ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಸವ ವಚನ

ಕಾಡಿನಲ್ಲಿ ಹುಟ್ಟಿ ಕಾಡಿನಲ್ಲೇ ಮೆರೆದು, ಮಳೆಯಾಗುವ, ಮರೆಯಾಗುವ...

Vishwanath S
Updated On : 20 May 2013, 12:38 pm

ಕಾಡಿನಲ್ಲಿ ಹುಟ್ಟಿ ಕಾಡಿನಲ್ಲೇ ಮೆರೆದು, ಮಳೆಯಾಗುವ, ಮರೆಯಾಗುವ ದೊಡ್ಡ ಕಲಾಕೃತಿ 'ಮಲೆಗಳಲ್ಲಿ ಮದುಮಗಳು'. ಪುಟ್ಟಪ್ಪ ಅವರ ಕನಸಿನ ಕೂಸು. ಕುವೆಂಪು ಕಂಡ ಆಗಿನ ಕಾಡು ಈಗಿಲ್ಲ. ಆದರೂ, ರಂಗ ನಿರ್ದೇಶಕ ಡಾ. ಸಿ. ಬಸವಲಿಂಗಯ್ಯ ಆ ಕಾಡನ್ನು ಮರುಸೃಷ್ಟಿಸಿದ್ದಾರೆ. ಕುಪ್ಪಳಿಯನ್ನು ಬೆಂಗಳೂರಿಗೆ ತಂದಿದ್ದಾರೆ. 21ನೇ ಶತಮಾನದ ಯುವಕರು ಹಿಂದೋಟಲ್ಲಿ ಓಡಿ, 20ನೇ ಶತಮಾನದ ಪಾತ್ರಗಳಾಗಿದ್ದಾರೆ. ತೀರ್ಥಹಳ್ಳಿಯ ಅಂದಿನ ಜನಜೀವನ, ಸಂಸ್ಕೃತಿ, ಜನರ ಮುಗ್ಧತೆ, ಮೂಢನಂಬಿಕೆ, ಸಾಮಾಜಿಕ ಸ್ಥಿತ್ಯಂತರ ಬಿಂಬಿಸುವ ಅಪರೂಪದ ಕಾದಂಬರಿಯನ್ನು ರಂಗರೂಪಕ್ಕೆ ತರುವುದು ಮಹಾ ಸಾಹಸವೇ ಸರಿ. ಅದನ್ನು 9 ಗಂಟೆಯಲ್ಲಿ ವಿಭಿನ್ನವಾಗಿ ಕಟ್ಟಿಕೊಟ್ಟ ಹಾಗೂ ಮಲೆನಾಡಿನಲ್ಲೇ ಕುಳಿತು ನೋಡಿದ ನೈಜ ಅನುಭವ ಕೊಡುವ ಹೊಸ ಪ್ರಯೋಗ ಈ ರಂಗರೂಪ. ಇದೇನು ಒಂದು ರಾತ್ರಿಯ ಕೆಲಸವಲ್ಲ. ಪಾತ್ರಗಳನ್ನು ತಿದ್ದಿ ತೀಡಲು ಎಷ್ಟು ಬಸವಳಿದಿದ್ದಾರೆ ಅಂತ ಬಸವಲಿಂಗಯ್ಯನವರಿಗೇ ಗೊತ್ತು. ಅವರು ಪಟ್ಟ ಶ್ರಮವನ್ನೆಲ್ಲ ಹೀಗೆ ಮಾತಿನಲ್ಲಿ ಸುರಿದರು...

 'ಮಲೆಗಳಲ್ಲಿ ಮದುಮಗಳು' ಕನ್ನಡ ಸಾಹಿತ್ಯ ಲೋಕದಲ್ಲಿ ಮೈಲಿಗಲ್ಲು. ಅದಕ್ಕೆ ಹೊಸ ಸ್ಪರ್ಶ ನೀಡಿ ರಂಗರೂಪಕ್ಕೆ ತರುವ ಕನಸು ಅರಳಿದ್ದು ಹೇಗೆ? ಉದ್ದೇಶ ಈಡೇರಿದೆಯೇ?
ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ಬಂದಮೇಲೆ ಆಲೋಚನೆ ಬದಲಾಯ್ತು. ಕಲಾಕ್ಷೇತ್ರದ ಆಸಕ್ತಿ ಹೆಚ್ಚಿತು. ರಂಗಕರ್ಮಿ ಪ್ರಸನ್ನ ನಿರ್ದೇಶಿಸಿದ್ದ ಒಂದು ನಾಟಕ ನೋಡಿ, 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಸಿನಿಮಾ/ ನಾಟಕ ರೂಪಕ್ಕೆ ಇಳಿಸುವ ಕನಸು ಅಂದೇ ಕಟ್ಟಿದ್ದೆ. ಮೊದಲ ಪ್ರಯೋಗವಾಗಿ ಸಾಹಿತಿ ದೇವನೂರು ಮಹಾದೇವ ಅವರ 'ಕುಸುಮಬಾಲೆ'ಯನ್ನು ಮೈಸೂರಿನಲ್ಲಿ ನಾಟಕ ಮಾಡಿದೆವು. ಇಂಥ ಹಲವು ನಾಟಕ ಮಾಡಿದ ಮೇಲೆ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಸಾಮಾನ್ಯರ ಬದುಕು ಕಟ್ಟಿಕೊಟ್ಟು, ವಿದೇಶಿ ಆಡಳಿತ ಬರುವ ಬಗ್ಗೆ ಹೇಳಿದ್ದರು. ಅದನ್ನು ಓದಲು ಜನರಿಗೆ ಕಷ್ಟವಾಗುತ್ತದೆ. ಒಂದು ರಾತ್ರಿ ನಿದ್ದೆಗೆಡಬಹುದು. ಹಾಗಾಗಿ ಯುವಕರನ್ನು ಮತ್ತೆ ಕಾದಂಬರಿ ಓದಲು ಹಚ್ಚುವ ಮನಸ್ಸು ಮಾಡಿದೆ. ಮನೋಲೋಕದಲ್ಲಿ ಕಟ್ಟಿಕೊಂಡರೆ ಯಾವುದೂ ಕಷ್ಟವಲ್ಲ. ದೇಹ ಹಾಗೂ ಮನಸ್ಸು ಹಿಡಿದಿಟ್ಟರೆ ಎಲ್ಲವೂ ಸಾಧ್ಯ. ಕುವೆಂಪುರನ್ನು ಜನರ ಮುಂದೆ ಕೊಂಡೊಯ್ದು ಸಾಹಿತ್ಯದ ಹುಚ್ಚು ಹಿಡಿಸುವುದೇ ಇದರ ಉದ್ದೇಶ. ನಾಟಕದ ಮೂಲಕ ಕಲಾಗ್ರಾಮ ಜನರಿಗೆ ತಿಳಿಯಬೇಕಿತ್ತು. ಅದು ಈಡೇರಿದೆ.

ಕಾಬಂದರಿಯನ್ನು ರಂಗರೂಪಕ್ಕೆ ತರುವಾಗ ಅದು ಸವಾಲು ಅನಿಸಲಿಲ್ಲವೇ?
ಇದಕ್ಕೆ ಇಂಥದ್ದೇ ಚೌಕಟ್ಟು ಹಾಕಿದ್ದಿದ್ದರೆ ಕಷ್ಟವಾಗುತ್ತಿತ್ತು. ಆದರೆ, ಹಾಗೆ ಮಾಡಲಿಲ್ಲ. ಈ ಹಿಂದೆ ಮೈಸೂರಿನಲ್ಲಿ ಇದೇ ನಾಟಕ ನಿರ್ದೇಶಿಸಿ ಪ್ರದರ್ಶಿಸಲಾಗಿತ್ತು. ಆದರೆ, ಈಗ ಸಾಕಷ್ಟು ಪಾತ್ರಧಾರಿಗಳು ಹೊಸಬರು. ಹಿಂದಿನ ನಾಟಕದ ಸಿಡಿಯನ್ನು ಮಕ್ಕಳಿಗೆ ನೀಡಿ, ನೀವಿದನ್ನು ನೋಡಿ ಯಾವ ಪಾತ್ರ ಮಾಡುತ್ತೀರಿ ಎಂದು ಹೇಳಿ ಎಂದೆ. ನಂತರ ಅವರನ್ನು ತಂಡಗಳನ್ನಾಗಿ ವಿಂಗಡಿಸಿದೆ. ಅವರಲ್ಲಿ ಆಸಕ್ತಿ ಇತ್ತು ಬೇಗ ಕಲಿತರು.

 ಅದು ಸ್ವಾತಂತ್ರ್ಯಪೂರ್ವದ ಬದುಕು, ಕಾಲಘಟ್ಟ. ಆ ಚಿತ್ರಣವನ್ನು ನಾಟಕದಲ್ಲಿ ಹೇಗೆ ಮೂಡಿಸಿದಿರಿ?
ಆಹಾರ್ಯ ಅಭಿನಯದಲ್ಲಿ. ಅದಕ್ಕೆ ಆಗಿನ ಕಾಲದ ಉಡುಪು ಬೇಕು. ಅದಕ್ಕಾಗಿ ಸ್ನೇಹಿತ ದ್ವಾರಕಿಯೊಂದಿಗೆ ಹೋಗಿ ಮಲೆನಾಡಿನ ಪರಿಸರ ನೋಡಿಕೊಂಡು ಬಂದೆವು. ಈ ನಾಟಕದಲ್ಲಿ ಪ್ರತಿಯೊಬ್ಬರೂ ನಡೆಯಲ್ಲೂ ಮಲೆನಾಡಿನ ಸೊಗಡಿದೆ. ನಡಿಗೆಯೇ ಇಲ್ಲಿ ಮುಖ್ಯ. ಹೀಗಾಗಿ, ಪಾಥ್ವೇ ಸೃಷ್ಟಿಯಾಯಿತು. ಹುಲಿಕಲ್ನೆತ್ತಿ ಇಳಿದು ಮೇಗರವಳ್ಳಿಗೆ ಬಂದು, ಕೊನೆಗೆ ಎಂಡ್ ಆಗೋದು ತೀರ್ಥಹಳ್ಳಿಯಲ್ಲಿ. ಫ್ರೇಮ್ನಲ್ಲಿ ಇವೆಲ್ಲ ಪ್ರಯೋಗ ಸಾಧ್ಯವಿಲ್ಲ. ಅದನ್ನೇ ನಾಟಕ ಎನ್ನುತ್ತಾರೆ. ನಾವು ಗ್ರೀಕರನ್ನು ಹಿಂಬಾಲಿಸುವುದು ನಿಲ್ಲಿಸಬೇಕು.

 ನಾಟಕದಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡ ಬಗೆ ಹೇಗೆ?
ಇಲ್ಲಿ ಒಡ್ಡಿಕೊಂಡ ಬಗೆ ಕಡಿಮೆ. 3 ವರ್ಷದ ಹಿಂದೆ ಮೈಸೂರಿನಲ್ಲಿ ಸಿದ್ಧತೆ ನಡೆಸಿದ್ದರಿಂದ ಈಗ ಒಡ್ಡಿಕೊಳ್ಳಲು ಸುಲಭವಾಯಿತು. ಮಕ್ಕಳಿಗೆ ಕಷ್ಟವಾಗಿರಬಹುದು. ಆದರೂ ಬೇಗ ಕಲಿತರು. ಆದರೆ, ಇಲ್ಲಿ ಜಾಗ ಹೊಸದಾಗಿದ್ದರಿಂದ, ಪರಿಸರ ಬದಲಾಗಿದ್ದರಿಂದ ಮೊದಲೇ ಬಂದು ಎಲ್ಲಿ ಯಾವ ರೀತಿ ಸೆಟ್ ಹಾಕಬೇಕೆಂದು ನೋಡಿಕೊಂಡು ಹೋಗಿದ್ದೆವು.

ಈ ಕಾದಂಬರಿಯನ್ನು ರಂಗರೂಪಕ್ಕೆ ತರುವ ಪರಿಕಲ್ಪನೆ ಹಿಂದೆ ಯಾರ ಶ್ರವಮಿದೆ?
ಕಲ್ಪನೆ, ಕನಸು ನನ್ನದು. ನಂತರ ಸ್ನೇಹಿತ ನಾರಾಯಣ ಸ್ವಾಮಿಗೆ ಒಗಾಯ್ಸಿದೆ. ಅವರು ಬೇರೆಯವರಿಗೆ ಹೇಳಿದರು. ಹಾಗೆ ಎಲ್ಲರ ಐಡಿಯಾಗಳೂ ಕೂಡಿದವು. ನಮಗೆ ಮುಖ್ಯವಾಗಿ ಬೇಕಿದ್ದುದು ಮನೆ, ಪರಿಸರ, ಕಾಡು. ಅದು ಎಲ್ಲರ ಶ್ರಮದಿಂದ ಸಾಧ್ಯವಾಯಿತು.

 ಕರ್ನಾಟಕದ ರಂಗಭೂಮಿ ಎಂದಾಕ್ಷಣ ನೀನಾಸಂ, ಮೈಸೂರಿನ ರಂಗಾಯಣ, ಸಾಣೇಹಳ್ಳಿ ನೆನಪಾಗುತ್ತವೆ. ನೀವು ಅವನ್ನು ಸೆಡ್ಡುಹೊಡೆದಿರಿ ಎನಿಸುವುದಿಲ್ಲವೇ?

ಸೆಡ್ಡು ಹೊಡೆದೆವು ಎನ್ನುವುದಕ್ಕಿಂತ ಅಲ್ಲಿ ನಿಗದಿತ ಪದವಿ ಬೇಕು. ನಮ್ಮಲ್ಲಿ ಅಭಿನಯಿಸುತ್ತಿರುವವರಿಗೆ ಯಾವುದೇ ಪದವಿ ಬೇಕಿಲ್ಲ. ಪ್ರತಿಯೊಬ್ಬನಿಗೂ ಅವಕಾಶ ಸಿಕ್ಕರೆ ಅವನು ಏನಾದರೂ ಆಗಬಲ್ಲ. ನಮ್ಮಲ್ಲಿ ಓದಲು ಬರೆಯಲು ಬರದ ಅದ್ಭುತ ಕಲಾವಿದರಿದ್ದಾರೆ.
 
ನಾಟಕದಲ್ಲಿ ಮುಖ್ಯ ಸ್ವರವಾಗಿರುವ ಗುತ್ತಿನಾಯಿ ಹಾಗೂ ನಾಯಿಗುತ್ತಿ ಪಾತ್ರಗಳನ್ನು ಇನ್ನೂ ಪ್ರಭಾವಿಯಾಗಿ ಬಿಂಬಿಸಬಹುದಿತ್ತಲ್ಲವೇ?
ಇಲ್ಲಿ ಎಲ್ಲರೂ ಒಂದೇ. ಆ ಎರಡು ಪಾತ್ರಗಳು ಜನರ ಗಮನ ಸೆಳೆಯಬಹುದು. ಆದರೆ, ಗುತ್ತಿನಾಯಿ ಹಾಗೂ ನಾಯಿಗುತ್ತಿ ಇಡೀ ನಾಟಕದಲ್ಲಿ ಎಲ್ಲೂ ನಿಲ್ಲುವುದಿಲ್ಲ. ಇಲ್ಲಿ ಯಾರೂ ಹೀರೋ ಅಲ್ಲ. ಪ್ರಭಾವಿಯನ್ನು ಹೊಡೆದುಹಾಕಲಾಗಿದೆ. ಎಲ್ಲರೂ ಮುಖ್ಯಪಾತ್ರಧಾರಿಗಳೇ. ಇದೊಂದು ರೀತಿಯ 'ಪ್ರತಿಮಾ ವಿಧಾನ'.

 ಈ ನಾಟಕವನ್ನು ರಾಜ್ಯ ಬಿಟ್ಟು ಬೇರೆಡೆ ಮಾಡುವ ಯೋಜನೆ ಇದೆಯೇ?
ಅದು ಸರ್ಕಾರಕ್ಕೆ ಬಿಟ್ಟದ್ದು. ಅದಕ್ಕೂ ಮುನ್ನ ಜನರು ಮನಸ್ಸು ಮಾಡಬೇಕು. ಜನರಿಂದ ಸರ್ಕಾರಕ್ಕೆ ಒತ್ತಡ ಬಂದರೆ, ಸರ್ಕಾರ ಮನಸ್ಸು ಮಾಡಿದರೆ ಸಾಧ್ಯವಾಗಬಹುದು. ಹಾಗೆ ಬೇರೆಡೆ ಮಾಡಿದಲ್ಲಿ ಕೆಲ ತಿಂಗಳು ಬಿಟ್ಟು ಮತ್ತೆ ಮಾಡುತ್ತೇವೆ. ಸದ್ಯ ಮುಂದಿನ ಶೋ ಕುಪ್ಪಳ್ಳಿಯಲ್ಲಿದೆ.

- ಈಗಿನ ರಂಗಭೂಮಿ ಬಗ್ಗೆ ನಿಮ್ಮ ಅಭಿಪ್ರಾಯ?
ರಂಗಭೂಮಿ ನಿಂತ ನೀರಿನಂತಾಗಿದೆ. ಅದಕ್ಕೆ ಅಂಟಿರುವ ಜಡ ಬಿಡಿಸಲು ಯುವಕರು ಮನಸ್ಸು ಮಾಡಬೇಕು. ಇಡೀ ಹಳ್ಳಿಗೆ ಹಾಗೂ ಹಳ್ಳಿಯ ಬಗೆಗಿನ ಸಂಸ್ಕೃತಿಯನ್ನು ಎಲ್ಲಾ ಜನರಿಗೆ ತಲುಪಿಸುವ ಉದ್ದೇಶದಿಂದ ನೀನಾಸಂನ 'ತಿರುಗಾಟ' ಆರಂಭಿಸಲಾಯಿತು. ಆದರೆ, ಈಗ ಅವರು ತೋರಿಸುವ ನಾಟಕಗಳೇ ಬೇರೆ. ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಉಳಿಸಬೇಕು. ನನ್ನ ಕನಸು ಹಳ್ಳಿ. ಹಾಗಾಗಿ ನನ್ನ ನಾಟಕಗಳಲ್ಲಿ ಹೆಚ್ಚಾಗಿ ಹಳ್ಳಿಗಳು ಇರುತ್ತವೆ. ಅಲ್ಲಿ ಕಲಾಕೃತಿ ಕಟ್ಟಲು ಹೊರಟಿದ್ದೇನೆ.

ಬಸವಲಿಂಗಯ್ಯನವರಿಗೆ ರಂಗವೇ ಉಸಿರು
ಡಾ.ಸಿ. ಬಸವಲಿಂಗಯ್ಯ ಅವರ ಪೋಷಕರಾದ ಚಿಕ್ಕಣ್ಣ- ಚಿಕ್ಕಮ್ಮ ಮೂಲತಃ ತುಮಕೂರು ಜಿಲ್ಲೆಯವರು. ಆದರೆ ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಎನ್ಎಸ್ಡಿ ಪದವಿ, ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ನಂತರ ಮೈಸೂರಿನ ರಂಗಾಯಣದಲ್ಲಿ ಎರಡು ಬಾರಿ ನಿರ್ದೇಶಕರಾಗಿ ಸೇವೆ. ಈ ವೇಳೆ ಮಕ್ಕಳಿಗಾಗಿ 'ಚಿಣ್ಣರ ಮೇಳ' ಆರಂಭ. ಜನ ಸಂಸ್ಕೃತಿ ಎಂಬ ಕಲಾತಂಡ ಕಟ್ಟಿದರು. ಗ್ರಾಮೀಣ ಪ್ರದೇಶದ ಯುವಕರ ಜೊತೆ ಹೆಚ್ಚೆಚ್ಚು ಬೆರೆಯುವುದು, ಕಲಾತಂಡ ರಚಿಸಿ ನಾಟಕಗಳನ್ನು ಮಾಡುವುದು ಇವರ ಹವ್ಯಾಸ.
ಸಾಂಸ್ಕೃತಿಕ ಕಲಾತಂಡದಲ್ಲಿ ತೊಡಗಿಸಿಕೊಂಡ ಇವರಿಗೆ 'ನಾಟಕ ಅಕಾಡೆಮಿ', 'ರಾಜ್ಯೋತ್ಸವ', 'ಶಂಕರೇಗೌಡ' ಸೇರಿದಂತೆ ವಿವಿಧ ಪ್ರಶಸ್ತಿಗಳು ಬಂದಿವೆ. ನೀನಾಸಂನ ತಿರುಗಾಟ ನಾಟಕ ನಿರ್ದೇಶಕರಾಗಿ, ಸಾಣೇಹಳ್ಳಿ ರಂಗ ತಂಡದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ವಾರ್ತಾ ಇಲಾಖೆಯ 'ಮನುಷ್ಯ ಜಾತಿ ತಾನೊಂದೆ ವಲಂ' ಧ್ವನಿ ಬೆಳಕಿನ ರೂಪಕವನ್ನು ನಿರ್ದೇಶಿಸಿದ್ದಾರೆ. ಗ್ರಾಮೀಣ ಸೊಗಡಿನ ಹಾಗೂ ಜನಪರ ಯೋಚನೆಯುಳ್ಳ ಇವರು ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.

- ಸಂದರ್ಶನ: ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments