ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರತಿಷ್ಠೆಯ ಸಂಕೇತ ಕೇಸರಿಬಾತ್...

Parashurama
Updated On : 10 Mar 2013, 3:29 am

ಕೇಸರಿ ಗೊತ್ತಿಲ್ಲದವರ್ಯಾರಿದ್ದಾರೆ? ದಕ್ಷಿಣ ಭಾರತೀಯರಂತೂ ಹೆಚ್ಚಿನ ಎಲ್ಲ ಸಿಹಿ ತಿಂಡಿಗಳಿಗೆ-ಶಿರಾ, ಲಾಡು, ಪಾಯಸ, ಬರ್ಫಿ, ಫೇಡಾ, ಬಾದಾಮಿ ಹಾಲು ಮುಂತಾದವುಗಳಿಗೆ, ಬಾದಾಮಿ ಹಾಲಿಗೆ ಕೇಸರಿ ಬಳಸಿಯೇ ಬಳಸುತ್ತಾರೆ. ಎಲ್ಲ ರೀತಿಯ ಖೀರುಗಳಲ್ಲಿ ಕೇಸರಿ ಉಪಯೋಗಿಸಿಯೇ ಇರುತ್ತಾರೆ. ಇನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡದ ತಾಲೂಕುಗಳಲ್ಲಿ ಕೇಸರಿ ಬಾತ್ ಮಾಡುವುದು ಒಂದು ಪ್ರತಿಷ್ಠೆಯ, ಗತ್ತಿನ ವಿಷಯ. ಮದುವೆ, ಮುಂಜಿಗಳಲ್ಲಿ ಕೇಸರಿ ಬಾತ್ ಮಾಡುವುದು ಶ್ರೀಮಂತಿಕೆಯ ಪ್ರದರ್ಶನ ಕೂಡ ಹೌದು.
ಇನ್ನು ರುಚಿಯಲ್ಲಿ ಕೇಸರಿ ಬಾತ್‌ಗೆ ಸರಿಸಾಟಿಯಿಲ್ಲ. ಕೇಸರಿಯನ್ನು ಪಾನ್ ಬೀಡಾಕ್ಕೆ ಕೂಡ ಉಪಯೋಗಿಸುತ್ತಾರೆಂದರೆ ಅದರ ಗುಣವಿಶೇಷ ಅರ್ಥವಾಗುತ್ತದೆ. ಕೇಸರಿಗೆ ಒಂದು ರೀತಿಯ ಕಹಿ ಒಗರು ರುಚಿ ಇದ್ದರುತ್ತದೆ. ವಾಸನೆ ತುಂಬಾ ತೀಕ್ಷ್ಣವಾಗಿರುತ್ತದೆ. ಕೇಸರಿಯನ್ನು ತಿಂಡಿಗೆ ಸೇರಿಸಿದಾಗ ವಿಶೇಷ ರುಚಿ, ಪರಿಮಳ ನೀಡುತ್ತದೆ. ಬಣ್ಣವಂತೂ ಕಣ್ಣಿಗೆ ಆಹ್ಲಾದ ನೀಡುವಂತಿರುತ್ತದೆ.
ಬೆಂಗಳೂರು-ಮೈಸೂರು ಭಾಗಗಳಲ್ಲಿ ಕೇಸರಿ ಬಾತ್ ಎಂದರೆ ರವೆಯಿಂದ ಮಾಡುವ ಶಿರಾ. ಇಲ್ಲಿ ಮಾಡುವ ಕೇಸರಿ ಬಾತ್‌ಗೆ ನಿಜವಾದ ಕೇಸರಿಯನ್ನು ಬಳಸುವುದಿಲ್ಲ, ಬದಲಾಗಿ ಕೇಸರಿ ಬಣ್ಣ (ಸಿಹಿ ತಿಂಡಿಗೆ ಬಳಸುವ ಕೇಸರಿ ಫುಡ್‌ಕಲರ್) ಬಳಸುತ್ತಾರೆ. ಇದು ಕೇಸರಿ ರುಚಿಯನ್ನಾಗಲೀ, ಸುವಾಸನೆಯನ್ನಾಗಲೀ ಕೊಡುವುದಿಲ್ಲ. ಕೇವಲ ಬಣ್ಣವನ್ನು ಮಾತ್ರ ಹೋಲುತ್ತದೆ. ನಿಜವಾದ ಕೇಸರಿ ಬಾತ್ ತಯಾರಿಸುವುದು ಪರಿಮಳದ ಅನ್ನ(ಸಣ್ಣಕ್ಕಿ ಅನ್ನ)ದಿಂದ. ಇದಕ್ಕೆ ಕೇಸರಿ, ಸಕ್ಕರೆ, ತುಪ್ಪ, ದ್ರಾಕ್ಷಿ, ಗೋಡಂಬಿಗಳನ್ನು ನಿರ್ದಿಷ್ಟ ಅಳತೆಯಲ್ಲಿ, ನಿರ್ದಿಷ್ಟ ವಿಧಾನದಲ್ಲಿ ತಯಾರಿಸಲಾಗುತ್ತದೆ. ಇದನ್ನು ಪರಿಣಿತರೇ ತಯಾರಿಸಬೇಕು. ಸ್ವಲ್ಪ ವ್ಯತ್ಯಾಸವಾದರೂ ರುಚಿಯಲ್ಲಿ ವ್ಯತ್ಯಾಯವಾಗುತ್ತದೆ.
ಕೇಸರಿಯನ್ನು ಗರ್ಭಿಣಿಯರಿಗೆ ಪ್ರತಿದಿನ ಹಾಲಿನಲ್ಲಿ ಹಾಕಿ ಕೊಡುವುದರಿಂದ ಹುಟ್ಟುವ ಮಗುವಿನ ಬಣ್ಣ ಬೆಳ್ಳಗಿರುತ್ತದೆ ಎಂಬುದು ಒಂದು ನಂಬಿಕೆ. ಕೇಸರಿ ಬೆರೆಸಿದ ಕಷಾಯದ ಪುಡಿಯಿಂದ ತಯಾರಿಸಿದ ಕಷಾಯ ಕೂಡ ಸೊಗಸಾಗಿರುತ್ತದೆ.
ಹಾಗಂತ ಕೇಸರಿ ಕಡಿಮೆ ಬೆಲೆಗೆ ಸಿಗುವಂಥದ್ದಲ್ಲ. ತುಂಬಾ ದುಬಾರಿಯಾದುದು. ಭಾರತದ ಎಲ್ಲ ಭಾಗಗಳಲ್ಲೂ ಇದನ್ನು ಬೆಳೆಯಲಾಗುವುದಿಲ್ಲ. ಅಲ್ಲದೇ ಬೆಳೆಯುವ ಪ್ರಮಾಣ ಕೂಡ ತೀರಾ ಕಡಿಮೆ. ಇರಿಡಿಯೇಸಿ ವಂಶಕ್ಕೆ ಸೇರಿದ ಕೇಸರಿ ಪ್ರಪಂಚದ ಅತಿಹಳೆಯ ಮತ್ತು ಅತ್ಯಂತ ಬೆಲೆಬಾಳುವ ಸಂಬಾರ ಜಿನಿಸು. ಒಂದು ಪೌಂಡ್ ಕೇಸರಿ ಸಂಗ್ರಹಿಸಬೇಕಾದರೆ 225,000ರಿಂದ 500,000 ಒಣಗಿಸಿದ ಶಲಾಕಾಗ್ರಗಳನ್ನು ತೆಗೆಯಬೇಕು! ಇದನ್ನು ನೋಡಿದರೆ ಕೇಸರಿಯನ್ನು ತಯಾರಿಸಲು ಎಷ್ಟು ಕೆಲಸ ಹಿಡಿಯುತ್ತದೆನ್ನುವುದು ಗೊತ್ತಾಗುತ್ತದೆ.
ಕೇಸರಿಯ ಹೊಳಪಿನ ಹಳದಿ-ಕೆಂಪು ಬಣ್ಣದಿಂದ ಕೂಡಿರುತ್ತದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments