ಎಮುರಾಜ
ಏಳು ವರ್ಷಗಳ ಹಿಂದೆ ರಾಜೇಶ ಆಳ್ವರು ಸಾಕಲಾರಂಭಿಸಿದ ಜೋಡಿ ಎಮು ಹಕ್ಕಿಗೆ...
ಆಸ್ಟ್ರೇಲಿಯ ಮೂಲದ ಉಷ್ಟ್ರಪಕ್ಷಿಯಂಥ ಎಮು ಸಾಕಿದ ಕೋಳಿಯ ಹಾಗೆ ರಾಜೇಶ ಆಳ್ವರ ಮನೆಯಂಗಳದ ಗೂಡಿನ ಒಳಗೆ ನಿಂತುಕೊಂಡು ಹಾಕಿದ ಹುಲ್ಲು, ಹಲಸಿನಹಣ್ಣು, ತರಕಾರಿ ತಿಂದು ಹಾಯಾಗಿ ಬದುಕಿಕೊಂಡಿದೆ!
ಇದರ ಜತೆಗೆ ತಾನೇ ಹುಡುಕಿ ಅರ್ಧ ಕಿಲೋ ತೂಕದಷ್ಟು ಮರಳು ಮತ್ತು ಕಲ್ಲಿನ ಹರಳುಗಳನ್ನೂ ಗುಳಮ್ಮನೆ ನುಂಗಿ ದಿನಕ್ಕೊಂದು ಲೀಟರ್ ನೀರು ಕುಡಿಯುತ್ತದೆ. ಆಳ್ವರಿಗೆ ಏನು ಲಾಭ ಎಂದರೆ ಅಕ್ಟೋಬರ್ನಿಂದ ಡಿಸೆಂಬರ್ ತನಕ ಹೆಣ್ಣು ಎಮು ಮೊಟ್ಟೆಯಿಡುವ ಅವಧಿ. ಅದೃಷ್ಟ ಚೆನ್ನಾಗಿದ್ದವನಿಗೆ ಒಂದು ಅವಧಿಯಲ್ಲಿ ಎರಡು ಮೂರು ದಿನಕ್ಕೊಂದರಂತೆ ಅದು ಇಡುವ ಒಟ್ಟು ಮೊಟ್ಟೆಗಳ ಸಂಖ್ಯೆ ಮೂವತ್ತೈದರ ಗಡಿ ದಾಟುವುದುಂಟು. ಕೆಲವೊಮ್ಮೆ ಬರೇ ಐದು ಮೊಟ್ಟೆಗೇ ಮುಕ್ತಾಯವಾಗುವುದೂ ಇದೆ. ಕಡುನೀಲಿ ವರ್ಣದ ಈ ಮೊಟ್ಟೆಗಳ ಹೊರಕವಚ ಬಲು ಗಟ್ಟಿಯಿರುವುದರಿಂದ ಸುದೀರ್ಘ ಸಮಯ ದಾಸ್ತಾನಿಡಬಹುದು. ಒಂದೊಂದು ಮೊಟ್ಟೆಯ ತೂಕ ಆರುನೂಢಿ ಗ್ರಾಂ ವರೆಗೆ ಇರುತ್ತದೆ. ಏಳುನೂರರಿಂದ ಎಂಟುನೂರು ರುಪಾಯಿ ಬೆಲೆಯೂ ಸಿಗುತ್ತದೆ.
ಏನಪ್ಪ ಅಂಥ ಸ್ಪೆಷಾಲಿಟಿ ಅಂತ ಕೇಳಿದರೆ ಆಳ್ವರಿಗೆ ನಾಲಗೆಯಲ್ಲಿ ನೀರೂರುತ್ತದೆ. ಕೊಲೆಸ್ಟ್ರಾಲ್ ಇಲ್ಲ. ಇದರಿಂದ ಆಮ್ಲೆಟ್ ಮಾಡಿದರೆ ರುಚಿಯೇ ಬೇರೆ. ಮಂಗಳೂರಿನಲ್ಲಿ ಆಯ್ದ ಒಂದು ಹೋಟೆಲಿನಲ್ಲಿ ಅದು ಸಿಗುತ್ತದೆ. ತಿನ್ನುವವರು ಅದರ ರುಚಿ ವಿಚಾರಿಸುವುದಿಲ್ಲ. ದುಡ್ಡಿದ್ದವರಿಗೆ ಮಾತ್ರ ಅದು ದಕ್ಕೀತು ಅಷ್ಟೇ. ಎಮುವಿನ ಮಾಂಸಕ್ಕೂ ಅಷ್ಟೇ ರುಚಿಯಿದೆ ಎಂದು ಬಣ್ಣಿಸುತ್ತಾರೆ. ಜೋಡಿಮರಿಗೆ ಅವರು ಇಪ್ಪತ್ತೈದು ಸಾವಿರ ರು. ಕೊಟ್ಟಿದ್ದರು. ಈ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಿದರೆ ಅದೇ ಬೆಲೆಗೆ ಮಾರಬಹುದಲ್ಲವೆ!? ಇಲ್ಲ, ಇಲ್ಲಿ ತಾಯಿ ಹಕ್ಕಿ ಈ ಕೆಲಸ ಮಾಡುವುದಿಲ್ಲ. ಅದಕ್ಕೊಂದು ಯಂತ್ರ ಬೇಕು. ಯಂತ್ರದ ಬೆಲೆ ಒಂದು ಲಕ್ಷ ಆಗುತ್ತದೆ ಅಂತ ಮುಖ ಸಣ್ಣದು ಮಾಡುತ್ತಾರೆ ಆಳ್ವರು.
ಏಳು ವರ್ಷಗಳ ಹಿಂದೆ ರಾಜೇಶ ಆಳ್ವರು ಸಾಕಲಾರಂಭಿಸಿದ ಜೋಡಿ ಎಮು ಹಕ್ಕಿಗೆ ಇರಲೊಂದು ಗೂಡು ಮಾಡಿಸಿದ್ದಾರೆ. ನಾಲ್ಕಡಿ ಎತ್ತರದ ಹಕ್ಕಿಗೆ ಮೂವತ್ತಡಿ ಉದ್ದ ಹತ್ತಡಿ ಅಗಲದ ಗೂಡಿದೆ. ಕಬ್ಬಿಣದ ತೆಳ್ಳಗಿನ ಬಲೆ ಮುಚ್ಚಿಸಿದ್ದಾರೆ. ಮೂರು ಸಾವಿರ ರು. ಖರ್ಚಾಗಿದೆ. ಮರಿಗಳಿಗೆ ಅದರ ದೇಹದ ತೂಕದಷ್ಟೇ ಜೋಳ ರಾಗಿ ಸೋಯಾ ಸಮ್ಮಿಶ್ರಣದ ಆಹಾರ ಕೊಟ್ಟಿದ್ದಾರೆ. ಆರು ನೂರು ಗ್ರಾಂ ತೂಕದ ಮರಿಯ ಭಾರ ಒಂದು ಕಿಲೋ ಆಗುವ ತನಕ ತೂಕ ಏರಿದಂತೆ ಆಹಾರದ ತೂಕವೂ ಏರುತ್ತದೆ. ಒಂದು ಕಿಲೋ ದಾಟಿದ ಮೇಲೆ ಗರಿಷ್ಠ ಒಂದು ಕಿಲೋ ತೂಕದ ಮಿಶ್ರಣ ಕೊಟ್ಟರೆ ಸಾಕು. ಮೂರನೆಯ ವಯಸ್ಸಿನಿಂದ ಮೊಟ್ಟೆಯಿಡಲು ಆರಂಭ. ಇಪ್ಪತ್ತೈದು ವರ್ಷ ಬದುಕುವ ಎಮು ಪ್ರತಿವರ್ಷ ಮೊಟ್ಟೆಯಿಟ್ಟು ಹಣದ ಮಳೆ ತರುತ್ತದೆ.
ಎಮುವಿಗೆ ಬರುವ ವ್ಯಾಧಿಗಳ ಭಯ ಕಡಿಮೆ. ರೋಗನಿರೋಧಕ ಶಕ್ತಿ ಅಪಾರ. ಅಗತ್ಯವಿದ್ದರೆ ಆಯುರ್ವೇದದ ಓಮಸತ್ವ ಕುಡಿಸಿದರೆ ಸಾಕು. ಆಹಾರವಿಲ್ಲದೆ ಕೆಲವು ದಿನ ಇದ್ದರೂ ಕಂಗಾಲಾಗದು. ಸಾಕಿದವನನ್ನು ಮುಟ್ಟಿ ಮುದ್ದಾಡಲು ಬಿಡುತ್ತದೆ ಅಂತ ಎಲ್ಲರೂ ಹತ್ತಿರ ಹೋಗುವಂತಿಲ್ಲ. ಅದರ ಹಿಂಗಾಲಿನಲ್ಲಿ ಝಾಡಿಸಿ ಒದ್ದರೆ ಪ್ರಾಣಾಂತಿಕ ಪೆಟ್ಟು. ಇದು ಗೊತ್ತಿದ್ದೇ ನಾಯಿಗಳು ಬಳಿಗೆ ಬರುವುದಿಲ್ಲ. ಹಾವುಗಳು ಬಂದರೆ ಕಾಲಿನಲ್ಲಿ ಮೆಟ್ಟಿ ಕೊಂದು ನೂಡಲ್ಸ್ ಥರ ತಿಂದುಬಿಡುತ್ತವೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳಿಕೆಯ ರಾಜೇಶ ಆಳ್ವರು ಎಲೆಕ್ಟ್ರಿಕಲ್ ಡಿಪ್ಲೋಮಾ ಮಾಡಿದ್ದರೂ ಕೃಷಿಯನ್ನು ಒಪ್ಪಿಕೊಂಡಿದ್ದಾರೆ. ಎಮುವನ್ನು ಅಪ್ಪಿಕೊಂಡಿದ್ದಾರೆ. ಅವರ ಸಂಪರ್ಕ ಸಂಖ್ಯೆ ಮೊ. 9980257602.
- ಪ. ರಾಮಕೃಷ್ಣ ಶಾಸ್ತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.