ಗಸಗಸೆ ಪಾಯಸ ರುಚಿಯ ಬಲ್ಲವರೇ ಬಲ್ಲರು...
ಒರಳುಕಲ್ಲಿನಲ್ಲಿ ರುಬ್ಬಿ ಮಾಡಿದ ಗಸಗಸೆ ಪಾಯಸದ ರುಚಿ ಸವಿದವರೇ ಬಲ್ಲರು. ಗಸಗಸೆಯನ್ನು ಒರಳುಕಲ್ಲಿನಲ್ಲಿ ರುಬ್ಬಿ ಮಾಡಿದರೇ ಹೆಚ್ಚು ರುಚಿ. ಅಲ್ಲದೇ ಒರಳಿನಲ್ಲಿ ಚೆನ್ನಾಗಿ ಅರೆದರೆ ಬೆಣ್ಣೆಯಂತಾಗುವುದು. ಈ ರುಚಿ ಮಿಕ್ಸಿಯಿಂದ ರುಬ್ಬಿ ಮಾಡಿದರೆ ಬರಲು ಸಾಧ್ಯವಿಲ್ಲ.
ಗಸಗಸೆ ಅಮಲು ಪದಾರ್ಥ. ಹಾಗಾಗಿ ಗಸಗಸೆ ಪಾಯಸ ತಿಂದರೆ ನಿದ್ರೆ ಕೂಡ ಹೆಚ್ಚು. ಆದರೆ ಅಫೀಮಿಗಿಂತ ಕಡಿಮೆ ನಶೆ ಕೊಡುವ ಗಸಗಸೆಯನ್ನು ಸಾಮಾನ್ಯವಾಗಿ ಸಿಹಿತಿಂಡಿ, ಬೇಕರಿ ತಿಂಡಿಗಳಲ್ಲಿ ಬಳಸುತ್ತಾರೆ. ರೊಟ್ಟಿ ತಯಾರಿಕೆಯಲ್ಲಿ, ಕರಿಗಳು, ಮಿಠಾಯಿಗಳಲ್ಲೂ ಗಸಗಸೆಯನ್ನು ಸೇರಿಸುತ್ತಾರೆ. ಅತಿರಸ(ಕಜ್ಜಾಯ)ಕ್ಕೆ ಗಸಗಸೆ ಹಾಕುವುದರಿಂದ ವಿಶಿಷ್ಟ ರುಚಿ ಬರುತ್ತದೆ. ವಿಶೇಷವಾಗಿ ಸಿಹಿ ತಿಂಡಿಗಳಿಗೆ ರುಚಿಗೋಸ್ಕರವೇ ಗಸಗಸೆ ಬಳಸಲಾಗುತ್ತದೆ.
ಗಸಗಸೆ ಬೆಳೆಯುವುದು ಕಾನೂನಿಗೆ ವಿರುದ್ಧ. ಗಸಗಸೆಯನ್ನು ಯಾರು ಬೇಕಾದರೂ ಬೆಳೆಯಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಅನುಮತಿ ಪಡೆದವರು ಮಾತ್ರ ಬೆಳೆಯುತ್ತಾರೆ. ಒಂದು ವೇಳೆ ನೀವೇನಾದರೂ ಅನುಮತಿ ಪಡೆಯದೆ ಬೆಳೆದರೆ ಅದು ಅಪರಾಧವಾಗುತ್ತದೆ. ಅದಕ್ಕೆ ಗಂಭೀರ ಪ್ರಮಾಣದ ಶಿಕ್ಷೆಯನ್ನೂ ನೀಡಲಾಗುತ್ತದೆ.
ಗಸಗಸೆ ಗಿಡವನ್ನು ಅಫೀಮಿನ ತಯಾರಿಕೆಗಾಗಿ ಅಥವಾ ಬೀಜಗಳಿಗಾಗಿ ಬೆಳೆಯುತ್ತಾರೆ. ಭಾರತದಲ್ಲಿ ವಾರ್, ಆಲ್ಬಮ್ ಜಾತಿಯ ಗಸಗಸೆಯನ್ನು ಡೆಹರಾಡೂನ್ ಮತ್ತು ಉತ್ತರ ಪ್ರದೇಶದ ತೆಹರಿ ಘರ್ವಾಲ್ ಜಿಲ್ಲೆಗಳಲ್ಲಿ, ಪಂಜಾಬಿನ ಜಲಂಧರ್, ಕಪೂರ್ತಲ, ಹೊಷಿಯಾರ್ಪುರ್ ಮತ್ತು ಪಟಿಯಾಲ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಬೆಳೆಯುವ ಬಿಳಿ ಬಣ್ಣದ ಗಸಗಸೆ ಅತ್ಯುತ್ತಮವಾದದ್ದು. ಇದರಲ್ಲಿ ತೈಲ ಪ್ರಮಾಣ ಕೂಡ ಹೆಚ್ಚಿರುತ್ತದೆ. ಅಖಿಲ ಭಾರತ ಮಾದಕ ಪದಾರ್ಥಗಳ ಸಮ್ಮೇಳನವು 1956ರಲ್ಲೇ ಗಸಗಸೆ ಬೆಳೆಯುವುದನ್ನು ಮುಂದುವರಿಸುವ ಬಗ್ಗೆ ಪರಿಶೀಲನೆ ನಡೆಸಿತ್ತು. ಇದರ ಸಲಹೆಯಂತೆ ಪಂಜಾಬ್ ಸರ್ಕಾರ ಗಸಗಸೆ ಗಿಡವನ್ನು ಅಫೀಮ್ ತಯಾರಿಕೆಗೆ ಬಳಸುವುದನ್ನು ನಿಷೇಧಿಸಿತು. ಭಾರತದಲ್ಲಿ ಅಫೀಮಿಗಾಗಿ ಕಚ್ಚು ಮಾಡದ ಬೀಜಕೋಶಗಳಿಂದ ಅತ್ಯುತ್ತಮವಾದ ಗಸಗಸೆ ಬೀಜಗಳು ದೊರೆಯುತ್ತವೆ. ಯುರೋಪ್ನಲ್ಲಿ ವಾರ್ ನೈಗ್ರಮ್ ಎಂಬ ನೀಲಿ ಬಣ್ಣದ ಬೀಜಗಳಿರುವ ಗಸಗಸೆ ದೊರೆಯುತ್ತದೆ.
ಪಪವೆರೇಸಿ ವಂಶಕ್ಕೆ ಸೇರಿದ ಗಸಗಸೆಯಲ್ಲಿ ಶೇಕಡ ಐವತ್ತರಷ್ಟು ಆಹಾರಯೋಗ್ಯ ಎಣ್ಣೆ ಇರುತ್ತದೆ. ಇದನ್ನು ಒತ್ತಡದಿಂದ ಅಥವಾ ಹಾಗೇ ತೆಗೆಯಬಹುದು. ಈ ಎಣ್ಣೆಗೆ ವಾಸನೆ ಇರುವುದಿಲ್ಲ. ಹಿತವಾದ ಬಾದಾಮಿಯನ್ನು ಹೋಲುವ ರುಚಿ ಹೊಂದಿರುತ್ತದೆ. ಚಿಕ್ಕ ಗಾಣಗಳಲ್ಲಿ ಹಾಕಿ ಕೂಡ ಎಣ್ಣೆಯನ್ನು ತೆಗೆಯಬಹುದು. ಗಾಣದಿಂದ ತೆಗೆದ ಹಸಿ ಎಣ್ಣೆಯು ತಿಳಿಹಳದಿ ಬಣ್ಣದಿಂದ ಕೂಡಿರುತ್ತದೆ. ಗಸಗಸೆ ಎಣ್ಣೆಯನ್ನು ಕಲೆಗಾರರು ಉಪಯೋಗಿಸುವ ಬಣ್ಣಗಳಲ್ಲಿ ಬಳಸುತ್ತಾರೆ. ಎಣ್ಣೆಯನ್ನು ಲಿನೋಲೀಯಿಕ್ ಆಮ್ಲ, ಸಾಬೂನು, ಮುಲಾಮು ಮತ್ತು ಎಮಲ್ಷನ್ಗಳ ತಯಾರಿಕೆಯಲ್ಲಿ, ಚರ್ಮಕ್ಕೆ ಉಪಯೋಗಿಸುವ ಔಷಧಗಳಲ್ಲಿ ಬಳಸುತ್ತಾರೆ.
ಎಣ್ಣೆ ತೆಗೆದ ಹಿಂಡಿಯನ್ನು ಕುರಿ, ಹಸುಗಳ ಆಹಾರದಲ್ಲಿ ಬಳಸುತ್ತಾರೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.