ಶರಣೆಂಬೆವು...
ಕೆಲವು ವೈದ್ಯರಿರುತ್ತಾರೆ. ಅವರಿಂದ ಚಿಕಿತ್ಸೆ ಪಡೆಯುವುದಕ್ಕಿಂತ ಅವರನ್ನು ನೋಡಿದರೆ ಸಾಕು, ನಮ್ಮ ಕಾಯಿಲೆ ಬಗ್ಗೆ ಮರೆತೇ ಹೋಗುತ್ತದೆ...
ಕೆಲವು ವೈದ್ಯರಿರುತ್ತಾರೆ. ಅವರಿಂದ ಚಿಕಿತ್ಸೆ ಪಡೆಯುವುದಕ್ಕಿಂತ ಅವರನ್ನು ನೋಡಿದರೆ ಸಾಕು, ನಮ್ಮ ಕಾಯಿಲೆ ಬಗ್ಗೆ ಮರೆತೇ ಹೋಗುತ್ತದೆ. ಸದಾ ಮಂದಸ್ಮಿತ ಡಾ.ಶರಣ್ ಶಿವರಾಜ ಪಾಟೀಲ ನಿಸ್ಸಂದೇಹವಾಗಿ ಅಂಥ ಮೋಡಿಗಾರ ವೈದ್ಯ. ಶರಣ್ ಪಾಟೀಲರು ರೋಗಿಗಳೊಂದಿಗೆ ಮಾತನಾಡುವ ರೀತಿ, ತೊಂದರೆ ಮತ್ತು ಪರಿಹಾರಗಳನ್ನು ವಿವರಿಸುವಷ್ಟರಲ್ಲಿ ಅವರ ಬಗ್ಗೆ ಮಾತಿಗೆ ನಿಲುಕದ ಆಪ್ತತೆ ರೋಗಿಯಲ್ಲಿ ಹರಳುಗಟ್ಟಿರುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಹಣಕಾಸು ಸ್ಥಿತಿಗತಿ ಬಗ್ಗೆ ವಿಚಾರಿಸುವ ಮಾನವೀಯ ಗುಣ ಅವರದ್ದು. ಅವರು ನಿಜಾರ್ಥದ 'ಶರಣ'
ಇಂಗ್ಲೆಂಡ್ನ ಪ್ರತಿಷ್ಠಿತ ಲಿವರ್ಪೂಲ್ ಯೂನಿವರ್ಸಿಟಿಯಿಂದ 1996ರಲ್ಲಿ ಎಂ.ಸಿಎಸ್ (ಆರ್ಥೊ) ಪದವಿ ಪಡೆದು ಹೊರಬಿದ್ದಾಗ ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಅದೆಷ್ಟೋ ಪ್ರತಿಷ್ಠಿತ ಆಸ್ಪತ್ರೆಗಳು ಪ್ರಯತ್ನಿಸಿದ್ದವು. ಅವರು ಕೇಳಿದಷ್ಟು ಸಂಬಳ ನೀಡಲು ತುದಿಗಾಲಲ್ಲಿ ನಿಂತಿದ್ದವು. ಪಾಟೀಲರಿಗೆ ತಮ್ಮ ಕನಸಿನ ಹಾದಿಯ ಬಗ್ಗೆ ಸ್ಪಷ್ಟತೆ ಇತ್ತು. ಪಶ್ಚಿಮದಿಂದ ಜ್ಞಾನ ಪಡೆದು ತಾಯ್ನಾಡಿನ ಜನರಿಗೆ ಹಂಚಬೇಕೆಂಬ ತುಡಿತವಿತ್ತು. ಅಲ್ಲಿ ನಿಲ್ಲದೆ ಬೆಂಗಳೂರಿಗೆ ಮರಳಿದರು. ಇಲ್ಲೂ ಅಷ್ಟೆ. ಮಣಿಪಾಲ ಆಸ್ಪತ್ರೆ ಕೈಬೀಸಿ ಕರೆಯಿತು. ಇಲ್ಲಿ 5,000ಕ್ಕೂ ಹೆಚ್ಚು ಯಶಸ್ವಿ ಆರ್ಥೊಪೆಡಿಕ್ ಶಸ್ತ್ರಚಿಕಿತ್ಸೆಗಳನ್ನು ಒಬ್ಬರೇ ನೆರವೇರಿಸಿದರು. ಸಾಕೆನ್ನಿಸುವಷ್ಟು ಸಂಬಳ ಇತ್ತು. ಆದರೆ ಅವರ ಗುರಿ ಕಡಿಮೆ ದರದಲ್ಲಿ ಬಡವರಿಗೆ ಗುಣಮಟ್ಟದ ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ದೊರಕಿಸಿಕೊಡುವುದೇ ಆಗಿತ್ತು. ರಾಯಚೂರು ಜಿಲ್ಲೆಯವರಾಗಿ, ಗುಲ್ಬರ್ಗದಲ್ಲಿ ಓದಿದ ಅವರಿಗೆ ಆರೋಗ್ಯ ಸೇವೆ ಬಡವರಿಗೆ ಹೇಗೆ ಮರೀಚಿಕೆಯಾಗುತ್ತಿದೆ ಎನ್ನುವ ಅರಿವಿತ್ತು. ಹೀಗಾಗಿ ಮಣಿಪಾಲ ಆಸ್ಪತ್ರೆಗೆ ರಾಜೀನಾಮೆ ನೀಡಿದರು. ಬೆಂಗಳೂರು ಹೊರವಲಯದ ಹೆಲ್ತ್ ಸಿಟಿ 2006ರಲ್ಲಿ ಸ್ಪರ್ಶ್ ಆಸ್ಪತ್ರೆ ಶುರು ಮಾಡಿದರು. ಈಗ ಇನ್ಫೆಂಟ್ರಿ ರಸ್ತೆಯಲ್ಲಿ ಸ್ಪರ್ಶ್ ಹಾಸ್ಪಿಟಲ್ ಫಾರ್ ಅಡ್ವಾನ್ಸ್ಡ್ ಸರ್ಜರಿಸ್, ದಾವಣಗೆರೆಯಲ್ಲಿ ಮತ್ತೊಂದು ಶಾಖೆ ಶುರುವಾಗಿವೆ.
ಐದು ವರ್ಷ ಅವಧಿಯಲ್ಲಿ 20 ಸಾವಿರಕ್ಕೂ ಹೆಚ್ಚು ಸರ್ಜರಿಗಳನ್ನು 'ಸ್ಪರ್ಶ್'ನಲ್ಲಿ ಡಾ.ಪಾಟೀಲರ ನೇತೃತ್ವದಲ್ಲಿ ನೆರವೇರಿಸಲಾಗಿದೆ. ತಮಗೆ ಏನಾದರೂ ಅನುಮಾನವಿದ್ದಲ್ಲಿ ಅಥವಾ ಹೊಸ ತೆರನಾದ ಪ್ರಕರಣಗಳು ಬಂದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಲೂ ಹಿಂದೆಮುಂದೆ ನೋಡುವವರಲ್ಲ. 'ನಾವು ಪಾರದರ್ಶಕವಾಗಿರಬೇಕು. ಬೇರೆಯವರ ನೆರವು ಕೋರಲು, ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಯಾವತ್ತೂ ಹಿಂದೇಟು ಹಾಕಬಾರದು' ಎನ್ನುವುದು ಪಾಟೀಲರ ನಿಲುವು.
ಹೆಲ್ತ್ ಸಿಟಿ ಮತ್ತು ಇನ್ಫೆಂಟ್ರಿ ರಸ್ತೆ ಎರಡೂ ಕಡೆ ಇರುವ 'ಸ್ಪರ್ಶ್' ಸ್ಟೇಟ್ ಆಫ್ ದಿ ಆರ್ಟ್ ರೀತಿಯ ಆಸ್ಪತ್ರೆ. ಪಾಟೀಲರು ಮಕ್ಕಳ ಮೂಳೆ ಸಮಸ್ಯೆ (ಪಿಡಿಯಾಟ್ರಿಕ್ ಆರ್ಥೊಪೆಡಿಕ್ಸ್), ಸಂಕೀರ್ಣ ಗಾಯಗಳು (ಕಾಂಪ್ಲೆಕ್ಸ್ ಟ್ರಾಮಾ), ಜಾಯಿಂಟ್ ರಿಪ್ಲೇಸ್ಮೆಂಟ್ನಲ್ಲಿ ತಜ್ಞರು. ಆದರೆ ಸ್ಪರ್ಶ್ನಲ್ಲಿ ಮೂಳೆಗೆ ಸಂಬಂಧಿಸಿದ ಎಲ್ಲ ವಿಭಾಗಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯ. ವೈದ್ಯರ ಸಂದರ್ಶನ ಶುಲ್ಕದಿಂದ ಹಿಡಿದು ಎಲ್ಲವೂ ಬಡವರ ಕೈಗೆಟುಕುವಂತಿವೆ. ಹೋಪ್, ಫೇತ್ ಆ್ಯಂಡ್ ಲವ್ (ಭರವಸೆ, ನಂಬಿಕೆ ಮತ್ತು ವಾತ್ಸಲ್ಯ) ಇದು ಸ್ಪರ್ಶ್ ಧ್ಯೇಯವಾಕ್ಯ. ಅದರ ಪಾಲನೆ ಚಾಚೂತಪ್ಪದೆ ಆಗುತ್ತಿದೆ ಎನ್ನುವುದು ಗಮನಾರ್ಹ. ಮಾತ್ರವಲ್ಲ, ಪಾಟೀಲರೂ ಸೇರಿದಂತೆ ಸ್ಪರ್ಶ್ನಲ್ಲಿ ಯಾವ ವೈದ್ಯರೂ ಮುಚ್ಚುಮರೆ ಮಾಡುವುದಿಲ್ಲ. ನಿವೃತ್ತ ಶಿಕ್ಷಕರು, ಪೊಲೀಸರು, ಮಕ್ಕಳಿಗೆ ವರ್ಷಕ್ಕೊಮ್ಮೆ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗುತ್ತದೆ. ಸ್ಪರ್ಶ್ ಫೌಂಡೇಶನ್ ಮೂಲಕ ಬಡವರಿಗೂ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.
ಸ್ಪರ್ಶ್ ದೂರವಾಣಿ: ಹೆಲ್ತ್ ಸಿಟಿ- 8033271038, ಇನ್ಫೆಂಟ್ರಿ ರಸ್ತೆ- 9008475000. <
'ನನಗೆ ಸಾಮರ್ಥ್ಯಕ್ಕಿಂತ ಸತ್ಯಪರತೆಯಲ್ಲಿ ನಂಬಿಕೆ ಹೆಚ್ಚು. ಕಡುಬಡವರಿಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರಕುವಂತಾಗಬೇಕು. ನಮ್ಮಲ್ಲಿಗೆ ಬರುವವರು ಎಷ್ಟೇ ಗಂಭೀರ ಸ್ವರೂಪದ ಸಮಸ್ಯೆ ಇದ್ದರೂ ನಗುತ್ತಲೇ ಮರಳಬೇಕು'
- ಡಾ.ಶರಣ್ ಶಿವರಾಜ ಪಾಟೀಲ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.