ಅನುದಿನ, ಅನುಕ್ಷಣ
ಕೆಲವರು ಪ್ರತಿಕ್ಷಣವೂ ಹಾಗಿರುತ್ತಾರೆ. ನಗುನಗುತ್ತ, ಇತರರನ್ನೂ ನಗಿಸುತ್ತ, ಸೋತು ಕುಳಿತವರಲ್ಲಿ ಸ್ಫೂರ್ತಿ ತುಂಬುತ್ತ, ವಾತಾವರಣದಲ್ಲಿ ಗೆಲುವಿನ ಸೆಲೆ ಚಿಮ್ಮಿಸುತ್ತ. ಹಾಗೆಂದು ಇವರು ಜೀವನದಲ್ಲಿ ಯಾವತ್ತೂ ಸೋತವರೇ ಅಲ್ಲವೆ? ಹಾಗೇನಿಲ್ಲ. ಅವರಂತೆ ನಾವು ಇರಲು ಸಾಧ್ಯವಿಲ್ಲವೆ? ಯಾಕಿರಬೇಕು ಎಂದು ನೀವು ಕೇಳಬಹುದು. ಧನಾತ್ಮಕ ಮನೋಭಾವ ವಾತಾವರಣದಲ್ಲಿ ಹೊಮ್ಮಿಸುವ ಪ್ರಭೆಯೇ ಬೇರೆ. ಅದನ್ನು ನಾವು ಪ್ರಯತ್ನದಿಂದಲೂ ಸಾಧಿಸಬಹುದು.
ಯಾರೋ ಮಹಾಪುರುಷನ ಸುಂದರವಾದ ಉಕ್ತಿ ಹೀಗಿದೆ: 'ನಿಮ್ಮ ಯೋಚನೆಗಳನ್ನು ಗಮನಿಸಿ, ಅವು ಪದಗಳಾಗುತ್ತವೆ. ನಿಮ್ಮ ಪದಗಳನ್ನು ಗಮನಿಸಿ, ಅವು ಕ್ರಿಯೆಯಾಗುತ್ತವೆ. ನಿಮ್ಮ ಕ್ರಿಯೆಗಳನ್ನು ಗಮನಿಸಿ, ಅವು ಪ್ರವೃತ್ತಿಯಾಗುತ್ತವೆ. ನಿಮ್ಮ ಪ್ರವೃತ್ತಿಗಳನ್ನು ಗಮನಿಸಿ, ಅವು ವ್ಯಕ್ತಿತ್ವವಾಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಗಮನಿಸಿ, ಅದು ನಿಮ್ಮ ವಿಧಿಯಾಗಿರುತ್ತದೆ' ಇಂಥ ಸೂಕ್ತಿ ಪ್ರತಿದಿನ, ಪ್ರತಿಕ್ಷಣ ನಿಮ್ಮ ಕಣ್ಣಿಗೆ ಬೀಳುತ್ತಿದ್ದರೆ, ಅದರಿಂದ ಕೊಂಚವಾದರೂ ಒಳ್ಳೆಯದಾಗದೆ ಇರುತ್ತದೆಯೆ?
ಧನಾತ್ಮಕ ನಡವಳಿಕೆ ರೂಢಿಸಿಕೊಳ್ಳಲು ನಾವು ಪಡಬಹುದಾದ ಪರಿಶ್ರಮದಲ್ಲಿ ಇದನ್ನೂ ಅಳವಡಿಸಿಕೊಳ್ಳಬಹುದು. ಅದೇನೆಂದರೆ, ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಟಿಪ್ಸ್‌ಗಳನ್ನು ನಾವು ಪ್ರತಿಕ್ಷಣ ಕಾಣುವಂತೆ ಬರೆದಿಟ್ಟುಕೊಳ್ಳುವುದು. ಇದರಿಂದ ಏನು ಮಹಾ ಸಾಧ್ಯ ಎಂದುಕೊಳ್ಳಬೇಡಿ. ಪ್ರತಿದಿನ ಅನ್ಯಭಾಷಿಗರ ಜತೆ ಸಂಭಾಷಿಸುತ್ತ ಅವರ ಭಾಷೆಯನ್ನೇ ಸಂಪೂರ್ಣ ಕಲಿಯುವ ಉದಾಹರಣೆಗಳು ನಮ್ಮ ಮುಂದಿಲ್ಲವೆ? ನಿಧಾನವಾಗಿ ಒಂದೊಂದೇ ಪದವನ್ನು ಕಲಿಯುತ್ತ ಪೂರ್ತಿ ಭಾಷೆಯನ್ನೇ ಕೈವಶ ಮಾಡಿಕೊಳ್ಳುವ ಮಾದರಿಯಂತೆಯೇ ಇದು ಕೂಡ. 'ಸರ್ವರೊಳಗೊಂದೊಂದು ನುಡಿಕಲಿತು ವಿದ್ಯೆಯ ಪರ್ವತವೇ' ಅಗುವ ಬಗೆಯಿದು, ಸರ್ವಜ್ಞ ಹೇಳಿದಂತೆ.
ಈ ಚಟುವಟಿಕೆಯ ತಾರ್ಕಿಕ ಕೊನೆ ಇನ್ನೂ ಒಂದಿದೆ. ಅದು, ಈ ಮಾದರಿಯನ್ನು ನಾವು ಇತರ ಹಲವಾರು ಕೌಶಲ್ಯಗಳಿಗೆ ವಿಸ್ತರಿಸಬಹುದು ಎಂಬುದು. ವ್ಯಕ್ತಿತ್ವ ವಿಕಾಸದಂತೆಯೇ, ಇನ್ನೊಂದು ಭಾಷೆಯ ಕಲಿಕೆಗೂ ಇದು ಉಪಕಾರವಾಗಬಹುದು. ಮಾಡಬೇಕಾದ ಕೆಲಸಗಳನ್ನು ಮರೆತು ಮರೆಗುಳಿ ಎಂಬ ಶಾಪ ಪಡೆಯುವವರೂ ತಮ್ಮ ಕೆಲಸದಲ್ಲಿ ಇದನ್ನು ಪ್ರಯೋಗಿಸಿ ನೋಡಬಹುದು. ಓದು, ಬರಹದಂಥ ಕೆಲಸಗಳಲ್ಲಿ ತೊಡಗಿದವರಿಗೆ ಇದು ಎಷ್ಟು ಉಪಕಾರಿ ಎಂದು ವಿವರಿಸಬೇಕಾಗಿಯೇ ಇಲ್ಲ. ಹಿಂದಿನಿಂದ ನಿರಂತರವಾಗಿ ಚಾಟಿ ಬೀಸುವವರಿದ್ದರಷ್ಟೇ ಗಾಡಿ ಎತ್ತುಗಳು ಓಡುತ್ತವೆ.
- ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.