ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರುದ್ರ ರಮಣೀಯ

ಅಂಗಳದ ಬದಿಯಲ್ಲಿ ಸಾಲಾಗಿ ಬುಟ್ಟಿಗಳಲ್ಲಿ ಅಡಕೆ ತುಂಬಿಸಿ ಇರಿಸಿದಂತೆ ಕಾಣಿಸಿತು...

Lingaraj Badiger
Updated On : 5 Mar 2013, 1:07 am

ಅಡಕೆ ತೋಟ ನೋಡಲೆಂದು ಪ್ರಗತಿಪರ ಕೃಷಿಕ ಶಂಕರ ಭಟ್ ವಡ್ಯ ಅವರ ಮನೆಗೆ  ಹೋಗಿದ್ದೆ. ಅಂಗಳದ  ಬದಿಯಲ್ಲಿ ಸಾಲಾಗಿ ಬುಟ್ಟಿಗಳಲ್ಲಿ ಅಡಕೆ ತುಂಬಿಸಿ ಇರಿಸಿದಂತೆ ಕಾಣಿಸಿತು. ದೂರದಿಂದ ನೋಡಿದರೆ ಹಸಿಅಡಕೆ ಸುಲಿದು ಒಣಗಿಸುತ್ತಿದ್ದಾರೇನೋ ಎಂದನ್ನಿಸಿತು. ನನ್ನ ಅಚ್ಚರಿಯನ್ನು ಬಹಳ ಹೊತ್ತು ಇರಗೊಡದೆ ಅವರು ಮಾತಿಗಿಳಿದರು.
'ಅದೇನು ಹಾಗೆ ನೋಡುತ್ತೀರಿ? ಅದು ನಮ್ಮ ತೋಟದಲ್ಲಿ ಬೆಳೆದ ರುದ್ರಾಕ್ಷಿ ಕಾಯಿಗಳು. ಕಳೆದವರ್ಷ ಬಂಪರ್ ಬೆಳೆ. ಬರೋಬ್ಬರಿ ಹತ್ತು ಸಾವಿರ ರುದ್ರಾಕ್ಷಿ ಕಾಯಿಗಳು ದೊರೆತವು' ಎಂದರು. ಏಕೋ ಇವರು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡು ಸಾಲಾಗಿ ಇಟ್ಟಿದ್ದ ಬುಟ್ಟಿಗಳ ಬಳಿ ಹೋಗಿ ನೋಡಿದರೆ ಅವರ ಮಾತು  ನಿಜ. ಅಲ್ಲಿ ಬುಟ್ಟಿ ತುಂಬಾ ರುದ್ರಾಕ್ಷಿಕಾಯಿಗಳೇ!
ನೇಪಾಳ ಮತ್ತು ಹಿಮಾಲಯಗಳಲ್ಲಿ ಮಾತ್ರ ಬೆಳೆಯುವ ಆಸ್ತಿಕರ ಪರಮ ಪವಿತ್ರ ಪರಶಿವನ ಅಶ್ರುವೆಂದೇ  ನಂಬಲಾದ ರುದ್ರಾಕ್ಷಿ ದಕ್ಷಿಣ ಕನ್ನಡದ ಪುತ್ತೂರಿನ ಅಡಕೆ ಕೃಷಿಕನ ತೋಟದಲ್ಲಿ ಬೆಳೆಯುವುದೆಂದರೇನು?
'ನನ್ನ ತಂದೆ ವಡ್ಯ ಶಾಮ್ ಭಟ್ ಮಣಿಪಾಲದಲ್ಲಿದ್ದಾಗ 1996ರಲ್ಲಿ ನೇಪಾಳದ ವಿದ್ಯಾರ್ಥಿಗಳ ಮೂಲಕ  ಕೆಲವು ರುದ್ರಾಕ್ಷಿ ಗಿಡಗಳನ್ನು ತರಿಸಿದರು. ಅವುಗಳಲ್ಲಿ ಕೆಲವನ್ನು ಸ್ನೇಹಿತರಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಹಂಚಿದರು. ಎರಡು ಗಿಡಗಳನ್ನು ಇಲ್ಲಿ ತಮ್ಮ ತೋಟದಲ್ಲಿ ನೆಟ್ಟು
ಬೆಳೆಸಿದರು. 6 ವರ್ಷ ಬರೀ ನೀರು ಬಿಟ್ಟು ಬೇರೇನೂ ಪೂರೈಸಲಿಲ್ಲ. ನಂತರ ಸ್ವಲ್ಪ ಸಾವಯವ ಗೊಬ್ಬರ ಕೊಟ್ಟಿದ್ದಷ್ಟೇ. ಇಂದು ಎರಡೂ ಮರಗಳು ಸೊಂಪಾಗಿ  ಬೆಳೆದು ನಿಂತಿವೆ. ಚೆನ್ನಾಗಿ ರುದ್ರಾಕ್ಷಿ ಫಸಲು ನೀಡುತ್ತಿವೆ' ಎಂದು ವಿವರಿಸಿದರು ವಡ್ಯ ಶಂಕರ ಭಟ್.
ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ಹೂ ಬಿಡುತ್ತದೆ. ಫೆಬ್ರವರಿ- ಮಾರ್ಚ್ ವೇಳೆಗೆ ಕಾಯಿ ಬಿಟ್ಟು ಹಣ್ಣಾಗುತ್ತದೆ. ಏಪ್ರಿಲ್ ಮೇ ತಿಂಗಳಲ್ಲಿ ಕಾಯಿ ಪಕ್ವಗೊಂಡು ಕಡುನೀಲಿ ಬಣ್ಣದ ಹಣ್ಣುಗಳು ಕಾಣಬರುತ್ತವೆ. ನೀಲಿ ವರ್ಣದ ಹಣ್ಣುಗಳನ್ನು ಸುಲಿದು ಚಿಕ್ಕ ಬ್ರಶ್‌ನಿಂದ ಚೆನ್ನಾಗಿ ತೊಳೆಯಬೇಕು. ನಂತರ ನೆರಳಿನಲ್ಲಿ ಒಣಗಿಸಬೇಕು. ಒಂದು ವಾರ ಕಳೆದ ಬಳಿಕ ಎಳ್ಳೆಣ್ಣೆ ಇಲ್ಲವೇ ಗಂಧದೆಣ್ಣೆಯಲ್ಲಿ ಸಂಸ್ಕರಿಸಿದರೆ ದೀರ್ಘ ಕಾಲ ಬಾಳಿಕೆ ಬರುವ ರುದ್ರಾಕ್ಷಿ ಸಿದ್ಧ.
ರುದ್ರಾಕ್ಷಿಯಲ್ಲಿ ಅವುಗಳ ಮೇಲೆ ಇರುವ ರೇಖೆಗಳನ್ನು ಹೊಂದಿಕೊಂಡು, ಏಖಮುಖಿ, ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಏಖಮುಖಿ ರುದ್ರಾಕ್ಷಿ ಸರ್ವಶ್ರೇಷ್ಠ. ಆದರೆ ದೊರಕುವುದು ದುರ್ಲಭ. 'ನನ್ನ ಮರದಲ್ಲಿ ಬೆಳೆದ ರುದ್ರಾಕ್ಷಿಗಳಲ್ಲಿ ಪಂಚಮುಖಿ ಜಾಸ್ತಿ ಸಂಖ್ಯೆಯಲ್ಲಿ ಇದೆ. ಆದರೆ ಅಪರೂಪದ ಆನೆ ಸೊಂಡಿಲಿನ ರೀತಿಯ ಗಣೇಶ ರುದ್ರಾಕ್ಷಿ ಕೆಲವು ದೊರೆತಿವೆ' ಎನ್ನುತ್ತಾರೆ ವಡ್ಯ ಶಂಕರ ಭಟ್.
ಅಂದಹಾಗೆ, ಶಂಕರಭಟ್ಟರೀಗ ರುದ್ರಾಕ್ಷಿಯ ಗಿಡಗಳನ್ನೂ ಮಾಡುತ್ತಿದ್ದಾರೆ. ಶಂಕರ ಭಟ್ಟರ ಸಂಪರ್ಕ ಸಂಖ್ಯೆ ಮೊ. 9481507506.

- ಚಿತ್ರ, ಬರಹ: ರಮೇಶ್ ಕೈಂತಜೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments