'ಬಿಲೇ'ಯ ತುಂಟಾಟ
ವಿವೇಕಾನಂದರು 1863ನೇ ಜನವರಿ 12, ಸೋಮವಾರದಂದು ತಾಯಿ ಭುವನೇಶ್ವರಿದೇವಿ ಹಾಗೂ ತಂದೆ ವಿಶ್ವನಾಥ ದತ್ತರ ಹಿರಿಯ ಮಗನಾಗಿ ಜನಿಸಿದರು. ಕಾಶಿ ವಿಶ್ವನಾಥನ ವರಪ್ರಸಾದವೆಂದು ಭಾವಿಸಿ ಕುಟುಂಬದವರು ಪುಟ್ಟಿದ ಮಗುವಿಗೆ 'ವೀರೇಶ್ವರ' ಎಂದು ನಾಮಕರಣ ಮಾಡಿದರು. ಆದರೂ ಮುದ್ದಿನಿಂದ 'ಬಿಲೇ' ಎಂದೇ ಕರೆಯುತ್ತಿದ್ದರು. ಮುಂದೆ ನರೇಂದ್ರನಾಥ ದತ್ತ ಎಂಬ ಹೆಸರು ರೂಢಿಯಾಯಿತು.
ಬಾಲ್ಯದಲ್ಲಿ ಮಕ್ಕಳು ತುಂಟರಾಗಿದ್ದರೆ ಬುದ್ಧಿವಂತರಾಗುತ್ತಾರೆ ಎಂಬ ನಂಬಿಕೆಯಿದೆ. ನರೇಂದ್ರ ಎಳೆಯದರಲ್ಲಿ ಬಲು ತುಂಟನಾಗಿದ್ದ. ತಾಯಿಯು ಅವನನ್ನು ನೋಡಿಕೊಳ್ಳಲು ಇಬ್ಬರನ್ನು ನೇಮಕ ಮಾಡಿದ್ದರು. ಆದರೂ ಅವನ ಓಡಾಟ, ತುಂಟಾಟಗಳಿಗೆ ಎಣೆಯಿರಲಿಲ್ಲ. ನರೇಂದ್ರ ರಂಪಾಟ ಮಾಡಿದಾಗಲೆಲ್ಲ ಶಿವ.. ಶಿವ..! ಎನ್ನುತ್ತ ಅವನ ತಲೆಯ ಮೇಲೆ ಒಂದು ಕೊಡ ತಣ್ಣೀರು ಸುರಿಯುತ್ತಿದ್ದಳು. ಆಶ್ಚರ್ಯವೆಂದರೆ ತಕ್ಷಣವೇ ರಂಪಾಟ ನಿಲ್ಲುತ್ತಿತ್ತು.
ತಾಯಿಯು ನರೇಂದ್ರನ ರಂಪಾಟ,ತುಂಟಾಟಗಳನ್ನು ನಿಲ್ಲಿಸಲು ಹರಸಾಹಸ ಪಡುತ್ತಿದ್ದಳು. ಆದರೆ ತಾಯಿಯು ಮಗನನ್ನು ಹಿಡಿದಿಡುವುದರಲ್ಲಿಯೇ ಸಂತೋಷಪಡುತ್ತಿದ್ದಳು. ವಿವೇಕಾನಂದರ ಕಾರ್ಯಚಟುವಟಿಕೆಯ ಪ್ರತಿಭೆಯು ಬಾಲ್ಯದಲ್ಲಿಯೇ ಪ್ರಜ್ವಲಿಸುತ್ತಿತ್ತು. ನರೇಂದ್ರನ ಓಡಾಟ, ತುಂಟಾಟಗಳು ತಾಯಿಯನ್ನು ಎಷ್ಟೇ ಬಳಲಿಸಿದರೂ ಅದರಲ್ಲಿಯೇ ಆಕೆ ಸಂತೋಷ ಕಾಣುತ್ತಿದ್ದಳು. ಯಾವ ತಾಯಿ ತಾನೇ ತನ್ನ ಮಗು ಮೊದ್ದನಾಗಿ ಮೂಲೆಯಲ್ಲಿ ಕೂತಿರಬೇಕೆಂದು ಬಯಸುತ್ತಾಳೆ?
-ಆನಂದ ಎಸ್.ಎನ್.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.