ವಿಶ್ವಧರ್ಮ ನಿಮ್ಮದಾಗಲಿ
ಜಗತ್ತಿನ ಎಲ್ಲ ಮತಪಂಥಗಳೂ ಶ್ರೇಷ್ಠವಾದವು. ಎಲ್ಲವೂ ಸೇರುವುದು ಒಬ್ಬನನ್ನೇ. ಮಾರ್ಗಗಳಷ್ಟೇ ಭಿನ್ನ. ಆದರೂ ತತ್ತ್ವಗಳ ಅನುಷ್ಠಾನಕ್ಕಿಂತ ತತ್ತ್ವ ಪ್ರತಿಪಾದಕನನ್ನು ಪ್ರಧಾನವೆಂದು ಭಾವಿಸಿ, ಅವನ ಆರಾಧನೆಗೆ ಮುಗಿಬಿದ್ದು ಶ್ರೇಷ್ಠತೆ ಸಾಧಿಸುತ್ತಿರುವುದು ಪ್ರಪಂಚದಲ್ಲಿ ಮತದ್ವೇಷಕ್ಕೆ ಕಾರಣವಾಗಿದೆ. ವ್ಯಕ್ತಿಪೂಜೆಯನ್ನು ಹಿಂದಿಕ್ಕಿ ಅವರ ತತ್ತ್ವಗಳನ್ನು ಸ್ವೀಕರಿಸಿ ಅನುಸರಿಸಿದಾಗ ನಮ್ಮದು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪುರ್ಣದೃಷ್ಟಿಯ ಬದುಕಾಗುತ್ತದೆ. ವೈಯಕ್ತಿಕತೆ ಕಳೆದು ಸಾರ್ವತ್ರಿಕತೆ ಬೆಳಗುತ್ತದೆ. ವ್ಯಕ್ತಿ ಕಣ್ಮರೆಯಾಗಿ ತತ್ತ್ವ ಗೋಚರಿಸುತ್ತದೆ. ಮನುಷ್ಯನ ಪ್ರತಿಯೊಂದು ಅನುಭವವೂ ವೈಯಕ್ತಿಕ. ಅಲ್ಲದೆ ಅದು ಮನಸ್ಸು ಇಂದ್ರಿಯಗಳ ಮಿತಿಗೆ ಒಳಪಟ್ಟಿರುವಂಥದು. ಆದ್ದರಿಂದ ಸಾಕಾರಸ್ಥಿತಿಗೆ ಮಿಗಿಲಾದದ್ದೇನನ್ನೂ ಆತ ಕಲ್ಪಿಸಿಕೊಳ್ಳಲಾರ. ಆ ಕಾರಣ, ಅತ್ಯುನ್ನತವಾದ ನಿರಾಕಾರದ ಸ್ಥಿತಿಗೆ ಏರಬೇಕಾದರೆ ಸಗುಣ-ಸಾಕಾರ ದೇವರ ಕಲ್ಪನೆಯು ತುಂಬಾ ಸಹಕಾರಿ.
ಎಷ್ಟು ಮತವೋ ಅಷ್ಟು ಪಥ, ಗುಂಪುಗಾರಿಕೆ, ಅತಿಯಾದ ಸ್ವಮತಾಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಪೃಥ್ವಿಯನ್ನು ಆಕ್ರಮಿಸಿಕೊಂಡಿವೆ. ನಾಗರಿಕತೆಗಳನ್ನು ನಾಶಮಾಡಿವೆ. ದೇಶದೇಶಗಳನ್ನೇ ನಿರಾಸೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರಿಯುತ್ತಿತ್ತು. ಆದ್ದರಿಂದ ಮತಕ್ಕಿಂತ ಪಥ ಮುಖ್ಯವಾಗಬೇಕು. ವ್ಯಕ್ತಿಗಿಂತ ತತ್ತ್ವ ಪೂಜಿತವಾದಾಗ, ಬೋಧನೆಗಿಂತ ಅನುಷ್ಠಾನ ಪ್ರಧಾನವಾದಾಗ ಅದು ಸಾಧಿತವಾಗುವುದು.
-ಆನಂದ ಎಸ್.ಎನ್.