ಕಂಠದ ಇಸ್ಯ!
ವಿಜಯ್ ರಾಘವೇಂದ್ರ, ಪುನೀತ್ರಾಜ್ಕುಮಾರ್, ಶಿವರಾಜ್ ಕುಮಾರ್, 'ಜೋಗಿ' ಪ್ರೇಮ್, ರವಿಶಂಕರ್... ಹೀಗೆ ಸಾಕಷ್ಟು ನಾಯಕ ನಟರು ಗಾಯಕರಾಗಿದ್ದಾರೆ. ಆದರೆ ಇವರ್ಯಾರೂ ವೃತ್ತಿನಿರತ ಗಾಯಕರ ಕೆಲಸ ಕಿತ್ತುಕೊಳ್ಳುವ ಮಟ್ಟಕ್ಕೆ ತಮ್ಮ ಕಂಠಗಳನ್ನು ಬಳಸುತ್ತಿಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೆ ನಾಯಕ- ಗಾಯಕನ ಪಟ್ಟವನ್ನು ಸುದೀಪ್ ಸಹ ಅಲಂಕರಿಸಿದ್ದಾರೆ.
ಖಡಕ್ ಮಾತು, ಕಂಚಿನ ಕಂಠಕ್ಕೆ ಹೆಸರಾಗಿರುವ ನಟ ಸುದೀಪ್. 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರಕ್ಕೆ ಸುದೀಪ್ ಕೊಟ್ಟ ಧ್ವನಿ ಹೈಲೈಟ್ ಆಗಿತ್ತು. 'ಈಗ' ಚಿತ್ರದ ಟಾಲಿವುಡ್, ಅದರ ಡಬ್ಬಿಂಗ್ 'ಮಕ್ಕಿ'ಯ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಮಟ್ಟಕ್ಕೆ ತಮ್ಮ ಸ್ಟಾರ್ಗಿರಿಯನ್ನು ಹೆಚ್ಚಿಸಿಕೊಂಡಿರುವ ಸುದೀಪ್ ಅವರ ಬಹು ನಿರೀಕ್ಷೆಯ ಸದ್ಯದ ಚಿತ್ರ 'ಬಚ್ಚನ್'. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ 'ಆ್ಯಂಗ್ರಿ ಯಂಗ್ಮ್ಯಾನ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ಸ್ಫೂರ್ತಿಯಂತೆ. ಸದ್ಯ ಚಿತ್ರಕ್ಕೆ ಮುಕ್ಕಾಲು ಪಾಲು ಚಿತ್ರೀಕರಣ ಮುಗಿದಿದ್ದು, ಇದರ ಹೊಸ ವಿಷಯ ಏನಪ್ಪಾ ಅಂದ್ರೆ ಈ ಚಿತ್ರಕ್ಕಾಗಿ ಸುದೀಪ್ ತಮ್ಮದೇ ಕಂಠದಲ್ಲಿ ಒಂದು ಹಾಡನ್ನು ಹಾಡಿರುವುದು.
ಹೌದು, 'ಬಚ್ಚನ್ನು ಬಚ್ಚನ್ನು ಒಂಚೂರು ಬಗ್ಗಿ ಮಾತಾಡು ಬಚ್ಚನ್ನು' ಎಂಬ ಹಾಡಿಗೆ ಸುದೀಪ್ ಸ್ವಂತ ಸ್ವರ ಕೊಟ್ಟಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. 'ನಟ ಸುದೀಪ್ ಹಾಡಿರುವ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಡಿನ ಸಾಹಿತ್ಯ ಮತ್ತು ಸಂಗೀತ ಕೂಡ ವಿಭಿನ್ನವಾಗಿದೆ' ಎನ್ನುತ್ತಾರೆ ನಿರ್ದೇಶಕ ಶಶಾಂಕ್. ಈ ಹಾಡಿನ ಧ್ವನಿ ಮುದ್ರಣ ಬಾಲಾಜಿ ಸ್ಟುಡಿಯೋದಲ್ಲಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಪರೂಲ್ ಯಾದವ್, ಟುಲಿಪ್ ಜೋಷಿ ಹಾಗೂ ಭಾವನಾ ಮೆನನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಶಿಷ್ ವಿದ್ಯಾರ್ಥಿ, ರವಿಶಂಕರ್, ತೆಲುಗಿನ ಜಗಪತಿ ಬಾಬು ಮತ್ತಿತರರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯದಲ್ಲೇ ಒಂದೇ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಲಿದೆ. ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ. ಅಂದಹಾಗೆ, ಸುದೀಪ್ ಕಂಠದಲ್ಲಿ ಮೂಡಿಬಂದಿರುವ ಹಾಡಿಗೆ ಯೋಗರಾಜ್ ಭಟ್ಟರ ಜೊತೆಗೆ ಶಶಾಂಕ್ ಕೂಡ ಸಾಹಿತ್ಯ ನೀಡಿದ್ದಾರಂತೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.