ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸೀನಿಯರ್ ಶೋ

ಬಾಗಿದ ಸೊಂಟವನ್ನು ಬಳುಕಿಸುತ್ತಾ, ಬೊಚ್ಚು ಬಾಯಿಯನ್ನು ಹೊರಳಿಸುತ್ತಾ ಮುಖದ ನೂರಾರು ನೆರಿಗೆಗಳ ನಡುವೆ ಒಂದು ಸ್ಮೈಲ್ ಕೊಟ್ಟಿದ್ದು 92 ವರ್ಷದ ಹಿರಿಯಜ್ಜ.

Parashurama
Updated On : 18 Mar 2013, 12:48 pm

ವರ್ಷದ ಅಜ್ಜ, 92 ವರ್ಷದ ಹಿರಿಯಜ್ಜ. ಅರಳಿಕಟ್ಟೆ ಮೇಲಲ್ಲ. ರ್ಯಾಂಪ್ ಮೇಲೆ!
ಬಾಗಿದ ಸೊಂಟವನ್ನು ಬಳುಕಿಸುತ್ತಾ, ಬೊಚ್ಚು ಬಾಯಿಯನ್ನು ಹೊರಳಿಸುತ್ತಾ ಮುಖದ ನೂರಾರು ನೆರಿಗೆಗಳ ನಡುವೆ ಒಂದು ಸ್ಮೈಲ್ ಕೊಟ್ಟಿದ್ದು ಅದೇ ಫ್ಯಾಶನ್ ಶೋನಲ್ಲಿ!
ಮೊನ್ನೆ ಈ ಹಿರಿಯರ ನವಚೈತನ್ಯದ ಫ್ಯಾಷನ್ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ಮಂಗಳೂರಿನ ಪುರಭವನ. ಫ್ಯಾಶನ್ ಶೋ ಅಂದ್ರೆ ಉಡುಪು, ಉತ್ಪನ್ನಗಳ ಪ್ರದರ್ಶನಕ್ಕಿಂತ ಮುಖ್ಯವಾಗಿ ಲೆಕ್ಕಕ್ಕೆ ಬರುವುದು ಮೈಮಾಟ. ಹಾಗಾಗಿ ಅಲ್ಲಿ ಹದಿಹರೆಯ ಜಿಂಕೆಗಳಿಗೆ ಆದ್ಯತೆ. ಆದರೆ, ಇಲ್ಲಿನ ಶೋನಲ್ಲಿ ಕಾಣಿಸಿದ್ದು ಬರೀ ಸೀನಿಯರ್‌ಗಳೇ...
ಪಾರ್ಸಿ ಸೀರೆ, ಕೂರ್ಗ್, ಬೆಂಗಾಲಿ, ಗುಜರಾತಿ, ಕರಾವಳಿ ಸೀರೆ ತೊಟ್ಟ ಇಳಿ ವಯಸ್ಸಿನ ನೀರೆಯರ ಜತೆ ಸೂಟು, ಬೂಟ್ ಹಾಕಿದ ಬಿಳಿ ತಲೆಯ ಹಿರಿ ಜೋಡಿಗಳು ಎಲ್ಲರ ಕಣ್ತುಂಬಿದರು. ಈ ಕ್ಯಾಟ್‌ವಾಕ್‌ನಲ್ಲಿ ನಿವೃತ್ತ ಶಿಕ್ಷಕಿಯರು, ವೈದ್ಯರು, ಗೃಹಿಣಿಯರಿದ್ದರು. ಇವರೆಲ್ಲ ಹಿರಿಯರ ಬದುಕಿನ ಸೌಂದರ್ಯವನ್ನೇ ಪ್ರದರ್ಶಿಸಿದರು. ಹದಿ ವಯಸ್ಸಿನಲ್ಲಿ ದೇಹ ಸೌಂದರ್ಯ ಕಾಪಾಡುವುದು ದೊಡ್ಡ ವಿಚಾರವಲ್ಲ. ಅದರೂ ಇಳಿ, ಮುದಿ ವಯಸ್ಸಲ್ಲಿ ದೇಹ ಸಿರಿ ಹೇಗೆ ಕಾಪಾಡಬೇಕು ಎಂಬುದಕ್ಕೆ ಈ ಫ್ಯಾಷನ್ ಶೋ ಒಂದು ಜೀವನ ಪಾಠ ಎನ್ನಲಡ್ಡಿಯಿಲ್ಲ.
20 ಹಿರಿಯ ನಾಗರಿಕರು ಸತತ 12 ದಿನಗಳ ಕಾಲ ಇದಕ್ಕಾಗಿ ಅಭ್ಯಾಸ ನಡೆಸಿದ್ದರು. ಉಪನ್ಯಾಸಕಿ ಲತಿಕಾ ತರಬೇತಿ ನೀಡಿದ್ದರು. ಫ್ಯಾಷನ್ ತಂಡದಲ್ಲಿ ಅತ್ತಾವರದ ಹಿರಿಯ ನಾಗರಿಕರ 'ಚೇತನಾ' ಸಂಘಟನೆಯ 15 ಸದಸ್ಯರು ಮತ್ತು ಕೆಎಂಸಿ ವೃದ್ಧಾಶ್ರಮದ ಸದಸ್ಯರಿದ್ದರು. 84, 92 ವರ್ಷ ಮೀರಿದ ಹಿರಿಯರಿಬ್ಬರು ಕಚ್ಚೆ ಪೈರನ್ ಧರಿಸಿ ಯಾರ ಸಹಾಯವೂ ಇಲ್ಲದೆ ನಡೆದು ಬಂದದ್ದು ಎಲ್ಲರಿಗೂ ಆರೋಗ್ಯ ಪಾಠ ಹೇಳಿಕೊಟ್ಟಂತಿತ್ತು.
ಫ್ಯಾಷನ್ ಶೋದಲ್ಲಿ ಹಿರಿಯರಿಗೆ ಅವಕಾಶ ಕಡಿಮೆ. ಹಿರಿಯರ ಸಂಸ್ಕೃತಿ ಬಿಂಬಿಸುವ ದಿರಿಸುಗಳ ಪ್ರದರ್ಶನವೂ ಇಲ್ಲ. ಈ ನಿಟ್ಟಿನಲ್ಲಿ ಹಿರಿಯರ ಪ್ಯಾಷನ್ ಶೋಗೆ  ತಿರ್ಮಾನ ಮಾಡಿದೆವು' ಎನ್ನುತ್ತಾರೆ ಉಪನ್ಯಾಸಕಿ ಲತಿಕಾ.
'ಲೈಫ್‌ನಲ್ಲಿ ಲೈವ್ಲಿ ಆಗಿರಲು ಬ್ಯುಸಿ ಆಗಿರುತ್ತೇವೆ. ನಿತ್ಯ ಬೆಳಗ್ಗೆ ವ್ಯಾಯಾಮ ಮಾಡುತ್ತೇವೆ. ನಮ್ಮ ಈ ಲವಲವಿಕೆ ನೋಡಿ ಮಿಫ್ಟ್ ಕಾಲೇಜು ನಿರ್ದೇಶಕ ಎಂ.ಜಿ. ಹೆಗಡೆ ನಮಗೆ ಫ್ಯಾಷನ್ ಶೋಗೆ ಅವಕಾಶ ನೀಡಿದರು. ಇಲ್ಲವಾದರೆ ಈ ವಯಸ್ಸಿನಲ್ಲಿ ಫ್ಯಾಷನ್ ಶೋ' ಎಂದು ನಗುತ್ತಾರೆ ನಿವೃತ್ತಿ ಮುಖ್ಯ ಶಿಕ್ಷಕಿ ರೀಟಾ. 'ಉಪನ್ಯಾಸಕಿಯರು ಚೆನ್ನಾಗಿ ತರಬೇತಿ ನೀಡಿದರು. ಹಿರಿಯರಿಗೆ ನೆನಪು ಇಟ್ಟುಕೊಳ್ಳಲು ಕಷ್ಟ. ಹೀಗಾಗಿ ನಾವು ಕಷ್ಟಪಟ್ಟು ಅಭ್ಯಾಸ ಮಾಡಿದೆವು. ನಾನು ಜೀವನದಲ್ಲಿ ಮೊದಲ ಬಾರಿಗೆ ಫ್ಯಾಷನ್ ಶೋದಲ್ಲಿ ಭಾಗವಹಿಸಿದೆ' ಇದು ರೀಟಾ ಅವರ ಹೆಮ್ಮೆ ಮಾತುಗಳು.
ಬೆಂಗಳೂರಿನ ಮೈಕೊದಲ್ಲಿ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಬಿ.ಟಿ. ಸಾಲ್ಯಾನ್, ಚೇತನಾ ಅಧ್ಯಕ್ಷೆ ಡಾ.ಅನಸೂಯ ಬಿ. ಸಾಲ್ಯಾನ್ ಜೋಡಿ ಸೂಟು ಮತ್ತು ಕರ್ನಾಟಕ ಸಾರಿಯಲ್ಲಿ ಮಿಂಚಿದರು. ಎಲ್ಲರೂ ಮೆಚ್ಚುಗೆ ನುಡಿಗಳನ್ನು ಕೇಳುವಾಗ ಖುಷಿಯಾಗುತ್ತಿದೆ ಎನ್ನುತ್ತಾರೆ ಈ ದಂಪತಿ.
'15 ವರ್ಷದಿಂದ ಮಿಫ್ಟ್ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಅನಾಥಾಶ್ರಮ ಅಥವಾ ವೃದ್ಧಾಶ್ರಮದಲ್ಲಿಯೇ ಮಾಡುವುದು. ನಮ್ಮ ಟ್ರಸ್ಟ್ ಅಧ್ಯಕ್ಷ ಆರೂರು ಪ್ರಸಾದ್ ರಾವ್ ಮತ್ತು ತಾಯಿ ಲಕ್ಷ್ಮೀ ರಾವ್ ಹಿರಿಯ ಸಂಘಟನೆಗಳ ಪೋಷಕರು. ಒಬ್ಬರು ಅಜ್ಜಿ ಹೇಳಿದರು, ನಾವು ಫ್ಯಾಷನ್ ಶೋ ಮಾಡುತ್ತೇವೆ ಅಂತ. ನಾವು ನಿರ್ಧರಿಸಿದೆವು. ವಯಸ್ಸಾದವರು ಫ್ಯಾಷನ್ ಮಾಡಬಾರದು ಎಂಬ ಮಾನಸಿಕ ಚಿಂತನೆ, ಉಪೇಕ್ಷೆ ಭಾವನೆ ಸಮಾಜದಲ್ಲಿ ಇದೆ. ಇದನ್ನು ಹೋಗಲಾಡಿಸಲು ಈ ಪ್ರಯತ್ನ ಕೈಗೊಂಡೆವು' ಎನ್ನುತ್ತಾರೆ ಮಿಫ್ಟ್ ಕಾಲೇಜು ನಿರ್ದೇಶಕ ಎಂ.ಜಿ. ಹೆಗಡೆ.
 
- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments