ಭಾರತೀಯರಿಗೆ ಗುರುವಿನ ಕರೆ
ಭಾರತದಲ್ಲಿ ಹುಟ್ಟಿ ಭಾರತೀಯತ್ವ ಬೆಳೆಸಿಕೊಳ್ಳದಿರುವುದು ಮಾತೃಭೂಮಿಗೆ ಎಸಗುವ ದ್ರೋಹವೆನಿಸುತ್ತದೆ. ನಮ್ಮ ದೇಶದ ಸಮಗ್ರ ದರ್ಶನವನ್ನು ಪಡೆಯುವುದು ದುರ್ಲಭವಾದರೂ ಅದರ ಬಗ್ಗೆ ಸಮಸ್ತ ಜ್ಞಾನ ಹೊಂದುವುದು ಅತ್ಯಗತ್ಯ. ಸನಾತನ ಭಾರತದ ಸಂಸ್ಕೃತಿ, ವೇದಗಳು, ಉಪನಿಷತ್ತು, ಭಗವದ್ಗೀತೆ, ಮಹಾಕಾವ್ಯಗಳು, ಪುರಾಣಗಳು, ಭಾರತದ ಚರಿತ್ರೆ ಇವುಗಳ ಜ್ಞಾನವನ್ನು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಗ್ರಹಿಸಿ ಪರಿಶುದ್ಧ ಜೀವನಕ್ಕೆ ತಮ್ಮನ್ನು ಅಣಿಗೊಳಿಸಿಕೊಂಡಾಗ ಜನಾಂಗಕ್ಕೆ ಬೋಧಿಸುವ, ಮಾನವ ಜೀವನವನ್ನು ಬೆಳಗುವ ಜ್ಯೋತಿಗಳು ನಾವಾಗುತ್ತೇವೆ. ನಾವು ಲೋಕದ ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ನಿತ್ಯಬದ್ಧರಾಗಬೇಕು.
ಪುರಾತನ ಆರ್ಯಾವರ್ತದಲ್ಲಿ, ಹಿಂದೂ ಧರ್ಮದ ಆದರ್ಶ ಮಾನವನೆಂದರೆ ಬ್ರಾಹ್ಮಣ. ಏಕೆಂದರೆ ಅವನಲ್ಲಿ ಪ್ರಾಪಂಚಿಕತೆಯು ಸಂಪೂರ್ಣವಾಗಿ ಲುಪ್ತವಾಗಿತ್ತು ಮತ್ತು ಆತ ನಿಜವಾದ ಜ್ಞಾನಿಯಾಗಿದ್ದ. ಇಂದಿನ ದಿನದ ಈ ಜಾತಿಪದ್ಧತಿಯ ಸುಧಾರಣೋಪಾಯವೆಂದರೆ ಈಗಾಗಲೇ ಮೇಲಿರುವವರನ್ನು ಕೆಳಗೆಳೆಯುವುದಲ್ಲ. ಬದಲಾಗಿ ಪ್ರತಿಯೊಬ್ಬರೂ ವೇದಾಂತದ ಆದೇಶವನ್ನು ಅರಿತುಕೊಂಡು ಕಾರ್ಯಗತಗೊಳಿಸುವುದು, ನಿಜವಾದ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳುವುದು. ವೇದಾಂತವು ಮುಂದಿಡುವ ಈ ಆದರ್ಶವು ಭಾರತಕ್ಕೆ ಮಾತ್ರವಲ್ಲದೆ ಸಮಸ್ತ ಜಗತ್ತಿಗೇ ಅನ್ವಯಿಸುತ್ತದೆ.
-ಆನಂದ ಎಸ್.ಎನ್.