ಗೆದ್ದವರೇ ಹಣೆಬರಹ ಬರೆಯುತ್ತಾರೆ!
ಇತ್ತೀಚೆಗೆ ಅಮೆರಿಕ, ಫ್ರಾನ್ಸ್, ಜಪಾನ್, ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಕೊಬ್ಬಿನ ಕುರಿತಂತೆ ಸಮೀಕ್ಷೆಯೊಂದು ನಡೆಯಿತು. ಅಮೇರಿಕನ್ನರ ಆಹಾರ ಸೇವನೆಯಲ್ಲಿ ಕೊಬ್ಬಿನ ಅನುಪಾತ ಕಳವಳಕಾರಿ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ಅವರು ನಿತ್ಯವೂ ಒಮೇಗಾ-3ಗಿಂತ 10ರಿಂದ 15 ಪಟ್ಟು ಅಧಿಕ ಪ್ರಮಾಣದ ಒಮೇಗಾ-6 ಅನ್ನು ಸೇವಿಸುತ್ತಾರೆ. ಫ್ರೆಂಚರಲ್ಲಿ ಈ ಅನುಪಾತ 65:35, ಜಪಾನೀಯರಲ್ಲಿ 50:50 ಇದೆ. ಅದು ಸ್ವಾಭಾವಿಕವಾಗಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದೇ ಗ್ರೀನ್‌ಲ್ಯಾಂಡ್‌ನ ಎಸ್ಕಿಮೋಗಳ ಆಹಾರ ಪದ್ಧತಿ ಹೇಗಿದೆ ಎಂದರೆ ಒಮೇಗಾ-6ಗಿಂತ ಮೂರು ಪಟ್ಟು ಅಧಿಕ ಪ್ರಮಾಣದಲ್ಲಿ ಒಮೇಗಾ-3 ಅನ್ನು ಸೇವಿಸುತ್ತಾರೆ. ಹೀಗಾಗಿ ಅವರಲ್ಲಿ ರೋಗಬಾಧೆ ಕಡಿಮೆ. ಸಾಂಕ್ರಾಮಿಕ ರೋಗಗಳಂತೂ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.
ಚಿಕಾಗೋದ ಯೂನಿವರ್ಸಿಟಿ ಆಫ್ ಇಲಿಲೋಯಿಸ್‌ನ ಜೈವಿಕ ರಸಾಯನವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿದ್ದ ಡಾ.ವಿಲಿಯಂ ಇ.ಎಂ. ಲ್ಯಾಂಡ್ಸ್ ಅವರು ಕೊಬ್ಬು ಮತ್ತು ಆಹಾರದ ಕುರಿತಾಗಿ ಸಾಕಷ್ಟು ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ, ನಮ್ಮ ಶರೀರವು ಒಮೇಗಾ-6 ಮತ್ತು ಒಮೇಗಾ-3 ಫ್ಯಾಟಿ ಆ್ಯಸಿಡ್‌ಗಳ ನಡುವಿನ ರಣಾಂಗಣ. ಶರೀರದ ಮೇಲೆ ಅಧಿಪತ್ಯ ಸಾಧಿಸಲು ಇವುಗಳ ನಡುವೆ ನಿರಂತರ ಸಂಗ್ರಾಮ ನಡೆಯುತ್ತಿರುತ್ತದೆ. ಯಾರು ನಿಧಾನಕ್ಕೆ ಗೆಲುವಿನತ್ತ ಸಾಗುತ್ತಾರೋ ಅವರೇ ನಮ್ಮ ಆರೋಗ್ಯದ ಹಣೆಬರಹವನ್ನು ನಿರ್ಧರಿಸುತ್ತಾರೆ.
ಏನಾಗುತ್ತದೆ ಅಂದರೆ ಶರೀರದೊಳಗಿನ ಕೋಶಗಳಿಗೆ ಅಧಿಕ ಪ್ರಮಾಣದಲ್ಲಿ ಒಮೇಗಾ-6 ಪೂರೈಕೆಯಾದಾಗ ಕೋಶಗಳು ಇದ್ದಕ್ಕಿದ್ದಂತೆ ಓವರ್ ಆ್ಯಕ್ಟೀವ್ ಆಗಿಬಿಡುತ್ತವೆ. ಅವುಗಳ ರಕ್ತದಾಹ ಹೆಚ್ಚುತ್ತದೆ. ಇದು ಇಡೀ ಶರೀರದ ಯಂತ್ರಾಂಗವನ್ನೇ ಹಾಳುಗೆಡವಿ ಕಾಯಿಲೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಒಮೇಗಾ-3 ಕೊಬ್ಬು ರೋಗಗಳನ್ನು ಸೃಷ್ಟಿಸುವ ಈಕೊಸನಾಯಿಡ್ಸ್‌ಗಳನ್ನು ನಾಶಪಡಿಸಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುತ್ತದೆ.
ಅಮೆರಿಕನ್ನರಲ್ಲಿ ಮಾತ್ರ ಕೊಬ್ಬು ಅಧಿಕ ಪ್ರಮಾಣದಲ್ಲಿದೆ ಎಂದು ನಾವು ಖುಷಿಪಡುವಂತಿಲ್ಲ. ಈ ವಿಚಾರದಲ್ಲಿ ಭಾರತೀಯರೇನೂ ಹಿಂದೆ ಬಿದ್ದಿಲ್ಲ. ಪ್ರಾಥಮಿಕ ಶಾಲೆಗೆ ಹೋಗುತ್ತಿರುವ ಪುಟಾಣಿಗಳ ಧಡೂತಿ ದೇಹ ಹೊತ್ತು ಸಾಗುವುದು ನಮ್ಮಲ್ಲಿ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ. ಭಾರತೀಯರಲ್ಲಿ ಹೆಚ್ಚುತ್ತಿರುವ ರಕ್ತದೊತ್ತಡ, ಹೃದ್ರೋಗಗಳು, ಅಸ್ಥಿರಂಧ್ರ, ಕೆಲವು ಬಗೆಯ ಕ್ಯಾನ್ಸರ್‌ಗಳಿಗೆ ಅಧಿಕ ಪ್ರಮಾಣದಲ್ಲಿ ಒಮೇಗಾ-6 ಅನ್ನು ಸೇವಿಸುವುದೇ ಕಾರಣ. ಒಂದು ರೋಗ ನಾಲ್ಕೈದು ಕಾಯಿಲೆಗಳ ಮೂಲ. ರಕ್ತದೊತ್ತಡದ ಜತೆ ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮೊದಲಾದವು ಬಳುವಳಿಯಾಗಿ ಬರುತ್ತವೆ. ಜಂಕ್‌ಫುಡ್‌ಗಳು ಹಾಗೂ ಕರಿದ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಸತ್ವಯುತ ಆಹಾರ ಸೇವಿಸುವುದೇ ಇದರಿಂದ ಪಾರಾಗಲು ಇರುವ ಉತ್ತಮ ದಾರಿ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com