ಗೋಲ್ಡನ್ STARS
ಒಬ್ಬರು ನನ್ನ ಚಿನ್ನ ನನ್ನ ಹಕ್ಕು ಎನ್ನುತ್ತಾರೆ. ಮತ್ತೊಬ್ಬರು 'ಮನೆಯಲ್ಲಿದ್ದರೆ ಚಿನ್ನ, ಚಿಂತೆ ಏತಕೆ ಇನ್ನು' ಎಂದು ಅದೇ ಚಿನ್ನವನ್ನು ಅಡ ಇಡಿ ಎನ್ನುತ್ತಾರೆ. ಇದರ ನಡುವೆ ಒಬ್ಬ ಕಲ್ಯಾಣ್ ಜ್ಯೂವೆಲರ್ಸ್ಗೆ ಬನ್ನಿ ಎನ್ನುತ್ತಾರೆ, ಮತ್ತೊಬ್ಬರು ಮಣಪುರಂ ಗೋಲ್ಡ್ ಲೋನ್ ಬಾಗಿಲು ಬಡಿಯಿರಿ ಎನ್ನುತ್ತಾರೆ. ಒಟ್ಟಿನಲ್ಲಿ 'ಗೋಲ್ಡ್ ಈಗ ಬದುಕು ಸುಲಭ' ಎಂದು ಕಿರುಪರದೆ ಮೇಲೆ ಮಿಂಚುವ ನಟರನ್ನು ಎಲ್ಲರೂ ನೋಡಿರುತ್ತೇವೆ. ಇವರು ಗೋಲ್ಡ್ ಮಾರುಕಟ್ಟೆಗೆ ಗ್ಲಾಮರ್ ಟಚ್ ಕೊಟ್ಟಿರುವುದು ಮಾತ್ರ ಸುಳ್ಳಲ್ಲ.
ಅಮಿತಾಭ್ ಬಚ್ಚನ್
ಕಲ್ಯಾಣ್ ಜ್ಯೂವಲರಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ನ ಬಿಗ್ ಬಿ ಇತ್ತೀಚೆಗೆ ವಿಶೇಷ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದ ಪ್ರಮುಖ ಭಾಷೆಯ ಸ್ಟಾರ್ ನಟರ ಜೊತೆಗೆ ಕಾಣಿಸಿಕೊಳ್ಳುವ ಬಿಗ್ಬಿ ಇಲ್ಲಿ ಬಡ ಶಾಲಾ ಶಿಕ್ಷಕ. ತಮ್ಮ ಶಿಕ್ಷಕನ ಕಷ್ಟ ನೋಡಿ ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ನವೀಕರಣ ಮಾಡುತ್ತಾರೆ. ಆ ಮೂಲಕ ಸಂಬಂಧಗಳು ಗಟ್ಟಿಯಾಗುತ್ತವೆ ಎನ್ನುತ್ತದೆ ಕಲ್ಯಾಣ್ ಜ್ಯೂವಲರಿ. ಈ ಜಾಹಿರಾತಿನಲ್ಲಿ ಶಿವರಾಜ್ಕುಮಾರ್, ನಾಗಾರ್ಜುನ, ಅಕ್ಷಯ್ ಕುಮಾರ್, ವಿಕ್ರಮ್ ಮತ್ತಿತರರು ಕಾಣಿಸಿಕೊಳ್ಳುತ್ತಾರೆ.
ಶಿವರಾಜ್ ಕುಮಾರ್
ನಾವ್ ಉಪಯೋಗಿಸುವ ಸೋಪು, ಪೇಸ್ಟು, ಉಪ್ಪು, ಸಕ್ಕರೆ... ಹೀಗೆ ಪ್ರತಿಯೊಂದರ ಮೇಲೂ ರೇಟ್ ಹಾಕಿರುತ್ತಾರೆ. ಆದರೆ ಚಿನ್ನದ ಮೇಲೆ ಮಾತ್ರ ರೇಟ್ ಕಾರ್ಡ್ ಹಾಕಲ್ಲ. ಸೇಲ್ಸ್ ಮ್ಯಾನ್ ಹೇಳಿದ್ದೇ ಬೆಲೆ ಎಂದು 'ನನ್ನ ಚಿನ್ನ ನನ್ನ ಹಕ್ಕು' ಎಂದು ಚಿನ್ನದ ಅಂದೋಲನ ಮಾಡುವವರು ನಟ ಶಿವರಾಜ್ ಕುಮಾರ್. 'ಕಲ್ಯಾಣ್ ಜ್ಯೂವಲರಿಗೆ ಬನ್ನಿ ಪಕ್ಕಾ ಚಿನ್ನ' ಎಂದು ಕರೆ ನೀಡುತ್ತಾರೆ.
ಸುದೀಪ್
ದಕ್ಷಿಣಾ ಆಫ್ರಿಕದಿಂದ ನೇರವಾಗಿ ಉಂಗುರ ತಂದುಕೊಂಡು ತನ್ನ ಹುಡುಗಿಯನ್ನು ಬುಟ್ಟಿಗೆ ಬೀಳಿಸಿಕೊಳ್ಳುವ ನಟ ಸುದೀಪ್. ಅಂದ ಹಾಗೆ ಇವರು ಜೋಯ್ ಆಲುಕಾಸ್ ವಜ್ರಾಭರಣಗಳ ಬ್ರಾಂಡ್ ಅಂಬಾಸಿಡರ್.
ಇನ್ನು ವಜ್ರಾಭರಣಗಳಿಗೆ ನಟರಾದ ಮಾಧವನ್, ಮಹೇಶ್ ಬಾಬು, ಅಲ್ಲೂ ಅರ್ಜುನ್, ವಿಜಯ್ ಕೂಡ ಬ್ರಾಂಡ್ ಅಂಬಾಸಿಡರ್ಗಳೇ. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಕೂಡ ಕಲ್ಯಾಣ್ ಜ್ಯೂವಲರಿಗೆ ಬ್ರಾಂಡ್. ತಮಿಳಿನ ವಿಕ್ರಮ್, ಸೂರ್ಯ, ಹಿಂದಿಯ ಅಕ್ಷಯ್ ಕುಮಾರ್, ಮೋಹನ್ಲಾಲ್, ಪೃಥ್ವಿರಾಜ್ ಹೀಗೆ ನಟರ ದಂಡೇ 'ಚಿನ್ನ ಚೆನ್ನ' ಎನ್ನುತ್ತಿದೆ.
ಪುನೀತ್ ರಾಜ್ಕುಮಾರ್
'ಮನೆಯಲ್ಲಿ ಇದ್ದರೆ ಚಿನ್ನ ಚಿಂತೆ ಏತಕ ಇನ್ನು' ಎನ್ನುತ್ತ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಪುನೀತ್ ರಾಜ್ಕುಮಾರ್. ಮನೆಯಲ್ಲಿ ಚಿನ್ನ ಇಟ್ಟುಕೊಳ್ಳಿ, ಕಷ್ಟದಲ್ಲಿ ನೆರವಾಗುತ್ತದೆ ಎಂದು ಮಣಪುರಂ ಗೋಲ್ಡ್ ಲೋನ್ ಕಡೆ ಕೈ ತೋರಿಸುತ್ತಾರೆ.
-ಆರ್.ಕೇಶವಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.