ದೇಹ ದೇಗುಲ ಮಲಿನವಾಗದಿರಲಿ (ರನ್ ವೇ)
ಬಲ್ಲವರು ಹೇಳಿದ್ದಾರೆ, 'ದೇಹವೆಂಬುದು ದೇವಸ್ಥಾನ' ಅಂತ. ದೇವಾಲಯ ಎಂದಮೇಲೆ ಅಲ್ಲಿನ ವಾತಾವರಣ ಸ್ವಚ್ಛವಾಗಿರಬೇಕು ಅಲ್ಲವೆ? ಹಾಗೆಯೇ ನಮ್ಮ ದೇಹವೂ. ಈ ದೇಗುಲದಲ್ಲಿ ಶುಚಿ, ಪಾವಿತ್ರ್ಯ ತುಂಬಿರಬೇಕು. ಶುಭ, ಸಮಾಚಾರಗಳಿರಬೇಕು. ಸ್ವಾಸ್ಥ್ಯ, ಸಮೃದ್ಧಿ ಜತೆಗಿರಬೇಕು. ಉತ್ಸಾಹ, ಉಲ್ಲಾಸ ಪುಟಿದೇಳುತ್ತಿರಬೇಕು. ಲವಲವಿಕೆಯಿಂದ ಸಂಪನ್ನವಾಗಿರಬೇಕು. ಆಗಲೇ ಮನಸ್ಸಿಗೆ ಶಾಂತಿ, ನೆಮ್ಮದಿ, ಸ್ವಸ್ಥ ಸಮಾಜ ಸಾಧ್ಯ. ಪ್ರತಿನಿತ್ಯವೂ ನಾವದನ್ನು ಬಯಸುತ್ತೇವೆ ನಿಜ. ಆದರೆ ಕೆಲವೊಮ್ಮೆ ಜೀವನದ ಜಂಜಡಗಳು ನಮ್ಮನ್ನು ಅಧೀರರನ್ನಾಗಿಸುತ್ತದೆ. ನಗರವಾಸಿಗಳಲ್ಲಂತೂ ಒತ್ತಡ, ಉದ್ವೇಗ ಅಧಿಕ. ಕೊನೆಗೆ ದೇಹವೆಂಬ ದೇಗುಲ ಆಲಸ್ಯದ ಆಲಯವಾಗುತ್ತದೆ. ನೌಕರ ವರ್ಗದಲ್ಲಂತೂ ಸದಾ ಚಿಂತೆ. ಈ ತಿಂಗಳಾಂತ್ಯದವರೆಗೆ ಇರುವ ಒಂದಷ್ಟು ದುಡ್ಡನ್ನು ನಿರ್ವಹಣೆ ಮಾಡೋಕ್ಕಾಗುತ್ತಾ ಎಂಬ ಕಳವಳ. ಮುಂದಿನ ಸಂಬಳ ಬರುವವರೆಗೆ ಸಾಲ ಮಾಡಬೇಕಾಗುತ್ತಾ ಎಂಬ ಗೊಂದಲ. ಒಟ್ಟಾರೆ ಚಿತ್ತ ಚಂಚಲ. ಜತೆಗೆ ಕೆಲಸದ ಜಾಗದಲ್ಲಿ ಅಥವಾ ಮೇಲಧಿಕಾರಿಗಳ ಕಿರಿಕಿರಿ ಇದ್ದರಂತೂ ಮುಗಿದೇ ಹೋಯಿತು. ನೆಮ್ಮದಿಯಿಂದ ಕೆಲಸ ಮಾಡುವಂತಿಲ್ಲ. ಮನೆಗೆ ಹೋದರೆ ಮಡದಿ, ಮಕ್ಕಳ ಮೇಲೂ ವೃಥಾ ರೇಗಾಟ, ಕೂಗಾಟ. ಒಟ್ಟಾರೆ ವಾತಾವರಣ ಹಾಳು. ಹಾಗಂತ ವಾರವಿಡೀ ಇಂಥ ವಾತಾವರಣವಿರುವುದಿಲ್ಲ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಿಂದ ಹೊರಬರಲು ದಾರಿಗಳಿವೆ ಅನೇಕ. ಮೊದಲು ಮನಸ್ಸನ್ನು ಶುದ್ಧಗೊಳಿಸಬೇಕು. ಧ್ಯಾನ, ಯೋಗ, ವ್ಯಾಯಾಮ, ಪ್ರಾರ್ಥನೆ ಮುಂತಾದ ಹಲವಾರು ವಿಧಾನಗಳಿಂದ ಮನಸ್ಸನ್ನು ತಿಳಿಗೊಳಿಸಬಹುದು. ರೋಷಾವೇಶಗಳಿಗೆ ಕಡಿವಾಣ ಹಾಕಬಹುದು. ದಿನವಿಡೀ ಉಲ್ಲಾಸದಿಂದಿರಬಹುದು. ಮನೆಯವರ ಜತೆ ಹಾಗೂ ಸಹೋದ್ಯೋಗಿಗಳ ಜತೆ ಶಾಂತವಾಗಿ ವರ್ತಿಸುವುದರ ಮೂಲಕ ಕದಡಿದ ಸಲಿಲದಂತಿರುವ ಮನಸ್ಸನ್ನು ಪ್ರಶಾಂತಗೊಳಿಸಬಹುದು. ಜತೆಗೆ ದೇಹವೆಂಬ ದೇಗುಲದ ಪಾವಿತ್ರ್ಯ ಕಾಪಾಡಬಹುದು.
- ಸಹನೆ