ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಹಾರ ಅಲರ್ಜಿ ಎನ್ನುವ ಸೋಜಿಗ

Mainashree
Updated On : 17 May 2013, 1:02 am

ಬೇಸಿಗೆ ಬಂತು ಎಂದರೆ ಮದುವೆ-ಮುಂಜಿ ಸೀಸನ್. ಬಗೆಬಗೆಯ ಭಕ್ಷ್ಯ-ಭೋಜ್ಯಗಳು. ಒಂದೊಂದು ದಿನವಂತೂ ಯಾರ ಮನೆಯ ಕಾರ್ಯಕ್ರಮಕ್ಕೆ ಹೋಗುವುದು ಎನ್ನುವ ಗೊಂದಲ. ಸುಮ್ಮನೆ ವಿಶ್ ಮಾಡಿ ಹೊರಟರೂ ಆ ದಿನದ ಎಲ್ಲ ಫಂಕ್ಷನ್‌ಗಳಿಗೂ ಹಾಜರಾಗಲು ಆಗುವುದಿಲ್ಲ. ನನ್ನ ಬಂಧುಗಳು, ಪರಿಚಿತರಿಗೆಲ್ಲ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತೇನೆ, 'ಆಹಾರದ ವಿಚಾರದಲ್ಲಿ ಬಾಯಿ ಮಾತು ಕೇಳಬೇಡಿ' ಎಂದು. ರುಚಿಕಟ್ಟಾದ ಅಡುಗೆ ಎಂಥವರ ಬಾಯಲ್ಲೂ ನೀರೂರಿಸುತ್ತದೆ. ಸ್ವಲ್ಪ ತಿಂದುಬಿಡೋಣ, ಇವತ್ತೊಂದಿನ ತಾನೆ... ಇಂಥ ಭಾವನೆಗಳು ಬೇಡಬೇಡವೆಂದರೂ ಮನಸ್ಸನ್ನು ಆಕ್ರಮಿಸಿ ತಿನ್ನಲು ಪ್ರೇರೇಪಿಸುತ್ತವೆ.
ತಿನ್ನುವಾಗ ಏನೂ ಅನ್ನಿಸುವುದಿಲ್ಲ. ಆ ನಂತರ ಒಂದೊಂದೇ ತಾಪತ್ರಯಗಳು ಶುರುವಾಗುತ್ತವೆ. ಅಜೀರ್ಣ, ವಾಂತಿ, ತಲೆನೋವು, ಒಮ್ಮೊಮ್ಮೆ ಮೈ ತುಂಬ ನವೆ... ಹೀಗೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗುತ್ತವೆ. ಕೆಲವರಿಗೆ ಎರಡು-ಮೂರು ದಿನದವರೆಗೆ ಇಂಥ ಇರಿಟೇಶನ್ ಇದ್ದರೆ, ಅನೇಕರಿಗೆ ಎರಡು-ಮೂರು ದಿನದ ಬಳಿಕವೇ ಅಸೌಖ್ಯ ಕಾಣಿಸಿಕೊಳ್ಳಬಹುದು. ಆಗ ಕಾರಣಗಳನ್ನು ಹುಡುಕುತ್ತ ನಾವೇ ಅಂದುಕೊಳ್ಳುತ್ತೇವೆ, 'ಅಯ್ಯೋ... ತಿಂದದ್ದು ಸ್ವಲ್ಪ ಜಾಸ್ತಿ ಆಯಿತು. ಇನ್ನು ಯಾವತ್ತೂ ಹೊಟ್ಟೆ ಬಿರಿಯುವಷ್ಟು ತಿನ್ನಲ್ಲ'. ಸರ್ವೆಸಾಧಾರಣ ಎಲ್ಲರಿಗೂ ಇಂಥದ್ದೊಂದು ಅನುಭವ ಆಗಿಯೇ ಇರುತ್ತದೆ.
ತಜ್ಞರು ಫುಡ್ ಅಲರ್ಜಿ ಎನ್ನುವುದು ಇದನ್ನೇ. ಅತಿಯಾಗಿ ತಿಂದ ಎಲ್ಲರಿಗೂ ಫುಡ್ ಅಲರ್ಜಿ ಆಗುತ್ತದೆ ಅಥವಾ ಆಹಾರವೆಲ್ಲವೂ ಅಲರ್ಜಿ ಉಂಟುಮಾಡುತ್ತದೆ ಎಂದಲ್ಲ. ಕೆಲವರಿಗೆ ಏನೆಲ್ಲವನ್ನು ತಿಂದರೂ ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಅದು ಬೇರೆ ವಿಚಾರ. ಫುಡ್ ಅಲರ್ಜಿ ಎಂದರೆ ಯಾವುದೊ ಆಹಾರದಲ್ಲಿನ ನಿರ್ದಿಷ್ಟವಾದ ಪದಾರ್ಥ ನಮ್ಮ ಶರೀರಕ್ಕೆ ಒಗ್ಗುವುದಿಲ್ಲ. ಹಳೆಯ ಕಾಲದವರಿಗೆ ನೆನಪಿರುತ್ತದೆ, ವೈದ್ಯರಲ್ಲಿಗೆ ಹೋದಾಕ್ಷಣ ಮೊದಲು 'ಎರಡು ದಿನಗಳಿಂದ ಏನೇನು ತಿಂದರಿ' ಎಂದು ಕೇಳುತ್ತಿದ್ದರು. ಸಮಸ್ಯೆ ಪತ್ತೆ ಮಾಡುವಲ್ಲಿ ನಾವು ಒಪ್ಪಿಸುವ ಯಾದಿಯೂ ಮುಖ್ಯ ಪಾತ್ರ ವಹಿಸುತ್ತಿತ್ತು. ಔಷಧ ಕೊಟ್ಟು, ಕೆಲ ಪದಾರ್ಥಗಳನ್ನು ಸ್ವಲ್ಪದಿನದ ಮಟ್ಟಿಗೆ ಬಿಡುವಂತೆ ಡಾಕ್ಟರು ಸಲಹೆ ಮಾಡುತ್ತಿದ್ದರು.
ಆಹಾರ ಅಲರ್ಜಿ ವೈದ್ಯ ಲೋಕಕ್ಕೆ ಹೊಸತೇನಲ್ಲ. ಹಿಂದೆ ಅದರ ಬಗ್ಗೆ ಅಷ್ಟಾಗಿ ಗಮನ ಇರಲಿಲ್ಲ. ಈಗ ಫುಡ್ ಅಲರ್ಜಿಗೆ ಎಲ್ಲಿಲ್ಲದ ಪ್ರಾಮುಖ್ಯ. ಅದು ವೈದ್ಯಕೀಯ ಪ್ರಪಂಚದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ವಿಚಿತ್ರ ಎಂದರೆ ಇದು ಒಬ್ಬೊಬ್ಬರಲ್ಲಿ ಒಂದೊಂದು ಥರ. ಕೆಲವರಿಗೆ ಬದನೆಕಾಯಿ ಅಲರ್ಜಿಯಾದರೆ, ಕೆಲವರಿಗೆ ಕರಿದ ತಿಂಡಿಗಳನ್ನು ತಿಂದರೆ ಕಿರಿಕಿರಿ ಶುರುವಾಗಬಹುದು. ಇನ್ನು ಕೆಲವರಿಗೆ ಹುಳಿ ಎಂದರೆ ಆಗದೇ ಇರಬಹುದು. ಅದಕ್ಕಿಂತಲೂ ಸೋಜಿಗ ಇನ್ನೊಂದಿದೆ. ಅದೆಂದರೆ ಫುಡ್ ಅಲರ್ಜಿ ಏತಕ್ಕಾಗಿ ಉಂಟಾಗುತ್ತದೆ ಎನ್ನುವುದು ಇವತ್ತಿಗೂ ನಿಗೂಢವೇ. ಅದನ್ನು ಪತ್ತೆ ಮಾಡಲು ಸಾಕಷ್ಟು ಸಂಶೋಧನೆಗಳೇನೊ ನಡೆಯುತ್ತಿವೆ. ಆದರೂ ವೈದ್ಯಕೀಯ ಪ್ರಪಂಚದ ಸರ್ವಸಮ್ಮತ ಅಭಿಪ್ರಾಯ ಇದುವರೆಗೂ ಹೊರಹೊಮ್ಮಿಲ್ಲ.

-ಡಾ. ಪಿ. ಸದಾನಂದ ಮೈಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement