ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಲಿಷ್ಠರದ್ದೇ ಪ್ರಾಬಲ್ಯ!

Vishwanath S
Updated On : 10 May 2013, 1:17 am

ಕೊಬ್ಬಿನ ಬಗ್ಗೆ ಹೇಳುತ್ತಿದ್ದೆ. ಕೊಬ್ಬಿನಲ್ಲಿ ದೇಹಕ್ಕೆ ಒಳ್ಳೆಯದು ಮಾಡುವ ಮತ್ತು ಕೆಟ್ಟದ್ದು ಮಾಡುವ ಎರಡೂ ಬಗೆಯ ಕೊಬ್ಬುಗಳಿವೆ ಎಂದಾಗ ಕೆಲವರು 'ಹೀಗೂ ಉಂಟಾ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದು ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ.
ನಾವು ಕೊಬ್ಬಿನ ಅಂಶವಿರುವ ಆಹಾರ ಸೇವಿಸುತ್ತಿದ್ದಂತೆಯೇ ನಮ್ಮ ಅನುಭವಕ್ಕೆ ಬಾರದೇ ಅದರ ಪರಿಣಾಮ ಆರಂಭವಾಗುತ್ತದೆ. ಶರೀರದ ಕೋಶಗಳಲ್ಲಿರುವ ಅನೇಕ ಸೂಕ್ಷ್ಮಾತಿಸೂಕ್ಷ್ಮ ಸಂಯೋಜನೆಗಳ ಮೇಲೆ ಕೊಬ್ಬು ನೇರವಾಗಿ ತನ್ನ ಕಾರ್ಯ ಆರಂಭಿಸುತ್ತದೆ. ಶರೀರಕ್ಕೆ ಅನೇಕ ಮೂಲಗಳಿಂದ ಕೊಬ್ಬು ಸಿಗುತ್ತದೆ. ಅದನ್ನೇ ಮೂಲವಾಗಿಟ್ಟುಕೊಂಡು ಕೊಬ್ಬಿನಲ್ಲಿ ಮುಖ್ಯವಾಗಿ ಎರಡು ವಿಧಗಳನ್ನು ಗುರುತಿಸಲಾಗಿದೆ. ಒಂದು: ಒಮೇಗಾ- 3, ಎರಡು: ಒಮೇಗಾ- 6. ಇದರಲ್ಲಿ ಮೊದಲನೇಯದು ಮೀನು ಮತ್ತಿತರ ಸಮುದ್ರ ಜೀವಿಗಳಿಂದ ಹಾಗೂ ಬೆರಳೆಣಿಕೆಯ ಸಸ್ಯಗಳಿಂದ ಸಿಗುತ್ತದೆ. ಒಮೇಗಾ- 6 ಪ್ರಮುಖವಾಗಿ ಸಸ್ಯಜನ್ಯವಾದದ್ದು. ಕುಸುಂಬೆ, ಕಾರ್ನ್, ಸೂರ್ಯಕಾಂತಿ ಎಣ್ಣೆಗಳಲ್ಲಿ ಇರುವುದು ಇದೇ ಮಾದರಿಯ ಕೊಬ್ಬು. ಸಸ್ಯಾಹಾರಿ ಪ್ರಾಣಿಗಳ ಶರೀರದಲ್ಲಿಯೂ ಒಮೇಗಾ- 6 ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಮಾನವ ಅಂಥ ಪ್ರಾಣಿಗಳ ಮಾಂಸವನ್ನು ಸೇವನೆ ಮಾಡಿದಾಗ ಆತನ ಶರೀರದೊಳಕ್ಕೆ ಸೇರಿಕೊಳ್ಳುವುದೂ ಇದೇ ಬಗೆಯ ಕೊಬ್ಬು. ಒಮೇಗಾ- 6 ರಕ್ತ ದಪ್ಪಗಾಗುವಂತೆ ಮಾಡುವುದರ ಜತೆಗೆ, ರಕ್ತನಾಳಗಳನ್ನು ಕುಗ್ಗಿಸುತ್ತದೆ. ಇಂಥ ಕೊಬ್ಬು ಸೇವಿಸಿದಾಗ ಒಮ್ಮೊಮ್ಮೆ ಉರಿಯ ಅನುಭವ ಆಗುವುದೂ ಉಂಟು. ಇದಕ್ಕೆ ವಿರುದ್ಧವಾಗಿ ಒಮೇಗಾ- 3 ರಕ್ತ ಸಂಚಾರ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಶರೀರಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ.
ನಾವು ಒಂದೇ ಬಗೆಯ ಆಹಾರವನ್ನಂತೂ ಸೇವಿಸುವುದಿಲ್ಲವಲ್ಲ. ಹಾಗೆ ಮಾಡಲೂಬಾರದು ಬಿಡಿ. ಆಹಾರದಲ್ಲಿ ವೈವಿಧ್ಯ ಇರಲೇಬೇಕು. ಆದರೆ ಅದು ಆರೋಗ್ಯಕ್ಕೆ ಹಾನಿಯಾಗುವಂತಿರಬಾರದು ಅಷ್ಟೆ. ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ದೇಹಪ್ರಕೃತಿ ಬಗ್ಗೆ ತಕ್ಕಮಟ್ಟಿನ ಅರಿವು ಇದ್ದೇ ಇರುತ್ತದೆ. ಅದಕ್ಕೆ ಅನುಗುಣವಾದ ಆಹಾರ ಸೇವಿಸುವುದನ್ನು ರೂಢಿಸಿಕೊಂಡರಾಯಿತು ಅಷ್ಟೆ. ಇರಲಿ, ವಿಷಯ ಏನೆಂದರೆ ನಾವು ನಿತ್ಯ ಸೇವಿಸುವ ಆಹಾರದಲ್ಲಿ ಒಮೇಗಾ- 3 ಮತ್ತು ಒಮೇಗಾ- 6 ಎರಡೂ ಬಗೆಯ ಕೊಬ್ಬುಗಳಿರುತ್ತವೆ. ಸಹಜವಾಗಿಯೇ ಶರೀರದಲ್ಲಿರುವ ಕೋಶಗಳ ಮೇಲೆ ಅವು ತದ್ವಿರುದ್ಧ ಪ್ರಭಾವ ಬೀರುತ್ತಿರುತ್ತವೆ. ಪರಸ್ಪರ ವಿರುದ್ಧ ನಿರ್ದೇಶನಗಳು ಬಂದಾಗ ನಾವೂ ಕಂಗೆಡುವುದಿಲ್ಲವೆ? ಇಬ್ಬರ ಮಾತೂ ಮೀರುವಂತಿಲ್ಲ. ಹಾಗಂತ ಇಬ್ಬರ ಸೂಚನೆಗಳನ್ನೂ ಪಾಲಿಸುವಂತೆಯೂ ಇಲ್ಲ. ಕೊನೆಗೆ ಯಾರು ಬಲಿಷ್ಠರು ಎನ್ನುವುದನ್ನು ಆಧರಿಸಿ ಮುಂದಡಿ ಇಡುತ್ತೇವೆ. ಕೋಶಗಳ ಸ್ಥಿತಿಯೂ ಹಾಗೆಯೇ ಆಗುತ್ತದೆ. ನಮ್ಮ ಆಹಾರದಲ್ಲಿರುವ ಕೊಬ್ಬಿನ ಪ್ರಮಾಣ ಆಧರಿಸಿ ಆರೋಗ್ಯ, ಅನಾರೋಗ್ಯದ ನಿರ್ಧಾರವಾಗುತ್ತದೆ. ಯಾವ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆಯೋ ಅದೇ ಪ್ರಭಾವ ಬೀರುವುದು!

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement