ವೈದ್ಯೋ ನಾರಾಯಣ!
ಜರ್ಮನಿ, ಇಂಗ್ಲೆಂಡ್ಗಳಲ್ಲಿ ವೈದ್ಯಕೀಯ ಓದು. ಎಂತೆಂಥ ಆಫರ್ಗಳು. ಅಲ್ಲಿ ಮಾತ್ರವಲ್ಲ, ಬೆಂಗಳೂರು, ಮೈಸೂರುಗಳಲ್ಲೂ ಕಾರ್ಪೊರೆಟ್ ಆಸ್ಪತ್ರೆಗಳು...
ಜರ್ಮನಿ, ಇಂಗ್ಲೆಂಡ್ಗಳಲ್ಲಿ ವೈದ್ಯಕೀಯ ಓದು. ಎಂತೆಂಥ ಆಫರ್ಗಳು. ಅಲ್ಲಿ ಮಾತ್ರವಲ್ಲ, ಬೆಂಗಳೂರು, ಮೈಸೂರುಗಳಲ್ಲೂ ಕಾರ್ಪೊರೆಟ್ ಆಸ್ಪತ್ರೆಗಳು ಇವರನ್ನು ಸೆಳೆದುಕೊಳ್ಳಲು ಪೈಪೋಟಿಗೆ ಇಳಿದಿದ್ದವು. ಆದರೆ ಡಾ.ಶಂಕರ ನಾರಾಯಣ ಬಿಜಾಪುರ ಎನ್ನುವ ತರುಣನಿಗೆ ಹುಬ್ಬಳ್ಳಿಯ ಸೆಳೆತ. ಅದಕ್ಕಿಂತ ಮಿಗಿಲಾಗಿ ತಾನು ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಓದುತ್ತಿದ್ದಾಗ ನೀಡಿದ್ದ ವಾಗ್ದಾನ ಈಡೇರಿಸುವ ತುಡಿತ.
ರಾಮಕೃಷ್ಣಾಶ್ರಮದಲ್ಲಿ ಓದುತ್ತಿದ್ದಾಗ ಇನ್ನೂ ಡಾಕ್ಟರ್ ಆಗುವ ಕನಸೂ ಮೂಡಿರಲಿಲ್ಲ. ಒಮ್ಮೆ 'ಮುಂದೆ ಏನಾಗುತ್ತೀ' ಎನ್ನುವ ಪ್ರಶ್ನೆ ಸ್ವಾಮಿಗಳಿಂದ ಬಂದಾಗ, 'ನಾನು ಎಷ್ಟು ಓದುತ್ತೇನೋ ಗೊತ್ತಿಲ್ಲ. ಎಷ್ಟೇ ಓದಿದರೂ ನಾನು ಓದಿದ ವಿಷಯದ ತಜ್ಞರು ಇಲ್ಲದ ಹಿಂದುಳಿದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತೇನೆ' ಎಂದು ಆವೇಶದಲ್ಲಿ ನುಡಿದಿದ್ದರು. ಮಾತು ಮುಗಿದು ಐದು ನಿಮಿಷವಾದರೂ ಸುತ್ತ ಇದ್ದವರ ಚಪ್ಪಾಳೆ, ಹೊಗಳಿಕೆ ನಿಂತಿರಲಿಲ್ಲ. ಆಗ ತಮ್ಮ ಮಾತಿನ ಮಹತ್ವ ಏನು ಎನ್ನುವುದು ಮನವರಿಕೆ ಆಯಿತು. ಪ್ರಸೂತಿ ಮತ್ತು ಲೈಂಗಿಕ ತಜ್ಞ ಡಾ.ಶಂಕರ್ ತಾವು ಅಂದು ಆಡಿದ್ದ ಮಾತು ಉಳಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರುಗಳ ಎರಡು ಆಸ್ಪತ್ರೆಗಳ ನಂಟು ಬಿಡಲು ಸಾಧ್ಯವಾಗದಿದ್ದರೂ, ತಮ್ಮ ನೆಲೆಯನ್ನು ಹುಬ್ಬಳ್ಳಿಯಲ್ಲಿಯೇ ಗಟ್ಟಿಗೊಳಿಸಿಕೊಂಡಿದ್ದಾರೆ. ಆ ಆಸ್ಪತ್ರೆಗಳಿಗೆ ಸಂದರ್ಶಕ ವೈದ್ಯರಾಗಿ ಭೇಟಿ ನೀಡಿದರೂ ಪ್ರಾಕ್ಟೀಸ್ ಮಾತ್ರ ತಮ್ಮೂರಿನಲ್ಲಿಯೇ.
ಬಿಜಾಪುರ ಡಾಕ್ಟರ್ ವಿಶೇಷ ಎಂದರೆ ಚಿಕಿತ್ಸೆ ನೀಡಿ ಸುಮ್ಮನಾಗುವುದಿಲ್ಲ. ಆ ಕಾಯಿಲೆಯ ಮೂಲ ಏನು? ಮತ್ತೆ ತೊಂದರೆ ಮರುಕಳಿಸದಿರಲು ಏನು ಮಾಡಬೇಕು ಎನ್ನುವ ಕುರಿತು ಮನವರಿಕೆ ಮಾಡಿಕೊಡುತ್ತಾರೆ. ಆ ನಿಟ್ಟಿನಲ್ಲಿ ಮಾನಸಿಕವಾಗಿ, ಭಾವನಾತ್ಮಕವಾಗಿ ರೋಗಿಗಳನ್ನು ಸಜ್ಜುಗೊಳಿಸುತ್ತಾರೆ. ಫ್ಯಾಮಿಲಿ ಪಿಜಿಶಿಯನ್ಗಳು ತೋರುವ ಕಾಳಜಿ, ಪ್ರೀತಿಯನ್ನೇ ತೋರುತ್ತಾರೆ. ಬಂಜೆತನ ನಿವಾರಣೆ ಮತ್ತು ಕನಿಷ್ಠ ಛೇದನ ಶಸ್ತ್ರಚಿಕಿತ್ಸೆ ಇವರ ಆಸಕ್ತಿಯ ಕ್ಷೇತ್ರ. ಪತ್ನಿ ಡಾ.ಪ್ರಿಯಾ ಶಂಕರ್ ಕಿಮ್ಸ್ನಲ್ಲಿ ಸಹಾಯಕ ಪ್ರಾಧ್ಯಾಪಕಿ.
ಎಂಬಿಎ ಪದವೀಧರ
ಡಾ.ಶಂಕರ ನಾರಾಯಣ ಬಿಜಾಪುರ ಕೋಲ್ಕತ್ತ ಐಐಎಂನಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಅದೂ ವೈದ್ಯರಾಗಿ ಹೆಸರು ಗಳಿಸಿದ ನಂತರ! 'ವೈದ್ಯರ ಬಗ್ಗೆ ಜನರಿಗೆ ಒಳ್ಳೆಯ ಭಾವನೆ ಇರುತ್ತದೆ. ಆದರೆ ಆಸ್ಪತ್ರೆಯ ಉಳಿದ ಸಿಬ್ಬಂದಿಯ ವರ್ತನೆ ಸ್ನೇಹಪರವಾಗಿರುವುದಿಲ್ಲ. ವೈದ್ಯರ ತಪಾಸಣೆ ಜತೆಗೆ ವೈದ್ಯಕೀಯ ಮತ್ತು ವೈದ್ಯಕೀಯೇತರ ಸೇವೆಗಳೂ ಚೆನ್ನಾಗಿರಬೇಕು. ರೋಗಿಗಳಿಗೆ ಆಸ್ಪತ್ರೆ ಎಂದರೆ ಕಿರಿಕಿರಿ ಅನ್ನಿಸಬಾರದು. ಎಂಬಿಎ ಮಾಡಿದರೆ ಆಸ್ಪತ್ರೆಗಳಲ್ಲಿನ ಎಲ್ಲಾ ವಿಭಾಗಗಳಲ್ಲೂ ಸುಧಾರಣೆ ಮಾಡಬಹುದು ಅನ್ನಿಸಿತು. ಹೀಗಾಗಿ ಎಂಬಿಎ ಮಾಡಿದೆ' ಎನ್ನುತ್ತಾರೆ ಡಾ.ಶಂಕರ್.
ಹುಬ್ಬಳ್ಳಿಯ ಬಹುತೇಕ ಪ್ರತಿಷ್ಠಿತ ಕುಟುಂಬಗಳ ಸದಸ್ಯರು ಇವರಲ್ಲಿಗೆ ಬರುತ್ತಾರೆ. ಅದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಬಡವರು ಬರುತ್ತಾರೆ. ಎಲ್ಲರಿಗೂ ಡಾಕ್ಟರ್ ತೋರುವುದು ಒಂದೇ ರೀತಿಯ ಪ್ರೀತಿ.
'ಎಂಬಿಎ ಲೈನ್ನಲ್ಲಿಯೇ ಮುಂದುವರಿಯಬಹುದಿತ್ತು. ಆದರೆ ವೈದ್ಯ ವೃತ್ತಿ ನನಗೆ ಪ್ರಿಯವಾದದ್ದು. ಚಿಕಿತ್ಸೆ ಪಡೆದವರು ಗುಣಮುಖರಾದ ನಂತರ ಬಂದು 'ನಾನೀಗ ನೆಮ್ಮದಿಯಿಂದ ಇದ್ದೇನೆ' ಎನ್ನುವಾಗ ಸಿಗುವ ಆನಂದ ಮತ್ತಾವುದರಲ್ಲೂ ದೊರೆಯುವುದಿಲ್ಲ' ಎಂದು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕುಗ್ರಾಮಗಳೂ ಚಿಕ್ಕ ಕ್ಲಿನಿಕ್ಗಳನ್ನು ಹೊಂದುವಂತಾಗಬೇಕು, ಆ ನಿಟ್ಟಿನಲ್ಲಿ ವೈದ್ಯರನ್ನು ಪ್ರೇರೇಪಿಸಬೇಕು ಎನ್ನುವುದು ಅವರ ಆಸೆ.
ಡಾಕ್ಟರ್ ಸಂಪರ್ಕ: 0836-23522244.
ಆಸ್ಪತ್ರೆಗಳಲ್ಲಿ ಎಷ್ಟೇ ಆಧುನಿಕ ಸೌಲಭ್ಯಗಳಿದ್ದರೂ ರೋಗಿಯ ಆರೋಗ್ಯ ಸುಧಾರಣೆಯಲ್ಲಿ ಪಾತ್ರ ವಹಿಸುವುದು ವೈದ್ಯರ ಮನಸ್ಸು, ಸೇವಾ ಭಾವನೆ ಮತ್ತು ಬದ್ಧತೆ. ಎಷ್ಟೇ ಗಂಭೀರ ಕಾಯಿಲೆ ಇದ್ದರೂ ಅದರ ತೀವ್ರತೆ ರೋಗಿಗೆ ಗೊತ್ತಾಗದ ರೀತಿಯಲ್ಲಿ ತಿಳಿಸಿಕೊಡಬೇಕು. ಕಾಯಿಲೆಯ ಮುನ್ಸೂಚನೆ ಸಿಕ್ಕಾಗ ಅದು ಬರದಂತೆ ತಡೆಯಲು ಒಂದು ರುಪಾಯಿ ಖರ್ಚಾದರೆ, ಬಂದ ನಂತರ ಹೋಗಲಾಡಿಸಲು ಹತ್ತು ರುಪಾಯಿ ಖರ್ಚಾಗುತ್ತದೆ. ಹೀಗಾಗಿ ಕಾಯಿಲೆ ಬರದಂತೆ ಜಾಗೃತಿ ಮೂಡಿಸುವುದು, ಒಮ್ಮೆ ಬಂದೇ ಬಿಟ್ಟಿತು ಅಂತಾದರೆ ಅದು ಮರುಕಳಿಸದಂತೆ ತಿಳಿವಳಿಕೆ ನೀಡುವುದು ನನ್ನ ಆದ್ಯತೆ.
- ಡಾ.ಶಂಕರ ನಾರಾಯಣ ಬಿಜಾಪುರ
- ರಾಜೇಶ ಮುಂಡಿಗೇಸರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.