ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದೇವರ ಬೇಡಿಕೆ

Mainashree
Updated On : 16 May 2013, 12:34 pm

ಚಂದ್ಗುಳಿಯ ಗಣಪ ಘಂಟೆಗಳ ಆರಾಧಕ. ತಾಟವಾಳದ ರವಳನಾಥ ಹಾಗೂ ಗುಮ್ ಶಾಹೀದ್ ದರ್ಗಾಕ್ಕೆ  ದಾರವೇ ಹರಕೆ. ಕಾರವಾರದ ಕಾಪ್ತ್ರಿದೇವಿಗೆ ಮದ್ಯವೇ ಮಸ್ತ್ ಊಟ. ಹಾನಗಲ್ಲಿನ ಭೂತಪ್ಪನಿಗೆ ಬೀಗದ ಬಂಧನ ಭಕ್ತಿಯ ಸಿಂಚನ. ಅಮ್ಮನೋರಿಗೆ ಬಾಗಿನವೇ ಬಲುಪ್ರೀತಿ. ಕೆಜೆಪಿಗೆ ಬೆಂಬಲವಲ್ಲದಿದ್ದರೂ ಕೋಟೆ ಹನುಮಂತನಿಗೆ ತೆಂಗಿನಕಾಯಿಯ ಮೇಲೆಯೇ ಮೋಹ. ನಾಗದೇವತೆ ಕ್ಷೀರಸಾಗರ ಪ್ರಿಯೆ...
ಭಾರತ ನಂಬಿಕೆಗಳ ಕಡಲು. ನವ ನಮೂನೆಯ ಆಚರಣೆಗಳ ಒಡಲು. ಇಂಥ ಆಚರಣೆಗಳು ಗಮನ ಸೆಳೆಯುವ ಪರಿಯಾದರೂ ಎಂಥದ್ದು!

ಗಣಪನಿಗೆ ಘಂಟೆ ಬೇಕು...
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂದ ಮಾಗೋಡ ಜಲಪಾತದ ಸನಿಹವಿರುವ ಗಣಪನ ದೇಗುಲ ಘಂಟೆಗಳ ಗುಡಿ. ಭಕ್ತರು ಹರಕೆ ರೂಪದಲ್ಲಿ ನೀಡಿದ ಘಂಟೆಗಳು ಸದಾ ಗಣಪನ ಸುತ್ತ ನಾದ ಮೊಳಗಿಸುತ್ತವೆ. ಇಲ್ಲಿ ಹರಕೆ ಕಟ್ಟಿಕೊಂಡು ಘಂಟೆಯನ್ನು ತೂಗಿಬಿಟ್ಟರೆ ಮಾತು ಬಾರದವರಿಗೆ, ತೊದಲು ಮಾತಿನವರಿಗೆ ಯೋಗ್ಯ ಪರಿಹಾರ ಲಭಿಸುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೆ ಭಕ್ತಿಯಿಂದ ಬೇಡಿಕೊಂಡು ಹರಕೆ ರೂಪದಲ್ಲಿ ಘಂಟೆಯನ್ನು ಸಮರ್ಪಿಸಿದರೆ ಎಲ್ಲಾ ವಿಘ್ನಗಳೂ ಮಾಯವಾಗುತ್ತವಂತೆ. ಅತಿ ಚಿಕ್ಕ ಘಂಟೆಗಳಿಂದ ಹಿಡಿದು ಬೃಹತ್ ಘಂಟೆಗಳೂ ಇಲ್ಲಿ ತೂಗುತ್ತಿವೆ.

ಮದ್ಯ ನೈವೇದ್ಯ
ಕಾರವಾರದ ಸನಿಹದ ಕಾಪ್ತ್ರಿದೇವತೆ ಮದ್ಯ ಪ್ರಿಯಳು. ಪ್ರತಿ ವರ್ಷ ಇಲ್ಲಿನ ದೇವತೆಗೆ ಮದ್ಯವನ್ನು ನೈವೇದ್ಯ ಮಾಡಿ ಭಕ್ತಾದಿಗಳು ಅದನ್ನು ತೀರ್ಥವೆಂದು ಸೇವಿಸುತ್ತಾರೆ. ಯಾವುದೇ ವಾಸಿಯಾಗದ ಕಾಯಿಲೆಗೆ ಇಲ್ಲಿ ಹರಕೆಯೇ ಮದ್ದು. ಮದ್ಯದೊಂದಿಗೆ ಮಾಂಸವನ್ನೂ ನೈವೇದ್ಯ ಮಾಡಲಾಗುತ್ತದೆ. ಸಕಲ ರೋಗಕ್ಕೂ ಸಾರಾಯಿ ಮದ್ದು ಎಂಬ ಗಾದೆಗನುಗುಣವಾಗಿ ಭಕ್ತರು ದೇವಿಯ ತೀರ್ಥ ಸವಿದು ಪಾವನರಾಗುತ್ತಾರೆ.
ಜೋಡಿದೇವರ ಧರ್ಮ ಸಹಿಷ್ಣುತೆ
ಹಳಿಯಾಳದ ಗಡಿಭಾಗ ತಾಟವಾಳದಲ್ಲಿರುವ ಗುಮ್ ಶಾಹೀದ್ ಹಾಗೂ ರವಳನಾಥ ಎಂಬ ಧಾರ್ಮಿಕತೆಯನ್ನು ಮೀರಿದ ಸ್ನೇಹಿ ದೇವರು ಹರಕೆ ರೂಪದಲ್ಲಿ ಪವಿತ್ರ ನೂಲಿನ ದಾರವನ್ನು ಬಯಸುತ್ತಾರೆ. ಸರ್ವಧರ್ಮದ ಭಕ್ತರು ಇಲ್ಲಿನ ಮರಕ್ಕೆ ದಾರ ಕಟ್ಟಿ ಬಯಕೆಗಳನ್ನು ಬಿಚ್ಚಿಡುತ್ತಾರೆ. ಹರಕೆ ಈಡೇರಿದ ನಂತರ ಇನ್ನೊಂದು ವಿಶೇಷ ಪೂಜೆ. ಕಟ್ಟಿದ ದಾರದ ವಿಸರ್ಜನೆ. ಸಂತಾನ ಸಮಸ್ಯೆ, ವಿವಾದ, ಕೋಮು ಗಲಭೆಗಳ ನಿವಾರಣೆಗಾಗಿ ಇಲ್ಲಿ ಹರಕೆ ಕಟ್ಟಿಕೊಂಡರೆ ಅವು ನೆರವೇರುತ್ತವೆ.

ಬಂಧನದಲ್ಲಿ ಭೂತಪ್ಪ
ಹಾವೇರಿಯ ಹಾನಗಲ್ ಸನಿಹದ ಬಾಳೂರು ಭೂತಪ್ಪ ಬೀಗಗಳ ಪ್ರಿಯ. ಭಕ್ತರಿಂದ ತನ್ನ ಆಲಯಕ್ಕೆ ಬೀಗಗಳನ್ನು ಹಾಕಿಸಿಕೊಂಡು ಒಳಗೆ ಭದ್ರವಾಗಿದ್ದು ದರ್ಶನ ನೀಡುವುದೇ ಅವನಿಗೆ ಇಷ್ಟ. ಪರೀಕ್ಷೆಯಲ್ಲಿ ಪಾಸಾಗಲಿಕ್ಕೂ ಇಲ್ಲಿ ವಿದ್ಯಾರ್ಥಿಗಳು ಬೀಗ ಹಾಕಿ, ಹರಕೆ ಸಲ್ಲಿಸುತ್ತಾರೆ. ಮೊದಲು ಈ ದೇವರು ಖಾರದ ಪುಡಿಯ ಹರಕೆಯನ್ನು ಬಯಸುತ್ತಿತ್ತು. ಈಗಿದಕ್ಕೆ ಬೀಗಗಳ ಹರಕೆ ಬೇಕು. ಇಲ್ಲಿಯೂ ಹರಕೆ ಈಡೇರಿದ ನಂತರ ಬೀಗಗಳನ್ನು ವಿಸರ್ಜಿಸಲಾಗುತ್ತದೆ.

ಬಾಗಿನ ಪಡೆಯುವ ದೇವತೆ...
ಲಾಲಗುಳಿ ಸನಿಹ ಆರಡಿ ಎತ್ತರದ ಕೋಟೆ ಹನುಮ ತೆಂಗಿನ ಕಾಯಿ ಬಯಸುತ್ತಾನೆ. ಈತನ ಸನ್ನಿಧಿಗೆ ತೆಂಗಿನ ಕಾಯಿ ಅರ್ಪಿಸಿದರೆ ತೋಟಗಳಲ್ಲಿ ಕೋತಿಗಳ ಹಾವಳಿ ತಪ್ಪುತ್ತದೆ ಎಂಬ ವಾಡಿಕೆ ಇದೆ.
ಏನೇ ಇರಲಿ... ಬೆಂಕಿಯ ಮೇಲೆ ನಡೆಯುವುದು, ತ್ರಿಶೂಲದಿಂದ ಚುಚ್ಚಿಕೊಂಡು ಸ್ವಯಂ ಹಿಂಸಿಸಿಕೊಳ್ಳುವುದು, ಗರ್ಭಿಣಿಯನ್ನು ಬಲಿ ನೀಡುವುದು, ಮಗುವನ್ನು ದೇಗುಲಗಳ ಮೇಲಿಂದ ಎಸೆಯುವುದು, ಮುಳ್ಳಿನ ಮೇಲೆ ನೃತ್ಯ ಮಾಡುವುದಂಥ ಅಪಾಯಕಾರಿ ಹರಕೆಗಳ ನಡುವೆ ಆರೋಗ್ಯಕರವಾದುದನ್ನೇ ಬಯಸುತ್ತಿರುವ ಇಂಥ ದೇವರುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸೋಣ...

- ಅಚ್ಯುತಕುಮಾರ ಯಲ್ಲಾಪುರ
ಚಿತ್ರಗಳು: ಶಿವಕುಮಾರ, ಶ್ರೀಧರ ಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments