ಒಳ್ಳೆಯದನ್ನೇ ಯೋಚಿಸಿ..
ಜೀವನದಲ್ಲಿ ಬಿಡಿಬಿಡಿಯಾಗಿ ಬರುವ ಘಟನೆಗಳಿವೆಯಲ್ಲಾ, ಅವನ್ನು ಯಾವತ್ತೂ ಲಘುವಾಗಿ ಪರಿಗಣಿಸಬೇಡಿ. ಇಡೀ ಬದುಕನ್ನು ಒಮ್ಮೆಯೇ ನೋಡುವ ನೋಟ ಯಾರಿಗೂ ಇರುವುದೇ ಇಲ್ಲ. ಚದುರಿದಂತೆ ಉದ್ದಕ್ಕೂ ತೆರೆದುಕೊಳ್ಳುವ ಅನುಭವಗಳೇ ಸೇರಿ ಒಟ್ಟಂದದಲ್ಲಿ ಬದುಕು ಎನಿಸಿಕೊಳ್ಳುತ್ತದೆ. ಹೀಗೆ ಪ್ರತಿನಿತ್ಯ ನಾವು ಎದುರಿಸುವ ಅನುಭವಗಳು, ನಾವು ಕೇಳುವ ಮಾತು, ಭೇಟಿಯಾಗುವ ವ್ಯಕ್ತಿಗಳು, ನೋಡುವ ನೋಟ ಎಲ್ಲವೂ ಸೇರಿಯೇ ಅವತ್ತಿನ ನಮ್ಮ ಬದುಕನ್ನು ರೂಪಿಸಿರುತ್ತದೆ. ಇಂಥವುಗಳು ಎಲ್ಲವೂ ನಿರೀಕ್ಷಿತವೇ ಆಗಿರಲಿಕ್ಕೆ ಸಾಧ್ಯವಿಲ್ಲ. ಬಹಳಷ್ಟು ಬಾರಿ ನಾವು ಅಂದುಕೊಂಡೇ ಇರದ ವ್ಯಕ್ತಿಗಳನ್ನು ಭೇಟಿ ಮಾಡಿಬಿಡುತ್ತೇವೆ. ನಿರೀಕ್ಷಿಸದೇ ಇರದ ಜಾಗಕ್ಕೆ ಹೋಗಿಬರುತ್ತೇವೆ. ನೆನಸಿಕೊಂಡಿರಲೂ ಸಾಧ್ಯವಿಲ್ಲದ ಅನುಭವಕ್ಕೆ ತೆರೆದುಕೊಳ್ಳುತ್ತೇವೆ. ಊಹಿಸಲೂ ಆಗದ ಬೆಳವಣಿಗೆಯೊಂದನ್ನು ಕಂಡುಬಿಡುತ್ತೇವೆ. ಅದೆಲ್ಲವೂ ಸಿಹಿಯಾಗಿಯೇ ಇರುತ್ತದೆ ಎಂದೇನೂ ಇಲ್ಲ. ಎಲ್ಲವೂ ನಮಗೆ ಹಿತವಾಗಿಯೇ ಇರಬೇಕೆಂದೇನೂ ಇಲ್ಲ. ಬದುಕೆಂದರೆ ಹಾಗೆಯೇ ಅಲ್ಲವೇ? ಅಗತ್ಯವೋ, ಅನಗತ್ಯವೋ ಒಂದಷ್ಟು ಬೆಳವಣಿಗೆಗಳು ಆಗುತ್ತಲೇ ಇರುತ್ತದೆ. ಅದು ಬದುಕಿನ ಚಲನಶೀಲತೆಯ ದ್ಯೋತಕ. ಅದಿಲ್ಲದಿದ್ದರೆ ಜೀವನವೆಂಬುದು ಕಲ್ಲು ಬಂಡೆಯಾಗಿ ನಿಂತಿರುತ್ತದೆ. ನಮ್ಮ ಬದುಕು ಎಲ್ಲವನ್ನೂ ನೋಡುತ್ತದೆ. ಎಲ್ಲೆಲ್ಲಿಗೋ ಹೋಗುತ್ತಿರುತ್ತದೆ. ಇನ್ನೆಲ್ಲೋ ಎಡುವುತ್ತದೆ. ಮತ್ತೆಲ್ಲೋ ಮುಗ್ಗರಿಸುತ್ತದೆ. ಇನ್ನೊಂದು ಕಡೆ ವೇಗದ ಓಟಕ್ಕೆ ಸಿಲುಕಿಕೊಳ್ಳುತ್ತದೆ. ಇಂಥ ಸಂದರ್ಭಗಳಲ್ಲೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವರ್ತಿಸುತ್ತಿರುತ್ತಾರೆ. ಪ್ರತಿ ವ್ಯಕ್ತಿಯೂ ಪ್ರತಿ ಘಟನೆಯನ್ನೂ ಎದುರಿಸುವ ರೀತಿ ವಿಭಿನ್ನವಾಗಿರುತ್ತದೆ. ನಾವು ಇರುವ ಸನ್ನಿವೇಶ, ನಮ್ಮ ಬದುಕಿನ ಪರಿಸ್ಥಿತಿ, ನಾವು ಬೆಳೆದ ಪರಿಸರ, ಕುಟುಂಬದ ಹಿನ್ನೆಲೆ, ನಮಗಾದ ಅನುಭವಗಳ ದಟ್ಟತೆ ಇವೆಲ್ಲವೂ ಪ್ರತಿ ಘಟನೆಗಳ ಸಂದರ್ಭದಲ್ಲೂ ನಿರ್ಧರಿತವಾಗಿರುತ್ತದೆ. ಹೀಗಾಗಿ ಬೇರೆಯವರು ಯೋಚಿಸಿದಂತೆಯೇ ನಾವೂ ಯೋಚಿಸಬೇಕು ಎಂಬುದಾಗಲಿ, ನಮ್ಮಂತೆಯೇ ಬೇರೆಯವರೂ ಇರಬೇಕು ಎಂದಾಗಲಿ ಬಯಸುವುದು ತೀರಾ ತಪ್ಪಾಗುತ್ತದೆ. ನಾವು ಹೇಗೆ ಯೋಚಿಸುತ್ತೇವೆ ಎಂಬುದರ ಮೇಲೆ ನಾವು ಎದುರಿಸುವ ಘಟನೆಗಳ ಪರಿಣಾಮ ಅವಲಂಬಿಸುತ್ತದೆ. ಎಲ್ಲದರಿಂದಲೂ ಒಳ್ಳೆಯದೇ ಆಗಬೇಕು ಎಂದು ನೀವು ನಿರೀಕ್ಷಿಸುವುದಾದರೆ ಜೀವನದಲ್ಲಿ ಏನನ್ನೂ, ಯಾರನ್ನೂ ನಿರ್ಲಕ್ಷಿಸದೇ ಎಲ್ಲದರ ಬಗ್ಗೆ ಒಳ್ಳೆಯದನ್ನೇ ಯೋಚಿಸಿ...
- ಸಹನೆ