೂ ವಾರಕ್ಕೆರಡು ಬಾರಿ (ಬಸವೇಶ್ವರ ಆಸ್ಪತ್ರೆಯಲ್ಲಿ) ಸರಾಸರಿ 5ರಿಂದ 10 ಕುಟುಂಬ ಕಲ್ಯಾಣ ಶಸ್ತ್ರಕ್ರಿಯೆ ನಡೆಸುತ್ತಿದ್ದಾರೆ. ಇಷ್ಟು ಶಸ್ತ್ರಕ್ರಿಯೆಗಳನ್ನು ಪ್ರಪಂಚದ ಯಾವೊಬ್ಬ ವೈದ್ಯನೂ ಮಾಡಿಲ್ಲ. ಹೀಗಾಗಿ, ಇವರು ಗಿನ್ನೆಸ್ ಪುಸ್ತಕಕ್ಕೆ ದಾಖಲಾಗುತ್ತಿದ್ದಾರೆ.
ಸೌಲಭ್ಯಗಳೇ ಇಲ್ಲದ ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳ ನೂರಾರು ಹಳ್ಳಿ ಸುತ್ತಿ ಚಿಕ್ಕ ಕುಟುಂಬದ ಪರಿಕಲ್ಪನೆ ಹೇಳುತ್ತ ಕುಟುಂಬ ಕಲ್ಯಾಣ ಶಸ್ತಕ್ರಿಯೆ ಮಾಡಿರುವ ಡಾ. ಸುಂಕದ, 'ವಿಭೂತಿ ಡಾಕ್ಟರ್' ಎಂದೇ ಪ್ರಸಿದ್ಧಿ. ಏಕೆಂದರೆ ಸೌಮ್ಯ ಸ್ವಭಾವದ ಸುಂಕದ ಬಸವಣ್ಣನವರ ಅನುಯಾಯಿ. ಹಣೆ ಮೇಲೆ ಸದಾ ವಿಭೂತಿಯೊಂದಿಗೇ ಕಾಯಕ, ಹೀಗಾಗಿ ಹಳ್ಳಿ ಮಂದಿ ವಿಭೂತಿ ಡಾಕ್ಟರ್ ಎಂದೇ ಕರೆದರು.
ಒಂದೇ ದಿನ 8 ಗಂಟೆಗಳಲ್ಲಿ 201 ಲೆಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿದ್ದು ಇವರ ಜೀವಿತಾವಧಿಯಲ್ಲಿನ ಬಹುದೊಡ್ಡ ಸಾಧನೆ. <
ಶಸ್ತ್ರಕ್ರಿಯೆ ವಿವರ
ವ್ಯಾಸೆಕ್ಟಮಿ (ಪುರುಷ ಸಂತಾನಹರಣ ಶಸ್ತ್ರಕ್ರಿಯೆ)- 12 ಸಾವಿರ
ಮಿನಿ ಲ್ಯಾಪ್ರೋಸ್ಕೋಪಿಕ್
ಸರ್ಜರಿ- 15 ಸಾವಿರ
ಲ್ಯಾಪ್ರೋಸ್ಕೋಪಿ ಸರ್ಜರಿ- 1.87 ಲಕ್ಷ
ಭಾಗವಹಿಸಿದ ಶಿಬಿರಗಳು- 3,747
ಶೇಷಮೂರ್ತಿ ಅವಧಾನಿ