ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

Snow ಬಾಲ್!

ಇಂಗ್ಲೆಂಡ್ ಮೂಲದ ಇಬ್ಬರು ಯುವಕರು ನಮ್ಮ ಹಿಮಾಲಯದಲ್ಲಿ... ಅದರಲ್ಲೂ ನಮ್ಮ ಪವಿತ್ರ ತಾಣ ಗೌರೀಶಂಕರ ಶಿಖರದ ತಪ್ಪಲಿನಲ್ಲೇ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿ ಯಶಸ್ವಿಯಾಗಿ ನಡೆಸಿದರು.

Parashurama
Updated On : 13 Mar 2013, 1:12 am

ಜಗತ್ತಿನ ದೈತ್ಯ ಶಕ್ತಿಗಳ ಪಟ್ಟಿಗೆ ಕ್ರಿಕೆಟ್ ಅನ್ನೂ ಸೇರಿಸಬಹುದಾ? ಈ ಪ್ರಶ್ನೆಗೆ ನೇರವಾಗಿ ಹೌದು ಎನ್ನಬಹುದು.
ಏಕೆಂದರೆ, ಈ ಭೂಮಿಯ ಮೇಲೆ ಕ್ರಿಕೆಟ್ ಎಂಬ ಕ್ರೀಡೆ ಮಾಡಿರುವ ಮೋಡಿ ಅಂತಿಂಥದ್ದಲ್ಲ. ಅದು ಬಣ್ಣನೆಗೆ ನಿಲುಕದ್ದು. ಜಾತಿ, ಮತ, ಧರ್ಮ, ಜನಾಂಗಗಳ ಭೇದವಿಲ್ಲದೆ ಇಡೀ ಮಾನವ ಕುಲವನ್ನು ಬೆಸೆಯುವ ಶಕ್ತಿ ಆ ಕ್ರೀಡೆಗಿದೆ. ಕೇವಲ ಉತ್ಪ್ರೇಕ್ಷೆಯಲ್ಲ. ಇದು ಸಾಬೀತಾದ ಅಂಶ. ಪ್ರಬಲ ದೇಶಗಳಷ್ಟೇ ಅಲ್ಲದೇ, ಸದಾ ಯುದ್ಧ ಭೀತಿಯಲ್ಲಿರುವ ಅಫ್ಘಾನಿಸ್ತಾನ, ದಬ್ಬಾಳಿಕೆಯನ್ನೇ ಉಸಿರಾಡಿಕೊಂಡು ಬೆಳೆದಿರುವ ಕೆರಿಬಿಯನ್ನರ ನಾಡಿನಂಥ ನೆಲದಲ್ಲೂ ಮಂದಹಾಸ ಸುಳಿದಾಡುವಂತೆ ಮಾಡಿದ ಕೆಲವೇ ಸಂಗತಿಗಳಲ್ಲಿ ಕ್ರಿಕೆಟ್ ಸಹ ಒಂದು.
ಹೀಗೆ, ಜಾಗತಿಕ ಮಾನ್ಯತೆ ಗಳಿಸಿರುವ ಕ್ರೀಡೆಯ ಇನ್ನೊಂದು ವಿಶಿಷ್ಟ ಗುಣವೆಂದರೆ ಅದನ್ನು ಎಲ್ಲಿ ಬೇಕಾದರೂ ಆಡಬಹುದು. ಕ್ರೀಡಾಂಗಣವೇ ಬೇಕೆಂದೇನೂ ಇಲ್ಲ. ನಮ್ಮ ಊರಿನ ಬೀದಿ, ಗಲ್ಲಿಯಾದರೂ ಸೈ...
ಈ ಆಟದ  ಇಂಥ ವೈಶಿಷ್ಟ್ಯ ಗಮನಿಸಿಯೇ ಇಬ್ಬರು ಮಿತ್ರರು ಅದನ್ನು ಹಿಮದ ಹಾಸಿನ ಮೇಲೆ ಆಡುವ ನಿರ್ಧಾರ ಕೈಗೊಂಡಿದ್ದು, ಪರಿಕಲ್ಪನೆ ಒಡಮೂಡಿದ್ದು 2008ರಲ್ಲಿ. ಕನಸು ನನಸಾಗಿದ್ದು 2009ರಲ್ಲಿ.
ಹೌದು. ಬಹುತೇಕರಿಗೆ ಇದು ಗೊತ್ತಿರಲಾರದು. ಇಂಗ್ಲೆಂಡ್ ಮೂಲದ ಇಬ್ಬರು ಯುವಕರು ನಮ್ಮ ಹಿಮಾಲಯದಲ್ಲಿ... ಅದರಲ್ಲೂ ನಮ್ಮ ಪವಿತ್ರ ತಾಣ ಗೌರೀಶಂಕರ ಶಿಖರದ ತಪ್ಪಲಿನಲ್ಲೇ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದ್ದರು ಮಾತ್ರವಲ್ಲ, ಅದನ್ನು ಯಶಸ್ವಿಯಾಗಿ ನಡೆಸಿದ್ದರು. ಹಾಗೆಂದು ಇದು ವಾಣಿಜ್ಯ ಉದ್ದೇಶಕ್ಕಾಗಿಯಲ್ಲ. ಕೇವಲ ರೋಮಾಂಚನ ಸಾಹಸಕ್ಕಾಗಿಯೇ ಆಯೋಜಿಸಲಾಗಿದ್ದ ಪಂದ್ಯವಿದು.
ಹಿಮಕ್ರಿಕೆಟ್‌ನ ಕನಸು ಕಂಡವರ ಹೆಸರು - ರಿಚರ್ಡ್ ಕೀರ್ಟ್ಲಿ ಹಾಗೂ ಗ್ಯಾರತ್ ವೆಸ್ಲಿ. ಇಂಥ ಪರಿಕಲ್ಪನೆ ಮೊದಲು ಹೊಳೆದದ್ದು ರಿಚರ್ಡ್‌ಗೆ.

ಜಾಗ ಆಯ್ಕೆ
ವಿಭಿನ್ನ ಆಸೆ ಕುಡಿಯೊಡೆದದ್ದೇ ತಡ, ಕ್ರಿಕೆಟ್ ಪಂದ್ಯಕ್ಕಾಗಿ ರಿಚರ್ಡ್ ಆರಿಸಿಕೊಂಡದ್ದು ಗೋರಖ್ ಶೋಪ್ ಎಂಬ ಪ್ರದೇಶವನ್ನು. ಹಿಮಾಲಯ ಪರ್ವತ ಚಾರಣಿಗರಿಗೆಲ್ಲ ಬೇಸ್ ಕ್ಯಾಂಪ್ ಆಗಿರುವ ಈ ಜಾಗ, 1952ರಲ್ಲಿ ಹಿಮಾಲಯ ಏರಿದ್ದ ಎಡ್ಮಂಡ್ ಹೀಲರಿ ಹಾಗೂ ತೇನ್ ಸಿಂಗ್ ಬೀಡು ಬಿಟ್ಟಿದ್ದ ಪ್ರದೇಶವೂ ಆಗಿತ್ತು. ಇಲ್ಲಿಯೇ ಟಿ20 ಪಂದ್ಯವನ್ನು ಆಡಲು ನಿರ್ಧರಿಸಿದರು.

ಅದೆಂಥಾ ಸ್ಥಳ ಗೊತ್ತಾ?
ಈ ಜಾಗದಲ್ಲಿ ಸರಾಗವಾಗಿ ಕ್ರಿಕೆಟ್ ಆಡಲು ಸಾಧ್ಯವಿರಲಿಲ್ಲ. ಪ್ರಮುಖ ಮೂರು ಸವಾಲುಗಳಿದ್ದವು ಅಲ್ಲಿ. ಅವುಗಳಲ್ಲಿ ಮೊದಲನೆಯದು ಆಮ್ಲಜನಕದ ಕೊರತೆ. ಏನಿಲ್ಲವೆಂದರೂ ಸಹಜ ತಾಣದಲ್ಲಿರುವುದಕ್ಕಿಂಥ 3ನೇ ಒಂದು ಭಾಗದಷ್ಟು ಆಮ್ಲಜನಕದ ಕೊರತೆ ಅಲ್ಲಿತ್ತು. ಇನ್ನು ಇನ್ನೊಂದು ಸವಾಲೆಂದರೆ, ಅಲ್ಲಿ ಇರುವವರಿಗೆ ಹಸಿವೆಯೇ ಗೊತ್ತಾಗದಿರುವುದು. ಅಂದರೆ, ಆ ಪ್ರದೇಶದಲ್ಲಿ ದೇಹಕ್ಕೆ ಆಹಾರದ ಅವಶ್ಯಕತೆಯಿದ್ದರೂ ಇರಿವಿಗೆ ಬರುವುದೇ ಇಲ್ಲ. ಆಹಾರವಿಲ್ಲದೇ, ದೇಹದ ಶಕ್ತಿ ಸಂಪೂರ್ಣವಾಗಿ ಕುಂದಿ ನಿತ್ರಾಣಗೊಂಡ ಮೇಲಷ್ಟೇ ಹಸಿವಾಗಿತ್ತು ಎಂಬುದು ಗೊತ್ತಾಗುವುದು.
ಮೂರನೇ ಅತಿ ಮುಖ್ಯ ಸವಾಲು ನಿದ್ರಾಹೀನತೆಯದ್ದು. ಈ ಮೂರನ್ನೂ ಕೆಲ ಉಪಾಯಗಳನ್ನು ಪ್ರಯೋಗಿಸಿ ಹೇಗೋ ನಿಭಾಯಿಸಬಹುದಾಗಿದ್ದರೂ, ಇದನ್ನು ಮೀರಿದ ನಾಲ್ಕನೇ ಅಪಾಯ ಅಲ್ಲಿತ್ತು. ಅದು, ದೇಹದ ರಕ್ತ ಪರಿಚಲನೆಗೆ ಸಂಬಂಧಿಸಿದ್ದು. ಇದನ್ನು ಇಂಗ್ಲಿಷ್‌ನಲ್ಲಿ 'ಮೌಂಟೇನ್ ಸಿಕ್‌ನೆಸ್‌' ಎನ್ನುತ್ತಾರೆ. ಅಂದರೆ, ಅತ್ಯಂತ ಪ್ರತಿಕೂಲ ಪ್ರದೇಶಗಳಲ್ಲಿ ದೇಹದ ಮೇಲೆ ಉಂಟಾಗುವ ಒತ್ತಡಗಳಿಂದಾಗಿ ರಕ್ತ ನಾಳಗಳು ಒಡೆದು, ಮೆದುಳು, ಹೃದಯ ಛಿದ್ರಗೊಳ್ಳುವ ಅಪಾಯವಿರುತ್ತದೆ.

ಬೆಂಬಲದ ಪೂರ
ಇಷ್ಟೆಲ್ಲ ಸಮಸ್ಯೆಗಳಿರುವ ಜಾಗದಲ್ಲೇ ಕ್ರಿಕೆಟ್ ಆಡಬೇಕೆಂಬ ಉತ್ಕಟ ಅಭಿಲಾಷೆಯಿಂದ ಹೊರಟ, ರಿಚರ್ಡ್ ಹಾಗೂ ಗ್ಯಾರೆತ್ ಉತ್ಸಾಹಕ್ಕೆ ಸ್ವದೇಶದಲ್ಲಿ ಉತ್ತಮ ಬೆಂಬಲ ದೊರಕಿತು. ಈ ಪರಿಕಲ್ಪನೆಯನ್ನು ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸಿದ ಈ ಇಬ್ಬರಿಗೂ ಅಚ್ಚರಿಯಾಗುವಷ್ಟು ಮಂದಿ ಬೆಂಬಲ ನೀಡಿದರು. ಮಾತ್ರವಲ್ಲ ಈ ಸಾಹಸದಲ್ಲಿ ಪಾಲ್ಗೊಳ್ಳುವ ಇಚ್ಛೆ ವ್ಯಕ್ತಪಡಿಸಿದರು. ಅಲ್ಲದೆ, ಹಲವಾರು ಸಂಘ-ಸಂಸ್ಥೆಗಳಿಂದ ಸೂಕ್ತ ಆರ್ಥಿಕ ಬೆಂಬಲವೂ ಲಭ್ಯವಾಯಿತು. ಇವರಲ್ಲಿ 15 ಮಂದಿ ಆಟಕ್ಕೆ ಆಯ್ಕೆಯಾದರೆ, ಇನ್ನುಳಿದವರು ಪ್ರೇಕ್ಷಕರಾಗಿ ಬರಲು ಸಿದ್ಧರಾದರು.  ಈ ರೋಚಕ ಸಾಹಸಕ್ಕಾಗಿ ಅಲ್ಲಿನ ಕೆಲ ಕ್ರಿಕೆಟ್ ಸಂಸ್ಥೆಗಳು ಕ್ರಿಕೆಟ್ ಪರಿಕರಗಳನ್ನು ಕೊಟ್ಟವು. ಅತ್ತ, ಆಸಕ್ತರ ಪಟ್ಟಿಯಂತೂ ದಿನೇ ದಿನೇ ಬೆಳೆಯುತ್ತಲೇ ಇತ್ತು.  ಅಂತೂ 2009ರ ಏಪ್ರಿಲ್ ವೇಳೆಗೆ 30 ಆಟಗಾರರು, ಅಂಪೈರ್ ಹಾಗೂ ಕೆಲ ಪ್ರೇಕ್ಷಕರ ಸಮೂಹ ನೇಪಾಳದ ಕಾಠ್ಮಂಡುವಿಗೆ ಪ್ರಯಾಣ ಬೆಳೆಸಲು ಸಜ್ಜಾಯಿತು. ಇಷ್ಟು ಸಿದ್ಧತೆ ಮಾಡಿಕೊಂಡ ನಂತರ, ರಿಚರ್ಡ್, ಗ್ಯಾರೆತ್ ಎಲ್ಲರಿಗಿಂತ ಮೊದಲೇ ನೇಪಾಳಕ್ಕೆ ಆಗಮಿಸಿ, ಅಲ್ಲಿನ ಸರ್ಕಾರ ಹಾಗೂ ಕೆಲವೊಂದು ಸಂಘ- ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದರು. ತಮ್ಮ ಕ್ರಿಕೆಟ್ ಪಂದ್ಯದ ಹಿಂದೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಅವರಿಗೆ ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳ ಬೆಂಬಲವೂ ಸಿಕ್ಕಿತು. ಕೆಲ ಸರ್ಕಾರಿ ಆಸ್ಪತ್ರೆಗಳು ಆಟದ ಸಂದರ್ಭದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸುಸಜ್ಜಿತ ಆಂಬುಲೆನ್ಸ್ ಒದಗಿಸಲು ಮುಂದೆ ಬಂದವು. ಅದರಲ್ಲೂ ಹಿಮಾಲಯನ್ ರಕ್ಷಣಾ ಕಾರ್ಯಾಚರಣೆ ಸಂಸ್ಥೆಯು ಆಟಗಾರರಿಗೆ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಟೊಂಕ ಕಟ್ಟಿ ನಿಂತಿತು. ಎಲ್ಲರ ಸಹಕಾರದಿಂದ ಏಪ್ರಿಲ್‌ನಲ್ಲಿ ಪಂದ್ಯದ ಕನಸು ನನಸಾಗುವ ಕ್ಷಣ ಕೈಗೂಡಿತ್ತು.

- ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments