ವ್ಯಕ್ತಿ ನಿರ್ಮಾಣ
ದೇಶದ ನಿಜವಾದ ಆಸ್ತಿಯೆಂದರೆ ಸಮರ್ಥ ವ್ಯಕ್ತಿಗಳು ಮತ್ತು ಕ್ರಿಯಾಶೀಲ ಜ್ಞಾನಿಗಳು. ಅಂತಹ ವ್ಯಕ್ತಿಗಳ ನಿರ್ಮಾಣಕ್ಕೆ ದೇಶ ತೊಡಗುತ್ತದೆ. ಮಗುವಿನ ಕೈಗಳಿಗೆ ಕುಶಲಕಲೆಯನ್ನು, ಬುದ್ಧಿಗೆ ಸತ್ಯನಿಷ್ಠೆಯನ್ನು, ಹೃದಯಕ್ಕೆ ಸಚ್ಛಾರಿತ್ರ್ಯವನ್ನು ತುಂಬಿ ಶಿಕ್ಷಣ ನೀಡಿದಾಗ ತ್ಯಾಗಸೇವೆಗಳ ಆದರ್ಶವನ್ನು ಹೊಂದಿದ ವ್ಯಕ್ತಿಗಳು ನಿರ್ಮಾಣವಾಗುತ್ತಾರೆ. ಶಾರೀರಿಕವಾಗಿ ಸದೃಢರೂ, ಮಾನಸಿಕವಾಗಿ ಧೈರ್ಯಶಾಲಿಗಳೂ, ಬೌದ್ಧಿಕವಾಗಿ ಬಲಿಷ್ಠರೂ ಆದ ಕ್ರಿಯಾಶೀಲ ವ್ಯಕ್ತಿತ್ವ ಹೊಂದುತ್ತಾರೆ.
'ಇಂದಿನ ವಿದ್ಯಾಭ್ಯಾಸ ಪದ್ಧತಿಯು ಕೇವಲ ಪುಸ್ತಕಜ್ಞಾನ ಪ್ರಧಾನವಾದುದು. ನಮ್ಮ ವಿದ್ಯಾರ್ಥಿಗಳಿಗೆ ಕುಶಲಕಲೆಗಳನ್ನೂ, ಕೈಕೆಲಸವನ್ನೂ ಬೋಧಿಸುವುದಿಲ್ಲ. ಆದ್ದರಿಂದ ಅವರಿಗೆ ಸ್ವತಃ ಆಲೋಚಿಸುವುದು ಹೇಗೆ ಮತ್ತು ಸ್ವಾವಲಂಬಿಗಳಾಗುವುದು ಹೇಗೆ ಎಂಬುದನ್ನು ತಿಳಿಸಿಕೊಡಬೇಕು. ಇಂದು ವಿದ್ಯಾರ್ಥಿಗಳು ತುಂಬ ಕಳಪೆಯ ಆಹಾರದ ಮೇಲೆ ಜೀವಿಸುತ್ತಿದ್ದಾರೆ. ಇದು ಅತ್ಯಂತ ಶೋಚನೀಯ ಸಂಗತಿ. ವ್ಯಕ್ತಿಯ ಭವಿಷ್ಯದ ಆರೋಗ್ಯವು ಅವನ ಬಾಲ್ಯದ ಆರೋಗ್ಯವನ್ನು ಅವಲಂಬಿಸಿದೆ ಎನ್ನುವುದೇ ಜನರಿಗೆ ಮರೆತುಹೋಗಿದೆ. ಆದ್ದರಿಂದ ಮಕ್ಕಳಿಗೆ ಸಾಧ್ಯವಾದಷ್ಟೂ ಪೌಷ್ಠಿಕ ಆಹಾರವನ್ನು ನೀಡುವ ಅಭ್ಯಾಸ ಬೆಳೆಯಬೇಕು.
ನಮ್ಮಲ್ಲಿ ಶೀಲ-ಚಾರಿತ್ರ್ಯ ಕಾಣೆಯಾಗುತ್ತಿದೆ. ಮಕ್ಕಳು ಸಭ್ಯ ನಡತೆ, ಸದ್ವರ್ತನೆಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಿರಿಯರಿಗೆ ವಿಧೇಯರಾಗಿರುವುದೆಂದರೆ ಅವಮಾನಕರ! ಆದರೂ ನಾನು ಹತಾಶನಾಗಿಲ್ಲ. ನನ್ನ ಜನಾಂಗದ ಬಗ್ಗೆ ನಾನು ಅಭಿಮಾನವನ್ನಿಟ್ಟುಕೊಂಡಿದ್ದೇನೆ. ವ್ಯಕ್ತಿ ನಿರ್ಮಾಣವೇ ನನ್ನ ಧ್ಯೇಯ.'
-ಆನಂದ ಎಸ್.ಎನ್.