ಅದೇ ಬೇರೆ..ಇದೇ ಬೇರೆ...
ನಮ್ಮದೊಂದು ಸ್ನೇಹಿತರ ಬಳಗವಿದೆ. ನಿತ್ಯವೂ ಒಂದರ್ಧ ಗಂಟೆ ಸೇರಿ ಹರಟೆ ಹೊಡೆಯುವುದು ಮಾಮೂಲು. ಅವತ್ತು ಸುಬ್ಬರಾಯರು ಬಂದಿರಲಿಲ್ಲ. ಯಾರೇ ಗೈರು ಹಾಜರಾದರೂ ಅವರು ಕೈ ಕೊಡುವ ಆಸಾಮಿ ಅಲ್ಲ. ಬರಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಎರಡು ದಿನ ಮೊದಲೇ ಎಲ್ಲರಿಗೂ ಹೇಳಿಡುವ ವ್ಯಕ್ತಿ. ಅಂದು ಬಂದಿಲ್ಲ ಎಂದರೆ ಏನೋ ಅನಾರೋಗ್ಯ ಕಾಡಿರಬೇಕು ಎಂದು ನನ್ನ ಮನಸ್ಸು ತರ್ಕಿಸಿತು. 'ನಿನ್ನೆವರೆಗೂ ಗುಂಡು ಕಲ್ಲಿನ ಹಾಗಿದ್ದವರಿಗೆ ಇದ್ದಕ್ಕಿದ್ದಂತೆ ಕಾಯಿಲೆಯೆ? ಇರಲಿಕ್ಕಿಲ್ಲ' ಎಂದು ಉಳಿದವರು ವಾದಿಸಿದರು. ಆದರೂ ಏನಾಗಿದೆ ಎಂದು ವಿಚಾರಿಸಿ ಹೇಳುವಂತೆ ಅವರ ಪಕ್ಕದ ರಸ್ತೆಯ ಸದಾಶಿವ ಅವರಿಗೆ ಹೇಳಿದೆ. 'ಸುಬ್ಬರಾಯರನ್ನು ಆಸ್ಪತ್ರೆಗೆ ಸೇರಿಸಿದ್ದಾರಂತೆ' ಎಂಬ ಮಾಹಿತಿ ಬಂದಾಗ ಮನಸ್ಸು ತಡೆಯದೇ ದೌಡಾಯಿಸಿದೆ. 'ಗಾಬರಿ ಏನಿಲ್ಲ. ಫುಡ್ ಪಾಯಿಸನ್ ಆಗಿದೆ. ಅದರಿಂದ ವಾಂತಿ, ಭೇದಿ ಆಗಿ ನಿಶ್ಯಕ್ತಿ ಉಂಟಾಗಿದೆ. ಡ್ರಿಪ್ಸ್ ಹಾಕಿದ್ದೇವೆ' ಎಂದು ವೈದ್ಯರು ಹೇಳಿದಾಗ ಸಮಾಧಾನವಾಯಿತು. ಸುಬ್ಬರಾಯರ ಬಾಯಿ ಚಪಲ ಗೊತ್ತಿರುವಂಥದ್ದೇ. ನಮ್ಮಲ್ಲಿಗೆ ಬಂದವರು ಮನೆಗೆ ಮರಳುವಾಗ ಎಲ್ಲೋ ಒಂದು ಕಡೆ ನಾಲ್ಕೈದು ಬಜ್ಜಿ ತಿಂದುಬಿಟ್ಟಿದ್ದಾರೆ. ಮನೆ ತಲುಪುವುದರೊಳಗೇ ಅದು ತನ್ನ ಕೆಲಸ ಆರಂಭಿಸಿದೆ! ಈಗಿನ ದಿನಮಾನದಲ್ಲಿ ಆಹಾರದ ವಿಚಾರದಲ್ಲಿ ಎಷ್ಟು ಜಾಗೃತೆ ಬೇಕು ಎನ್ನುವುದಕ್ಕೆ ಈ ಘಟನೆ ಹೇಳಿದೆ ಅಷ್ಟೆ.
ಫುಡ್ ಪಾಯಿಸನಿಂಗ್ ಕೂಡ ಫುಡ್ ಅಲರ್ಜಿ ಅಲ್ಲವೆ ಎಂದು ಕೇಳಬಹುದು. ಎರಡೂ ತೊಂದರೆಗಳು ನಮಗೆ ಆಹಾರ ಸೇವಿಸಿದಾಗ ಕಾಣಿಸಿಕೊಳ್ಳುತ್ತವೆ ಎನ್ನುವುದು ನಿಜವಾದರೂ ಎರಡೂ ಬೇರೆಬೇರೆ. ಫುಡ್ ಅಲರ್ಜಿ ಶರೀರದ ರೋಗ ನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಅದು ತಕ್ಷಣದಲ್ಲಿ ಪ್ರಕಟಗೊಳ್ಳಬಹುದು ಅಥವಾ 2-3 ತಿಂಗಳು ಕಳೆದ ನಂತರವೂ ಕಾಣಿಸಿಕೊಳ್ಳಬಹುದು.
ಫುಡ್ ಪಾಯಿಸನಿಂಗ್ಗೆ ಮುಖ್ಯ ಕಾರಣ ಆಹಾರವನ್ನು ಸರಿಯಾಗಿ ಬೇಯಿಸದಿರುವುದು ಅಥವಾ ಕಲಬೆರಕೆ ಪದಾರ್ಥಗಳನ್ನು ಬಳಸುವುದು. ಕೆಲವೊಮ್ಮೆ ಆಹಾರ ಸಿದ್ಧಪಡಿಸಿದ ನಂತರ ನಡೆಯುವ ಬ್ಯಾಕ್ಟಿರಿಯಲ್ ಆ್ಯಕ್ಷನ್ಗಳೂ ಫುಡ್ ಪಾಯಿಸನಿಂಗ್ಗೆ ಕಾರಣವಾಗಬಹುದು. ಸಾಮಾನ್ಯವಾಗಿ ತಿಂದ ಅರ್ಧ ಗಂಟೆಯಲ್ಲೇ ಇದು ತನ್ನ ಪ್ರಭಾವ ತೋರಿಸಲಾರಂಭಿಸುತ್ತದೆ. ಅಪರೂಪದ ಪ್ರಕರಣಗಳಲ್ಲಿ ಎರಡು ವಾರದೊಳಗಿನ ಅವಧಿಯಲ್ಲಿ ಬಹಿರಂಗಗೊಳ್ಳುತ್ತದೆ. ಏನೇ ಆದರೂ ತೊಂದರೆ ಕಾಣಿಸಿಕೊಂಡ 24-48 ಗಂಟೆಗಳಲ್ಲಿ ಕಡಿಮೆಯಾಗುತ್ತದೆ. ವಾಂತಿ, ಅತಿಸಾರ, ಜ್ವರ ಫುಡ್ ಪಾಯಿಸನಿಂಗ್ನ ಪ್ರಮುಖ ಲಕ್ಷಣಗಳು. ಫುಡ್ ಅಲರ್ಜಿಗೆ ಹೋಲಿಸಿಕೊಂಡರೆ ಇದು ಅಪಾಯಕಾರಿ ಏನಲ್ಲ. ಹಾಗಂತ ಫುಡ್ ಪಾಯಿಸನಿಂಗ್ ತೀರಾ ನಿರ್ಲಕ್ಷ್ಯ ಮಾಡುವ ವಿಚಾರವೂ ಅಲ್ಲ. ತಿನ್ನುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾದದ್ದು ಅಗತ್ಯ ಅಲ್ಲವೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)