ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಂಗುಭೂಮಿ

Rashmi Kasaragodu
Updated On : 25 Mar 2013, 12:47 pm

ಹೋಳಿಯಲ್ಲಿ ಬಣ್ಣ ಎರಚುವುದು ಖುಷಿ. ಆದರೆ ಅದರಲ್ಲಿರುವ ಹಾನಿಕರ ರಾಸಾಯನಿಕಗಳನ್ನು ನೆನೆದರೆ ದುಗುಡ. ಇದು ನಮ್ಮ ಪಾಡು. ಆದರೆ ಮನೋರಮಾ- ಸೂರ್ಯನಾರಾಯಣ ಜೋಶಿ ದಂಪತಿಯ ಗಿರಾಕಿಗಳಿಗೆ ಈ ಮಂಡೆಬಿಸಿ ಇಲ್ಲ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಳಿ ನಂದಿಹೊಂಡ ಎಂಬ ಒಂದೇ ಮನೆಯ ಒಂದೂರು. ಮನೆಯ ಸುತ್ತಲೂ ಬೆಟ್ಟ, ಅಡಿಕೆ ತೋಟ. ಮನೋರಮಾ- ಸೂರ್ಯನಾರಾಯಣ ಜೋಶಿ ದಂಪತಿಗಳು ಕಳೆದ ಆರು ವರ್ಷಗಳಿಂದ ನೈಸರ್ಗಿಕ ಬಣ್ಣಗಳನ್ನು ತಯಾರಿಸುತ್ತಿದ್ದಾರೆ. ಅರಶಿನವೇ ಪ್ರಧಾನ ಪಾತ್ರ ವಹಿಸುವ ಇವರ ಬಣ್ಣಗಳಲ್ಲಿ ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೆ ಹಾನಿಕಾರಕವಾದ ಯಾವುದೇ ಅಂಶಗಳಿಲ್ಲ. ಅರಿಶಿನದೊಟ್ಟಿಗೆ ಕುಂಕುಮ, ಇಂಡಿಗೋ, ಅಕ್ಕಿಹಿಟ್ಟು ಬೆರೆಸಿ ಹಳದಿ, ಕೆಂಪು, ನೀಲಿ, ಕೇಸರಿ, ಹಸಿರು ಹೀಗೆ ಐದು ಬಣ್ಣಗಳನ್ನು ತಯಾರಿಸುತ್ತಾರೆ. ತಯಾರಿಸಿದ ಬಣ್ಣಗಳು ಹೆಚ್ಚುಕಾಲ ಚೆನ್ನಾಗಿರಬೇಕು, ಆರೋಗ್ಯಕ್ಕೂ ಹಿತಕರವಾಗಿರಬೇಕು ಎನ್ನುವುದಿವರ ಕಾಳಜಿ. ಅದಕ್ಕೆಂದೇ ಲಕ್ಕಿಸೊಪ್ಪು, ಪಚ್ಚಕರ್ಪೂರ, ಕಹಿಜೀರಿಗೆ, ಬಜೆ, ಚಕ್ಕೆಯ ಪುಡಿಯನ್ನೂ ಅಲ್ಪಪ್ರಮಾಣದಲ್ಲಿ ಮಿಶ್ರಣ ಮಾಡುತ್ತಾರೆ.
   ಉದ್ಯಮದಲ್ಲಿ ಏರುತ್ತಿರುವ ಬೇಡಿಕೆಯೇ ಯಶಸ್ಸಿನ ಮಾನದಂಡ. ಆರು ವರ್ಷ ಹಿಂದೆ ಅರವತ್ತು ಕೇಜಿ ಬಣ್ಣ ತಯಾರಿಸಿ ಆರಂಭವಾದ ಇವರ ಉದ್ಯಮ ಇಂದು ಎರಡು ಟನ್ ಬಣ್ಣಕ್ಕೆ ಏರಿದೆ. ಬಣ್ಣ ತಯಾರಿಸುವ ನಾವು ಎಂದೂ ಹೋಳಿ ಹುಣ್ಣಿಮೆಗೆ ಬಣ್ಣವನ್ನಾಡಿಲ್ಲ ಎಂದು ನಗುವ ಮನೋರಮಕ್ಕನ ಊರಿನಲ್ಲಿ ಬಣ್ಣವಾಡುವ ಸಂಪ್ರದಾಯವಿಲ್ಲ. ಆದರೂ ವರ್ಷದ ನಾಲ್ಕು ತಿಂಗಳು ಇವರ ಪರಿಶ್ರಮದಿಂದ ತಯಾರಾಗುವ ಬಣ್ಣದಿಂದ ಅನೇಕರು ನಿಶ್ಚಿಂತೆಯ ಹೋಳಿಯನ್ನಾಚರಿಸಬಹುದಾಗಿದೆ. ಈ ಉದ್ಯಮ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದರೊಂದಿಗೆ ಹಳ್ಳಿಯ ಹತ್ತು ಮಹಿಳೆಯರಿಗೆ ಗಳಿಕೆಯ ದಾರಿಯನ್ನೂ ತೋರಿಸಿದೆ. ಮನೋರಮಾ ಉದ್ಯಮಕ್ಕೆ ಮೆದುಳಾದರೆ, ಸೂರ್ಯನಾರಾಯಣ ಬಲ ಮಗ ವಿವೇಕ ಮಾರುಕಟ್ಟೆಯ ವ್ಯವಸ್ಥಾಪಕ. ಮೂವರ ಒಮ್ಮತದ ದುಡಿಮೆಯಿಂದಲೇ ಈ ಯಶಸ್ಸು ಎಂದು ಸೂರ್ಯನಾರಾಯಣ ಅವರ ನುಡಿ.
   ಆರಂಭದಲ್ಲಿ ಪೂನಾದಲ್ಲಿ ಮಾತ್ರ ಬಣ್ಣಕ್ಕೆ ಬೇಡಿಕೆ ಇತ್ತು. ಕಳೆದೆರಡು ವರ್ಷಗಳಿಂದ ನಮ್ಮ ರಾಜ್ಯದಲ್ಲಿಯೂ ಮಾರುಕಟ್ಟೆ ಕುದುರಿಸುತ್ತಿರುವವರು ಬೆಂಗಳೂರಿನ ಜಗದೀಶ ಮಯ್ಯ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಇವರು ಸ್ವದೇಶಿ ಚಿಂತನೆಗೊಲಿದವರು. ಇಬ್ಬರು ಸಮಾನಮನಸ್ಕ ಸ್ನೇಹಿತರೊಂದಿಗೆ ಬೆಂಗಳೂರಿನ ಗಾಂಧೀಬಜಾರಿನಲ್ಲಿ 'ಓಜಸ್ ನಿಸರ್ಗಾ' ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಜನರ ದೈನಂದಿನ ಅಗತ್ಯಗಳಿಗೆ ಬೇಕಾದ ಎಲ್ಲ ಸಂಗತಿಗಳು ಆರೋಗ್ಯಕ್ಕೆ ಪೂರಕವಾದ ರೀತಿಯಲ್ಲಿ, ಬಳಸಲು ಅಗತ್ಯವಾದ ಮಾಹಿತಿಯೊಂದಿಗೆ ತಮ್ಮ ಅಂಗಡಿಯಲ್ಲಿ ದೊರೆಯುತ್ತದೆ ಎನ್ನುವ ಹೆಮ್ಮೆ ಇವರದು. ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್‌ಗಳಿಗೂ ನೈಸರ್ಗಿಕ ಬಣ್ಣವನ್ನು ದೊರಕಿಸುವ ಯತ್ನ ನಡೆಸಿದ್ದಾರೆ. ಇವರ ಸಂಪರ್ಕ: 9449848632.

-ಮಾಲತಿ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments