ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಪ್ಪು ಚುಕ್ಕೆ ಅಳಿಸಲಾಗದು (ರನ್ ವೇ)

Mainashree
Updated On : 3 Mar 2013, 1:26 am

ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಒಮ್ಮೆ ನಿಮ್ಮ ಬಗ್ಗೆ ಯಾವುದಾದರೊಂದು ವಿಷಯದಲ್ಲಿ ಅನುಮಾನ ಎಂಬುದು ಹೊಕ್ಕು ಬಿಟ್ಟರೆ ಅದನ್ನು ಸರಿಪಡಿಸಿಕೊಳ್ಳುವುದು ಸಾಧ್ಯವೇ ಇಲ್ಲದ ಸಂಗತಿ. ನಿಮ್ಮ ಬಗ್ಗೆ ಒಮ್ಮೆ ತಪ್ಪು ಅಭಿಪ್ರಾಯ ಮೂಡಿದರೆ ಮತ್ತೆ ಅಂಥ ಕಪ್ಪು ಚುಕ್ಕಿಯನ್ನು ಅಳಿಸುವುದು ತೀರಾ ಕಷ್ಟ. ಆ ನಂತರ ನೀವು ಅದೆಷ್ಟೇ ಪ್ರಾಮಾಣಿಕವಾಗಿ ಇದ್ದರೂ, ನಾನು ಆ ರೀತಿಯಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದರೂ ಮೊದಲೊಮ್ಮೆ ನಿಮ್ಮ ಬಗ್ಗೆ ಕುಳಿತು ಹೋದ ಅಭಿಪ್ರಾಯವನ್ನು ಬದಲಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿಬಿಡುತ್ತದೆ. ನೀವು ಯಾವುದೋ ಸಂದರ್ಭದಲ್ಲಿ ಅನಿವಾರ್ಯಕ್ಕೆ ಸಿಲುಕಿಯೋ, ಯಾವುದೋ ಉದ್ದೇಶಕ್ಕೋ, ಅರಿಯದೆಯೋ ಸುಳ್ಳು ಹೇಳಿಬಿಡುತ್ತಿರಿ. ನೀವು ಹಾಗೆ ಹೇಳಿದ್ದು ಸುಳ್ಳೆಂಬುದು ನಿಮ್ಮೊಂದಿಗೆ ಮಾತನಾಡಿದವರಿಗೆ ಗೊತ್ತಾಗಿಬಿಡುತ್ತದೆ. ಅಷ್ಟೆ ಮತ್ತೆ, ನಿಮ್ಮ ಮಾತನ್ನು ಯಾವತ್ತೂ ಅವರು ನಂಬಲು ಸಿದ್ಧರಿರುವುದಿಲ್ಲ. ಮುಂದೆ ನೀವು ಸತ್ಯವನ್ನೇ ಹೇಳುತ್ತಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅವರಿರುವುದಿಲ್ಲ. ನಿಮ್ಮ ಮಾತನ್ನು ಸಂಶಯದಿಂದಲೇ ನೋಡಲಾರಂಭಿಸುತ್ತಾರೆ.
ಒಮ್ಮೆ ಆದ ಕೆಟ್ಟ ಅನುಭವದ ಫಲವದು. ಜೀವನದಲ್ಲಿ ಎಲ್ಲ ತಪ್ಪುಗಳೂ ಹಾಗೆಯೇ. ಒಮ್ಮೆ ಘಟಿಸಿ ಹೋದರೆ ಒಂದು ರೀತಿಯಲ್ಲಿ ಅದು ಹಸಿಗೋಡೆಗಂಟಿದ ಹರಳಿನಂತೆಯೇ. ಏಷ್ಟೇ ಕಷ್ಟಪಟ್ಟು ಅದನ್ನು ನೀವು ತೆಗೆದರೂ, ಗೋಡೆಯಲ್ಲಿ ಅದರ ಕುರುಹಾಗಿ ಕುಳಿಯಾದರೂ ಉಳಿಯುತ್ತದೆ. ವ್ಯಕ್ತಿತ್ವವೆಂಬುದೇ ಹಾಗೆ. ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಒಂದು ಹೆಜ್ಜೆ ಮುಂದಿಡಬೇಕಾದರೆ ಸಾಕಷ್ಟು ಯೋಚನೆ ಮಾಡಬೇಕು. ನಮ್ಮ ವರ್ತನೆ, ಅದರಲ್ಲೂ ಮುಖ್ಯವಾಗಿ ನಮ್ಮ ಮಾತು ಇಡೀ ನಮ್ಮ ಚಾರಿತ್ರ್ಯವನ್ನು ಸಂಕೇತಿಸುತ್ತದೆ. ಹೀಗಾಗಿ ಮಾತಿನ ಬಗ್ಗೆ ಅತ್ಯಂತ ಜಾಗ್ರತೆವಹಿಸುವುದು ಅತ್ಯಂತ ಅಗತ್ಯ. ಯಾವುದಕ್ಕೇ ಆಗಲಿ, ತಕ್ಷಣ ಪ್ರತಿಕ್ರಿಯಿಸುವುದರಿಂದ, ಉದ್ವೇಗ, ಭಾವತೀವ್ರತೆಗೆ ನಮ್ಮ ಮನಸ್ಸನ್ನು ಕೊಡುವುದರಿಂದ ವಿವೇಚನೆ ಮರೆಯಾಗಿಬಿಡುತ್ತದೆ. ಆ ಕ್ಷಣದಲ್ಲಿ ನಾವು ಮಾಡಿದ್ದೇ ಸರಿ ಅಂತ ಅನ್ನಿಸಿಬಿಡುತ್ತದೆ. ಆದರೆ ಅದು ಬೀರುವ ದೂರಗಾಮಿ ಪರಿಣಾಮದ ಬಗ್ಗೆ ನಮಗೆ ಅರಿವಿರುವುದೇ ಇಲ್ಲ. ಯಶಸ್ಸನ್ನು ಬಯಸುವ ವ್ಯಕ್ತಿ ಯಾವತ್ತಿಗೂ ತನ್ನ ವ್ಯಕ್ತಿತ್ವಕ್ಕೆ ಕುಂದು ತರಬಲ್ಲ ಕೆಲಸಕ್ಕೆ ಕೈಹಾಕಲಾರ. ಎಂಥದ್ದೇ ಒತ್ತಡದಲ್ಲೂ ತನ್ನ ಸಂಯಮವನ್ನು ಆತ ಕಳೆದುಕೊಳ್ಳಲಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement