ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನ್ಯಾಯ ಲಯ

ಕಾನೂನಿಗೆ ಇರೋದು ಕಿವಿ ಮಾತ್ರ. ಅದು ಸಾಕ್ಷ್ಯಗಳು ಹೇಳುವುದನ್ನು ಕೇಳಿ ನ್ಯಾಯ, ಅನ್ಯಾಯ ನಿರ್ಧಾರ ಮಾಡಲು ಮಾತ್ರ.

Parashurama
Updated On : 9 Mar 2013, 11:48 am

ಕಾನೂನಿಗೆ ಇರೋದು ಕಿವಿ ಮಾತ್ರ. ಅದು ಸಾಕ್ಷ್ಯಗಳು ಹೇಳುವುದನ್ನು ಕೇಳಿ ನ್ಯಾಯ, ಅನ್ಯಾಯ ನಿರ್ಧಾರ ಮಾಡಲು ಮಾತ್ರ. ಕಣ್ಣಿಂದ ನೋಡಿ ಜಾತಿ, ಬಣ್ಣ, ಹುದ್ದೆ, ಸಂಬಂಧ ಮುಂತಾವುಗಳಿಂದ ಹೊರತಾಗಿರಬೇಕೆಂದೇ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳೆ. ನ್ಯಾಯ ನಿರ್ಣಯದಲ್ಲಿ ಕೇವಲ ಸರಿ, ತಪ್ಪು ಮಾತ್ರ ಮುಖ್ಯ. ಅದನ್ನು ಹೊರತುಪಡಿಸಿ ಬೇರ್ಯಾವುದೇ ಸಂಬಂಧ ಅದಕ್ಕೆ ಅಗತ್ಯವೇ ಇಲ್ಲ.

ಇದರ ಜೊತೆಗೆ ನ್ಯಾಯಶಾಸ್ತ್ರ ಸಂಬಂಧ ಮತ್ತೊಂದು ಮಾತೂ ಇದೆ, 'ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು'. ಮೊದಲಿನದೇನೊ ಸರಿ. ನೂರಲ್ಲ ಸಾವಿರ ಅಪರಾಧಿಗಳು ರಾಜಾರೋಷವಾಗಿ ತಪ್ಪಿಸಿಕೊಳ್ಳುತ್ತಿರುವುದು ಇಂದು ಕಾಮನ್. ಆದರೆ ನಿರಪರಾಧಿಗೆ ವಿನಾಕಾಣ ಶಿಕ್ಷೆಯಾಗಿ ಅವನ ಇಡೀ ಕುಟುಂಬ ವರ್ಷಕ್ಕೂ ಹೆಚ್ಚು ಕಾಲ ಅವಮಾನ ಸಹಿಸಿಕೊಂಡು ಕಣ್ಣೀರಿನಲ್ಲಿ ಕೈ ತೊಳೆದ ಹೃದಯವಿದ್ರಾವಕ ಘಟನೆ ಇಲ್ಲುಂಟು...

ಅದು ಕನ್ನಡಿಗರ ಕಿಚ್ಚನ್ನು ಆಗಾಗ್ಗೆ ಧಗ್ಗನೆ ಎದ್ದೇಳಿಸುವ ಬೆಳಗಾವಿ ನಗರ. ಅಲ್ಲಿನ ಮರಾಠಿ ಗಲ್ಲಿಯಲ್ಲಿ ರಾಯ್ಕರ್ ಕುಟುಂಬ ಯಾವುದೇ ತಂಟೆ ತಕರಾರಿಲ್ಲದೆ ಸಾಮಾನ್ಯ ಜೀವನ ನಡೆಸುತ್ತಿದೆ. ಮನೆಯ ಹಿರಿಯರಾದ ವಿನೋದ್ ರಾಯ್ಕರ್ ತೀರಿಕೊಂಡು ಸುಮಾರು ವರ್ಷಗಳೇ ಕಳೆದಿದೆ. ತಾಯಿ ವಸಂತ, ಇಬ್ಬರು ಗಂಡು ಮಕ್ಕಳನ್ನು ಬೆಳೆಸಿದ್ದಾಳೆ. ಹಿರಿಯ ಮಗ ಸಂತೋಷ್ ರಾಯ್ಕರ್‌ಗೆ ಖಾಸಗಿ ಕಂಪನಿಯಲ್ಲಿ ಕೆಲಸ. ಈತನಿಗೆ ಮದುವೆಯಾಗಿ ಒಬ್ಬ ಮಗ. ಈತನ ತಮ್ಮ ಸಂಜು ರಾಯ್ಕರ್.

ಸಂಜು ರಾಯ್ಕರ್ ನಿವೃತ್ತ ಸೈನಿಕ. ಆದರೆ, ಶಿಸ್ತೆನ್ನುವುದು ಆತನಿಗೆ ಗೊತ್ತಿಲ್ಲ. ಯಾವುದೇ ಕೆಲಸವನ್ನು ನೆಟ್ಟಗೆ ಮಾಡದೆ, ಪೊರ್ಕಿಯಾಗಿದ್ದ ಕಾರಣ ಈತನಿಗೆ ಮದುವೆ ಆಗಿರಲಿಲ್ಲ. ಈತನ ವೃಥಾ ಅಲೆದಾಟದ ಬಗ್ಗೆ ತಾಯಿ ಅಥವಾ ಅಣ್ಣ ಪ್ರಶ್ನಿಸಿದಾಗ ಅವರೊಂದಿಗೆ ಜಗಳ ತೆಗೆದು ಮನೆ ಬಿಟ್ಟು ಹೋಗುತ್ತಿದ್ದ ಸಂಜು ಸುಮಾರು ದಿನಗಳು ಮನೆಗೆ ವಾಪಸಾಗುತ್ತಿರಲಿಲ್ಲ. ಕೆಲ ದಿನಗಳ ನಂತರ ವಾಪಸ್ ಬಂದು ಎಂದಿನಂತೆ ಪೊರ್ಕಿಯಾಗುತ್ತಿದ್ದ. ಆದರೆ, ಈತನಿಗೆ ಯಾವುದೇ ದುಶ್ಚಟಗಳು ಇರಲಿಲ್ಲ. ಕುಟುಂಬವೂ ಯಾವುದೇ ದ್ವೇಷದ ವಾತಾವರಣವಿಲ್ಲದೆ ಸಾಮರಸ್ಯವಾಗಿಯೇ ಸಾಗುತ್ತಿತ್ತು. ಆದರೆ ಅದೊಂದು ದಿನ ರಾಯ್ಕರ್ ಕುಟುಂಬದಲ್ಲಿ ಸುನಾಮಿ ಎದ್ದೇಳಿತು.

ಏನಾಯಿತು?
ಯಥಾ ಪ್ರಕಾರ ಸಂಜುವಿನ ಸೋಮಾರಿತನದ ಬಗ್ಗೆ ತಾಯಿ ವಸಂತ ಖ್ಯಾತೆ ತೆಗೆದರು. ಇದಕ್ಕೆ ಸಂಜು ವಿರೋಧ ವ್ಯಕ್ತಪಡಿಸಿದ. ಅಣ್ಣನೂ ತಾಯಿ ಮಾತಿಗೆ ದನಿಗೂಡಿಸಿದ. ಬೇಸತ್ತ ಸಂಜು ಒಂದು ಬ್ಯಾಗು ತೆಗೆದುಕೊಂಡು ಮನೆಯಿಂದ ಹೊರನಡೆದ. ಇದು ಪ್ರತಿ ಸಲ ನಡೆಯುತ್ತಿದ್ದ ರೀತಿಯೇ ಆಗಿತ್ತು. ಆದರೆ... ಒಂದು ವಾರದ ನಂತರ ಮರಾಠಿ ಗಲ್ಲಿಯ ರಾಯ್ಕರ್ ಮನೆ ಮುಂದೆ ಒಂದು ಪೊಲೀಸ್ ಜೀಪು ಬಂದು ನಿಂತಾಗಲೇ ಅಲ್ಲಿ ಆತಂಕ ಅವತಾರ ಎತ್ತಿದ್ದು.

ಜೀಪಿನಿಂದ ಇಳಿದ ಇನ್ಸ್‌ಪೆಕ್ಟರ್ ರಕ್ತದ ಕಲೆಗಳಿದ್ದ ಬಟ್ಟೆ ತೋರಿಸಿ 'ಇದು ಯಾರದೆಂದು ಗುರ್ತಿಸುವಿರಾ?' ಎಂದು ಕೇಳಿದರು. ರಕ್ತಸಿಕ್ತ ಬಟ್ಟೆ ನೋಡಿದ ತಾಯಿ ವಸಂತ, 'ಇದು ನನ್ನ ಕಿರಿಯ ಮಗ ಸಂಜು ರಾಯ್ಕರ್‌ನದ್ದು. ಆತ ಮನೆಯಿಂದ ಹೊರ ಹೋದಾಗ ಧರಿಸಿದ್ದು ಇದೇ ಬಟ್ಟೆ' ಎಂದು ಹೇಳಿ ಕಥೆ ವಿವರಿಸಿದಳು.

ಸಮಾಧಾನ ಮಾಡಿಕೊಳ್ಳುವಂತೆ ಹೇಳಿದ ಇನ್ಸ್‌ಪೆಕ್ಟರ್, ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಸಂಜುರಾಯ್ಕರ್ ಭೀಕರವಾಗಿ ಕೊಲೆಯಾಗಿದ್ದಾನೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಕಾಣೆಯಾದ ಮಗನ ಬಗ್ಗೆ ದೂರು ನೀಡದಿರಲು ಕಾರಣ ಏನೆಂದು ಪ್ರಶ್ನಿಸಿದರು. ಪ್ರತಿ ಬಾರಿ ಹೀಗೆ ಮನೆಯಿಂದ ಹೊರಟು ವಾಪಸಾಗುತ್ತಿದ್ದ ಕಾರಣ ದೂರು ನೀಡಿಲ್ಲವೆಂದು ತಾಯಿ ಸ್ಪಷ್ಟನೆ ಕೊಟ್ಟರು. ಕೊಲೆಯಾದ ವ್ಯಕ್ತಿ ಗುರುತು ಸಿಕ್ಕಿರುವುದರಿಂದ ಕೊಲೆಗಾರರ ಬಂಧನಕ್ಕೆ ಸಂಬಂಧಿಸಿದ ತನಿಖೆಗೆ ಸಹಕರಿಸುವಂತೆ ಕೋರಿದರು. ಇದಕ್ಕೆ ಕುಟುಂಬ ಒಪ್ಪಿತು. ಇದಾದ ನಂತರ ಸತತವಾಗಿ ಒಂದು ವಾರ ಆ ಮನೆಯ ಮುಂದೆ ಪೊಲೀಸರ ಓಡಾಟ ನಡೆದೇ ಇತ್ತು. ಒಂದು ವಾರದ ನಂತರ ಮನೆಯ ಹಿರಿಯ ಮಗ ಸಂತೋಷ್ ರಾಯ್ಕರ್‌ನನ್ನು ಪೊಲೀಸರು ಬಂಧಿಸಿದರು!

ಅದು ಯಾಕಾಗಿ?
ಪೊಲೀಸರು ಕೊಟ್ಟ ಕಾರಣವೂ ಅಷ್ಟೇ ಸಮಂಜಸ. ಸಂತೋಷ್ ರಾಯ್ಕರ್ ಮತ್ತು ಸಂಜು ರಾಯ್ಕರ್ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯಿತ್ತಿತ್ತು. ಮದುವೆ ಆಗದ ಸಂಜು ರಾಯ್ಕರ್ ಅಣ್ಣನ ಹೆಂಡತಿಯಾದ ವೈಶಾಲಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ತಿಳಿದ ಸಂತೋಷ್ ಸಹಿಸಲಾರದೆ ಸುಪಾರಿ ಕೊಟ್ಟು ತಮ್ಮನನ್ನು ಕೊಲೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಸಂತೋಷ್ ವಿರುದ್ಧ ಪೊಲೀಸರು ಹೊರೆಸಿದರು.

ತಾನು ಕೊಲೆ ಮಾಡಿಲ್ಲವೆಂದು ಎಷ್ಟೇ ಹೇಳಿದರೂ ಸಂತೋಷ್ ಮಾತು ಅರಣ್ಯರೋದನವಾಯಿತು. ಇತ್ತ ಮೈದುನನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಗುಸುಗುಸು ಇಡೀ ಪ್ರದೇಶ ಹಬ್ಬಿ ವೈಶಾಲಿ ತಲೆ ಎತ್ತಿ ಓಡಾಡಲೂ ಆಗದ ಸ್ಥಿತಿ ಏರ್ಪಟ್ಟಿತು. ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬ ಕೊಲೆಯಾಗಿ ಮತ್ತೊಬ್ಬ ಆತನ ಕೊಲೆ ಮಾಡಿದ ಆರೋಪದಲ್ಲಿ ಹಿಂಡಲಗಾ ಜೈಲು ಸೇರಿದ ಸುದ್ದಿ ಕೇಳಿ ತಾಯಿ ವಸಂತಾಳ ನೋವು ಹೇಳತೀರದಾಗಿತ್ತು. ಸಂತೋಷವಾಗಿದ್ದ ಕುಟುಂಬ ಈ ಒಂದು ಘಟನೆಯಿಂದ ಛಿದ್ರವಾಗಿತ್ತು.

ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ರಾಯ್ಕರ್ ಕುಟುಂಬ ಇರುವ ಕಷ್ಟಗಳ ಜೊತೆಗೆ ಕೋರ್ಟಿನ ಹೊರೆಯನ್ನೂ ಹೊರಬೇಕಾಯಿತು. ಮಗುವಿನ ಓದು, ನಿತ್ಯದ ಖರ್ಚಿನೊಂದಿಗೆ ಅಕ್ಕಪಕ್ಕದವರ ನಿಂದನೆಗಳನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ವೈಶಾಲಿ ಹೆಗಲಿಗೆ ಬಿತ್ತು. ಕಷ್ಟಗಳು ಬಂದಾಗ ಎದೆಗುಂದದೆ ಎಲ್ಲವನ್ನೂ ಸಹಿಸಿಕೊಂಡು ಕಾಲ ದೂಡತೊಡಗಿದಳು ವೈಶಾಲಿ.

ಆಮೇಲೆ..?
ಹೀಗೆ ಕೊಲೆ ಆರೋಪದ ಮೇಲೆ ಸಂತೋಷ್ ಬಂಧಿತನಾಗಿ ವರ್ಷವೇ ಕಳೆಯಿತು. ಕೊಲೆ ಪ್ರಕರಣವಾದ ಕಾರಣ ಜಾಮೀನು ಸಿಕ್ಕಿಲ್ಲ. ಅವಮಾನದ ನಡುವೆ ಕೋರ್ಟಿಗೆ ಅಲೆಯುವುದೇ ವೈಶಾಲಿಯ ನಿತ್ಯ ಕಾಯಕವಾಯಿತು. ಅದೊಂದು ದಿನ ಬೆಳಗ್ಗೆ ವೈಶಾಲಿ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದ ಸಂದರ್ಭದಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಯಾರು ಬಂದಿರಬಹುದು ಎಂಬ ಸಂಶಯದಲ್ಲೇ ಬಂದು ಬಾಗಿಲು ತೆಗೆದ ವೈಶಾಲಿಗೆ ತನ್ನ ಕಣ್ಣನ್ನು ತಾನೇ ನಂಬಲಾದಳು.
ಎದುರಿಗೆ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿ ಕಳೆದ ಒಂದು ವರ್ಷದ ಹಿಂದೆ ತನ್ನ ಗಂಡನಿಂದ ಕೊಲೆಯಾಗಿದ್ದಾನೆ ಎಂಬ ಆರೋಪ ಬಂದಿತ್ತಲ್ಲಾ ಅದೇ ಸಂಜು ರಾಯ್ಕರ್! ತಾನು ನೋಡುತ್ತಿರುವುದು ಕನಸಾ ಎಂಬ ಸಂಶಯದಲ್ಲಿಯೇ ಅತ್ತೆಯನ್ನು ಕಿರುಚಿ ಕರೆದಳು ವೈಶಾಲಿ. ಮತ್ತೆ ಏನು ಅವಾಂತರ ನಡೆಯಿತು ಎಂಬ ಆತಂಕದಲ್ಲಿ ಮುದುಕಿ ವಸಂತಾ ಓಡಿ ಬಂದಳು. ಎದುರಿಗಿನ ದೃಶ್ಯ ಕಂಡು ಮೂರ್ಛೆ ಬೀಳುವುದು ಬಾಕಿ.

ನಡೆದಿದ್ದೇನು?
ತನ್ನನ್ನು ದೆವ್ವ ನೋಡಿದಂತೆ ನೋಡುತ್ತಿರುವ ಮನೆಯವರ ವರ್ತನೆ ಕಂಡು ಸಂಜುರಾಯ್ಕರ್‌ಗೂ ಅನುಮಾನ. ಯಾಕೆ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದೀರಿ ಎಂದು ಪ್ರಶ್ನಿಸಿದ. ಇದಕ್ಕೆ ತಾಯಿ ವಸಂತಾಳ ದುಃಖದ ಕಟ್ಟೆ ಒಡೆಯಿತು. ನಡೆದ ವಿಚಾರವನ್ನು ತಿಳಿಸಿ ನೀನು ಬದುಕಿ ಬಂದಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು. ಅದಕ್ಕೆ ಸಂಜುವಿನ ಉತ್ತರ ತೀರಾ ಸಾಧಾರಣವಾಗಿತ್ತು.

ಮನೆಯಲ್ಲಿ ಜಗಳ ಮಾಡಿಕೊಂಡ ಸಂಜು ನೇರವಾಗಿ ಮುಂಬೈಗೆ ಹೋದ. ಅಲ್ಲಿ ಒಬ್ಬ ಬಿಲ್ಡರ್ ಹತ್ತಿರ ಕೆಲಸಕ್ಕೆ ಸೇರಿ ದುಡಿಯತೊಡಗಿದ. ತಾನು ಸೋಮಾರಿಯಾಗಿರುವ ಕಾರಣ ಮನೆಯಲ್ಲಿ ತನಗೆ ಮರ್ಯಾದೆ ಇಲ್ಲ. ದುಡಿದು ಸಂಪಾದನೆ ಮಾಡಿದರೆ ಗೌರವ ಸಿಗುತ್ತದೆ ಸ್ವಲ್ಪ ಹಣ ಸಂಪಾದನೆ ಮಾಡುವವರೆಗೆ ಮನೆಗೆ ಹೋಗಬಾರದು ಎಂದು ನಿರ್ಧರಿಸಿ ಇಷ್ಟು ದಿನ ಮುಂಬೈನಲ್ಲಿದ್ದ. ಕೊನೆಗೆ ಕೆಲಸ ಬೇಸರವಾಗಿ ಮನೆಗೆ ಹಿಂದಿರುಗಿದ್ದ.
ತಾಯಿಯಂಥ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಕಟ್ಟಿ, ದೇವರಂಥ ಅಣ್ಣನನ್ನು ಜೈಲಿಗೆ ಕಳುಹಿಸಿರುವ ಪೊಲೀಸರ ವಿರುದ್ಧ ಸಂಜುಗೆ ವಿಪರೀತ ಕೋಪ ಬಂದಿತ್ತು. ಈಗ ಮುಂದಿರುವ ದಾರಿ ಮೊದಲು ಅಣ್ಣನ ಬಿಡುಗಡೆ ನಂತರ ಕಾನೂನು ಹೋರಾಟ ಎಂದು ನಿರ್ಧರಿಸಿ ಕೂಡಲೇ ವಕೀಲರನ್ನು ಸಂಪರ್ಕಿಸಲಾಯಿತು.

ಮುಂದೆ..?
ಸಂಜು ಜೀವಂತ ಬಂದ ವಿಷಯ ತಿಳಿದು ಪೊಲೀಸರು ದಿಗ್ಭ್ರಾಂತರಾಗಿದ್ದರು. ಹೆಣ ಸಿಕ್ಕ ಕೂಡಲೇ ಅದಕ್ಕೆ ಸಂಬಂಧಪಟ್ಟವರನ್ನು ಬಂಧಿಸಿ ಪ್ರಕರಣ ಪೂರ್ತಿಯಾಯಿತು ಎಂದು ಭಾವಿಸಿದ್ದ ಪೊಲೀಸರಿಗೆ ಈಗ ತಲೆ ನೋವು ಶುರು. ಮಾಡಿದ ತಪ್ಪು ಸಮರ್ಥಿಸಿಕೊಳ್ಳುವುದಾದರೂ ಹೇಗೆ? ಹಾಗಾದರೆ ಅಂದು ಮೃತಪಟ್ಟ ವ್ಯಕ್ತಿ ಯಾರು? ಆತನನ್ನು ಕೊಲೆ ಮಾಡಿದ್ದು ಯಾರು?

ಇದೆಲ್ಲಾ ತಲೆಬಿಸಿ ಮಾಡಿಕೊಳ್ಳಲು ಸಿದ್ಧರಿಲ್ಲದ ಪೊಲೀಸರು ಬದುಕಿ ಬಂದಿರುವುದು ಸಂತೋಷನ ತಮ್ಮ ಸಂಜು ಅಲ್ಲವೇ ಅಲ್ಲ ಎಂಬ ವಾದವನ್ನು ಕೋರ್ಟಿನಲ್ಲಿ ಮಂಡಿಸಿದರು. ಇದಕ್ಕೆ ಸಂತೋಷ್ ಪರ ವಕೀಲ, 'ಎಲ್ಲ ಪರೀಕ್ಷೆ ಎದುರಿಸಲು ಸಿದ್ಧ' ಎಂದ. ಹೀಗಾಗಿ ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಲಾಯಿತು. ಡಿಎನ್‌ಎ ಪರೀಕ್ಷೆ ಫಲಿತಾಂಶ ಹೊರಬರುವ ವರೆಗೆ ಸಂತೋಷ್ ಬಿಡುಗಡೆ ವಿಳಂಬವಾಯಿತು. ಕೊನೆಗೂ ಸಂತೋಷ್, ಆತನ ತಾಯಿ ಮತ್ತು ಬಂದಿರುವ ಸಂಜು ರಾಯ್ಕರ್ ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಯಿತು.
ಅದರಲ್ಲಿ ಸಂಜು ಮತ್ತು ಸಂತೋಷ್ ವಸಂತರ ಮಕ್ಕಳೇ ಎಂಬ ಸತ್ಯಾಂಶ ಹೊರಬಿತ್ತು. ಇದರಿಂದ ಪೊಲೀಸರು ನಿರುತ್ತರರಾದರು. ಸಂತೋಷ್ ನಿರಪರಾಧಿ ಎಂದು ಬಿಡುಗಡೆಗೊಳಿಸಿ ಅಂದು ಮೃತಪಟ್ಟ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿತು. ಆದರೆ...

ಪರಿಣಾಮ
ಮೈದುನನ ಜೊತೆ ಅಕ್ರಮ ಸಂಬಂಧ ಹೊಂದಿದ, ನಡತೆಗೆಟ್ಟವಳು ಎಂದು ಅಕ್ಕಪಕ್ಕದವರು ಮೊದಲಿಸಿದ ಮಾತುಗಳಿಂದ ವೈಶಾಲಿಗೆ ದೊರೆತ ನ್ಯಾಯವಾದರೂ ಏನು? ಮಾಡದ ತಪ್ಪಿಗೆ ತಮ್ಮನನ್ನೇ ಕೊಲೆ ಮಾಡಿದ ಪಾಪಿ ಎಂಬ ಹಣೆಪಟ್ಟಿ ಹೊತ್ತು ಒಂದು ವರ್ಷದ ಕಾಲ ಸೆರೆವಾಸ ಅನುಭವಿಸಿದ ಸಂತೋಷ ರಾಯ್ಕರ್‌ಗೆ ದೊರೆತ ಪರಿಹಾರ ಏನು? ಪ್ರಕರಣ ಪರಿಸಮಾಪ್ತಿಗೊಳಿಸುವ ಬರದಲ್ಲಿ ಪೊಲೀಸರು ಮಾಡಿದ ಎಡವಟ್ಟುಗಳು ನ್ಯಾಯಶಾಸ್ತ್ರವನ್ನೇ ಮೊದಲಿಸುವಂತಿತ್ತು. ಆದರೆ ರಾಯ್ಕರ್ ಕುಟುಂಬ ಮುಂದಿನ ನ್ಯಾಯಾಂಗ ಸಮರಕ್ಕೆ ಹೋಗದೆ 'ಬಡವ ನೀನು ಮಡಗಿದಂಗಿರು' ಎಂಬ ಗಾದೆಯಂತೆ ನೋವನ್ನು ನುಂಗಿಕೊಂಡು ಜೀವಿಸುತ್ತಿದೆ.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments