ಬೂದಿಯಿಂದೆದ್ದ ಸತ್ಯ
ಹೇರಳವಾಗಿ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ತುಮಕೂರು ಒಂದು. ನಾರು ಸುಲಿದ ಖಾಲಿ ತೆಂಗಿನ ಚಿಪ್ಪು ಕೂಡಾ ರೈತರಿಗೆ...
ಹೇರಳವಾಗಿ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ತುಮಕೂರು ಒಂದು. ನಾರು ಸುಲಿದ ಖಾಲಿ ತೆಂಗಿನ ಚಿಪ್ಪು ಕೂಡಾ ರೈತರಿಗೆ ಆದಾಯ ತರುವ ಒಂದು ಮೂಲ. ಈ ಚಿಪ್ಪುಗಳನ್ನು ಕೆಲವರು ರೈತರಿಂದ ಖರೀದಿಸಿ ಅವುಗಳನ್ನು ಸುಟ್ಟು ಇದ್ದಿಲು ಮಾಡಿ ಮಾರಿ ಜೀವನ ನಡೆಸುತ್ತಿದ್ದರು.
ಹಾಗೆ ಇದ್ದಿಲು ಮಾಡಲು ಶೇಖರಿಸಿಟ್ಟಿದ್ದ ಹತ್ತಾರು ಲೋಡ್ ತೆಂಗಿನ ಚಿಪ್ಪಿನ ರಾಶಿ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲೂ ಇತ್ತು. ನೂರಾರು ಲೋಡ್ ಚಿಪ್ಪು ಶೇಖರಿಸಿ ಬೇಸಿಗೆಯಲ್ಲಿ ಅವಕ್ಕೆ ಬೆಂಕಿ ಕೊಟ್ಟು ಹೊಗೆ ಹೊರಗೆ ಬರದ ರೀತಿಯಲ್ಲಿ ಇದ್ದಿಲು ಮಾಡುವ ಕಾರ್ಯ ತುಂಬಾ ಆಸಕ್ತಿಕರವಾಗಿರುತ್ತದೆ. ಅದೊಂದು ಕೈಗಾರಿಕೆ ರೀತಿಯಲ್ಲಿದ್ದು ಹತ್ತಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ಹಾಗೆ ಶೇಖರಿಸಿಟ್ಟಿದ್ದ ಬೃಹತ್ ರಾಶಿಗೆ ಒಂದು ದಿನ ಯಾರೋ ಕಿಡಿಗೇಡಿಗಳಿಂದ ಬೆಂಕಿ ಬಿತ್ತು. ಮೊದಲೇ ಒಣಗಿದ್ದ ಚಿಪ್ಪು, ಬೇಸಿಗೆ ಕಾಲ ಬೇರೆ, ಬೆಂಕಿಯ ಕೆನ್ನಾಲಿಗೆ ಸುಮಾರು ದೂರದ ವರೆಗೆ ವ್ಯಾಪಿಸಿತು.
ನಿದ್ದೆಯ ಮಂಪರಿನಲ್ಲಿದ್ದ ಗ್ರಾಮಸ್ಥರು ಬೆಂಕಿಯ ಜ್ವಾಲೆ ಕಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಓಡಿ ಬಂದ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿ ಅಲ್ಪ ಸ್ವಲ್ಪ ತೆಂಗಿನ ಚಿಪ್ಪನ್ನು ಉಳಿಸಿತು. ಮಾರನೇ ದಿನ ಬೆಳಗಾಗುತ್ತಲೇ ಚಿಪ್ಪಿನ ರಾಶಿಗೆ ಬೆಂಕಿ ಬಿದ್ದ ಕಾರಣಗಳನ್ನು ಹುಡುಕಲು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಬೃಹದಾಕಾರವಾಗಿದ್ದ ಚಿಪ್ಪಿನ ಬೂದಿ ಮತ್ತು ಕರಕಲಾಗಿದ್ದ ಇದ್ದಿಲನ್ನು ಕೆದಕುತ್ತಿದ್ದಾಗ ಅವರಿಗೆ ಒಂದು ಶಾಕ್ ಕಾದಿತ್ತು. ಬೂದಿಯ ರಾಶಿಯಲ್ಲಿ ಸುಟ್ಟು ಕರಕಲಾದ ಯಾವುದೋ ಪ್ರಾಣಿಯ ದೇಹ ಸಿಕ್ಕಿತು.
ಆತಂಕಗೊಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪೂರ್ಣ ಸುಟ್ಟುಹೋಗಿದ್ದ ದೇಹವನ್ನು ನೋಡಿ ಕರಡಿ ಇರಬಹುದು ಎಂದು ಶಂಕಿಸಿದರು. ಯಾವುದಕ್ಕೂ ಇರಲಿ ಎಂದು ವೈದ್ಯರನ್ನು ಕರೆಸಿ ಶವ ಪರೀಕ್ಷೆ ಮಾಡಲು ಕೋರಿದರು. ಸಂಜೆ ವೇಳೆ ಬಂದ ವೈದ್ಯರು ಕಾಟಾಚಾರಕ್ಕೆ ಎಂಬಂತೆ ಶವಪರೀಕ್ಷೆ ನಡೆಸಿದಾಗ ಆತಂಕಕಾರಿ ವಿಷಯವೊಂದು ಹೊರಬಿತ್ತು. ಅದು ಕರಡಿಯ ದೇಹವಾಗಿರದೆ ಮನುಷ್ಯನ ಮೃತದೇಹವಾಗಿತ್ತು! ಸುಮಾರು 30 ವರ್ಷ ವಯಸ್ಸಿನ ಗಂಡಸಿನ ಶವ ಅದಾಗಿದೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದರು. ಆವರೆಗೆ ಯಾವುದೋ ಪ್ರಾಣಿಯ ದೇಹವೆಂದೇ ನಿರಾತಂಕದಿಂದ ಇದ್ದ ಪೊಲೀಸರು ಮತ್ತು ಗ್ರಾಮಸ್ಥರಿಗೆ ಈಗ ಪೀಕಲಾಟ ಆರಂಭವಾಗಿತ್ತು.
ದೊರೆತಿರುವುದು ಮನುಷ್ಯನ ಶವ ಎಂದು ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚಿಪ್ಪಿನ ಫ್ಯಾಕ್ಟರಿಯ ಒಂದು ಅಂಗುಲವನ್ನೂ ಬಿಡದೆ ಶೋಧಿಸಿದರು. ಒಂದು ಜೊತೆ ಚಪ್ಪಲಿ ಮತ್ತು ಒಂದು ಕರವಸ್ತ್ರ ಸ್ಥಳದಲ್ಲಿ ದೊರೆತವು. ಅವನ್ನು ಅಮಾನತ್ತು ಮಾಡಿಕೊಂಡು ಶವದ ವಾರಸುದಾರರಿಲ್ಲದ ಕಾರಣ ಪೊಲೀಸರೇ ಶವಸಂಸ್ಕಾರ ಮಾಡಿ ಮುಗಿಸಿದರು.
ಬೆಂಕಿ ಬಿದ್ದ ತೆಂಗಿನ ಚಿಪ್ಪಿನ ಫ್ಯಾಕ್ಟರಿಯಲ್ಲಿ ದೊರೆತಿರುವುದು ಮನುಷ್ಯರ ಮೃತದೇಹ ಎಂದು ತಿಳಿದು ಸ್ಥಳಕ್ಕೆ ಖಾಸಗಿ ಸುದ್ದಿ ವಾಹಿನಿಯ ಕ್ರೈಂ ಪತ್ರಕರ್ತರ ತಂಡ ಭೇಟಿ ನೀಡಿತು. ಅಲ್ಲಿನ ಪರಿಸ್ಥಿತಿಯ ಚಿತ್ರೀಕರಣ ನಡೆಸಿತು. ಆದರೆ ಸತ್ತವರು ಯಾರು? ಅದು ಆತ್ಮಹತ್ಯೆಯೇ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ತಂದು ಚಿಪ್ಪಿನ ರಾಶಿಗೆ ಹಾಕಿ ಬೆಂಚಿ ಹಚ್ಚಿದರೆ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಲಭ್ಯವಿಲ್ಲದ ಕಾರಣ ಅದನ್ನು ಪ್ರಸಾರ ಮಾಡಲು ಸಾಧ್ಯವಾಗಲಿಲ್ಲ.
ಅಕ್ಕಪಕ್ಕದ ಪೊಲೀಸ್ ಠಾಣೆಗಳಿಗೆ ಸಂದೇಶ ನೀಡಿ ಸುಮಾರು 30 ವರ್ಷದ ಗಂಡಸು ಕಾಣೆಯಾದ ಬಗ್ಗೆ ದೂರು ದಾಖಲಾಗಾಗಿದೆಯೇ ಎಂದು ಪರಿಶೀಲಿಸಿದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದೂ ಕೂಡಾ ಪತ್ತೆಯಾಗದ ಪ್ರಕರಣಗಳ ಪಟ್ಟಿಯಲ್ಲಿ ಸೇರುವ ಪ್ರಕರಣ (ಗಾನ್ ಕೇಸ್) ಎಂದು ಭಾವಿಸಿದ ಪೊಲೀಸರು ಒಂದು ವಾರ ಕಳೆಯುವಷ್ಟರಲ್ಲಿ ಆ ಪ್ರಕರಣ ಮರೆತು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು.
ಅದೊಂದು ದಿನ ಮಧ್ಯಾಹ್ನ ಸುಮಾರು 25 ವರ್ಷದ ಹೆಂಗಸೊಬ್ಬಳು ಪೊಲೀಸ್ ಠಾಣೆಗೆ ಬಂದು ತನ್ನ ಅಣ್ಣ ಒಂದು ವಾರದಿಂದ ಕಾಣೆಯಾಗಿದ್ದಾರೆ ಎಂದು ದೂರು ನೀಡಿದರು. ರೈಟರ್ ದೂರು ಬರೆದುಕೊಳ್ಳುವಾಗ ಕಾಣೆಯಾದ ವ್ಯಕ್ತಿಯ ಮುಖಚಹರೆ, ಬಣ್ಣ, ಎತ್ತರ, ಧರಿಸಿದ್ದ ಬಟ್ಟೆ ಇತ್ಯಾದಿ ಮಾಹಿತಿ ಪಡೆದು ದೂರಿನಲ್ಲಿ ದಾಖಲಿಸಿದರು. ನಂತರ ಅದನ್ನು ಇನ್ಸ್ಪೆಕ್ಟರ್ಗೆ ತೋರಿಸಿದರು. ಅದನ್ನು ಓದಿದ ಇನ್ಸ್ಪೆಕ್ಟರ್ ತಲೆಯಲ್ಲಿ ಒಂದು ಮಿಂಚು ಹೊಳೆಯಿತು.
ಕೂಡಲೇ ಅಲ್ಲಿದ್ದ ಸೆಂಟ್ರಿಯನ್ನು ಕರೆದು ಚಿಪ್ಪಿನ ಫ್ಯಾಕ್ಟರಿಯಲ್ಲಿ ದೊರೆತ ಚಪ್ಪಲಿ ಮತ್ತು ಕರವಸ್ತ್ರವನ್ನು ತರುವಂತೆ ಸೂಚಿಸಿದರು. ನಂತರ ಆಕೆಯನ್ನು ಕರೆಸಿ, ಈ ಚಪ್ಪಲಿ ಯಾರದು ಗುರ್ತಿಸುತ್ತೀರಾ ಎಂದು ಪ್ರಶ್ನಿಸುವ ಮೊದಲೇ ಮಾತನಾಡಿದ ಆಕೆ, ಇವು ನಮ್ಮ ಅಣ್ಣನದ್ದು, ನಿಮಗೆ ಎಲ್ಲಿ ಸಿಕ್ಕಿತು ಎಂದು ಪ್ರಶ್ನಿಸಿದರು.
ಮೃತಪಟ್ಟ ವ್ಯಕ್ತಿಯ ಹೆಸರು ರವಿ. ಆತ ತುರುವೇಕೆರೆ ಸಮೀಪದ ಒಂದು ಹಳ್ಳಿಯವನಾಗಿದ್ದು, ತುರುವೇಕೆರೆಯಲ್ಲಿ ಮದುವೆ ಆಗಿದ್ದ. ಗಂಡ ಹೆಂಡತಿ ಮಧ್ಯೆ ಜಗಳ ನಡೆದು ಹೆಂಡತಿ ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದಳು. ಅದೊಂದು ದಿನ ಹೆಂಡತಿಗೆ ಬುದ್ಧಿ ಹೇಳಿ ಕರೆತರುವುದಾಗಿ ಹೋದ ರವಿ ಮತ್ತೆ ವಾಪಸ್ ಮನೆಗೆ ಬಂದಿರಲಿಲ್ಲ. ತವರು ಮನೆಗೆ ಹೋಗಿದ್ದ ಅತ್ತಿಗೆ ಸುನೀತಾಳನ್ನು ವಿಚಾರಿಸಲು ಇಂದು ತಾನು ಬಂದಿದ್ದೆ. ಅಲ್ಲಿ ಅಣ್ಣ ಅತ್ತಿಗೆ ಇಬ್ಬರೂ ಇಲ್ಲದ ಕಾರಣ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿ ಆಕೆ ವಿವರಿಸಿದರು.
ಮೃತ ವ್ಯಕ್ತಿ ಯಾರು ಎಂಬುದು ತಿಳಿದು, ಸಾವಿಗೆ ಕಾರಣ ಹುಡುಕುವ ಸವಾಲು ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಹೆಗಲೇರಿತು. ಚಿಪ್ಪಿನ ಫ್ಯಾಕ್ಟರಿಯಲ್ಲಿ ದೊರೆತಿರುವುದು ಒಂದೇ ಶವ ಆದ ಕಾರಣ ಆತನ ಹೆಂಡತಿ ಇನ್ನೂ ಜೀವಂತವಿದ್ದಾರೆ. ಈತನ ಸಾವಿಗೂ ಆಕೆ ಕಾಣೆಯಾಗಿರುವುದಕ್ಕೂ ಏನಾದರೂ ಸಂಬಂಧವಿರಬಹುದೇ ಎಂದು ಇನ್ಸ್ಪೆಕ್ಟರ್ ಯೋಚಿಸಿದರು. ಆದರೆ ಒಂದು ತಿಂಗಳು ಕಳೆದರೂ ಆಕೆಯ ಸುಳಿವಿಲ್ಲ.
ಅದೊಂದು ದಿನ ಮುಸ್ಲಿಂ ಹೆಂಗಸೊಬ್ಬರು ತನ್ನ ಗಂಡ ನಾಪತ್ತೆಯಾಗಿರುವುದಾಗಿ ಬಂದು ದೂರು ನೀಡಿದರು. ಕಾಣೆಯಾದ ನಾಸೀರ್ ಎಂಬಾತ ಬಸ್ಸು ನಿಲ್ದಾಣದ ಪಕ್ಕದಲ್ಲಿ ಒಂದು ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದು, ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಕೆಲಸದ ಮೇಲೆ ಹೋಗಿರಬಹುದು, ಬರ್ತಾರೆ ಅಂತ ಕಾದು ನೋಡಿದೆವು. ಆದರೆ ತಿಂಗಳಾದರೂ ಆತ ಬರಲಿಲ್ಲ ಎಂದಾಕೆ ಕಣ್ಣೀರಿಟ್ಟಳು. ನಾಸೀರ್ ನಾಪತ್ತೆಯಾದ ದಿನಾಂಕವು, ತೆಂಗಿನ ಚಿಪ್ಪಿಗೆ ಬೆಂಕಿ ಬಿದ್ದ ದಿನಾಂಕವಾಗಿರುವುದು ಇನ್ಸ್ಪೆಕ್ಟರ್ ಗಮನಕ್ಕೆ ಬಂತು. ಈ ಸಾವಿಗೂ ನಾಸೀರ್ ನಾಪತ್ತೆಗೂ ಮತ್ತು ಸುನೀತಾ ನಾಪತ್ತೆಗೂ ಸಂಬಂಧವಿರಬಹುದೆ? ಹಾಗೊಂದು ಅನುಮಾನ ಇನ್ಸ್ಪೆಕ್ಟರ್ರನ್ನು ಕಾಡಿದ್ದೇ ತಡ ಕಾಣೆಯಾದ ಸುನೀತಾ, ನಾಸೀರ್ಗಾಗಿ ಹುಡುಕಾಟ ಆರಂಭಿಸಿದರು.
ಯಾವುದೇ ಒಂದು ಪ್ರಕರಣದ ಚಿತ್ರೀಕರಣ ಮಾಡಿದ ನಂತರ ಅದು ಪ್ರಸಾರವಾಗದಿದ್ದರೆ ಪತ್ರಕರ್ತನಿಗೆ ಬೇಸರ ಕಾಡಲಾರಂಭಿಸುತ್ತದೆ. ಇಲ್ಲೂ ಅದೇ ಆಯಿತು. ಚಿಪ್ಪಿನ ಫ್ಯಾಕ್ಟರಿಯಲ್ಲಿ ಹೆಣ ದೊರೆತು ತಿಂಗಳ ಮೇಲಾದರೂ ಅದಕ್ಕೆ ಸಂಬಂಧಿಸಿದ ಸ್ಟೋರಿ ಪ್ರಸಾರವಾಗಿರಲಿಲ್ಲ. ಈ ಬಗ್ಗೆ ಇನ್ಸ್ಪೆಕ್ಟರ್ ಬಳಿ ಚರ್ಚಿಸಿದಾಗ ನಾಸೀರ್ ನಾಪತ್ತೆ ಪ್ರಕರಣದ ಬಗ್ಗೆ ಹೇಳಿದರು. ಕಾಣೆಯಾದ ಸುನೀತಾ ಮತ್ತು ನಾಸೀರ್ ಭಾವಚಿತ್ರಗಳನ್ನು ಪೊಲೀಸರಿಂದ ಪಡೆದ ಪತ್ರಕರ್ತ ಚಿಪ್ಪಿನ ಫ್ಯಾಕ್ಟರಿಯಲ್ಲಿ ಶವ ದೊರೆತ ದಿನದಿಂದಲೇ ಇವರಿಬ್ಬರೂ ಕಾಣೆಯಗಿದ್ದು, ಈ ಸಾವಿಗೂ ಮತ್ತು ಅವರು ಕಾಣೆಯಾಗಿರುವುದಕ್ಕೂ ಸಂಬಂಧವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿದ.
ರಾತ್ರಿ 10 ಗಂಟೆಗೆ ಕಾಣೆಯಾದ ನಾಸೀರ್ ಮತ್ತು ಸುನೀತಾಳ ಭಾವಚಿತ್ರಗಳು ಕ್ರೈಂ ಕಾರ್ಯಕ್ರಮದಲ್ಲಿ ಪ್ರಸಾರವಾಯಿತು. ಬೆಳಗ್ಗೆ 7 ಗಂಟೆಗೆ ತುರುವೇಕೆರೆ ಪೊಲೀಸ್ ಠಾಣೆಗೆ ಒಂದು ದೂರವಾಣಿ ಕರೆ ಬಂತು! ರಾತ್ರಿ ಟಿವಿಯಲ್ಲಿ ತೋರಿಸಿದ ಇಬ್ಬರೂ ತಮ್ಮ ಮನೆಯಲ್ಲೇ ಬಾಡಿಗೆಗೆ ಇದ್ದಾರೆಂದೂ ಈಗಲೂ ಅವರು ಮನೆಯಲ್ಲೇ ಇದ್ದು, ಬೇಗ ಬಂದು ಅವರನ್ನು ವಶಕ್ಕೆ ಪಡೆಯುವಂತೆ ಕರೆ ಮಾಡಿದ ವ್ಯಕ್ತಿ ಕೋರಿದ್ದ. ಮಾಹಿತಿ ಬಂದ ಕೂಡಲೇ ಹರಪನಹಳ್ಳಿಗೆ ಪೊಲೀಸರು ಪ್ರಯಾಣ ಬೆಳೆಸಿದರು.
ಹರಪನಹಳ್ಳಿಗೆ ಪೊಲೀಸರು ತಲುಪವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಗಿತ್ತು. ಬೆಳಗ್ಗೆ ಕರೆ ಮಾಡಿದ ವ್ಯಕ್ತಿ ನೀಡಿದ ವಿಳಾಸ ಹುಡುಕಿ ಹೋದಾಗ ಮನೆಯ ಯಜಮಾನ ತಾನು ಬೆಳಗಿನಿಂದ ಇಲ್ಲಿಯೇ ಕಾವಲಿರುವುದಾಗಿ ಅವರು ಮನೆಯಲ್ಲೇ ಇದ್ದು ಹೊರಗೆ ಬಂದಿಲ್ಲ ಎಂಬ ಸುದ್ದಿ ಮುಟ್ಟಿಸಿದ. ಇದರಿಂದ ನಿರಾಳರಾದ ಪೊಲೀಸರು ಮನೆಯ ಬಾಗಿಲು ತಟ್ಟಿದರು. ಯಾರೂ ಬಾಗಿಲು ತೆರೆಯದಿದ್ದಾಗ ಒಡೆದು ಒಳಪ್ರವೇಶಿಸಿದ ಪೊಲೀಸರಿಗೆ ಒಳಗಿನ ದೃಶ್ಯ ಕಂಡು ದಂಗು ಬಡಿದಂತಾಗಿತ್ತು.
ರಾತ್ರಿ ಕ್ರೈಂ ಕಾರ್ಯಕ್ರಮದಲ್ಲಿ ಸುನೀತಾ ಮತ್ತು ನಾಸೀರ್ ಫೋಟೋಗಳನ್ನು ತೋರಿಸಿದಾಗ ಹರಪನಹಳ್ಳಿಯಲ್ಲಿ ಟಿವಿ ನೋಡುತ್ತಿದ್ದ ಮೂರನೇ ಕ್ಲಾಸ್ ಮಗುವೊಂದು ಅವರನ್ನು ಗುರ್ತಿಸಿದ್ದಾಳೆ. ಅಮ್ಮಾ ನಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ಆಂಟಿ ಮತ್ತು ಅಂಕಲ್ ಟಿವಿಯಲ್ಲಿ ಬರುತ್ತಿದ್ದಾರೆ ಎಂದು ಕೂಗಿದಳು. ಇದನ್ನು ಕೇಳಿದ ಮನೆಯ ಯಜಮಾನ ಟಿವಿ ನೋಡಿದರು. ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾರನೇ ದಿನ ಪೊಲೀಸರಿಗೆ ಫೋನ್ ಮಾಡಿದ್ದರು.
ಆದರೆ ಅದಕ್ಕೂ ಮೊದಲು ರಾತ್ರಿ ಟಿವಿ ನೋಡಿದ ಮಗು ಬೆಳಗ್ಗೆ ಎದ್ದ ಕೂಡಲೇ ಹೋಗಿ ಸುನೀತಾಗೆ ಹೇಳಿದ್ದಳು, 'ಆಂಟಿ ರಾತ್ರಿ ಟಿವಿಯಲ್ಲಿ ನಿಮ್ಮ ಮತ್ತು ಅಂಕಲ್ ಫೋಟೋ ತೋರಿಸಿದರು' ಎಂದು. ಇದನ್ನು ಕೇಳಿದ ಸುನೀತಾ ಮನೆ ಒಳಗೆ ಹೋಗಿ ನಾಸೀರ್ಗೆ ವಿಷಯ ತಿಳಿಸಿದ್ದಾಳೆ. ಯಾರಿಗೂ ತಿಳಿಯುವುದಿಲ್ಲ ಎಂದು ನಂಬಿದ್ದರೂ ಪೊಲೀಸರು ಬೆನ್ನು ಬಿದ್ದಿದ್ದಾರೆ ಎಂಬುದನ್ನು ಅರಿತ ಅವರಿಬ್ಬರೂ ನಾವಿನ್ನು ತಪ್ಪಿಸಿಕೊಳ್ಳುವುದಕ್ಕಿಂತ ಸಾಯುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಲ್ಲಿ ಸುನೀತಾ ನೀಡಿದ ಮರಣೋತ್ತರ ಹೇಳಿಕೆ ಹೀಗಿತ್ತು: ತನಗೆ ಮತ್ತು ನಾಸೀರ್ಗೆ ಮದುವೆಗೆ ಮೊದಲಿನಿಂದಲೂ ಅಕ್ರಮ ಸಂಬಂಧ ಇತ್ತು. ಅದೇ ಕಾರಣಕ್ಕೆ ಗಂಡನನ್ನು ಬಿಟ್ಟು ಬಂದಿದ್ದೆ. ನಂತರವೂ ಗಂಡ ಬಂದು ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದ ಕಾರಣ ಆತನನ್ನು ಸಾಯಿಸುವುದೊಂದೇ ದಾರಿ ಎಂಬ ತೀರ್ಮಾನಕ್ಕೆ ಬಂದೆವು. ಅಂದು ಊರಿಗೆ ಬಂದಿದ್ದ ಗಂಡನಿಗೆ ಮನೆಗೆ ಬರುವುದಾಗಿ, ಸಂಜೆ ನಂತರ ಹೊರಡೋಣವೆಂದೂ ಹೇಳಿ ಅತ್ತ ಸಿದ್ಧವಾಗಿರುವಂತೆ ನಾಸೀರ್ಗೆ ತಿಳಿಸಿದ್ದೆ. ಕತ್ತಲಾದ ಕೂಡಲೇ ಗಂಡನ ಮನೆಗೆ ಹೋಗುವವಳಂತೆ ಆತನ ಹಿಂದೆಯೇ ಬಂದೆ. ಊರಿನ ಹೊರಗೆ ಬರುತ್ತಲೇ ನಾಸೀರ್ ಮರೆಯಿಂದ ಆತನ ಮೇಲೆರಗಿ ಹಗ್ಗದಿಂದ ಕುತ್ತಿಗೆ ಬಿಗಿದು ಸಾಯಿಸಿದ. ಶವ ಹೊರಗಿದ್ದರೆ ಅನುಮಾನ ಬರುತ್ತದೆ, ಚಿಪ್ಪಿನ ರಾಶಿಯಲ್ಲಿ ಹಾಕಿ ಬೆಂಕಿ ಇಟ್ಟರೆ ಕಾಣುವುದಿಲ್ಲ ಎಂದು ಯೋಚಿಸಿ ಹಾಗೇ ಮಾಡಿದೆವು ಎಂದು ಹೇಳಿ ಸುನೀತಾ ಕೊನೆಯುಸಿರು ಎಳೆದಳು. ಈಕೆಗಿಂತ ಮೊದಲೇ ನಾಸೀರ್ ಸಾವನ್ನಪ್ಪಿದ್ದ.
ಗಂಡನನ್ನು ಕೊಲೆ ಮಾಡಿದ ಸುನೀತಾ ಮತ್ತು ಹೆಂಡತಿಗೆ ಮೋಸ ಮಾಡಿ ಕೊಲೆಯಲ್ಲಿ ಭಾಗಿಯಾದ ನಾಸೀರ್ ಇಬ್ಬರೂ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದಾಗ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಹೇಳಿದ ಮಾತು ಏನು ಗೊತ್ತಾ? 'ಅವರು ಮಾಡಿದ ಪಾಪ ಅವರೇ ಅನುಭವಿಸಬೇಕು. ಒಂದು ವೇಳೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ಆರೋಪ ಸಾಬೀತು ಮಾಡಿದ್ದರೂ ಅವರಿಗೆ ಮರಣದಂಡನೆ ಆಗುತ್ತಿತ್ತೊ ಇಲ್ಲವೋ ಆದರೆ ಆ ದೇವರೇ ಅವರಿಗೆ ಮರಣದಂಡನೆ ವಿಧಿಸಿದ್ದಾನೆ'.
-ಅಶ್ವತ್ಥನಾರಾಯಣ್ ಎಲ್.
sathyajns@gmail.com