ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತುಳಸಿದಳ

ಇದು 20 ವರ್ಷಗಳ ಹಿಂದಿನ ಕತೆ. ಇಂದು ಈ ಕತೆಯ ದುರಂತ ಫಲಾನುಭವಿಗೆ ಇಳಿವಯಸ್ಸು.

Lingaraj Badiger
Updated On : 8 May 2013, 10:15 am

ಇದು ಬರೋಬರಿ 20 ವರ್ಷಗಳ ಹಿಂದಿನ ಕತೆ. ಇಂದು ಈ ಕತೆಯ ದುರಂತ ಫಲಾನುಭವಿಗೆ ಇಳಿವಯಸ್ಸು.
ಅಂಕೋಲಾ ಕಾಡಿನ ವನದೇವತೆ, ಕಾಡುಮರಗಳ ಆಪ್ತ ಸಂಗಾತಿ, ಕಾನನ ವಿಶ್ವಕೋಶ ಎಂದೆಲ್ಲ ಕರೆಯಬಹುದಾದ ವ್ಯಕ್ತಿತ್ವ ತುಳಸಿ ಗೌಡ ಅವರದು. ಯಾವ ಸಸ್ಯ ಯಾವ ರೋಗದ ಮದ್ದು, ಯಾವ ಮರ ಯಾವಾಗ ಫಲ ನೀಡುತ್ತದೆ, ಯಾವ ಸಸ್ಯಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬೆಲ್ಲ ವಿವರಗಳನ್ನು ಅನುಭವ ಪಾಠದಿಂದಲೇ ಹೇಳಬಲ್ಲ ಅನಕ್ಷರಸ್ಥೆ ತುಳಸಿ ಗೌಡ ಅರಣ್ಯ ಜ್ಞಾನದ ಅಮೂಲ್ಯ ಆಸ್ತಿ. ಇವರಿಗೆ ಕೇಂದ್ರ ಪರಿಸರ ಪ್ರಶಸ್ತಿ ಬಂತು. ಇವರಿಗೆ ಬಹುದೊಡ್ಡ ವಂಚನೆಯೂ ಈ ಪ್ರಶಸ್ತಿಯ ಹೆಸರಿನಲ್ಲೇ ಆಯ್ತು!?  
ಉತ್ತರ ಕನ್ನಡದ ಅಂಕೋಲಾದಲ್ಲಿ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಬೆಳಸಿಕೊಂಡು ಬಂದ ಹಾಲಕ್ಕಿ ಪರಿವಾರದ ಕೂಸು ತುಳಸಿ ಗೌಡ ಜನಿಸಿದ್ದು ಉಳವರೆಯಲ್ಲಿ(1944). ಯಾವ ಫಲಾಪೇಕ್ಷೆ ಇಲ್ಲದೇ ಸಸ್ಯಗಳ ಪೋಷಣೆಯಲ್ಲಿ ಹೊನ್ನಾಳಿ ವ್ಯಾಪ್ತಿಯಲ್ಲಿ ಅರ್ಧ ಶತಮಾನ ಪೂರೈಸಿದವರಿವರು.
ಇಂಥ ವೃಕ್ಷದೇವತೆಗೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಸೇರಿದಂತೆ ಒಟ್ಟು 13 ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವುಗಳಲ್ಲಿ 'ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ'ವೂ ಒಂದು. ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ವೇಳೆ ಅವರು ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದರು. ಅಂದಿನ ಪರಿಸರ ಸಚಿವೆ ಮೇನಕಾ ಗಾಂಧಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯ ಮೊತ್ತ ಅರ್ಧ ಲಕ್ಷದಷ್ಟಿತ್ತು. ತುಳಸಿ ಗೌಡರ ಕೈಗೆ ಬಂದಿದ್ದು 800 ರು. ಮಾತ್ರ!
'ಧಾರವಾಡದಲ್ಲಿ ನಿಮಗೆ ಪುನಃ ಇದೇ ಪ್ರಶಸ್ತಿಪತ್ರ ನೀಡಲಾಗುವದು. ಅಲ್ಲಿಯವರೆಗೆ ಈ ಹಣ ನಮ್ಮ ಬಳಿ ಇರಲಿ' ಎಂದು ತುಳಸಿ ಗೌಡರ ಮನವೊಲಿಸಿದ ಅಧಿಕಾರಿಗಳು ಪ್ರಶಸ್ತಿ ಮೊತ್ತವನ್ನು ಕಸಿದುಕೊಂಡು ಮಾಯವಾದರು. ಧಾರವಾಡಕ್ಕೆ ಬನ್ನಿ ಎಂದು ವಿಳಾಸ ನೀಡಿದ ಆ ಅಧಿಕಾರಿ, ಇವರು ಹೋಗುವಷ್ಟರಲ್ಲಿ ಧಾರವಾಡದಿಂದ ವರ್ಗಾವಣೆ ಮಾಡಿಸಿಕೊಂಡು ನಾಪತ್ತೆಯಾಗಿದ್ದರು. ಈ ಕುರಿತು ತುಳಸಿ ಗೌಡ ನೀಡಿದ ಅರ್ಜಿಗಳೆಲ್ಲವೂ ಧೂಳು ತಿನ್ನತೊಡಗಿದವು. ಧಾರವಾಡ ಅರಣ್ಯ ಇಲಾಖೆಯ ಸ್ಥಾನಿಕ ಕಛೇರಿಯಲ್ಲಿ ಹಾರಿಕೆಯ ಉತ್ತರ.
ತುಳಸಿ ಗೌಡ ಇಂದಿಗೂ ದಿನಕ್ಕೆ ಎರಡು ಬಾರಿ ಮರಗಿಡಗಳಿಗೆ ನೀರುಣಿಸುತ್ತಾರೆ. ಹೊಸ ಸಸಿ ನೆಟ್ಟು ಅದರೊಂದಿಗೆ ಕಾಲ ಕಳೆಯುತ್ತಾರೆ. ಇನ್ನಾವುದೋ ಕಾಡು ಸಸ್ಯದೊಂದಿಗೆ ಮಾತನಾಡುತ್ತಾರೆ. ಮತ್ತ್ಯಾವದೋ ಮುಳ್ಳಿನ ಗಿಡವನ್ನು ಮುದ್ದಿಸುತ್ತಾರೆ. ಬೀಟೆ, ಬನಾಟೆ, ಗಂಧ, ತೇಗ, ಮತ್ತಿ, ನಂದಿ, ಸಾಗವಾನಿ ಮರಗಳನ್ನು ಪರಿಚಯಿಸಿ ಅವುಗಳ ಮಹತ್ವ ವಿವರಿಸುತ್ತಾರೆ. ಕಾಡಫಲಗಳನ್ನು ನೀಡಿ ಮಿತ್ರರನ್ನು ಬರಮಾಡಿಕೊಳ್ಳುತ್ತಾರೆ.
ಇಂಥ ಅಪರೂಪದ ಪರಿಸರ ಪ್ರೇಮಿಗೆ ಎರಡು ದಶಕ ನಂತರವಾದರೂ ನ್ಯಾಯ ಲಭಿಸಲಿ ಎನ್ನುವುದೇ ಆಶಯ.

- ಅಚ್ಯುತಕುಮಾರ ಯಲ್ಲಾಪುರ
ಚಿತ್ರ: ರಾಘು ಕಾಕರಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments