ನೀರ ನೈವೇದ್ಯ
ಮೊದಲೇ ಹಳ್ಳಿಯ ಬೆಳ್ಳನೆಯ ಬೆಳಗು. ಮೈ ತೀಡುವ ತಂಗಾಳಿಗೆ ಸ್ವರ ಸೇರಿಸುವ ಹಕ್ಕಿಗಳ ಚಿಲಿಪಿಲಿ. ಗೋಣು ನಿಮಿರಿಸಿ ಕೊಕ್ಕೊ ಎನ್ನುತ್ತಾ...
ಮೊದಲೇ ಹಳ್ಳಿಯ ಬೆಳ್ಳನೆಯ ಬೆಳಗು. ಮೈ ತೀಡುವ ತಂಗಾಳಿಗೆ ಸ್ವರ ಸೇರಿಸುವ ಹಕ್ಕಿಗಳ ಚಿಲಿಪಿಲಿ. ಗೋಣು ನಿಮಿರಿಸಿ ಕೊಕ್ಕೊ ಎನ್ನುತ್ತಾ ಎಚ್ಚರಿಸುವ ಹುಂಜಗಳು, ಕೊಟ್ಟಿಗೆಯಲ್ಲಿ ಕರುವಿನ ಕೊರಳ ಕಿರುಗಂಟೆಯ ನಿನಾದ, ದಡ್ಡಿಯಲ್ಲಿ ತಾಯಿಯನ್ನು ಕೂಡಿಕೊಳ್ಳಲು ಗುದುಮುರುಗಿ ಹಾಕುವ ಕುರಿಮರಿಗಳ ಆತುರ, ತಾಳ ಬದ್ದವಾಗಿ ಕೇಳಿ ಬರುವ ರೊಟ್ಟಿ ತಟ್ಟುವ ಸದ್ದು... ನಿಜಕ್ಕೂ ಆಹ್ಲಾದಕರ. ಈ ಅನೂಹ್ಯ ನಾದಕ್ಕೆ, ಬೆಡಗಿಗೆ ಕಿವಿ-ಮೈಯಾಗುವ ಮನಸ್ಸು ಹಾಸಿಗೆಯಿಂದ ಏಳಲೋ ಬೇಡವೋ ಎಂದು ರಚ್ಚೆ ಹಿಡಿಯುವುದುಂಟು.
ಉತ್ತರ ಕರ್ನಾಟಕದ ನಿತ್ಯದ ಇಂಥ ಸಮ್ಮೋಹಿನಿ ನಾದಕ್ಕೆ ಕಳೆದ ಒಂದು ವಾರದಿಂದ ಚಿಣ್ಣರ ಚಿಲಿಪಿಲಿ, ತಂಬಿಗೆ- ಬಿಂದಿಗೆಗಳ ಕಲರವ ಜತೆಗೂಡಿ ಬೆಳಗಿನ ಬೆರಗನ್ನು ಇನ್ನಷ್ಟು ಆಪ್ತವಾಗಿಸಿದೆ. ಇಂಥದ್ದೂ ಒಂದು ಬೆಳಗು ಇರುತ್ತಾ ಎಂದು ಹುಬ್ಬೇರಿಸುತ್ತಿದೆ. 10- 12 ವರ್ಷಗಳ ಒಳಗಿನ ಎಳೆಯರು ಬೆಳ್ಳಂಬೆಳಗ್ಗೆಯೇ ಹೀಗೆ ನೀರು ತುಂಬಿಕೊಂಡು ಹಿಂಡು ಹಿಂಡಾಗಿ ಊರು ಸುತ್ತುತ್ತಾರೆ. ಸಂದಿ-ಗೊಂದಿಗಳಲ್ಲಿನ ಸಣ್ಣ-ದೊಡ್ಡ ದೇವರುಗಳಿಗೆ ನೀರು ನೀಡುತ್ತಾರೆ. ಅಂದರೆ ದೇವರಿಗೆ ನೀರಿನ ನೈವೇದ್ಯ. ಅಷ್ಟೇ ಅಲ್ಲ 'ಬೇಗನೇ ಮಳೆ ಸುರಿಸೋ ಮಳೆರಾಯ' ಎಂದು ಪ್ರಾರ್ಥಿಸುತ್ತಾರೆ. ಅವರ ಒಕ್ಕೊರಲ ಗೋವಿಂದ ನಾಮಸ್ಮರಣೆಗೆ ಗಿಡ-ಮರಗಳಲ್ಲಿ ರಾತ್ರಿಯಿಡಿ ಬೆಚ್ಚಗೆ ಮಲಗಿದ್ದ ಹಕ್ಕಿಗಳು ಅರೆಕ್ಷಣ ಗಲಿಬಿಲಿಗೊಂಡು ಊರಿನ ನಿದ್ದೆಯ ಮಂಪರು ಹರಿಸುವಂತೆ ಮಾಡುತ್ತದೆ.
ಇಂಥದೊಂದು ಸುಮಧುರ, ಆಪ್ಯಾಯಮಾನ ಸುಂದರ ಬೆಳಗನ್ನು ಸವಿಯಬೇಕಿದ್ದರೆ ಉತ್ತರ ಕರ್ನಾಟಕದ ಯಾವುದಾದರೂ ಹಳ್ಳಿಯಲ್ಲಿ ವಾಸ್ತವ್ಯ ಇದ್ದು, ಬೇಗ ಎದ್ದು ನೋಡಬೇಕು. ಇದಕ್ಕೆಲ್ಲ ಕಾರಣ ನೀರಿನ ವಾರ!
ನೀರಿಗೂ ವಾರಗಳಿವೆ
ಈ ಭಾಗದ ಬಹುತೇಕ ಗ್ರಾಮಗಳು ಅಕ್ಷರಶಃ ಬಿಸಿಲೂರುಗಳು. ಮೊದಲಿನಿಂದರೂ ಇಲ್ಲಿ ಮಳೆ ಅಷ್ಟಕಷ್ಟೆ. ಎಲ್ಲ ಕಾಲದಲ್ಲೂ ಬರಗಾಲವೇ ಅಧಿಕ. ಹಾಗಾಗಿ ಇಲ್ಲಿನ ಜನತೆ ಮಳೆಗಾಗಿ ಪ್ರಾರ್ಥಿಸುವಷ್ಟು ಇನ್ನಾವುದಕ್ಕೂ ಹಲುಬುವುದಿಲ್ಲ. ಇದೇ ಕಾರಣಕ್ಕೆ ಮುಂಗಾರು ಆಗಮನಕ್ಕೂ ಮುನ್ನ ಊರಿನ ಎಲ್ಲ ದೇವರಿಗೆ 'ನೀರಿನ ನೈವೇದ್ಯ'ದ ಮೂಲಕ ವರುಣನ ಪ್ರಾರ್ಥನೆ. ವರುಣನ ಒಲುಮೆಗಾಗಿ ಎಲ್ಲ ದೇವರಲ್ಲೂ ಪ್ರಾರ್ಥನೆ. ಇದಕ್ಕಾಗಿ ಅವರು ಆಚರಿಸುವ ಹಬ್ಬ 'ನೀರಿನ ವಾರ' ಅಂದರೆ ವಾರದ ವ್ರತ.
ಜಗತ್ತಿನಾದ್ಯಂತ ಕಚೇರಿ ಕಲಸಗಳಿಗೆ ಭಾನುವಾರ ರಜೆ. ಆದರೆ, ಈ ಭಾಗದಲ್ಲಿ ಪ್ರತಿ ಸೋಮವಾರ ಕೃಷಿಕರಿಗೆ ರಜೆ. ಅಂದು ಎತ್ತುಗಳನ್ನು ಗಳೇ ಹೂಡುವುದಿಲ್ಲ. ಇಷ್ಟಿದ್ದಾಗ್ಯೂ ಪ್ರತಿವರ್ಷ ಐದು ಮಂಗಳವಾರಗಳನ್ನು 'ನೀರಿನ ವಾರ' ಎಂದು ಆಚರಿಸುತ್ತಾರೆ. ಐದನೇ ವಾರ ಊರಿನ ದೇವತೆಗಳಿಗೆ ಉಡಿ ತುಂಬಿ ಕಡೇ ವಾರ ಆಚರಿಸುವ ಜತೆಗೆ ಮುಂಗಾರು ಕೃಷಿ ಚಟುವಟಿಕೆಗಳತ್ತ ವಾಲುತ್ತಾರೆ.
ಮಂಗಳವಾರಗಳಂದು ಬೆಳಗ್ಗೆ ಸುಮಾರು 5 ಗಂಟೆಯಿಂದಲೇ ಊರಿನ ಬಾಲಕ, ಬಾಲಕಿಯರು ಚುರುಕಾಗುತ್ತಾರೆ. ಹೊತ್ತ ಬಿಂದಿಗೆ, ಹಿಡಿದ ತಂಬಿಗೆಯಲ್ಲಿನ ನೀರು ತುಳುಕಿ ಅರ್ಧಂಬರ್ಧ ತೊಯ್ಸಿಕೊಂಡಿದ್ದರೂ ಅಷ್ಟೇ ಉತ್ಸಾಹದಿಂದ ಹಿಂಡು ಹಿಂಡಾಗಿ ಮಠ- ಮಂದಿರಗಳತ್ತ ಹೋಗುವ ಈ ಎಳೆಯರ ಮೆರವಣಿಗೆ ನೋಡುವುದೇ ಕಣ್ಣಿಗೊಂದು ಹಬ್ಬ; ಅದೂ ತಿಳಿಬೆಳಗಿನ ತಂಗಾಳಿಯಲ್ಲಿ.
ಎಲ್ಲ ದೇವರುಗಳಿಗೆ ನೀರಿನ ನೈವೇದ್ಯ ಆದ ಬಳಿಕವೇ ಮನೆ ಮಂದಿ ಮನೆ ಸಾರಿಸಿ, ಸ್ನಾನ ಪೂರೈಸಿ ಉಳಿದ ಕೆಲಸ ಕಾರ್ಯಗಳಿಗೆ ಅಣಿಯಾಗುತ್ತಾರೆ. ಬಹುತೇಕರು ಅಂದು ಇಡೀ ದಿನ ದೇವತಾ ಕಾರ್ಯಗಳಲ್ಲಿ ತೊಡಗುತ್ತಾರೆ. ಮಧ್ಯಾಹ್ನ ಓಣಿಯ ಮಹಿಳೆಯರೆಲ್ಲ ಸೇರಿ ಶಾವಿಗೆ ಹೊಸೆಯುವ, ಹಪ್ಪಳ ಮಾಡುವ, ಸಂಡಿಗೆ ಒಣಗಿಸುತ್ತ ಸಂಭ್ರಮಿಸುತ್ತಾರೆ.
ಭಕ್ತರಿಗೆ ಅಂಬಲಿ
ಇಲ್ಲಿ ಇನ್ನೊಂದು ಗಮನೀಯ ಸಂಗತಿಯೆಂದರೆ ವರುಣನ ಕೃಪೆಗಾಗಿ ಊರ ದೇವರುಗಳಿಗೆ ನೀರಿನ ನೈವೇದ್ಯ ಅರ್ಪಿಸುವ ಜನತೆ, ಅದೇ ದಿನ ರಾತ್ರಿ (ಪ್ರತಿ ಮಂಗಳವಾರದ ರಾತ್ರಿ) ಆಯಾ ಮಂದಿರಗಳಿಗೆ ತೆರಳಿ ಸಾಮೂಹಿಕವಾಗಿ ಅಂಬಲಿ ಸೇವಿಸುತ್ತಾರೆ.
ಹೊಸ ಮಡಿಕೆಯಲ್ಲಿ ಈ ಅಂಬಲಿ ತಯಾರಿಸಿರುತ್ತಾರೆ. ನಂತರ ಅವನ್ನೆಲ್ಲ ಊರಿನ ದೊಡ್ಡ ಮಂದಿರಕ್ಕೆ ಕೊಂಡೊಯ್ಯುತ್ತಾರೆ. ಪ್ರತಿ ಮನೆಯಿಂದ ಬರುವ ಮಡಿಕೆಯಲ್ಲಿನ ಅಂಬಲಿಯನ್ನು ಒಂದು ದೊಡ್ಡ ಗಡಿಗೆಯಲ್ಲಿ ಸಂಗ್ರಹಿಸಿ ದೇವರಿಗೆ ನೈವೇದ್ಯ ಮಾಡಿದ ಬಳಿಕ ಅಲ್ಲಿ ಸೇರಿದ್ದ ಮಹಿಳೆಯರು, ಮಕ್ಕಳು, ಪುರುಷರು ಸಾಮೂಹಿಕವಾಗಿ ಊಟ ಮಾಡುತ್ತಾರೆ. ಊರಿನ ಎಳೆಯರೆಲ್ಲ ಅಲ್ಲಿಯೇ ಊಟ ಮಾಡುತ್ತಾರೆ. ಮತ್ತೆ ಮತ್ತೆ ಕೇಳಿ ಅಂಬಲಿ ಕುಡಿದು ಕುಪ್ಪಳಿಸುತ್ತಾರೆ. ಬೆಳಗಿನ ನೀರು ನೈವೇದ್ಯ- ಸಂಜೆಯ ಅಂಬಲಿ ಸವಿಯುವುದೆಂದರೆ ಅವರಿಗೆಲ್ಲ ಎಲ್ಲಿಲ್ಲದ ಸಂಭ್ರಮ.
ಇತ್ತ ಅಂಬಲಿ ಮಡಿಕೆಗಳ ಸಂಗ್ರಹ, ಪೂಜೆ ನಡೆಯುತ್ತಿದ್ದರೆ ಅತ್ತ ಆರೇಳು ವೃದ್ಧೆಯರು ಊರ ದೇವತೆಯನ್ನು, ವರುಣ ದೇವರನ್ನು ಪ್ರಾರ್ಥಿಸುವ ಜಾನಪದ ಹಾಡುಗಳನ್ನು ಲಯಬದ್ಧವಾಗಿ ಹಾಡುತ್ತಾರೆ. ಹಾಗಾಗಿ ಬಿಸಿಲೂರುಗಳು ಬೆಳಗಿನ ತಾಜಾತನವನ್ನು ಸಂಜೆ ಅಂಬಲಿಯ ರುಚಿಯಲ್ಲೂ ಸವಿಯುತ್ತಾರೆ.
- ಮಲ್ಲಿಕಾರ್ಜುನ ಸಿದ್ದಣ್ಣವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.