ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

POT ಶಾಲೆ!

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯಲ್ಲಿರುವ ಅನಿತಾ ನರೇಶ್ ಮಂಚಿಯವರ ಬೊನ್ಸಾಯ್ ಸಂಗ್ರಹ ಪಕ್ಷಿ, ದುಂಬಿಗಳೇ ಸೆಲ್ಯೂಟ್ ಹೊಡೆಯುತ್ತವೆ.

Mainashree
Updated On : 20 Mar 2013, 5:57 am

ಅದು ಬೊನ್ಸಾಯ್ ಪ್ರಪಂಚ...
ಅನಿತಾ ನರೇಶ್ ಮಂಚಿಯವರ ಮನೆ ಇಂದ್ರವನದ ಝೆರಾಕ್ಸ್. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯಲ್ಲಿರುವ ಇವರ ಬೊನ್ಸಾಯ್ ಸಂಗ್ರಹಕ್ಕೆ ಪಕ್ಷಿ, ದುಂಬಿಗಳೇ ಸೆಲ್ಯೂಟ್ ಹೊಡೆಯುತ್ತವೆ.
ಇವರ ಸಂಗ್ರಹದಲ್ಲಿ 50ಕ್ಕೂ ಅಧಿಕ ಬೊನ್ಸಾಯ್ ಗಿಡಗಳಿವೆ. ಬಣ್ಣ ಬಣ್ಣದ ಎಡಿನಿಯಂ, ಜೇಡ್, ಬಿದಿರು, ನೆಲ್ಲಿ, ಸಪೋಟ... ಇದರಲ್ಲಿ ಮುಖ್ಯವಾದವು. ಹೊಳೆ ಬದಿಯಲ್ಲಿ ಬೆಳೆಯುವ ಕಳೆ ಗಿಡವನ್ನು ಬೊನ್ಸಾಯ್ ರೀತಿಯಲ್ಲಿ ಕುಂಡದಲ್ಲಿ ಹಾಕಿ ಬೆಳೆಸಿದ್ದು ಇವರ ಹೊಸ ಪ್ರಯೋಗ. ಬೊನ್ಸಾಯ್‌ಗೆ ಬೇಕಾದ ಕಲಾತ್ಮಕ ಕುಂಡಗಳನ್ನು ಸ್ವತಃ ಇವರೇ ರೆಡಿ ಮಾಡ್ತಾರೆ. ಹೊಳೆ ಬದಿಯಲ್ಲಿ ಸಿಗುವ ಸಣ್ಣಸಣ್ಣ ಹರಳು ಕಲ್ಲು ಮತ್ತು ಸಿಮೆಂಟಿನಿಂದ ತಯಾರಿಸುವ ಈ ಕುಂಡವನ್ನು ಹೂದಾನಿ, ಪೆನ್‌ಸ್ಟ್ಯಾಂಡ್ ಆಗಿಯೂ ಬಳಸಬಹುದು. ಈ ಕುಂಡಗಳ ಸುಂದರ ವಿನ್ಯಾಸ ಬೊನ್ಸಾಯ್ ಗಿಡಗಳ ಸೌಂದರ್ಯ ಹೆಚ್ಚಿಸಿದೆ. ಹೋದಲ್ಲೆಲ್ಲ ಹೊಸ ಗಿಡ ಸಿಕ್ಕರೆ ಇವರ ಕುಂಡದಲ್ಲಿ ಬೊನ್ಸಾಯ್ ಆಗಿಬಿಡುತ್ತದೆ. ತೆಂಗಿನ ಸಿಪ್ಪೆ, ಮರದ ಬೊಡ್ಡೆಗಳೂ ಕುಂಡಗಳಾಗಿವೆ!
ಅನಿತಾ ಹೇಳ್ತಾರೆ, 'ಈ ಕಲೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಮುಖ್ಯವಾಗಿ ಬೇಕಾದದ್ದು ತಾಳ್ಮೆ, ಆಸಕ್ತಿ, ಮನೋನಿರ್ಧಾರ. ಒಂದು ಹೂವಿನ ಗಿಡ ನೆಟ್ಟು ನಾಲ್ಕಾರು ತಿಂಗಳಲ್ಲಿ ಹೂಗಳನ್ನು ಕಂಡು ಅನಂದ ಪಡುವ ವೇಗ ಇದರಲ್ಲಿ ಸಾಧ್ಯವಿಲ್ಲ. ಒಂದು ಗಿಡ ಬೊನ್ಸಾಯ್ ಅನ್ನಿಸಿಕೊಳ್ಳಬೇಕಾದರೆ ಅನೇಕ ವರ್ಷಗಳ ಸಾಧನೆ ಅಗತ್ಯ. ಸ್ವಲ್ಪ ಮಟ್ಟಿನ ಗಿಡಗಳ ಜ್ಞಾನ ಹೊಂದಿದ್ದರೆ ಇವುಗಳನ್ನು ಬೆಳೆಸುವುದು ಕಷ್ಟವೇನಲ್ಲ. ಗಿಡಗಳನ್ನು ಸಾಧ್ಯವಾದಷ್ಟೂ ಪ್ರಕೃತಿಯಲ್ಲಿ ಕಾಣುವಂತೆ, ಬಾಗು ಬಳುಕುಗಳನ್ನು ಉಳಿಸಿ ಕುಬ್ಜತೆ ಕಾಪಾಡಲು ಸ್ವಲ್ಪಮಟ್ಟಿನ ತರಬೇತಿಯ ಅಗತ್ಯವಿದೆ.'
ನೈಸರ್ಗಿಕವಾಗಿ ಕಾಡಿನಲ್ಲಿ ಬೆಳೆದ ಕುಬ್ಜ ಗಿಡಗಳನ್ನು ಕುಂಡಗಳಲ್ಲಿ ಹಾಕಿ ಇದೇ ರೀತಿ ಬೆಳೆಸಬಹುದು. ಅನಿತಾ ಸಂಗ್ರಹದಲ್ಲಿ ಇಂಥ ಕೆಲವು ಕುಬ್ಜ ಮರಗಳು ಕೂಡಾ ಇವೆ. ಬೊನ್ಸಾಯ್ ಆಸಕ್ತರು, ಮೊದಲಿಗೆ ಪ್ರಾರಂಭಿಸುವವರು ನಮ್ಮಲ್ಲೇ ದೊರಕುವ ಮರಗಿಡಗಳಾದ ಆಲ, ಅಶ್ವತ್ಥಗಳಂಥವುಗಳನ್ನು ಆರಿಸುವುದು ಒಳ್ಳೆಯದು. ಉದಾ: ಚಿಕ್ಕು, ಮೂಸಂಬಿ, ನಿಂಬೆ, ಕುಂಡಗಳು ಕಡಿಮೆ ಆಳವಾಗಿದ್ದು ಅಗಲವಾಗಿರಬೇಕು. ನೀರು ಹರಿದು ಸರಾಗವಾಗಿ ಹೋಗುವಂತಿರಬೇಕು. ಇದು ಬೊನ್ಸಾಯ್ ಗಿಡಗಳನ್ನು ಬೆಳೆಸುವುದರಲ್ಲಿ ಬಹು ಮುಖ್ಯ ಎನ್ನುತ್ತಾರೆ ಅನಿತಾ.
ಇಷ್ಟೇ ಅಲ್ಲ, ಇವರ ಮನೆಯ ಹೂ ತೋಟದಲ್ಲಿ ಮೊಜಾಂಡ, ಅಲಂಕಾರಿಕ ಅಡಕೆ, ಜರ್ಬೆರ, ಗುಲಾಬಿ, ಟಾರ್ಚ್ ಜಿಂಜರ್, ಬಣ್ಣ ಬಣ್ಣದ ಕ್ರೊಟನ್ಸ್ ಕಳೆಗಟ್ಟಿವೆ. ಇವರ ಹವ್ಯಾಸಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಕಥೆ, ಕವನ ಬರೆಯುವುದು, ರುಚಿ ರುಚಿಯಾದ ವ್ಯಂಜನಗಳನ್ನು ತಯಾರಿಸುವುದು ಇವರಿಗೆ ಪ್ರಿಯವಾದ ಕೆಲಸ. ಹವ್ಯಾಸಿ ಛಾಯಾಚಿತ್ರಗಾರ, ಪತಿ, ರಾಮ ನರೇಶ ಮಂಚಿ ಇವರ ಆಸಕ್ತಿಗಳಿಗೆ ಪೂರಕವಾಗಿದ್ದಾರೆ.

- ವೀಣಾ ಅನಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments