ಗಿರಿ ಗಿರಿ ಪತ್ತರ್
ಗಿಲೆತ್ತರದ ಗುಡ್ಡದ ಮೇಲಿನಿಂದ ವಸ್ತುವೊಂದನ್ನು ಪ್ರಪಾತದತ್ತ ಎಸೆದರೆ ಆ ವಸ್ತುವು ಗುಡ್ಡದ ಬುಡ ತಲುಪುತ್ತದೆ ಎಂಬ ಉತ್ತರ ಬಂದರೆ ಅದು ಇಲ್ಲಿ ಸುಳ್ಳಾಗುತ್ತದೆ. ನೀವು ಪ್ರಪಾತಕ್ಕೆ ಎಸೆದ ವಸ್ತು ಗಾಳಿಯಲ್ಲಿ ಮೇಲ್ಮುಖವಾಗಿ ತೇಲಲಾರಂಭಿಸಿ ನಿಮಗಿಂತಲೂ ಎತ್ತರ ಸ್ಥಾನದಲ್ಲಿ ಹಾರಾಡುತ್ತದೆ.
ಅಚ್ಚರಿಯಾಯಿತೇ? ಇದೇ ಕಾಳಿ ಕೊಳ್ಳ ಕಣಿವೆ ಗಿರಿ ಗಿರಿ ಪತ್ತರ್ನ ರಹಸ್ಯ. ಇಲ್ಲಿ ಪ್ರಪಾತಕ್ಕೆ ಎಸೆದ ಕೆಲ ವಸ್ತುಗಳು ಎರಡರಷ್ಟು ವೇಗದಲ್ಲಿ ಹಿಂದಿರುಗಿ ಬರುತ್ತವೆ. ಅದು ಗಾಳಿಯ ಸುಳಿಗೆ ಸಿಕ್ಕಿ ಗಿರಿ ಗಿರಿ ಸುತ್ತಲಾರಂಭಿಸುತ್ತದೆ. ವಾಯುವಿನ ಸಂಗೀತಕ್ಕೆ ತಕ್ಕಂತೆ ನರ್ತಿಸುತ್ತದೆ. ಇಂಥ ವೈಶಿಷ್ಟ್ಯಮಯ ತಾಣದ ಸುತ್ತ ಪುರಾವೆಯಿಲ್ಲದ ಹತ್ತು ಹಲವು ಸ್ವಾರಸ್ಯಕರ ಕಥೆಗಳಿವೆ.
ಕಾಳಿಕೊಳ್ಳದ ಪ್ರದೇಶವನ್ನು 'ಬಂದಿ ಬಾಂದ್' ಎಂದು ಕರೆಯಲಾಗುತ್ತಿತ್ತು. ಕೆಳಗೆ ಹರಿಯುತ್ತಿರುವ ನದಿಯಲ್ಲಿ ಮೊಸಳೆಗಳಿರುವುದಾಗಿ ನಂಬಿದ್ದರು ಜನ. ಮೋಸ ವಂಚನೆ ಮಾಡಿದವರನ್ನು ಈ ಪ್ರದೇಶದಿಂದ ಕೆಳಕ್ಕೆ ನೂಕಿ ಮೊಸಳೆಗಳಿಗೆ ಆಹಾರ ನೀಡುವ ಪದ್ಧತಿ ಇತ್ತು ಅಂತಾರೆ ಕೆಲವರು. ಅದೆಷ್ಟೋ ಬಾರಿ ಶಿಕ್ಷೆಗೆ ಗುರಿಯಾಗಿ ಸಾವಿರಾರು ಅಡಿ ಎತ್ತರದಿಂದ ನೂಕಲ್ಪಟ್ಟ ವ್ಯಕ್ತಿಗಳು ಪವಾಡ ಸದೃಶ್ಯವಾಗಿ ಬದುಕಿದರಂತೆ. ಕಣ್ಣಿಗೆ ಬಟ್ಟೆ ಕಟ್ಟಿ ಪ್ರಪಾತಕ್ಕೆ ತಳ್ಳಿದರೂ ಗಾಳಿಯ ಒತ್ತಡಕ್ಕೆ ಸಿಲುಕಿ ನದಿಯ ಮೊಸಳೆಗೆ ಆಹಾರವಾಗದೇ ಬದುಕಿ ಬರುತ್ತಿದ್ದರು ಎನ್ನುವುದು ಒಂದು ಜಾನಪದ ಕಥೆ.
ಮಗದೊಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಗಿರಿ ಗಿರಿ ಪತ್ತರ್ನ ಗುಡ್ಡದ ಮೇಲೆ ನಿಂತು ಪರಿಸರ ಸೌಂದರ್ಯವನ್ನು ವೀಕ್ಷಿಸುತ್ತಿರುವಾಗ ಆಕಸ್ಮಿಕವಾಗಿ ಆತನ ತಲೆಯ ಮೇಲಿದ್ದ ಟೊಪ್ಪಿ ಗುಡ್ಡದಿಂದ ಆಳದ ಕಂದಕದಲ್ಲಿ ಬಿತ್ತು. ಬಿದ್ದ ವೇಗದಲ್ಲಿಯೇ ಅದು ಹಿಂದಿರುಗಿ ಬಂದು ಆತನ ತಲೆಯ ಮೇಲೆ ಕುಳಿತಿತಂತೆ.
ಗಡಿ ಸಂಪರ್ಕ ಬೆಸುಗೆ
ಉತ್ತರಕನ್ನಡ ಜಿಲ್ಲೆಯ ಅಂಬಿಕಾನಗರ ಹಾಗೂ ಯಲ್ಲಾಪುರ ಭಾಗವನ್ನು ಗಿರಿಗಿರಿ ಪತ್ತರ್ ವಿಭಾಗಿಸುತ್ತದೆ. ಗುಡ್ಡಗಳ ನಡುವೆ ಹರಿದ ಕರಿಹೊಳೆಯ ಎಡಭಾಗ ಯಲ್ಲಾಪುರವಾದರೆ, ಬಲಭಾಗ ಅಂಬಿಕಾನಗರ. ಪ್ರಾಕೃತಿಕ ಸೌಂದರ್ಯ ಸವಿಯಲು ಗಿರಿ ಗಿರಿ ಪತ್ತರ್ ಬಳಿಯೇ ಬಸ್ಕಿ ಪತ್ತರ್ ಎಂಬ ಇನ್ನೊಂದು ಪ್ರದೇಶವಿದೆ.
ಹರಿಯುವ ನದಿಗೆ ಅಡ್ಡಲಾಗಿ ಈ ವ್ಯಾಪ್ತಿಯಲ್ಲಿಯೇ ಪವರ್ ಹೌಸ್ ನಿರ್ಮಿಸಿ, ವಿದ್ಯುತ್ ಅನ್ನೂ ತಯಾರಿಸಲಾಗುತ್ತಿದೆ. ದಟ್ಟ ಕಾನನ, ಗುಡ್ಡದಿಂದ ಆವೃತವಾದ ಗಿರಿ ಗಿರಿ ಗ್ರಾಮಕ್ಕೆ ತೆರಳಲು ಕಾಲ್ನಡಿಗೆಗಿಂತ ಯೋಗ್ಯವಾದ ಬೇರೆ ಮಾರ್ಗವಿಲ್ಲ. ಹೇರಳವಾದ ಅರಣ್ಯ ಸಂಪತ್ತು ಇಲ್ಲಿನ ನೈಸರ್ಗಿಕ ಕೊಡುಗೆ. ಸುತ್ತ ಗುಡ್ಡಗಳ ನಡುವೆ ಹಾದುಹೋದ ಕಾಳಿನದಿಯ ಕಣಿವೆ ಪ್ರದೇಶವಿದು. ಹೆಸರಿಗೆ ನಿಲುಕದ ಅಪರಿಚಿತ ವನ್ಯಜೀವಿಗಳ ದರ್ಶನವೂ ಇಲ್ಲಾಗುತ್ತದೆ. ಮಳೆ ಮುಗಿದ ನಂತರ ಚಾರಣ ಕೈಗೊಳ್ಳುವುದು ಉತ್ತಮ.
- ಅಚ್ಯುತಕುಮಾರ ಯಲ್ಲಾಪುರ