ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೃದಯವನ್ನು ಗಟ್ಟಿಮಾಡಿಕೊಳ್ಳಿ...

Vishwanath S
Updated On : 1 May 2013, 1:46 am

ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಂದಿನ ಲೈಫ್‌ಸ್ಟೈಲಿನ ಗಿಫ್ಟು. ನನಗೆ ತಿಳಿದಿರುವಂತೆ ಕೊಲೆಸ್ಟ್ರಾಲ್ ಕಡಿಮೆಯಿರುವ ಪದಾರ್ಥಗಳು ಮಾರುಕಟ್ಟೆಯಲ್ಲಿ ವಿರಳವಾಗಿ ಸಿಗುತ್ತಿವೆ. ಹೀಗಾಗಿ, ಇಂದು 'ಕೊಬ್ಬು' ಎಂಬ ಮಹಾಶಯ ಯಾವ ಪರ್ಮಿಟ್ಟೂ ಇಲ್ಲದೆ ಎಲ್ಲರ ದೇಹವನ್ನು ಪ್ರವೇಶಿಸುತ್ತಿದ್ದಾನೆ. ಶರೀರದಲ್ಲಿ ಕೊಬ್ಬಿನಂಶದ ಹೆಚ್ಚಳದಿಂದಾಗಿ ರಕ್ತನಾಳಗಳಲ್ಲಿ ರಕ್ತಸಂಚಲನಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಈ ಬೊಜ್ಜನ್ನು ಕರಗಿಸದೆ ಹಾಗೆಯೇ ಬಿಟ್ಟರೆ ರಕ್ತನಾಳದ ಒಳಗೆ ಹಬ್ಬಿಕೊಂಡು ಕಾಟ ಕೊಡಲು ಶುರುಮಾಡುತ್ತದೆ. ಇದರಿಂದಾಗಿಯೇ ಇಂದು ಹೃದಯದ ತೊಂದರೆ, ಪಾರ್ಶ್ವವಾಯು ಹೆಚ್ಚಾಗುತ್ತಿರುವುದು.
ಇಂಥ ಆರೋಗ್ಯದ ಅಪಾಯಗಳನ್ನು ಅರಿತೇ ಕೆಲವರು 'ರೆಡೂಸ್ಡ್ ಫ್ಯಾಟ್‌' (ಕೊಬ್ಬುರಹಿತ) ಆಹಾರಕ್ಕಾಗಿ ಹುಡುಕುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕೊಬ್ಬುರಹಿತ ಪದಾರ್ಥಗಳನ್ನು ಸಂಪೂರ್ಣವಾಗಿ ನಂಬುವಂತಿಲ್ಲ. ಇಂಥ ಪದಾರ್ಥಗಳಲ್ಲಿ ಕೊಬ್ಬಿನ ಬದಲಾಗಿ ಟ್ರಾನ್ಸ್ ಫ್ಯಾಟ್ ಇರುವಂಥ ಎಣ್ಣೆಗಳನ್ನು ಬಳಸಲಾಗುತ್ತದೆ. ಇಂಥ ವೇಳೆ ಮೊನೊ ಅನ್‌ಸ್ಯಾಚುರೇಟೆಡ್ ಫ್ಯಾಟ್ ಎಂದು ನಮೂದಿಸಿರುವ ಆಹಾರ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು. 'ಇದೇನು ಮೊನೊ ಅನ್‌ಸ್ಯಾಚುರೇಟೆಡ್ ಫ್ಯಾಟ್ ಅಂದ್ರೆ?' ಅಂತ ನೀವು ಕೇಳಬಹುದು. ಆಲಿವ್, ಕ್ಯೊನೊಲಾ ಎಣ್ಣೆಗಳು ಈ ಪಟ್ಟಿಗೆ ಸೇರುತ್ತವೆ. ಆಲಿವ್ ಆಯಿಲ್‌ನಲ್ಲಿ ಮೊನೊ ಅನ್‌ಸ್ಯಾಚುರೇಟೆಡ್ ಫ್ಯಾಟ್ ಶೇ.75 ಇರುತ್ತದೆ. ಕ್ಯೊನೊಲಾದಲ್ಲಿ ಶೇ.58 ಪ್ರಮಾಣದಲ್ಲಿರುತ್ತದೆ. ಈ ಕೊಬ್ಬಿನಂಶ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಆಲಿವ್ ಎಣ್ಣೆಯ ಬಳಕೆ ಭಾರತದಲ್ಲಿ ತೀರಾ ಕಡಿಮೆ ಇರುವುದರಿಂದ ಇಂದು ಕೊಬ್ಬು ವ್ಯಾಪಕವಾಗಿ ದೇಹವನ್ನಾಳುತ್ತಿದೆ. ನಮ್ಮ ಹೃದಯವನ್ನು ಗಟ್ಟಿಯಾಗಿರಿಸಲು ಮೊನೊ ಅನ್‌ಸ್ಯಾಚುರೇಟೆಡ್ ಫ್ಯಾಟ್ ಪದಾರ್ಥಗಳೇ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.
ಅದುಬಿಟ್ಟರೆ ನಮ್ಮ ರಕ್ತನಾಳಗಳನ್ನು ಸೇಫ್ ಆಗಿ ಇರಿಸುವುದು ಹಣ್ಣು, ತರಕಾರಿಗಳೇ. ಇವುಗಳು ನಾರು ಪದಾರ್ಥವಾಗಿರುವ ಕಾರಣ, ಕೊಬ್ಬಂತೂ ಇರುವುದಿಲ್ಲ. ಕ್ಯಾಲೊರಿಯೂ ಕಡಿಮೆ. ಹೃದಯದ ರಕ್ತನಾಳಗಳ ಆರೋಗ್ಯಕ್ಕೆ ಇವು ಅತಿಮುಖ್ಯ.
'ತೆಂಗಿನಕಾಯಿಯಿಲ್ಲದ ಅಡುಗೆ ರುಚಿಯೇ ಅಲ್ಲ' ಎಂಬುದು ಬಹುತೇಕರ ಅಭಿಪ್ರಾಯ. ಆದರೆ, ರಕ್ತನಾಳಗಳ ಆರೋಗ್ಯಕ್ಕೆ ಇದು ಕೂಡ ಮಾರಕವೇ. ಇನ್ನು ನಮ್ಮ ಬಾಯಿ ಚಪ್ಪರಿಸುವ ಕುರುಕಲು ತಿಂಡಿಗಳ ಸಹವಾಸವನ್ನಂತೂ ಕಡಿಮೆ ಮಾಡಲೇಬೇಕು. ಕೆಲವರಿಗೆ ಹಾಗೆಯೇ ಹಣ್ಣುಗಳನ್ನು ತಿನ್ನುವ ಅಭ್ಯಾಸವಿರುವುದಿಲ್ಲ. ಅದಕ್ಕೆ ಉಪ್ಪು ಸೇರಿಸಿ ತಿಂದರೇನೇ ಹಿತ ಎಂಬ ಭಾವನೆ ಇರುತ್ತದೆ. ರಕ್ತನಾಳಗಳ ಆರೋಗ್ಯಕ್ಕೆ ಇದು ಕೂಡ ಅಪಾಯಕಾರಿಯೇ. ಸಾಸ್ ಬಳಕೆಯೂ ಅಷ್ಟು ಒಳ್ಳೆಯದಲ್ಲ. ಹೃದಯವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೀವೋ ಅಷ್ಟು ವರ್ಷ ನಾವು ಬದುಕಿರುತ್ತೇವೆ. ಈ ಹೃದಯದ ಆರೋಗ್ಯ ಸಂಪೂರ್ಣವಾಗಿ ಅವಂಲಬಿಸಿರುವುದು ನಮ್ಮ ಆಹಾರಪದ್ಧತಿಯನ್ನು. ಯಾವುದಕ್ಕೂ ನಾವು ಹಣ್ಣು, ತರಕಾರಿಗಳ ಮೇಲೆ ನಂಬಿಕೆಯಿಡುವುದು ಬಾರಿ ಒಳ್ಳೆಯದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement