ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಿಂಗಳ ಕೂಸಿಗೂ ಓಮದ ಕಷಾಯ

Parashurama
Updated On : 17 Mar 2013, 3:02 am

ಓಮ (ಓಮ್‌ಕಾಳು) ಒಗ್ಗರಣೆ ಡಬ್ಬಿಯಲ್ಲಿ ಸ್ಥಾನ ಪಡೆದರೂ ಅದರ ಉಪಯೋಗ ಅಡುಗೆಗಳಿಗಿಂತ ಹೋಮಿಯೋಪಥಿ, ಮನೆಮದ್ದುಗಳಲ್ಲೇ ಹೆಚ್ಚು. ಸಾಮಾನ್ಯವಾಗಿ ಹೊಟ್ಟೆಯುಬ್ಬರ ಕಂಡುಬಂದರೆ ಮೊದಲು ನೆನಪಾಗುವುದೇ ಓಮದ ಕಷಾಯ. ಚಿಕ್ಕ ಮಕ್ಕಳನ್ನು ಪದೇಪದೆ ಕಾಡುವ ಹೊಟ್ಟೆಯುಬ್ಬರ, ಹೊಟ್ಟೆನೋವುಗಳಿಗಿದು ರಾಮಬಾಣ. ತಿಂಗಳ-ಎರಡು ತಿಂಗಳ ಕೂಸು ರಾತ್ರಿಯೆಲ್ಲ ಒಂದೇ ಸಮನೆ ಅಳುತ್ತಿದೆ ಎಂದರೆ ಮಗುವಿಗೆ ಮೊದಲು ಕುಡಿಸುವುದೇ ಓಮದ ಕಷಾಯ. ಮಗುವಿಗೆ ಯಾವುದೇ ತರಹದ ಹೊಟ್ಟೆ ತೊಂದರೆ ಉಂಟಾದರೂ ಓಮ ಉಪಯೋಗಿಸುವುದೇ ಹೆಚ್ಚು. ವಾಂತಿ ನಿವಾರಕವಾಗಿಯೂ ಓಮನ್ನು ಬಳಸಲಾಗುತ್ತದೆ.
ಬಜ್ಜಿ, ಬೋಂಡಾಗಳಲ್ಲಿ ಅದರಲ್ಲೂ ಮೆಣಸಿನಕಾಯಿ ಬಜ್ಜಿಯಲ್ಲಿ ಓಮದ ಪುಡಿಯನ್ನು ಸೇರಿಸದೆ ಮಾಡುವುದೇ ಇಲ್ಲ. ಇದನ್ನು ಕೇವಲ ರುಚಿಗೋಸ್ಕರ ಮಾತ್ರ ಉಪಯೋಗಿಸುವುದಿಲ್ಲ. ಓಮ ಗ್ಯಾಸ್ಟ್ರಿಕ್ ನಿವಾರಕವೂ ಹೌದು. ಓಮನ್ನು ಉಪ್ಪಿನಕಾಯಿಗಳಲ್ಲಿಬಳಸುತ್ತಾರೆ.
ಖಾರ ದೋಸೆಯಲ್ಲಿ ಓಮು ಸೇರಿಸುವುದರಿಂದ ದೋಸೆಗೆ ವಿಶೇಷ ರುಚಿ ಬರುವುದರಲ್ಲಿ ಸಂಶಯವಿಲ್ಲ. ಹಿಟ್ಟು ರುಬ್ಬುವಾಗಲೇ ಉಳಿದ ಸಂಬಾರ ಜಿನಿಸುಗಳ ಜತೆ ಓಮವನ್ನೂ ಹಾಕಿ ರುಬ್ಬಲಾಗುತ್ತದೆ. ಸಾಮಾನ್ಯವಾಗಿ ಉದ್ದಿನಬೇಳೆ-ಅಕ್ಕಿ ಹಾಕಿ ಮಾಡಿದ ದೋಸೆ ತಿಂದರೆ ಹೆಚ್ಚಿನವರಿಗೆ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಓಮನ್ನು ಬಳಸಿ ಮಾಡುವುದರಿಂದ ಈ ತೊಂದರೆಗಳಿಗೆ ಇತಿಶ್ರೀ ಹಾಕಬಹುದು. ಓಮನ್ನು ರಸಂಗಳಲ್ಲೂ ಬಳಸುತ್ತಾರೆ. ಮಾಂಸಾಹಾರಿ ಅಡುಗೆಗಳಲ್ಲಿ ಓಮದ ಬಳಕೆ ಹೆಚ್ಚು.
ಓಮದ ಗಿಡ ಸಾಮಾನ್ಯವಾಗಿ ಜೀರಿಗೆಯ ಗಿಡದಂತೆಯೇ ಇರುತ್ತದೆ. ಗಿಡದ ಶಲಾಕದ ತುದಿಯಲ್ಲಿ ಗೊಂಚಲಾಗಿ ಓಮದ ಹೂ ಬಿಡುತ್ತದೆ. ಕಡು ಕಂದುಬಣ್ಣದಿಂದ ಕೂಡಿರುವ ಓಮದ ಗಾತ್ರ ತುಂಬಾ ಚಿಕ್ಕದು. ಸಣ್ಣ ಸಣ್ಣ ಕಾಳುಗಳಂತೆ ಗೋಚರಿಸುತ್ತದೆ. ಇದಕ್ಕೆ ತೀಕ್ಷ್ಣಮತ್ತು ಹಿತವಾದ ಕಹಿ ರುಚಿ ಇದೆ.
ಪುಡಿ ಮಾಡಿದ ಓಮನ್ನು ಹಬೆ ಭಟ್ಟಿ ಇಳಿಸಿದಾಗ ತೈಲ ಕೊಡುತ್ತದೆ. ಇದು ಕಂದು ಬಣ್ಣದಿಂದ ಕೂಡಿರುತ್ತದೆ. ಇದಕ್ಕೆ ಹಿತವಾದ ವಾಸವೆಯೂ, ತೀಕ್ಷ್ಣ ರುಚಿಯೂ ಇರುತ್ತದೆ.
ಇದನ್ನು ಹೊಟ್ಟೆ ಮತ್ತು ಪಿತ್ತಾಶಯದ ತೊಂದರೆಗಳಿಗೆ, ಋತುಸ್ರಾವದ ತೊಂದರೆಗಳನ್ನು ನಿವಾರಿಸಲು ಉಪಯೋಗಿಸುತ್ತಾರೆ. ಯುರೋಪ್‌ನಲ್ಲಿ ಇದಕ್ಕೆ ಶಕ್ತಿದಾಯಕ, ಸೆಳೆತ ನಿವಾರಕ ಮತ್ತು ವಾತಹರ ಗುಣಗಳಿವೆಯೆಂದು ನಂಬಿಕೆ. ಕೆಮ್ಮು, ಶೀತ, ವಾಂತಿ, ಗಂಟಲುನೋವಿನಲ್ಲೂ ಓಮನ್ನು ಬಳಸುತ್ತಾರೆ. ಇದು ಕಫ ನಿವಾರಕವೂ ಹೌದು. ಓಮನ್ನು ಚರ್ಮರೋಗಗಳಲ್ಲಿ, ಕ್ರಿಮಿನಾಶಕ ಔಷಧಗಳಲ್ಲೂ ಉಪಯೋಗಿಸುತ್ತಾರೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments