ಗುರುಗಳ ಉಪದೇಶ
ರಾಮ-ಶಾಮ ಗೆಳೆಯರು. ಇಬ್ಬರೂ ಒಬ್ಬರೇ ಗುರುಗಳ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದರು. ರಾಮ ಗುರುಗಳಿಗೆ ತುಂಬಾ ವಿಧೇಯನಾಗಿದ್ದನಲ್ಲದೇ ಗುರುಗಳ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ. ಶಾಮ ಮಾತ್ರ ಎಂದಿಗೂ ಗುರುಗಳ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ ಮತ್ತು ಹುರುಳಿಲ್ಲದ ವಾದ ಮಾಡುತ್ತಿದ್ದ. ಗುರುಗಳು ಒಂದು ದಿನ ಇಬ್ಬರನ್ನೂ ಕರೆದು 'ನಾಳೆ ಗುರುಕುಲಕ್ಕೆ ಬರುವ ಮುನ್ನ ಊರ ಮುಂದಿರುವ ಹನುಮನ ಗುಡಿಗೆ ಹೋಗಿ ಬನ್ನಿ' ಎಂದರು.
ಮಾರನೆಯ ದಿನ ರಾಮ ಹನುಮನ ಗುಡಿಗೆ ಹೋಗಿ ಅಲ್ಲಿಂದ ನೇರವಾಗಿ ಗುರುಕುಲಕ್ಕೆ ಬಂದನು. ಆದರೆ ಶಾಮ ಗುಡಿಗೆ ಹೋಗದೆ ಗುರುಕುಲಕ್ಕೆ ಬಂದನು. ಗುರುಗಳು ರಾಮನನ್ನು 'ಗುಡಿಗೆ ಹೋಗಿ ಬಂದೆಯಾ' ಎಂದರು. ಅದಕ್ಕೆ ರಾಮನು ವಿನಯದಿಂದ, 'ಹೋಗಿ ಬಂದೆ ಗುರುಗಳೇ. ಆದರೆ ನನಗೆ ಅಲ್ಲಿ ಚೇಳು ಕಚ್ಚಿತು' ಎಂದನು. 'ಶಾಮ ನೀನು ಹೋಗಿ ಬಂದೆಯಾ?' ಶಾಮನು ನಗುತ್ತಾ, 'ನಾನು ಗುಡಿಗೆ ಹೋಗಲಿಲ್ಲ. ಆದರೆ ನನಗೆ ದಾರಿಯಲ್ಲಿ 10 ರುಪಾಯಿ ಸಿಕ್ಕಿತು. ಗುಡಿಗೆ ಹೋಗಿ ಬಂದ ರಾಮನಿಗೆ ಚೇಳು ಕಚ್ಚಿತು' ಎಂದನು.
ಇಬ್ಬರ ಮಾತನ್ನೂ ಕೇಳಿದ ಗುರುಗಳು, 'ಮಕ್ಕಳೇ, ನೀವಿಬ್ಬರೂ ಗುಡಿಗೆ ಹೋಗಿಬನ್ನಿ ಎಂದು ನಾನು ಹೇಳಿದ್ದರಲ್ಲಿ ಒಂದು ಉದ್ದೇಶವಿತ್ತು. ರಾಮನೇನೋ ನಾನು ಹೇಳಿದಂತೆಯೇ ಮಾಡಿದ್ದಾನೆ. ಹಾಗಾಗಿ ಅವನಿಗೆ ಒದಗಬೇಕಿದ್ದ ದೊಡ್ಡ ವಿಪತ್ತು ತಪ್ಪಿ ಚೇಳು ಕಚ್ಚುವ ಮೂಲಕ ಮುಕ್ತಾಯಗೊಂಡಿದೆ. ಆದರೆ ಶಾಮನ ವಿಷಯದಲ್ಲಿ ಇದು ಭಿನ್ನವಾಗಿದೆ. ಶಾಮಾ, ನೀನು ಗುಡಿಗೆ ಹೋಗಿದ್ದರೆ ನಿನಗೆ ದೊಡ್ಡ ಮೊತ್ತದ ಹಣ ಸಿಗುವುದಿತ್ತು. ಮಕ್ಕಳೇ, ಗುರುಗಳು ಹೇಳಿದಂತೆ ನಡೆದುಕೊಳ್ಳಿ ಸಾಕು. ಅದರಲ್ಲಿ ಏನೋ ಒಂದು ಸದುದ್ದೇಶವಿರುತ್ತದೆ' ಎಂದು ಹೇಳಿ ಎಂದಿನ ಪಾಠ ಪ್ರಾರಂಭಿಸಿದರು.
- ಸಂಕೇತ್ ಗುರುದತ್ತ (ಸಂಗ್ರಹ)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.