ಸಹನೀಯರಾಗಿ
ಅದು ನಮ್ಮ ಮನೋಭಾವನೆಯಷ್ಟೇ. ಅವರು ಸರಿ ಇಲ್ಲ ಎಂದುಕೊಂಡರೆ, ಅವರ ಪ್ರತಿಯೊಂದು ನಡೆಯೂ ನಮಗೆ ತಪ್ಪಾಗಿಯೇ ಕಾಣತೊಡಗುತ್ತದೆ. ಪೂರ್ವಗ್ರಹ ಎಂದರೆ ಬಹುಶಃ ಇದೇ ಏನೋ. ಹಾಗೊಂದು ಅಭಿಪ್ರಾಯವನ್ನು ಒಂದು ವ್ಯಕ್ತಿಯ ಮೇಲೆ ನಮ್ಮೊಳಗೆ ನಾವೇ ಆರೋಪಿಸಿ ಕೊಂಡು ಬಿಟ್ಟಿರುತ್ತೇವೆ. ಯಾವುದೋ ಒಂದು ಸನ್ನಿವೇಶದಲ್ಲಿ ಆತ ತಪ್ಪು ಮಾಡಿದ್ದಿರಬಹುದು. ವಿಚಿತ್ರವಾಗಿ, ಅಸಹ್ಯವಾಗಿ ವರ್ತಿಸಿದ್ದಿರಬಹುದು. ಅಷ್ಟಕ್ಕೂ ಆತ ಸರ್ವಗುಣ ಸಂಪನ್ನ ಎಂದೇನೂ ಅಲ್ಲ ಬಿಡಿ. ಆತನಲ್ಲಿರುವ ಬಹುತೇಕ ಗುಣಗಳು ಸಮ್ಮತವಲ್ಲದಿದ್ದಿರಲೂಬಹುದು. ಹಾಗೆಂದು ಆತನ ಒಂದಿಡೀ ವ್ಯಕ್ತಿತ್ವವನ್ನೇ ನಮ್ಮದೇ ಅಳತೆಗೋಲು ಬಳಸಿ ನಿರ್ಧರಿಸುವುದು ಎಷ್ಟು ಸರಿ? ನಮಗೆ ಸರಿಕಾಣದ್ದೆಲ್ಲವೂ ಇತರರಿಗೂ ಹಾಗೆಯೇ ಎಂದುಕೊಳ್ಳುವುದು ಸಂಕುಚಿತತೆ ಆಗಿಬಿಡುತ್ತದೆ. ಏಕೆಂದರೆ ಅಂಥ ವ್ಯಕ್ತಿಗಳೂ ನಮ್ಮ ನಡುವೆಯೇ, ನಾವು ಬದುಕುವ ಪರಿಸರದಲ್ಲಿಯೇ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುತ್ತಾರೆ. ಅವರಲ್ಲಿಯೂ ಸ್ವೀಕಾರಾರ್ಹ ಎಷ್ಟೋ ಸಂಗತಿಗಳು ಹುದುಗಿರುತ್ತವೆ. ವಸ್ತುನಿಷ್ಠತೆಯೆಂದರೆ ಇದೇ. ಇಲ್ಲಿ ವಿಷಯಕ್ಕೆ ಪ್ರಾಧಾನ್ಯವೇ ಹೊರತೂ ವ್ಯಕ್ತಿಗಲ್ಲ. ವ್ಯಕ್ತಿ ಎನ್ನುವುದು ತೀರಾ ಸಂಕೀರ್ಣ. ವಿಷಯ ವಿಶಾಲ ಹರವನ್ನು ಹೊಂದಿರುವಂಥದ್ದು. ಅವರು ಬದಲಾಗಬೇಕೆಂದು ಬಯಸುವ ಮೊದಲು ನಾವು ನಮ್ಮ ಮನೋಭಾವವನ್ನೇಕೆ ಬದಲಿಸಿಕೊಳ್ಳುವುದಿಲ್ಲ? ಅವರು ಆ ಒಂದು ವಿಷಯದಲ್ಲಿ ಮಾತ್ರ, ಆ ಸನ್ನಿವೇಶದಲ್ಲಿ ಮಾತ್ರ ಸರಿ ಇಲ್ಲದಿರಬಹುದು. ಇನ್ನೊಂದು ಸನ್ನಿವೇಶದಲ್ಲಿ ಅಥವಾ ಇನ್ಯಾವುದೋ ವಿಷಯದಲ್ಲಿ ನಮಗಿಂತ ಸಮರ್ಥರೂ, ಸೂಕ್ತರೂ ಆಗಿರಬಹುದು. ಅದನ್ನು ಸ್ವೀಕರಿಸುವಷ್ಟು ಮುಕ್ತತೆ ನಮಗೆ ಇರುವುದೇ ಇಲ್ಲ. ಹೀಗಾಗಿ ಇಲ್ಲಿ ಸರಿ ಇಲ್ಲದವರು ನಾವೇ ಹೊರತೂ ಇನ್ನೊಬ್ಬರಲ್ಲ. ಒಂದು ವಿಷಯ ಗಮನದಲ್ಲಿರಲಿ. ಎಲ್ಲರೂ, ಎಲ್ಲ ಸಂದರ್ಭದಲ್ಲಿ, ಎಲ್ಲ ವಿಷಯದಲ್ಲೂ ಸಮರ್ಥನೀಯ ಎನ್ನಿಸಿಕೊಳ್ಳುವುದಿಲ್ಲ. ನಾವು ಸಹನೀಯವಾಗಿಸಿಕೊಳ್ಳಬೇಕು.
- ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.