ಮಾನವ ನಿರ್ಮಾಣ ಶಿಕ್ಷಣ
ಪ್ರಾಚೀನ ಭಾರತದಲ್ಲಿ ಯಾವುದೇ ಶಾಲಾ-ಕಾಲೇಜು ಶಿಕ್ಷಣ ಪಡೆಯದ ಭಾರತೀಯರು ವಿಶ್ವವನ್ನೇ ಕುಟುಂಬ ವೆಂದು ತಿಳಿದರು. ಅದರಂತೆಯೇ ಕೂಡಿ ಬಾಳಿದರು. ಇದು ಅವರ ವಿಶಾಲ ಜೀವನಶಿಕ್ಷಣಕ್ಕೆ ಸಾಕ್ಷಿ. ಆದರೆ ಆಧುನಿಕವೆಂದು ಭಾವಿಸಿ ನೀಡುವ ಶಿಕ್ಷಣವು ಹಣ ದೋಚುವ ಯಂತ್ರಮಾನವರನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಹೊಸ ಶಿಕ್ಷಣ ಪಡೆದ ಭಾರತೀಯ ಸಾಕ್ಷರರು ಕುಟುಂಬಕ್ಕೆ, ಸಮಾಜಕ್ಕೆ, ದೇಶಕ್ಕೆ ಮತ್ತು ಮಾನವಕುಲಕ್ಕೆ ರಾಕ್ಷಸರಾಗುತ್ತಿರುವ ಸಂಗತಿಯು ದುರಂತವಾದರೂ ಸತ್ಯ. ಇಂದು ಶಿಕ್ಷಣವು ದುಡಿಮೆಯ ಮಾಧ್ಯಮವೂ, ಉದ್ಯಮವೂ ಆಗಿದೆ. ಉನ್ನತ ಶಿಕ್ಷಣವೆಂದರೆ ಉನ್ನತ ಸಂಬಳ ಎಂದರ್ಥವಾಗಿದೆ.
ನಮ್ಮ ಶಿಕ್ಷಣವು ಹೀಗಿರಬೇಕು; ವೇದಾಂತದೊಡನೆ ಮಿಳಿತಗೊಂಡಿರುವ ಪಾಶ್ಚಾತ್ಯ ವಿಜ್ಞಾನ, ಬ್ರಹ್ಮಚರ್ಯವೇ ಆಸರೆಯಾದ ಧ್ಯೇಯ ಮತ್ತು ನಮ್ಮ ಆತ್ಮದಲ್ಲಿ ದೃಢವಾದ ಶ್ರದ್ಧೆ ಮತ್ತು ನಂಬಿಕೆ ಇವು ನಮಗೆ ಬೇಕಾಗಿರುವುದು. ಮನುಷ್ಯನಲ್ಲಿಯೇ ಎಲ್ಲ ಜ್ಞಾನವೂ ಇದೆ ಎಂದು ವೇದಾಂತ ಹೇಳುವುದು. ಚಿಕ್ಕ ಹುಡುಗನಲ್ಲಿ ಕೂಡ ಈ ಜ್ಞಾನ ಇದೆ. ಏನಿದ್ದರೂ ಅದನ್ನು ಜಾಗ್ರತಗೊಳಿಸಬೇಕು ಅಷ್ಟೆ. ಶಿಕ್ಷಕರ ಕೆಲಸ ಇಷ್ಟು ಮಾತ್ರವೇ ಆಗಿದೆ.
ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪುಗೊಳ್ಳುವುದೊ, ಮನಃಶಕ್ತಿ ವೃದ್ಧಿಯಾಗುವುದೊ, ಬುದ್ಧಿ ವಿಕಾಸಗೊಳ್ಳುವುದೊ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತುಕೊಳ್ಳಬಲ್ಲೆವೊ ಅಂತಹ ಶಿಕ್ಷಣ ನಮಗೆ ಅವಶ್ಯಕ.
-ಆನಂದ ಎಸ್.ಎನ್.