ಶ್ವಾನದಳದ ಪಾತ್ರ
ಶ್ವಾನದಳವೂ ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗ. ಯಾವುದೇ ಅಪರಾಧ ನಡೆದಾಗ ಅಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಾಗುವಂತೆ ಶ್ವಾನದಳ ಅಂದರೆ ಶ್ವಾನವೂ ಕಡ್ಡಾಯವಾಗಿ ಹಾಜರಾಗಬೇಕು. ಪೊಲೀಸರಂತೆ ಅದೂ ಸಹ ಕಳ್ಳನನ್ನು ಹುಡುಕಬೇಕು. ಅಂದರೆ, ಕಳ್ಳರ ಜಾಡನ್ನು ಪತ್ತೆ ಮಾಡುವ ಮೂಲಕ ಅದನ್ನು ಪೊಲೀಸರಿಗೆ ತಿಳಿಸಿ, ಆರೋಪಿ ಪತ್ತೆಗೆ ಸಹಾಯ ಮಾಡುವುದು ಈ ಶ್ವಾನಗಳ ಕರ್ತವ್ಯ.
ಪ್ರತಿ ಅಪರಾಧ ನಡೆದಾಗ ಒಂದು ಅಥವಾ ಎರಡು ಶ್ವಾನವನ್ನು ಘಟನೆ ನಡೆದ ಸ್ಥಳಕ್ಕೆ ಕರೆತಂದು ಪರಿಶೀಲಿಸಲಾಗುತ್ತದೆ. ಅವುಗಳನ್ನು ಕರೆದುಕೊಂಡು ಹೋಗಲು ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಇಂತಿಷ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಿಷ್ಟು ಶ್ವಾನಗಳು ಇರಬೇಕು. ಯಾವುದೇ ಅಪರಾಧ ನಡೆಯಲಿ, ನಡೆಯದಿರಲಿ ಶ್ವಾನಗಳು ಮಾತ್ರ ಸದಾ ಸಿದ್ಧವಿರಬೇಕು ಎಂಬ ನಿಯಮವಿದೆ. ಅದಕ್ಕಾಗಿ ಅವರಿಗೆ ನಿಗದಿಪಡಿಸಿದ ಸ್ಥಳದಲ್ಲಿ ತಮ್ಮ ಮಾಲೀಕರ (ಶ್ವಾನದಳದ ಪೊಲೀಸರು) ಜತೆ ಸಿದ್ದರಿರುತ್ತಾರೆ. ಯಾವುದೇ ಅಪರಾಧ ನಡೆದರೆ ಅಲ್ಲಿಗೆ ಶ್ವಾನಗಳನ್ನು ಕರೆದೊಯ್ಯಲಾಗುತ್ತದೆ.
ಪ್ರತಿ ಜಿಲ್ಲೆಯಲ್ಲೂ ಈ ಶ್ವಾನದಳ ಇರುತ್ತದೆ. ಬೆಂಗಳೂರಿನಲ್ಲಿ ಇದರ ಮುಖ್ಯಕಚೇರಿ ಇದೆ. ಒಬ್ಬರು ಐಜಿಪಿ ವರ್ಗದ ಅಧಿಕಾರಿ ಶ್ವಾನದಳದ ಬಗ್ಗೆ ಗಮನಹರಿಸುತ್ತಾರೆ. ಆ ಶ್ವಾನಗಳಿಗೆ ಪ್ರತಿನಿತ್ಯ ತರಬೇತಿ ನೀಡಲಾಗುತ್ತದೆ. ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ಒಂದೇ ಶ್ವಾನ ಕೆಲಸ ನಿರ್ವಹಿಸುವುದಿಲ್ಲ. ಅವುಗಳಿಗೂ ಪೊಲೀಸರಂತೆ ಪಾಳಿ ಪದ್ಧತಿ ಇರುತ್ತದೆ. ತೀರಾ ಅನಿವಾರ್ಯ ಎಂದಾಗ ಮಾತ್ರ ಅವುಗಳಿಗೆ ಹೆಚ್ಚುವರಿ ಕೆಲಸ ಇರುತ್ತದೆ. ಇಲ್ಲವಾದಲ್ಲಿ ಅವು ತಮ್ಮ ದಿನನಿತ್ಯದ ಕೆಲಸ ಮುಗಿಸಿ ಹಿಂತಿರುಗುತ್ತವೆ.
- ಶಾಂತ ತಮ್ಮಯ್ಯ