ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇದ್ದುದರಲ್ಲಿ ಖುಷಿಪಡಿ

Vishwanath S
Updated On : 19 May 2013, 4:19 am

ಯಾರನ್ನಾದರೂ ಕೇಳಿ ನೋಡಿ, 'ತೃಪ್ತಿಯಿಂದ ಬದುಕುತ್ತಿದ್ದೀರಾ' ಎಂದು. ಹೆಚ್ಚಿನವರ ಉತ್ತರ 'ಇಲ್ಲ' ಎನ್ನುವುದೇ ಆಗಿರುತ್ತದೆ. 'ಜೀವನದಲ್ಲಿ ಏಕೆ ತೃಪ್ತಿ ಇಲ್ಲ?' ಮರುಪ್ರಶ್ನೆ ಎಸೆದರೆ ಅದಕ್ಕೆ ಉತ್ತರ ಸಿಗುವುದಿಲ್ಲ. ಉತ್ತರ ಸಿಗಲು ಅತೃಪ್ತಿಗೆ ಏನಾದರೂ ಕಾರಣ ಇದ್ದರೆ ತಾನೆ? ಇಲ್ಲವೇ ನಮಗಿಂತ ಚೆನ್ನಾಗಿರುವವರೊಂದಿಗೆ ನಮ್ಮನ್ನು ಹೋಲಿಸಿಕೊಂಡು ವ್ಯಥೆ ಪಡುತ್ತೇವೆ.
ಬದುಕೆಂದರೆ ಹಾಗೆಯೇ. ನಮಗೆ ಎಲ್ಲವೂ ಇರುತ್ತದೆ, ಆದರೂ ಏನೂ ಇಲ್ಲ ಎಂದು ನಮ್ಮಷ್ಟಕ್ಕೆ ನಾವೇ ಅಂದುಕೊಂಡು ಕೊರಗುತ್ತಿರುತ್ತೇವೆ. ಕೆಲಸವೇ ಇಲ್ಲದೇ ಅಂಡಲೆಯುತ್ತಿದ್ದಾಗ ಯಾವುದಾದರೊಂದು ಉದ್ಯೋಗ ಸಿಕ್ಕರೆ ಸಾಕಪ್ಪಾ ಎನ್ನುವ ಭಾವನೆ. ನೌಕರಿ ಸಿಕ್ಕರೆ ಇನ್ನೂ ಹೆಚ್ಚಿನ ಸಂಬಳದ ಆಸೆ. ಪ್ರತಿಯೊಂದರಲ್ಲೂ ಅಷ್ಟೆ. ಒಂದನ್ನು ಪಡೆಯುತ್ತಿದ್ದಂತೆ ಇನ್ನೊಂದನ್ನು ದಕ್ಕಿಸಿಕೊಳ್ಳುವ ಬಯಕೆ. ಅದು ನಮ್ಮ ಅರಿವಿಗೇ ಬಾರದಂತೆ ನಮ್ಮ ಮನಸ್ಸಿನಲ್ಲಿ ಮೊಳೆಯಲಾರಂಭಿಸುತ್ತದೆ. ಅದನ್ನು ಪಡೆಯಲು ಪ್ರಯತ್ನ ಶುರುವಾಗುತ್ತದೆ. ಆ ಭರದಲ್ಲಿ ಅದೆಷ್ಟೋ ಖುಷಿಯ ಕ್ಷಣಗಳನ್ನು ಕಳೆದುಕೊಂಡು ಬಿಡುತ್ತೇವೆ. ಆಮೇಲೊಂದು ದಿನ ಆ ಕಳೆದುಕೊಂಡಿದ್ದರ ಅನುಭವವಾದಾಗ ಎಲ್ಲದಕ್ಕೂ ನಾನೇ ಕಾರಣ ಎಂದುಕೊಂಡು ಪರಿತಪಿಸುತ್ತೇವೆ.
ಅಷ್ಟಕ್ಕೂ ತೃಪ್ತಿ ಎನ್ನುವುದಕ್ಕೆ ಮಾನದಂಡವೇ ಇಲ್ಲ. ಅದು ಮರಳುಗಾಡಿನ ಓಯಸಿಸ್ ಥರ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎನ್ನುವ ಬಗ್ಗೆ ನಾವೆಂದೂ ಆಲೋಚಿಸುವುದೇ ಇಲ್ಲ. ಇದ್ದುದರಲ್ಲಿಯೇ ಸಂತೋಷ, ನೆಮ್ಮದಿ ಕಾಣುವ ಪ್ರಯತ್ನವನ್ನೂ ಮಾಡುವುದಿಲ್ಲ.
'ಬದುಕು ಕ್ಷಣಕ್ಷಣ ಕಳೆದುಹೊಗುತ್ತಿದೆ. ಮರಳಿ ಬರುವುದಿಲ್ಲ, ಗೋವಿಂದನ ನೆನೆ ಮೂಢಮನವೇ' ಎನ್ನುತ್ತಾರೆ ಶಂಕರಾಚಾರ್ಯರು. ಅವರು ಆಧ್ಯಾತ್ಮಿಕ ದೃಷ್ಟಿಯಿಂದ ಹೇಳಿದ ಮಾತನ್ನು ನಾವು ಲೌಕಿಕಕ್ಕೆ ಅನ್ವಯಿಸಬಹುದು. ಇಲ್ಲದುದರ ಬಗ್ಗೆ ಕೊರಗುವುದಕ್ಕಿಂತ, ಇದ್ದುದರಲ್ಲಿ ಸುಖಪಟ್ಟ ನಮ್ಮ ಹಿರಿಯರ ಮೇಲ್ಪಂಕ್ತಿಯನ್ನು ನಾವೇಕೆ ಅನುಸರಿಸಬಾರದು? ಬದುಕಿನ ನಿತ್ಯದ ಸಣ್ಣಪುಟ್ಟ ಸಂಗತಿಗಳಲ್ಲೇ ಖುಷಿಪಡಬಹುದಾದ ವಿಚಾರಗಳಿವೆ ಎಂಬುದನ್ನು ಯಾಕೆ ಅರ್ಥ ಮಾಡಿಕೊಳ್ಳಬಾರದು? ಸಣ್ಣಪುಟ್ಟ ಮಕ್ಕಳು ದಿಗ್ವಿಜಯ ಸಾಧಿಸಿ ಬಂದು ಖುಷಿಪಡುತ್ತವೋ, ಆಟದಲ್ಲಿ ಬಂದ ಉಲ್ಲಾಸದ ಕ್ಷಣಗಳಿಗಾಗಿ ಸಂತಸಪಡುತ್ತವೋ? ಒಂದು ಕ್ಷಣ ಯೋಚಿಸಿ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement