ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೂರಕ್ಷರದ ಮಾಯಾಜಾಲ

Vishwanath S
Updated On : 7 May 2013, 1:17 am

ನೆಂಟರಿಷ್ಟರ ಯೋಗಕ್ಷೇವು ವಿಚಾರಿಸಲು ಮೈಲುಗಟ್ಟಲೆ ಪ್ರಯಾಣ ಮಾಡಬೇಕಿಲ್ಲ. ಮಾಹಿತಿಗಾಗಿ ಪುಸ್ತಕದ ಕಪಾಟು ತೆರೆಯಬೇಕಿಲ್ಲ. ಹೆತ್ತವರ ಖರ್ಚಿಗೆ ದುಡ್ಡು ಹಾಕಲು ಪೋಸ್ಟ್ ಆಫೀಸ್ ಬಾಗಿಲು ಕಾಯಬೇಕಿಲ್ಲ. ಪ್ರೇಯಸಿ ನೋಡಲು ದೂರದೂರಿಗೆ ಹೋಗಬೇಕಿಲ್ಲ. ಸಂದೇಶ ಕಳುಹಿಸಿ ಪ್ರತ್ಯುತ್ತರಕ್ಕಾಗಿ ಚಡಪಡಿಸಬೇಕಿಲ್ಲ. ಎಲ್ಲ 'ಡಬ್ಲ್ಯುಡಬ್ಲ್ಯುಡಬ್ಲ್ಯು'ಕೊಡುಗೆ!

ಏನಿದು ಡಬ್ಲ್ಯುಡಬ್ಲ್ಯುಡಬ್ಲ್ಯು?
'ಡಬ್ಲ್ಯುಡಬ್ಲ್ಯುಡಬ್ಲ್ಯು' ಎಂದರೆ ವರ್ಲ್ಡ್ ವೈಡ್ ವೆಬ್. ಕನ್ನಡದಲ್ಲಿ 'ವಿಶ್ವ ವ್ಯಾಪಿ ಜಾಲತಾಣ'. ಇದರ ಸೃಷ್ಟಿಕರ್ತ ಬ್ರಿಟನ್‌ನ ಟಿಂ ಬೆರ್ನರ್ಸ್ ಲೀ. 'ಬೇಕಾಗಿರುವ ಮಾಹಿತಿಯನ್ನು ತುದಿ ಬೆರಳಲ್ಲಿ ಕಲೆ ಹಾಕುವುದು ಮತ್ತು ಎಲ್ಲಿಯೋ ಇರುವ ಸುದ್ದಿ, ದಾಖಲೆಗಳನ್ನು ಕ್ಷಣಾರ್ಧದಲ್ಲಿ ಹಂಚಿಕೊಳ್ಳುವುದು' ಎಂಬ ಸಿದ್ಧಾಂತದ ತಳಹದಿಯ ಮೇಲೆ ಹುಟ್ಟಿದ ಇದು ಇಂದು ಅಂಗೈಯಲ್ಲೇ ಜಗತ್ತು ತೋರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.

ಆರಂಭದಲ್ಲಿ ಇಂಟರ್‌ನೆಟ್
ಇಂಟರ್‌ನೆಟ್ ಎಂದರೆ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಜೋಡಿಸಿ ಸಂಪರ್ಕಿಸುವ ಒಂದು ಕೊಂಡಿ. 1950ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯಲ್ಲಿ ಇಂಟರ್‌ನೆಟ್ ಆವಿಷ್ಕಾರವಾಯಿತು. ಆದರೆ, ಅದು ನಿಂತ ನೀರಿನಂತೆ ಹೆಚ್ಚೇನು ಪ್ರಗತಿ ಕಾಣಲಿಲ್ಲ. 1980ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. ಆಗಲೇ ಇಂಟರ್‌ನೆಟ್ ಕ್ರಾಂತಿಯ ಮುನ್ಸೂಚನೆ ದೊರೆಯಿತು. 1982ರ ವೇಳೆಗೆ ಸೂಪರ್ ಕಂಪ್ಯೂಟರ್‌ಗಳ ಆವಿಷ್ಕಾರವಾಯಿತು. ನಿಜವಾದ ಕ್ರಾಂತಿ ಶುರುವಾದದ್ದೇ ಇಲ್ಲಿಂದ.
ಇಂಟರ್‌ನೆಟ್ ನಿಗದಿತ ವ್ಯಾಪ್ತಿಗೆ ಸೀಮಿತವಾಗಿತ್ತು. ಇದರ ಕೊರತೆ ನೀಗಿಸಲು 1989ರ ಮಾರ್ಚ್‌ನಲ್ಲಿ ಬ್ರಿಟನ್‌ನ ಎಂಜಿನಿಯರ್ ಸರ್ ಟಿಂ ಬೆರ್ನರ್ಸ್ ಲೀ 'ವೆಬ್ ಪೇಜ್‌'ಗಳ ಬಗ್ಗೆ ಪ್ರಸ್ತಾವನೆ ಬರೆದರು. ಸಾಕಷ್ಟು ಪ್ರಯೋಗಗಳ ನಂತರ 1989ರ ಡಿಸೆಂಬರ್‌ನಲ್ಲಿ 'ವರ್ಲ್ಡ್ ವೈಡ್ ವೆಬ್‌' ಅನ್ನು ಪ್ರಪಂಚಕ್ಕೆ ಪರಿಚಯಿಸಲಾಯಿತು. ಆದರೆ, ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದಿದ್ದು 1993ರಲ್ಲಿ.
ಈ ವರ್ಲ್ಡ್ ವೈಡ್ ವೆಬ್ ಆಧಾರವಾಗಿಟ್ಟುಕೊಂಡು 1990ರಲ್ಲಿ ಇ ಮೇಲ್ ಮತ್ತು ಮೆಸೇಜ್ ಆವಿಷ್ಕರಿಸಲಾಯಿತು. ಟಿಂ ಬೆರ್ನರ್ಸ್ ಲೀ ಬಳಸಿದ ಕಂಪ್ಯೂಟರ್ ಮೊದಲ 'ಸರ್ವರ್‌' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1992ರಲ್ಲಿ ಫೋಟೋ ಅಪ್‌ಲೋಡ್ ಮಾಡುವ ಕನಸು ನನಸಾಯಿತು. 1994ರಲ್ಲಿ ವರ್ಲ್ಡ್ ವೈಡ್ ವೆಬ್‌ನ ಅಂತಾರಾಷ್ಟ್ರೀಯ ಒಕ್ಕೂಟ ರಚನೆಯಾಯಿತು. ಅಲ್ಲಿಂದ ವೆಬ್ ಪುಟದ ವಿನ್ಯಾಸದಲ್ಲಿ ಕ್ರಾಂತಿಕಾರಿ ಕಾರ್ಯಗಳಾದವು. ಇಂದು ವೆಬ್ ಮೂಲಕ ಕರೆ, ವಿಡಿಯೋ ಕರೆ, ಗೂಗಲ್ ಮ್ಯಾಪ್‌ನಲ್ಲಿ ಪ್ರಪಂಚದ ಮೂಲೆ ಮೂಲೆಗಳನ್ನು ನೋಡುವ ಭಾಗ್ಯವನ್ನು ಕಲ್ಪಿಸಿದೆ.

ಈಗ ಏನೆಲ್ಲಾ ಲಭ್ಯ ?
ಈಗ ಎಲ್ಲರ ಮಾಹಿತಿದಾರ ಗೂಗಲ್. ನಾವು ಹುಡುಕ ಬಯಸುವುದನ್ನು ಪೂರ್ತಿಯಾಗಿ ಬರೆಯುವುದಕ್ಕಿಂತ ಮುಂಚೆಯೇ ನಮಗೆ ತೋರಿಸುತ್ತದೆ. ಪ್ರತಿನಿತ್ಯ ನಾವು ದೇವರ ಫೋಟೋ ನೋಡುತ್ತೇವೆಯೋ ಇಲ್ಲವೋ ಆದರೆ ಗೂಗಲ್ ಪೇಜ್‌ನ್ನು ನೋಡೇ ನೋಡುತ್ತೇವೆ!
ಗೂಗಲ್‌ನಿಂದ ಸಂದೇಶ ರವಾನಿಸಲು ಜೀಮೇಲ್, ಸ್ನೇಹಿತರೊಂದಿಗೆ ಹರಟಲು ಜೀಟಾಕ್, ಇತರರೊಂದಿಗೆ ಮಾಹಿತಿ ಹಂಚಿಕೊಳ್ಳಲು ಆರ್ಕುಟ್, ನಮ್ಮ ಕಲೆ ಮತ್ತು ಆಸಕ್ತಿಯ ವಿಷಯ ಪ್ರದರ್ಶಿಸಲು ಬ್ಲಾಗ್. ಇಂದು ಫೇಸ್‌ಬುಕ್, ಟ್ವಿಟ್ಟರ್ ಬಳಸದ ಯುವ ಜನತೆಯಿಲ್ಲ. ವಿಕಿಪೀಡಿಯಾ ತಿಳಿಯದ ಜನರಿಲ್ಲ. ಉದ್ಯೋಗ ಸಂಬಂಧಿ ವಿಷಯ ಹಂಚಿಕೆಗಾಗಿಯೇ ಲಿಂಕ್ಡ್ ಇನ್ ಎಂಬ ಜಾಲತಾಣವಿದೆ.

ವೆಬ್, ಇಂಟರ್‌ನೆಟ್ ಎರಡೂ ಬೇರೆ ಬೇರೆ!
ವೆಬ್ ಪೇಜ್ ಬಳಸುವ ಬಹಳಷ್ಟು ಮಂದಿ ಇಂಟರ್‌ನೆಟ್ ಮತ್ತು ವರ್ಲ್ಡ್ ವೈಡ್ ವೆಬ್ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಆದರೆ, ಎರಡರ ಮಧ್ಯೆ ವ್ಯತ್ಯಾಸವಿದೆ. ಇಂಟರ್‌ನೆಟ್ ಎಂದರೆ ಕಂಪ್ಯೂಟರ್‌ಗಳನ್ನು ಪರಸ್ಪರ ಜೋಡಿಸಿ ಸಂಪರ್ಕಿಸುವ ಕೊಂಡಿ. ವರ್ಲ್ಡ್ ವೈಡ್ ವೆಬ್ ಎಂದರೆ ಮಾಹಿತಿ, ದಾಖಲೆಯನ್ನು ಇಂಟರ್‌ನೆಟ್ ಬ್ರೌಸರ್ ಮೂಲಕ ದಾಖಲಿಸುವ, ಬರೆಯುವ, ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡಲು ಬಳಸುವ ತಂತ್ರಜ್ಞಾನ. ವೆಬ್ ಪೇಜ್‌ಗಳು ನಮ್ಮ ಮತ್ತು ದಾಖಲೆಗಳು ಶೇಖರವಾದ ಸ್ಥಳಕ್ಕೆ ಮಧ್ಯವರ್ತಿಗಳಂತೆ ವರ್ತಿಸುತ್ತದೆ. ಇಂಟರ್‌ನೆಟ್ ಮತ್ತು ವರ್ಲ್ಡ್ ವೈಡ್ ವೆಬ್ ಒಂದೇ ನಾಣ್ಯದ ಎರಡು ಮುಖಗಳಂತಿವೆ.
ವರ್ಲ್ಡ್ ವೈಡ್ ವೆಬ್‌ನಲ್ಲಿ ಅಂತಾರಾಷ್ಟ್ರೀಕರಣ (Internationalization) ಕೂಡ ಬೆಳೆದಿದೆ. ಒಂದು ಭಾಷೆಯಲ್ಲಿರುವ ವೆಬ್‌ಪೇಜ್‌ನ್ನು ಇನ್ನೊಂದು ಭಾಷೆಗೆ ಅನುವಾದಿಸಬಹುದು. ವೆಬ್‌ಪೇಜ್‌ನ್ನು ವಿವಿಧ ಭಾಷೆಗಳಿಗೆ ಅನುವಾದಿಸುವ ತಂತ್ರಜ್ಞಾನಕ್ಕೆ ್ಝಟ8ಃ ಎಂದು ಕರೆಯಲಾಗುತ್ತದೆ.
---
ನಾನು ಹುಟ್ಟಿ ಬೆಳೆದದ್ದು ಪುಟ್ಟ ಹಳ್ಳಿಯಲ್ಲಿ. ಆದರೆ, ಇಂದು ಬೆಂಗಳೂರಿನಂಥ ಮಹಾನಗರದಲ್ಲಿ ಕೆಲಸ ಗಿಟ್ಟಿಸಿಕೊಂಡು ಉತ್ತಮ ಜೀವನ ನಿರ್ವಹಿಸಲು ಸಹಾಯಕವಾಗಿದ್ದು ಅಂತರ್ಜಾಲ ಹಾಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂಬ ಮಾಯಾಜಾಲ. ಥ್ಯಾಂಕ್ಸ್ ಟು ಟೆಕ್ನಾಲಜಿ ಆ್ಯಂಡ್ ಥ್ಯಾಂಕ್ಸ್ ಟು ಬೆರ್ನೆರ್ಸ್ ಲೀ.
- ಗಣೇಶ ಮೂಲಿಮನಿ, ಸಾಫ್ಟ್‌ವೇರ್ ಎಂಜಿನಿಯರ್

ಬೆರಳ ತುದಿಯಲ್ಲಿ ಮಾಹಿತಿ ಆಗರ ಒದಗಿಸುವ ಅಂತರ್ಜಾಲದ ಅಭಿವೃದ್ಧಿಗೆ ಸಹಾಯಕವಾದ ಡಬ್ಲ್ಯೂಡಬ್ಲ್ಯೂಡಬ್ಲ್ಯೂಗೆ 20 ವರ್ಷ ಸಂದಿರುವುದು ಸಂತಸದ ಸಂಗತಿ. ಇದು ಕೇವಲ ಕ್ರಾಂತಿಕಾರಿ ಬೆಳವಣಿಯ ಮುನ್ನುಡಿ. ಇನ್ನೂ ಪ್ರಗತಿಯ ಪರ್ವ ಮುಂದಿದೆ.
- ಅನುಪಮಾ ಗುದಗಣ್ಣವರ್ ಸಾಫ್ಟ್‌ವೇರ್ ಎಂಜಿನಿಯರ್

- ಕವಿತಾಗೌಡ ಗೋಪಿಕುಂಟೆ
kavitagn@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement