ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಫಿ ಕಲೆ

ಕಾಫಿಗಿಡದ ಬುಡವನ್ನು ಕತ್ತರಿಸಿ ಮಾಡುವ ಕಾಫಿಬಡ್ಡೆ ಕಲಾಕೃತಿ ನೋಡುಗರನ್ನು...

Mainashree
Updated On : 16 May 2013, 12:32 pm

ಮಲೆನಾಡಿನಷ್ಟೇ ಸಿಹಿ ಬಿಸಿ ಬಿಸಿ ಬೈಟುಕಾಫಿ ಕೂಡ. ಅದರಲ್ಲೂ ಕಾಫಿಯ ತಪ್ಪಲಾದ ಸಕಲೇಶಪುರದ ಆ ಚುಮು ಚುಮು ಚಳಿಗೆ ಹಾಟ್ ಕಾಫಿ ಹೀರುತ್ತಿದ್ದರೆ, ಹಾರ್ಟು ಮತ್ತಷ್ಟು ಖುಷಿಯಿಂದ ಲಬ್‌ಡಬ್ ಹಾಡುತ್ತದೆ. ಇಂಥ ಸಕಲೇಶಪುರ ಬಿಸಿ ಬಿಸಿ ಕಾಫಿಯ ಸಿಪ್ಪನ್ನು ಮಾತ್ರ ನೀಡದೆ ಅದೇ ಕಾಫಿಯ ಬುಡದಿಂದ ಶಾಶ್ವತ ಮತ್ತು ಅದ್ಭುತ ಕಲಾಕೃತಿಯನ್ನೂ ಪರಿಚಯಿಸಿದೆ.
ಸಕಲೇಶಪುರದ ರಸ್ತೆಯಲ್ಲಿ ಗಕ್ಕನೆ ಬ್ರೇಕ್ ಹಾಕದೆ ಯಾವುದೇ ವಾಹನಗಳು ಮುಂದೆ ಹೋಗುವುದಿಲ್ಲ. ಗುಂಡಿಗಳು ಜಾಸ್ತಿ ಇದೆ ಅಂತಲ್ಲ. ರಸ್ತೆಯ ಅಕ್ಕಪಕ್ಕ ಇಟ್ಟ ಕಾಫಿಬಡ್ಡೆ ಕಲಾಕೃತಿಗಳ ಮೋಡಿ ಇದು. ಕಾಫಿಗಿಡದ ಬುಡವನ್ನು ಕತ್ತರಿಸಿ ಮಾಡುವ ಕಾಫಿಬಡ್ಡೆ ಕಲಾಕೃತಿ ನೋಡುಗರನ್ನು ಮೊದಲ ನೋಟದಲ್ಲೇ ಆಕರ್ಷಿಸುತ್ತದೆ. ಇದಕ್ಕೆ ಅದ್ಭುತ ಹೊಳಪು ನೀಡಿ, ರಸ್ತೆ ಬದಿಯಿಟ್ಟರೆ ಅದೇ ಒಂದು ಆರ್ಟ್ ಗ್ಯಾಲರಿ.  
ಕಾಫಿ ಗಿಡದಲ್ಲಿ ಎರಡು ವಿಧ. ಒಂದು ಅರೇಬಿಕಾ, ಮತ್ತೊಂದು ರೊಬಾಸ್ಟ್. ಅರೇಬಿಕಾದಲ್ಲಿ ಇಂಥ ಕಲಾಕೃತಿ ಮಾಡಲು ಸಾಧ್ಯವಿಲ್ಲ. ಹಳೆಯದಾದ ರೊಬಾಸ್ಟ್ ಗಿಡ ಇಂಥ ಸೌಂದರ್ಯ ತುಂಬಿದ ಕಲಾಕೃತಿ ತಯಾರಿಸಲು ಯೋಗ್ಯವಾಗಿರುತ್ತದೆ. ಒಂದು ರೊಬಾಸ್ಟ್ ಗಿಡದ ಆಯುಸ್ಸು ಸುಮಾರು 500 ವರ್ಷ. 200- 300 ವರ್ಷಗಳ ಸಮೃದ್ಧ ಫಸಲು ನೀಡುವ ಸಾಮರ್ಥ್ಯ ಈ ಕಾಫಿಗಿಡಗಳಿಗಿವೆ. ರೋಗ ಬಂದ ಇಲ್ಲವೇ ಕ್ರಮೇಣ ಫಸಲು ಕಡಿಮೆಯಾದ ಅಥವಾ ಅನಗತ್ಯ ಗಿಡಗಳನ್ನು ಬೆಳೆಗಾರ ಪ್ರತಿವರ್ಷವೂ ಕಟ್ ಮಾಡಿಸುತ್ತಾನೆ. ಹೀಗೆ ಕತ್ತರಿಸಿದ ಕಾಫಿ ಗಿಡದ ಬುಡದಿಂದ ಕಲಾಕೃತಿಗಳು ಮೂಡುತ್ತವೆ. ಕಲಾಕಾರರು ಕಾಫಿಬೆಳೆಗಾರನ ಮನೆಬಾಗಿಲಿಗೆ ಹೋಗಿ ಇದನ್ನು ಖರೀದಿಸುತ್ತಾರೆ. ಉರುವಲಾಗಬೇಕಿದ್ದ ಬುಡಕ್ಕೆ ಕಲಾಜೀವ ತುಂಬುತ್ತಾರೆ.
ಕಾಫಿ ಬುಡದಿಂದಲೇ ಈ ಕಲಾಕೃತಿ ತಯಾರಿಸಲು ಕಾರಣ, ಇದು ತುಂಬಾ ಗಟ್ಟಿಮುಟ್ಟು. ಮೂಲ ಸೌಂದರ್ಯ ಈ ಬುಡದಲ್ಲೇ ಇರುತ್ತದೆ. ಅದನ್ನು ನಾವೇ ಬಿಸಾಡಬೇಕೇ ಹೊರತು ಅದು ಹಾಳಾಗದು. ಕಾಫಿ ಬುಡದಿಂದ ಟಿವಿ ಸ್ಟ್ಯಾಂಡ್, ಫೋನ್‌ಸ್ಟ್ಯಾಂಡ್, ಟಿಪಾಯಿ, ಡೈನಿಂಗ್ ಟೇಬಲ್, ಚೇರ್, ಸೋಫಾಸೆಟ್, ಚಿಕ್ಕದಾದ ಸೇತುವೆಗಳನ್ನು ಎದ್ದುನಿಲ್ಲಿಸುವುದು ಕಲಾವಿದರಿಗೆ ಕಷ್ಟದ ಮಾತೇನಲ್ಲ. ಬೆಲೆ 300 ರು.ನಿಂದ ಆರಂಭವಾಗುತ್ತದಷ್ಟೇ.
ಕಾಫಿಬಡ್ಡೆಯು ಕಲಾಕೃತಿಯಾಗಿ ನಿಲ್ಲಲು ವರ್ಷ ಸಮಯ ಬೇಕು. ಕತ್ತರಿಸಿದ ಕಾಫಿ ಬುಡವನ್ನು ಒಂದು ವರ್ಷ ಮಳೆಯಲ್ಲಿ ನೆನೆಯಲು, ಬಿಸಿಲಿನಲ್ಲಿ ಒಣಗಲು ಬಿಡುತ್ತಾರೆ. ಕಾರಣ, ಕಾಫಿ ತೊಗಟೆ ಗಟ್ಟಿಯಾಗಿದ್ದು ಅದನ್ನು ತೆಗೆಯಲು ಸುಲಭವಾಗಲೆಂದು. ನಂತರ ಅದನ್ನು ಅದರ ಮೂಲ ಸೌಂದರ್ಯ ಹಾಗೂ ಆಕೃತಿಯ ಆಧಾರದ ಮೇಲೆ ಜೀವ ತುಂಬಲು ನಿರ್ಧರಿಸುತ್ತಾರೆ. ಕತ್ತಿ ಹಾಗೂ ಗರಗಸಗಳ ಮೂಲಕ ಒಂದು ಹಂತಕ್ಕೆ ತಂದು ಅದನ್ನು ಶೈನಿಂಗ್ ಪೇಪರ್‌ನಲ್ಲಿ ಹಲವು ಗಂಟೆ ಚೆನ್ನಾಗಿ ಉಜ್ಜುತ್ತಾರೆ. ನಂತರ ಅದನ್ನು ಬಟ್ಟೆಯಿಂದ ಒರೆಸುತ್ತಾರೆ. ಅದಕ್ಕೆ ಯಾವ ರೂಪ ಕೊಡಬೇಕೆಂದು ನಿರ್ಧರಿಸಿ ಅಗತ್ಯ ಅಳವಡಿಕೆಗಳನ್ನು ಮಾಡಲಾಗುತ್ತದೆ. ಒಂದು ಆಕಾರ ಬಂದ ನಂತರ ಶೈನಿಂಗ್ ಪೇಪರ್‌ನಿಂದ ಮತ್ತೊಮ್ಮೆ ಒರೆಸುತ್ತಾರೆ. ಮುಂದಿನ ಹಂತವೇ ಆಯಿಲ್ ಪೇಯಿಂಟ್‌ನಿಂದ ಆಕರ್ಷಕ ಸೌಂದರ್ಯ ನೀಡುವುದು. ಹೀಗೆ ವಿವಿಧ ಹಂತ ಮುಗಿಸಿದ ನಂತರ ನಮಗೆ ಒಂದು ಸುಂದರ ಕಾಫಿಬಡ್ಡೆ ಕಲಾಕೃತಿ ದೊರೆಯುತ್ತದೆ.
'ಈ ಕಲಾಕೃತಿಯನ್ನು ತಲೆತಲಾಂತರದಿಂದ ವೃತ್ತಿಯಾಗಿಸಿಕೊಂಡು ಬಂದಿದ್ದು, ಆರ್ಥಿಕವಾಗಿ ನೆಮ್ಮದಿ ಕಂಡಿದ್ದೇವೆ' ಎಂದು ತಯಾರಕರು ಹೇಳುತ್ತಾರೆ.
ಸಕಲೇಶಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಮಂಗಳೂರು- ಧರ್ಮಸ್ಥಳ ಮಾರ್ಗವಾಗಿ ಹೋಗುವ ಪ್ರವಾಸಿಗರ ಕಣ್ಣಿಗೆ ಕಾಣಲೆಂದು ಇವುಗಳನ್ನು ರಸ್ತೆಯ ಬದಿಯಲ್ಲಿಡಲಾಗಿದೆ. ಇದಕ್ಕೆ ಮನಸೋತ ಪ್ರವಾಸಿಗರು ಅವುಗಳನ್ನು ಖರೀದಿಸಿ ತಮ್ಮ ವಾಹನದ ಟಾಪ್‌ನಲ್ಲಿರಿಸಿ, ಟಾಪ್‌ಗೇರಿನಲ್ಲಿ ಮುಂದೆ ಸಾಗುತ್ತಾರೆ. ಈ ಕಲಾಕೃತಿಗಳು ವಿದೇಶಕ್ಕೂ ರಫ್ತಾಗುತ್ತವೆ. ಕಡಿಮೆ ಬೆಲೆಗೆ ಹೆಚ್ಚು ಸೌಂದರ್ಯ ನೀಡುವುದರಿಂದ ಇವುಗಳಿಗೆ ಹೆಚ್ಚು ಬೇಡಿಕೆ. ಬೆಂಗಳೂರಿನಂಥ ಪ್ರವಾಸಿಗರು ಒಂದು ಶೋಕೇಸ್ ಗೊಂಬೆಗೇ ಸಾವಿರಾರು ರು. ಕೊಡುವಾಗ, ಇನ್ನು ಇಂಥ ಆರ್ಟ್‌ಪೀಸ್‌ಗಳನ್ನು ಬಿಡುತ್ತಾರೆಯೇ?
'ನೋಡಲು ತುಂಬಾ ಸೊಗಸಾಗಿದ್ದು, ನೂಡಿದರೆ ಅದನ್ನು ಕೊಳ್ಳುವವರೆಗೂ ಸಮಾಧಾನ ಆಗುವುದಿಲ್ಲ' ಎಂಬುದು ಬೆಂಗಳೂರು ಮೂಲದ ಪ್ರವಾಸಿಗ ಸೂರ್ಯ ಅವರ ನುಡಿ.
ನೋಡಿ, ಕಾಫಿಗಿಡ ನಮಗೆ ಬಿಸಿ ಬಿಸಿಯ ಉಲ್ಲಾಸವನ್ನಷ್ಟೇ ನೀಡುವುದಿಲ್ಲ. ನಮ್ಮ ಮನದೊಳಗೆ ಶಾಶ್ವತ ಕಲೆಯನ್ನು ಬೇರೂರಿಸುವ ಚಮತ್ಕಾರವೂ ಅದಕ್ಕೆ ಗೊತ್ತು. ಈ ಕಾಫಿಗಿಡದ ಬುಡಕ್ಕೆ ಡಿಕಾಕ್ಷನ್ ಹೊಯ್ದ ಆ ಕಲಾವಿದರನ್ನು ಗೌರವಿಸುವ ಕೆಲಸವಾಗಲಿ...  

ಚಿತ್ರ, ಲೇಖನ: ಅರುಣ ಎಂ.ಜಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments