ಕಾಳೀ ತಡಿ ಕಲ್ಲಂಗಡಿ
ಉಳಗಾ ಎಂಬುದು ಗೋವಾ ರಾಜ್ಯಕ್ಕೆ ಅಂಟಿಕೊಂಡಿರುವ ಕಾರವಾರದ ಒಂದು ಚಿಕ್ಕ ಹಳ್ಳಿ. ಒಂದು ಕಡೆ ಕಾಳೀ ನದಿ,...
ಉಳಗಾ ಎಂಬುದು ಗೋವಾ ರಾಜ್ಯಕ್ಕೆ ಅಂಟಿಕೊಂಡಿರುವ ಕಾರವಾರದ ಒಂದು ಚಿಕ್ಕ ಹಳ್ಳಿ. ಒಂದು ಕಡೆ ಕಾಳೀ ನದಿ, ಉಳಿದ ಕಡೆ ಎತ್ತರದ ಪರ್ವತಗಳು, ಪರ್ವತದ ಬುಡಭಾಗದಲ್ಲಿ ಮನೆಗಳು ಹಾಗೂ ಮಧ್ಯದಲ್ಲಿ ವಿಶಾಲವಾದ ಬಯಲನ್ನು ಹೊಂದಿರುವ ಪುಟ್ಟ ಗ್ರಾಮ. ಬಯಲಿನ ಅಂಚಿನ ಭಾಗದಲ್ಲಿ ಅಲ್ಲಲ್ಲಿ ಕಾಂಡ್ಲಾ ವನಗಳಿದ್ದು ಉಬ್ಬರದ ಸಮಯದಲ್ಲಿ ಕಾಳೀನದಿಯ ಉಪ್ಪುನೀರು ಗದ್ದೆಗಳಿಗೆ ನುಗ್ಗುವುದು ಸಾಮಾನ್ಯ. ಇಂತಹ ಬಯಲುಗಳಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆಯುವ ಇಲ್ಲಿನ ರೈತರು, ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದು ಉತ್ತಮ ಆದಾಯವನ್ನು ಪಡೆಯುತ್ತಿರುವುದು ವಿಶೇಷ.
ಉಳಗಾದ ಮಣ್ಣಿನಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೆ ವಿಶೇಷ ರುಚಿ ಇರುವದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಬಹಳ. ಹಾಗಾಗಿ ಸುತ್ತಮುತ್ತಲಿನ ಹಳ್ಳಿಯ ಆಸಕ್ತ ರೈತರು ಇಲ್ಲಿನ ಗದ್ದೆಗಳನ್ನು ಗೇಣಿಗೆ ಪಡೆದು ಕಲ್ಲಂಗಡಿ ಬೆಳೆಸುತ್ತಾರೆ. ಈ ವರ್ಷ ಗುಂಟೆಗೆ 500 ರು. ದರವಿದೆ. ಆದರೂ ಪಕ್ಕದ ಊರುಗಳ ರೈತರು ಗೇಣಿಗೆ ಭೂಮಿ ಪಡೆದು ಸುಮಾರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿರುವುದು ಇಲ್ಲಿನ ಹಣ್ಣಿನ ಬೇಡಿಕೆಯನ್ನು ಸೂಚಿಸುತ್ತದೆ.
ಬೀಜಗಳು
ಸುಮಾರು 20-25 ವರ್ಷ ಹಿಂದೆ ಸ್ಥಳೀಯ ತಳಿಯ ಕಲ್ಲಂಗಡಿಯನ್ನೇ ಇಲ್ಲಿನ ರೈತರು ಬೆಳೆಯುತ್ತಿದ್ದರು. ಹಣ್ಣಿನ ಸಿಪ್ಪೆ ಅಚ್ಚ ಹಸಿರು ಬಣ್ಣವನ್ನು ಹೊಂದಿರುತ್ತಿದ್ದು, ಗಾತ್ರದಲ್ಲಿ ಚಿಕ್ಕದಾಗಿದ್ದು ಕಡಿಮೆ ಇಳುವರಿ ಬರುತ್ತಿತ್ತಂತೆ. ಆದರೆ ಇತ್ತೀಚೆಗೆ ಹೈಬ್ರಿಡ್ ಬೀಜಗಳನ್ನು ಮಾತ್ರ ಇಲ್ಲಿನ ರೈತರು ಬಳಸುತ್ತಿದ್ದು ಸ್ಥಳೀಯ ತಳಿ ಸಂಪೂರ್ಣ ಮಾಯವಾಗಿದೆ. ಈಗ ಇಲ್ಲಿನ ರೈತರು ನಾಮಧಾರಿ, ಅರ್ಕಾಮಣಿ, ಆಶಾಮಠ, ಮೈಕೋ-6 ತಳಿಯ ಬೀಜಗಳನ್ನು ನೆಚ್ಚಿದ್ದಾರೆ.
ಕೃಷಿವಿಧಾನ
ಮಳೆಗಾಲದಲ್ಲಿ ಸ್ಥಳೀಯ ತಳಿಯ ಭತ್ತವನ್ನು ಬೆಳೆಸುವ ಇಲ್ಲಿನ ರೈತರು ಸರಿಸುಮಾರು ಜನವರಿ ತಿಂಗಳಿನಲ್ಲಿ ಪುನಃ ಅದೇ ಗದ್ದೆಗಳನ್ನು ಹದ ಮಾಡಿ ಉದ್ದನೆಯ ಸಾಲುಗಳಲ್ಲಿ ಎರಡು ಗಿಡಗಳ ನಡುವೆ 4 ಅಡಿ ಅಂತರವಿರುವಂತೆ ಮತ್ತು ಎರಡು ಉದ್ದನೆಯ ಸಾಲುಗಳ ನಡುವೆ ಕನಿಷ್ಠ 3 ಅಡಿ ಅಂತರವಿರುವಂತೆ ಗಿಡಗಳನ್ನು ಬೆಳೆಯುತ್ತಾರೆ. ಆರಂಭದಲ್ಲಿ ಕೇವಲ ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ. ಸುಮಾರು ಒಂದು ತಿಂಗಳು ಬಲಿತ ಗಿಡಗಳಿಗೆ ಅಲ್ಪಪ್ರಮಾಣದಲ್ಲಿ ಸುಫಲಾ ಗೊಬ್ಬರ ನೀಡುತ್ತಾರೆ. ಕೆಲವು ಗದ್ದೆಗಳಲ್ಲಿ ನೀರು ಹರಿಸುವ ಸಲುವಾಗಿ ಪೈಪ್ಲೈನ್ ಅಳವಡಿಸಲಾಗಿದೆ.
ಇಳುವರಿ
ಬೆಳೆ ಚೆನ್ನಾಗಿ ಬಂದರೆ ಎಕರೆಗೆ 8-10 ಟನ್ ಇಳುವರಿ ಬರುತ್ತದೆ. ಕೆಲವೊಮ್ಮೆ ಬೇಸಿಗೆಯಲ್ಲಿ ಅಕಾಲಿಕ ಮಳೆಯಾದರೆ ಮಾತ್ರ ಇಳುವರಿ ಕುಂಠಿತಗೊಂಡು ಹಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಕಲ್ಲಂಗಡಿ ಬೆಳೆದ ರೈತರಿಗೆ ಅದನ್ನು ಮಾರುಕಟ್ಟೆಗೆ ಸಾಗಿಸಿ ಮಾರುವ ಅನಿವಾರ್ಯತೆ ಇಲ್ಲಿಲ್ಲ. ಏಕೆಂದರೆ ದಲ್ಲಾಳಿಗಳು ನೇರವಾಗಿ ಗದ್ದೆಗಳಿಗೇ ಲಾರಿ, ರಿಕ್ಷಾ ತಂದು ಖರೀದಿಸುತ್ತಾರೆ. ಇಲ್ಲಿ ಬೆಳೆದ ಕಲ್ಲಂಗಡಿಗೆ ನೆರೆಯ ರಾಜ್ಯಗಳಾದ ಗೋವಾ ಹಾಗೂ ಕೇರಳಗಳಲ್ಲಿ ಅತಿಯಾದ ಬೇಡಿಕೆಯಿದೆ. ಜೊತೆಗೆ ಇಲ್ಲಿನ ಹಣ್ಣನ್ನು ಕಾರವಾರ, ದಾಂಡೇಲಿ, ಹಳಿಯಾಳ, ಶಿರಸಿ, ಭಟ್ಕಳ ಮೊದಲಾದೆಡೆ ಕೊಂಡೊಯ್ದು ಹೆಚ್ಚಿನ ಬೆಲೆಗೆ ಮಾರುತ್ತಾರೆ.
ಈ ಸಲ ಸುಮಾರು 5 ಎಕರೆಯಲ್ಲಿ ಕಲ್ಲಂಗಡಿ ಕೃಷಿ ಮಾಡಿರುವ ಪುಂಡಲೀಕ ನಾಯ್ಕ ಹೇಳುವಂತೆ, ರೈತರಿಗಿಂತ ಮಧ್ಯವರ್ತಿಗಳೇ ಹೆಚ್ಚಿನ ಲಾಭ ಗಳಿಸುತ್ತಾರೆ. ಮೊದಲನೇ ಕೊಯ್ಲಿನಲ್ಲಿ ದಲ್ಲಾಳಿಗಳು ರೈತರಿಂದ ಕ್ವಿಂಟಲ್ಗೆ 8000ದಿಂದ 10000 ರು.ಗೆ ಕೊಂಡು ಹನ್ನೆರಡರಿಂದ ಹದಿನಾಲ್ಕು ಸಾವಿರ ರೂಪಾಯಿಗೆ ಸರಿದೂಗುವಂತೆ ಗ್ರಾಹಕರಿಗೆ ನೀಡುತ್ತಾರೆ. ಎರಡು ಮತ್ತು ಮೂರನೇ ಕೊಯ್ಲಿನಲ್ಲಿ ಹಣ್ಣಿನ ಗಾತ್ರ ಸಣ್ಣದಿರುವದರಿಂದ ಕ್ವಿಂಟಲ್ಗೆ 6000-10000 ರು.ಗೆ ಖರೀದಿಸುತ್ತಾರೆ. ಎಕರೆಗೆ 8ರಿಂದ 10 ಟನ್ ಬೆಳೆ ಬಂದರೆ ಸರಾಸರಿ 80,000 ರು. ಆದಾಯ ನಾಲ್ಕು ತಿಂಗಳಿನಲ್ಲಿ ದೊರೆಯುತ್ತದೆ. ಖರ್ಚನ್ನೆಲ್ಲ ಕಳೆದರೆ ಎಕರೆಗೆ 70,000 ರು. ತನಕ ಲಾಭ.
ಊರ ಮಧ್ಯದ ವಿಶಾಲವಾದ ಬಯಲಲ್ಲಿ, ಕಣ್ಣು ಹಾಯಿಸಿದ ಉದ್ದಕ್ಕೂ ಕಲ್ಲಂಗಡಿ ಗಿಡಗಳು ಹಾಗೂ ಮಧ್ಯೆ-ಮಧ್ಯೆ ಮಾರುಕಟ್ಟೆ ಪ್ರವೇಶಿಸಲು ಬೆಳೆದು ರಾಶಿ ಹಾಕಿದ ಕಲ್ಲಂಗಡಿ ಹಣ್ಣನ್ನು ನೋಡುವದೇ ಕಣ್ಣಿಗೆ ಹಬ್ಬ. ಒಟ್ಟಿನಲ್ಲಿ ಕಾಡಿನ ಮಧ್ಯದ ಚಿಕ್ಕ ಹಳ್ಳಿಯಲ್ಲಿದ್ದು ಕೃಷಿಯನ್ನೇ ನಂಬಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಇಲ್ಲಿನ ರೈತರು ಇತರರಿಗೆ ಮಾದರಿ.
- ಪ್ರೊ.ಶಿವಾನಂದ ಎಸ್.ಭಟ್ಟ