ಜಡೆತ್ವ
ತಲೆಯ ಕೂದಲಿನಿಂದ ಜಡೆ ಹೆಣೆದುಕೊಂಡು ಸಿಂಗರಿಸಿಕೊಳ್ಳುವುದು ಕೇಶ ಕಲೆಯ...
ತಲೆತಲಾಂತರದಿಂದ ತಲೆಯ ಕೂದಲಿನಿಂದ ಜಡೆ ಹೆಣೆದುಕೊಂಡು ಸಿಂಗರಿಸಿಕೊಳ್ಳುತ್ತಿದ್ದುದು ಕೇಶ ಕಲೆಯ 'ಬೇಸಿಕ್' ಎಂದರೂ ತಪ್ಪಲ್ಲ. ನಂತರ ಬಂದ ತುರುಬು, ಪೋನಿ ಟೈಲ್ ಇತ್ಯಾದಿಗಳು ಈ ಜಡೆಯಷ್ಟು ಗಟ್ಟಿಯಾಗುಳಿಯಲಿಲ್ಲ. ಆದರೆ, ಇಂದು ಕೇಶಾಲಂಕಾರದ ಹಲವು ಭಂಗಿಗಳ ಆಕರ್ಷಣೆಗಳಿಂದ ಹೆಣ್ಣು ಜಡೆಯಿಂದ ದೂರವಾಗುತ್ತಿರುವುದು ಎದ್ದು ಕಾಣುತ್ತಿದೆ. ಇಂದು ಜಡೆಯಿಟ್ಟುಕೊಂಡವರು ಇಟ್ಟುಕೊಂಡಿದ್ದಾರೆ, ಜಡೆ ಬಿಟ್ಟು ಹೋದವರು ಇನ್ನೆಂದೂ ಆ ಕಡೆ ತಲೆ ಹಾಕದ ಹಾಗೆ ಬಿಟ್ಟೇ ಹೋಗುತ್ತಿದ್ದಾರೆ.
ತಲೆಮಾರಿನಿಂದ ಮಾರುದ್ದ ಜಡೆಗೆ ಮಾರು ಹೋಗಿದ್ದ ನಮ್ಮವರು ಹುಟ್ಟಿದ ಮಗುವನ್ನು ಬಟ್ಟೆಯಲ್ಲಿ ಸುತ್ತಿ ತಾಯಿಯೆದುರು ಹಿಡಿದಾಗ ಅದರ ಅಂದ ನೋಡುವುದರ ಜತೆಗೆ ಮಗುವಿನ ಕೂದಲು ಎಷ್ಟು ಕಪ್ಪಗಿದೆ, ಎಷ್ಟು ಉದ್ದವಿದೆ ಇಲ್ಲಾ ಎಷ್ಟು ದಟ್ಟವಿದೆ ಎನ್ನುವುದರ ಬಗ್ಗೆ ಕಣ್ಣಾಡಿಸುತ್ತಿದ್ದರು. ಗಂಡು ಮಗುವೇ ಬೇಕೆಂದು ಮನದಲ್ಲಿ ಬಯಸಿದ್ದವರೂ ಹುಟ್ಟಿದ ಗಂಡುಮಗುವಿನ ಕೂದಲು ಉದ್ದವಿದ್ದರೆ 'ಹೆಣ್ಣಾಗಿ ಹುಟ್ಟಿದ್ದರೆ ಉದ್ದ ಜಡೆ ಹಾಕಬಹುದಿತ್ತು' ಎಂದು ಹಪಹಪಿಸುವವರಿದ್ದರು.
ಉದ್ದ ಜಡೆಯ ನೀಳವೇಣಿ, ಕಪ್ಪು ಜಡೆಯ ಕೃಷ್ಣವೇಣಿ ಇತ್ಯಾದಿ ಹೇರಳ ಹೆರಳು ಇರುವವರು ಕವಿವರ್ಯರ ಸ್ತ್ರೀ ವರ್ಣನೆಯಲ್ಲಿ ಕಂಡರೆ, ಕಲಾವಿದರ ಕುಂಚದಲ್ಲೂ ಕರಿಜಡೆಯ ಸೊಬಗು ಮೂಡಿಬರುತ್ತಿತ್ತು. ಅಲ್ಲಲ್ಲಿ ನಗೆ ಸಾಹಿತಿಗಳು ಗೇಣುದ್ದ, ಚೋಟುದ್ದ ಜಡೆಗಳನ್ನೂ ಕುಚೋದ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಇದರ ಜೊತೆಗೆ ಮೊಗ್ಗಿನ ಜಡೆ ಹಾಕಿಕೊಂಡ ಹುಡುಗಿಯ ಮುಖಕ್ಕಿಂತ ಜಡೆಯನ್ನು ಕಾಣುವಂತೆ ಫೋಟೋ ತೆಗೆಸಿಕೊಂಡು ಅಚ್ಚುಕಟ್ಟಾಗಿ ಕಟ್ಟುಹಾಕಿಸಿ ಜಡೆಯ ನೆನಪನ್ನು ಉಳಿಸಿಕೊಳ್ಳುವ ಪರಿಯೂ ಇತ್ತು. ಶಾಲಾ ದಿನಗಳಲ್ಲಿ ಪ್ರಾಯದ ಹುಡುಗರಂತೂ 'ಜೋಡಿ ಜಡೆ ಜಮುನ ಎತ್ತ ನಿನ್ನ ಗಮನ?' ಎಂದು ಕೀಟಲೆ ಮಾಡುತ್ತ ಜಡೆ ಹಿಂದೆ ಅಲೆದಾಡುತ್ತ ಪರೀಕ್ಷೆಯಲ್ಲಿ ಡುಮುಕಿ ಹೊಡೆದವರೂ ಇದ್ದರು. ಇನ್ನು ಸಿನಿಮಾಗಳಲ್ಲೂ ಪ್ರಿಯತಮೆಯ ಉದ್ದ ಜಡೆಯ ತುದಿ ಹಿಡಿದು ಪ್ರಿಯತಮ ಮರ ಸುತ್ತುವ ದೃಶ್ಯಗಳಿಗೆ ಕೊರತೆಯಿರಲಿಲ್ಲ. ಅಂದು ಹೆಣ್ಣು ನೋಡಲು ಹೋಗುತ್ತಿದ್ದ ವರ ಮಹಾಶಯರು ಹಲವು ಬಾರಿ ಜಡೆಗೆ ಮರುಳಾಗಿಯೇ ಮದುವೆ ಮಾಡಿಕೊಂಡದ್ದೂ ಇದೆ.
ಮಹಾಭಾರತ ಯುದ್ಧ ನಡೆದದ್ದೆ ದ್ರೌಪದಿಯ ಸೆರಗು ಸೆಳೆದದ್ದಕ್ಕೆ, ಜಡೆ ಹಿಡಿದೆಳದದ್ದಕ್ಕೆ ಎಂದರೂ ತಪ್ಪಲ್ಲ. ಎರಡು ಜಡೆ ಸೇರಿದರೆ ಮನೆಯಲ್ಲೇ ಮಹಾಭಾರತ, ರಾಮಾಯಣ ಎಂದು ಅತ್ತೆ- ಸೊಸೆಯ ಜಗಳವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದುದೂ ಉಂಟು. ಹಾಗೆಯೇ ಮದುವೆಯಾದ ಮೇಲೆ ಮಗ ಹೆಂಡತಿ ಹೇಳಿದ ಹಾಗೇ ನಡೆದುಕೊಳ್ಳುತ್ತಿದ್ದರೆ 'ಹೆಂಡತಿ ಜಡೆ ಹಿಡಿದುಕೊಂಡೇ ಇರುವವ' ಎಂದು ಮೂದಲಿಸುವವರೂ ಇದ್ದರು.
ಕೆಲವರು ತಮ್ಮ ಚೋಟುದ್ದ ಜಡೆಯನ್ನು ಉದ್ದ ಮಾಡಿಕೊಳ್ಳಲು ಕೃತಕ ಜಡೆಯನ್ನು ಜೋಡಿಸಿಕೊಳ್ಳುತ್ತಿದ್ದ ಕಾಲವೂ ಇತ್ತು. ಉದ್ದ ಕೂದಲಿನವರೂ ತಮ್ಮ ಉದುರುವ ಕೂದಲನ್ನೆಲ್ಲ ಸಂಗ್ರಹಿಸಿಟ್ಟು ಚೌಲಿ ಮಾಡಿಕೊಡುವವರು ಬಂದಾಗ ಅವರಿಗೆ ಕೊಟ್ಟು ಇದ್ದ ಕೂದಲನ್ನು ಮತ್ತೂ ಉದ್ದ ಮಾಡಿಕೊಳ್ಳುತ್ತಿದ್ದರು. ಯಾವುದು ನಕಲಿ ಯಾವುದು ಅಸಲಿ ಎನ್ನುವುದೂ ತಿಳಿಯದ ಹಾಗೆ ಜಡೆ ಹಾಕಿಕೊಳ್ಳುವ ಕಲೆಯನ್ನು ಕಲಿತಿದ್ದರು.
ಇಷ್ಟೆಲ್ಲ ಹಿನ್ನೆಲೆ, ಹಿರಿಮೆಯಿದ್ದರೂ ಜಡೆ ಹಾಕಿಕೊಳ್ಳುವವರಿಗೆ ಕೇಶದ ಕ್ಲೇಶ ಅಷ್ಟಿಷ್ಟಲ್ಲ. ಮಗಳ ಕೂದಲು ಚೋಟುದ್ದ ಜಡೆ ಹಾಕುವಷ್ಟು ಶುರುವಾಗುತ್ತಿದ್ದಂತೆಯೇ, ತಾಯಿಯೋ ಇಲ್ಲ ಅಜ್ಜಿಯೋ ಕೂದಲ ಸಿಕ್ಕು ಅಥವಾ ಜಡಕನ್ನು ಬಿಡಿಸುವ ಬಾಚಣಿಗೆಯಿಂದ ಬಾಚಿ ಬಾಚಿ, ಕೂದಲನ್ನು ಮೂರು ಪಾಲು ಮಾಡಿ ಜಡೆ ಹೆಣೆದು ಹೂ ಮುಡಿಸಿ ಕಳಿಸುವುದೇ ದಿನದ ಕೆಲಸದ ಒಂದು ಭಾಗವಾಗಿತ್ತು. ಶಾಂಪೂ ಇಲ್ಲದ ಆ ಕಾಲದಲ್ಲಿ ಅಂಟುವಾಳ, ಸೀಗೆಕಾಯಿಯ ಆರೈಕೆ ಮಾಡಿ ಕೂದಲು ಒಣಗಿಸಿಕೊಂಡು ಕೊಬ್ಬರಿ ಎಣ್ಣೆ ಹಾಕಿ ಬಾಚಿ ಹೊಳೆವ ಜಡೆ ಮಾಡಿಕೊಳ್ಳುವುದೂ ಅವರಿಗೆ ಹೆಚ್ಚುವರಿ ಕೆಲಸವಾಗಿತ್ತು. ಇಂದು ಹೆಣ್ಣು ಗಂಡಿಗೆ ಸರಿಸಮನಾಗಿ ಓದುವ, ದುಡಿಯುವ, ಬದುಕುವ ಜಂಜಾಟದ ಪರಿಸ್ಥಿತಿಯಿಂದಾಗಿ ತನ್ನ ಜಡೆಗೆಂದು ಮತ್ತು ಮಗಳಾದರೆ ಅವಳ ಜಡೆಗೆಂದು ಸಮಯ ಮೀಸಲಿರಿಸುವುದು ದುಸ್ತರವಾಗುತ್ತಿರುವುದೂ ಜಡೆಯ ಹಿನ್ನಡೆಗೆ ಕಾರಣವಾಗಿರಬಹುದು.
'ಜಡೆಯಿದ್ದರೆ ಗೌರವದ ಗೌರಮ್ಮ, ಜಡೆ ಬಿಚ್ಚಿದ್ದರೆ ಚಂಡಿ- ಚಾಮುಂಡಿ' ಎನಿಸಿಕೊಂಡು ಎಲ್ಲರಿಂದ ಮಾನ್ಯವಾಗುತ್ತಿದ್ದ ಜಡೆ ನಿಧಾನವಾಗಿ ನೇಪಥ್ಯಕ್ಕೆ ಸೇರುತ್ತಿದೆ. ಇತ್ತೀಚಿನ ಚಿತ್ರ ಸಾಹಿತ್ಯದ ಸಾಲಾದ 'ಎರಡು ಜಡೆಯನ್ನು ಹಿಡಿದು ಕೇಳುವೆನು ನೀ ಸ್ವಲ್ಪ ನಿಲಬಾರದೇ?' ಎನ್ನುವ ಹಾಡನ್ನು ಗುನುಗುತ್ತ ಜಡೆ ಎಳೆಯಲು ಸಹ ಜಡೆಯಿರುವವರು ಸಿಗುವುದೇ ಕಷ್ಟ. ವಿಧವೆಯಾಗುವ ತನಕ ಕತ್ತರಿಯನ್ನು ಹತ್ತಿರವೂ ಸೇರಿಸಿಕೊಳ್ಳದಿದ್ದ ಕೂದಲು ಈಗ ಕಾಲಕ್ಕೆ ತಕ್ಕಂತೆ ಕತ್ತರಿಸಿಕೊಳ್ಳುವತ್ತ ಸಾಗುತ್ತಿದೆ. ಇತ್ತ ನಮ್ಮ ದೇಶದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಜಡೆಗೆ ಎಡೆ ಇಲ್ಲದಂತೆ ಆಗುತ್ತಿದ್ದರೆ, ನಮ್ಮವರ ಜಡೆಯ ಆಕರ್ಷಣೆಗೆ ಒಳಗಾಗಿರುವ ವಿದೇಶಿಗಳು ಜಡೆ ಹೆಣೆಯುವ ತರಬೇತಿ ಪಡೆದು, ಫ್ಯಾಷನ್ಗೆ ಜಡೆ ಹಾಕಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಒಮ್ಮೆ ಜಡೆ ಭರಿತವಾಗಿದ್ದ ಈ ಕೇಶ- ಕಲೆಗೆ ಈಗ ಜಡ ಬಡಿದಂತಾಗಿದೆ. ಜಡೆ ಅಥವಾ ಕಬರಿ ಎಂದು ಕರೆಸಿಕೊಳ್ಳುತ್ತಿದ್ದ ಕೂದಲು ಹೆಣೆಯುವ ಕಲೆ ಕಾಲ ಕ್ರಮೇಣ ಕಾಣೆಯಾಗುವ ಎಲ್ಲ ಲಕ್ಷಣಗಳೂ ಎದ್ದು ಕಾಣುತ್ತಿದೆ.
- ಬಿ.ಎಸ್. ವೆಂಕಟಾಚಲ ಭಟ್ಟ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.