ಒಂದು ಸಂಕಲ್ಪಕ್ಕಿದು ಸಕಾಲ
ನಮ್ಮೆಲ್ಲರನ್ನೂ ಬೇಸರ ಒಂದಲ್ಲಾ ಒಂದು ಹಂತದಲ್ಲಿ ಕಾಡಿಯೇ ಇರುತ್ತದೆ. ಕಾರಣಗಳು ಹೇಗೇ ಇದ್ದಿರಬಹುದು. ಅಂಥ ಸಂದರ್ಭದಲ್ಲೆಲ್ಲಾ ಒಂದೋ ನಾವು ತೀರಾ ಅಂತರ್ಮುಖಿಗಳಾಗಿ, ನಮ್ಮೊಳಗೇ ನಾವು ಏನೇನೋ ಚಿಂತಿಸುತ್ತಾ ಭಾರವಾದ ಮುಖಭಾವವನ್ನು ಹೊತ್ತು ಓಡಾಡುತ್ತಿರುತ್ತೇವೆ. ಇಲ್ಲವೇ, ಅಗತ್ಯಕ್ಕಿಂತ ಹೆಚ್ಚಿನ ಮಾತು, ಆವೇಶ, ಆಕ್ರೋಶಗಳನ್ನು ವ್ಯಕ್ತಪಡಿಸಲು ಮುಂದಾಗುತ್ತೇವೆ. ಈ ಬೇಸರ ಎನ್ನುವುದು ಇದೆಯಲ್ಲಾ, ಅದು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ ಆವರಿಸಿಕೊಳ್ಳಬಹುದು. ಅದು ಒಮ್ಮೆ ಮನದೊಳಕ್ಕೆ ಹೊಕ್ಕರೆ ಮತ್ತೆ ಸುಮ್ಮನೆ ಕುಳಿತುಕೊಳ್ಳುವುದೇ ಇಲ್ಲ. ಕಾಲಿಟ್ಟ ಕ್ಷಣದಿಂದಲೇ ನಮ್ಮ ಇಡೀ ವ್ಯಕ್ತಿತ್ವವನ್ನು ಬದಲಿಸಲಾರಂಭಿಸುತ್ತದೆ. ಎಂದಿನಂತೆ ನಮ್ಮನ್ನು ಇರಲೇಗೊಡುವುದಿಲ್ಲ. ನಿಜವಾಗಿ ಬೇಸರವೆಂಬುದು ಇನ್ನಷ್ಟು ಭಾರವಾಗುವುದು ನಮ್ಮ ಇಂಥ ಸ್ವಭಾವಗಳ ವ್ಯತ್ಯಾಸಗಳಿಂದಲೇ. ಯಾರೊಂದಿಗೂ ಹೆಚ್ಚು ಮಾತನಾಡದೇ ಕುಳಿತುಕೊಂಡರೂ ಚಿಂತೆ ಹೆಚ್ಚುತ್ತಾ ಹೋಗುತ್ತದೆ. ತೀರಾ ಮಾತನಾಡಲಾರಂಭಿಸಿದರೂ ಅವಾಂತರಗಳನ್ನು ಇನ್ನಷ್ಟು ಸೃಷ್ಟಿಸಿಕೊಳ್ಳುತ್ತೇವೆ. ಇವೆರಡೂ ನಮ್ಮ ಸಮಯ, ಶಕ್ತಿ, ಸಾಮರ್ಥ್ಯ, ವಿವೇಚನೆಯನ್ನು ನಾಶ ಮಾಡುತ್ತವೆ. ನಿಜವಾಗಿ ಬೇಸರದ ಸಮಯದಲ್ಲಿ ಕಂಡಕಂಡವರ ಬಳಿಯೆಲ್ಲಾ ನಮ್ಮ ಮನಸ್ಥಿತಿಯ ಬಗ್ಗೆ ಅನಗತ್ಯವಾಗಿ ಹೇಳಿಕೊಳ್ಳುತ್ತಾ ಹೋಗುವ ಅಗತ್ಯವಿರುವುದಿಲ್ಲ. ಯಶಸ್ವಿ ವ್ಯಕ್ತಿ ಸಮಯ ಮತ್ತು ಸಂಯಮ ಎರಡನ್ನೂ ಯಾವತ್ತಿಗೂ ಹೀಗೆ ನಷ್ಟ ಮಾಡಿಕೊಳ್ಳಲು ಇಚ್ಛೆಪಡುವುದೇ ಇಲ್ಲ. ಹೀಗೆ ಬೇಸರಕ್ಕೆ ಬಿದ್ದಾಗಲೇ ಅವನು ಇನ್ನೊಂದು ಹೊಸ ಯೋಜನೆಯತ್ತ ತನ್ನನ್ನು ತೊಡಗಿಸಿಕೊಳ್ಳುವ ಶುಭ ಮುಹೂರ್ತವನ್ನು ನಿಗದಿ ಮಾಡಿಕೊಳ್ಳುತ್ತಾನೆ. ಏಕತಾನತೆಯ ಭಾರವನ್ನು ಹೊಸತರಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಕಳೆದುಕೊಳ್ಳಲು ಹವಣಿಸುತ್ತಾನೆ. ನಿಮ್ಮ ಅತಿಮುಖ್ಯ ಭೇಟಿಗಳಿದ್ದರೆ ಉದ್ದೇಶಪೂರ್ವಕ ಆಗಲೇ ನಿಗದಿಪಡಿಸಿಕೊಳ್ಳಿ. ನೀವು ಬಹಳ ದಿನದಿಂದ ಮುಂದೂಡುತ್ತಾ ಬಂದಿರುವ ಯಾವುದೋ ಪ್ರವಾಸ, ಅಧ್ಯಯನವನ್ನು ತಕ್ಷಣ ಕೈಗೆತ್ತಿಕೊಳ್ಳಿ. ಒಂದು ವ್ರತ, ಒಂದು ಸಂಕಲ್ಪ, ಒಂದು ಪ್ರತಿಜ್ಞೆಗೆ ಇದೇ ಸಕಾಲ. ನಿಮ್ಮ ಬೇಸರ ಸಮಯವನ್ನಷ್ಟೇ ಅಲ್ಲ, ನಿಮ್ಮನ್ನೂ ಕೊಲ್ಲುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಎದ್ದು ನಿಲ್ಲಿ. ಮಾನಸಿಕ ಸ್ಥಿತಿಯಲ್ಲಿ ಯಾವ ಏರುಪೇರುಗಳಿಗೂ ನಿಮ್ಮನ್ನು ಆಳಲು ಅವಕಾಶವನ್ನೇ ಕೊಡದಿರಿ. <
- ಸಹನೆ