ನಿರಂಜನ್ FAN
ಸಾಮಾನ್ಯವಾಗಿ ರೇಡಿಯೋ ಜಾಕಿಗಳ ಕಂಠ ಕೇಳಿದವರೇ ಹೆಚ್ಚು, ಕಂಡವರು ಕಡಿಮೆ. ಆದರೆ ಆರ್ಜೆ ನಿರಂಜನ್ ಇದಕ್ಕೊಂದು ಅಪವಾದ. ಯಾಕೆಂದರೆ ಸುವರ್ಣ ನ್ಯೂಸ್, ಝೀ ಕನ್ನಡ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕನಾಗಿ ಹಾಯ್ ಹೇಳಿದ ಪ್ರತಿಭೆ. ಮರಳಿ ರೇಡಿಯೋ ಲೋಕಕ್ಕೆ ಕಾಲಿಟ್ಟು, ಬಿಗ್ ಎಫ್ಎಂ ವಾಹಿನಿಯಲ್ಲಿ ಅಪಾರ ಅಭಿಮಾನಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಇದಕ್ಕೆ ನಿರಂಜನ್ ನೀಡುವ ಕಾರಣ- ಟಿವಿಯಲ್ಲಿ ನಮ್ಮ ಮುಖ ನೋಡಿ ಮಾತು ಹಂಚಿಕೊಳ್ಳುವವರಲ್ಲಿ ಒಂದು ಲಿಮಿಟೇಶನ್ ಇರುತ್ತೆ. ಆದರೆ ರೇಡಿಯೋನಲ್ಲಿ ಬರೇ ಫೋನ್ ಸಂಭಾಷಣೆಯಲ್ಲಿ ಮಾತನಾಡುವವರಿಗೆ ನಮ್ಮ ಅಶರೀರ ಸಮಾಧಾನ ತುಂಬಾ ಪರಿಣಾಮಕಾರಿಯೆನಿಸುತ್ತದೆ. ಜತೆಗೆ ನನ್ನನ್ನು ಈ ಮೊದಲು ಟೀವಿಯಲ್ಲಿ ನೋಡಿದ ಕಲ್ಪನೆಯೂ ಇರುವುದರಿಂದ ಸಹಜವಾಗಿಯೇ ಅಭಿಮಾನಿಗಳು ಜಾಸ್ತಿಯಿರಬಹುದು. ಈ ಮಾತು ನಿಜಗೊಳಿಸುವಂತೆ ನಿತ್ಯವೂ ಇವರ ಎಫ್ಎಂ ಸ್ಟೇಶನ್ನಲ್ಲಿ ಈತನಿಗೆ ಉಡುಗೊರೆಗಳ ಮಹಾಪೂರವಿರುತ್ತದೆ.
ಪ್ರೀತಿಪ್ರೇಮದ ವಿಚಾರದಲ್ಲಿ ಸದಾ ಶ್ರೇಷ್ಠ ಸಲಹೆಗಳಿಗೆ ಹೆಸರಾಗಿರುವ ನಿರಂಜನ್ಗೆ ತನ್ನ ಕಾರ್ಯಕ್ರಮದ ಮೂಲಕ ಬೇರೆ ಬೇರೆಯಾಗಿದ್ದ ಗಂಡಹೆಂಡಿರನ್ನು ಜೊತೆಗೂಡಿಸಿರುವ ತೃಪ್ತಿಯಿದೆ. ಪ್ರೇಮವೇ ಬದುಕು ಎನ್ನುವ ಈತನಿಗೆ ಸ್ವಂತ ಬದುಕಿನಲ್ಲಿ ಕೂಡ ಇದುವರೆಗಿನ ಸಾಧನೆಗೆ ಬಾಲ್ಯದ ಗೆಳತಿಯ ಪ್ರೋತ್ಸಾಹವೇ ಪೂರಕವಾಗಿದೆಯಂತೆ. ಆದರೆ ದುರದೃಷ್ಟವಶಾತ್ ಆಕೆ ಈಗ ಸಂಪರ್ಕ ಕಳೆದುಕೊಂಡು ಬಿಟ್ಟಿದ್ದಾಳೆ. ಎಫ್ಎಂ ಸ್ಟೇಶನ್ಗಳನ್ನು ಕೇಂದ್ರೀಕರಿಸಿದ ಕತೆಯಿರುವ ಧಾರಾವಾಹಿಯ ಮೂಲಕ ಹೊಸ ಪ್ರಯೋಗ ಮಾಡುವ ಆಕಾಂಕ್ಷೆ ನಿರಂಜನ್ದು.
ಅಭಿಮಾನಿ ಪ್ರತಿಭೆ
ತೆರೆಯ ಮೇಲಿನ ಕಲಾವಿದರಿಗೆ ಅಭಿಮಾನ ಸೂಚಿಸುವವರಿಗೆ ನಮ್ಮಲ್ಲಿ ಯಾವಾಗಲೂ ಒಂದಷ್ಟು ಕಡಿಮೆ ದರ್ಜೆ. ಆದರೆ ಇಲ್ಲೊಬ್ಬಳು ಅಭಿಮಾನಿ, ವೈಯಕ್ತಿಕವಾಗಿಯೂ ಬಹುಮುಖ ಪ್ರತಿಭಾವಂತೆ.
ಮಧ್ಯಾಹ್ನದ ಊಟವನ್ನಾದರೂ ಬಿಟ್ಟೇನು, ಆದರೆ ಮಧ್ಯಾಹ್ನ ಎರಡರಿಂದ ಐದರವರೆಗೆ ಬಿಗ್ ಎಫ್ಎಂನಲ್ಲಿ ನಿರಂಜನ್ ಕಾರ್ಯಕ್ರಮ ಕೇಳದಿರಲಾರೆ ಎನ್ನುವ ಅಭಿಮಾನಿ ಈ ಪ್ರಿಯಾಂಕ ಗೌಡ. ಎಳವೆಯಿಂದಲೇ ಟಿವಿಗೆ ಎಷ್ಟೊಂದು ಅಡಿಕ್ಟ್ ಆಗಿದ್ದಳೆಂದರೆ, ಮನೆಯಲ್ಲಿ 'ಟೀವಿ ಪೇಶೆಂಟ್' ಅಂತಾನೇ ಕರೆಯುತ್ತಿದ್ದರು. ಶಾಲಾ ದಿನಗಳಿಂದಲೇ ನೃತ್ಯ ಕಾರ್ಯಕ್ರಮ ನೀಡುತ್ತಿದ್ದಳು. ಗಾಯಕಿಯಾಗಿ ಬಹುಮಾನ ಗಳಿಸಿದ್ದಳು. ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಜನಪದ ನೃತ್ಯಕ್ಕೆ ಪ್ರಥಮ ಪ್ರಶಸ್ತಿ ಪಡೆದಳು. ಒಟ್ಟಿನಲ್ಲಿ ಯಶಸ್ವಿ ಗಾಯಕಿ, ನರ್ತಕಿ, ಕವಯಿತ್ರಿ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕೆಂಬ ಆಸೆ. 'ನಾನೇ ರಾಜಕುಮಾರಿ' ಎಂಬ ವಿದ್ಯಾರ್ಥಿನಿಯರ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿ ವಿಜೇತೆಯಾಗಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಒಂದು ಅವಕಾಶ ಸಿಕ್ಕರೆ ನೋಡಬಯಸುವ ವ್ಯಕ್ತಿ ಯಾರೋ ಮಹನೀಯರಾಗಿರುತ್ತಾರೆ. ಆದರೆ ಪ್ರಿಯಾಂಕಳ ಪಾಲಿಗೆ ಆ ಮಹನೀಯ ನಿರಂಜನ್ ದೇಶಪಾಂಡೆಯಂತೆ! ಕೆಆರ್ಪುರಂನ ಈ ಚೆಲುವೆ ಪ್ರಸ್ತುತ ಅಂತಿಮ ಬಿಕಾಂ ವಿದ್ಯಾರ್ಥಿನಿ. ಈಕೆ ಸಿಎ ಆಗಬೇಕೆಂಬುದು ಮನೆಯವರ ಆಸೆ.
-ಶಶಿಕರ ಪಾತೂರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.