ತಿರುವಿನಲ್ಲಿ ನಿಲ್ಲಬೇಡಿ
ಅಲ್ಲಿ ಹಾಗೆ ಯೋಚಿಸುತ್ತಾ ನಿಂತುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲವೇ ಇಲ್ಲ. ಎಷ್ಟು ಹೊತ್ತು ಅಂತ ಹಾಗೆಯೇ ನಿಂತುಕೊಳ್ಳುತ್ತೀರಿ? ಯಾವುದಾದರೊಂದು ಆಯ್ಕೆಯನ್ನು ನೀವು ಮಾಡಿಕೊಳ್ಳಲೇಬೇಕಿರುತ್ತದೆ. ನೀವು ಬದುಕಿನ ಹಾದಿಯಲ್ಲಿ ಪಯಣ ಹೊರಟಾಗ ಮುಂದಿನ ಇಂಥದ್ದೇ ಮಾರ್ಗ ಎದುರಾಗುತ್ತದೆ ಎಂದು ಹೇಳಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಅದು ಯಾವತ್ತೂ ಎಲ್ಲ ವ್ಯಕ್ತಿಗಳಿಗೂ ಒಂದೇ ರೀತಿಯದ್ದಾಗಿರಲು ಸಾಧ್ಯವೇ ಇಲ್ಲ. ಅವರು ಆಯ್ದುಕೊಂಡ ದಿಕ್ಕು, ಸಾಗುವ ವೇಗ, ಅವರಲ್ಲಿನ ಸಾಮರ್ಥ್ಯ, ವಿಶ್ವಾಸ ಹೀಗೆ ಹಲವು ಸಂಗತಿಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ ಬೇರೆಯವರ ಅನುಭವ, ಹಿತೋಪದೇಶ, ಮಾರ್ಗದರ್ಶನಗಳಾವುದೂ ಬದುಕಿನ ನಿಖರವಾದ ಪಥವನ್ನು ಗುರುತಿಸಿಕೊಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹಂತದಲ್ಲೂ ನಿಮಗೆ ನೀವೇ ಪಥ ಪ್ರವರ್ತಕರಾಗಬೇಕಾದ ಅನಿವಾರ್ಯ ಇರುತ್ತದೆ. ಯಾವ ಹಂತದಲ್ಲಿ ಯಾವ ರೀತಿಯ ತಿರುವು ನಿಮ್ಮ ಹಾದಿಯಲ್ಲಿ ಎದುರಾಗುತ್ತದೆ ಎಂಬುದನ್ನು ಬೇರೆಯವರಿರಲಿ, ಸ್ವತಃ ನಿಮಗೂ ಊಹಿಸಲಿಕ್ಕೆ ಸಾಧ್ಯವಿರುವುದಿಲ್ಲ. ಕೆಲವೊಮ್ಮೆ ತೀರಾ ಅನಿರೀಕ್ಷಿತವಾಗಿ ತಿರುವುಗಳು ಎದುರಾಗುವ ಸಂದರ್ಭಗಳೂ ಇರುತ್ತವೆ. ಅಂಥ ಬದುಕಿನ ತಿರುವುಗಳಲ್ಲಿ ನಿಂತಾಗ ಒಮ್ಮಿಂದೊಮ್ಮೆಲೆ ಗೊಂದಲ ಉದ್ಭವಿಸುವುದು ಸಹಜ. ಮುಂದೆ ಹೇಗೋ ಎಂಬ ಆತಂಕವೂ ಎದುರಾಗುತ್ತದೆ. ಒಂದನ್ನು ತಿಳಿದುಕೊಳ್ಳಿ. ಹಾಗೆ ಹೆಚ್ಚು ಹೊತ್ತು ಯೋಚಿಸುತ್ತಾ ಕುಳಿತುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವೆಷ್ಟೇ ಯೋಚಿಸಿದರೂ ಮುಂದಿನ ಆಯ್ಕೆ ಹೊಳೆಯಲು ಸಾಧ್ಯವೇ ಇಲ್ಲ. ನೀವು ಆ ತಿರುವನ್ನು ಒಪ್ಪಿಕೊಂಡು ಮುಂದುವರಿಯಲೇಬೇಕು. ಮುನ್ನುಗ್ಗಲೇಬೇಕು. ಅದಿಲ್ಲದಿದ್ದರೆ ಜೀವನದುದ್ದಕ್ಕೂ ನಿಂತಲ್ಲೇ ನಿಲ್ಲಬೇಕಾದ ಅಪಾಯಗಳಿರುತ್ತವೆ. ಬದುಕಿನಲ್ಲಿ ಮತ್ತೆ ಬೆಳವಣಿಗೆಯನ್ನು ಕಾಣಲೇ ಸಾಧ್ಯವಾಗುವುದಿಲ್ಲ. ಹೇಗಿದ್ದರೂ ಪಯಣ ಆರಂಭಿಸಿ ಆಗಿರುತ್ತದೆ. ಗುರಿ ಮುಟ್ಟುವವರೆಗೆ ನಡೆಯುತ್ತಲೇ ಇರಬೇಕು. ಅದನ್ನು ಅರ್ಥ ಮಾಡಿಕೊಳ್ಳಿ. ಪ್ರತಿ ತಿರುವುಗಳೂ ಒಂದೊಂದು ಹೊಸ ಅನುಭವ ಎಂದುಕೊಳ್ಳಿ. ಎದುರಾಗುವ ಎಲ್ಲವನ್ನೂ ಎದುರಿಸಿಯೇ ತೀರಬೇಕು, ಎದುರಿಸುತ್ತೇನೆ ಎಂಬ ಧೈರ್ಯವನ್ನು ಮೈಗೂಡಿಸಿಕೊಳ್ಳಿ. ಆ ತಿರುವಿನಲ್ಲೇ ಅತ್ಯಂತ ವಿಶ್ವಾಸದಿಂದ ಮುನ್ನುಗ್ಗಿ. ಖಂಡಿತಾ ಮತ್ತೆಂದೂ ಎದೆಗುಂದುವ ಅವಕಾಶ ಬರುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸಹಚರರು ನಡೆಯುತ್ತಲೇ ಇರುತ್ತಾರೆ. ಅವರ ವೇಗಕ್ಕೆ ಸ್ಪರ್ಧೆಗಿಳಿದು ನೀವು ಹೋದಾಗಲೇ ಯಶಸ್ಸು ನಿಮ್ಮದಾಗಲು ಸಾಧ್ಯ. ಹೊರಟುಬಿಡಿ, ಮತ್ತೆ ತಡವೇಕೆ?
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.