ವಿಶ್ವಸಾರಥಿ ವಿವೇಕಾನಂದ
ಬಾಲಕ ನರೇಂದ್ರನ ಮನಸ್ಸಿನ ಮೇಲೆ ಪ್ರಭಾವ ಬೀರಿದ ಪ್ರಮುಖರಲ್ಲಿ ಸಾರೋಟುವಾಲನೂ ಒಬ್ಬ. ಇವನ ಕಾಯಕವೆಂದರೆ ನರೇಂದ್ರನ ತಂದೆ ವಿಶ್ವನಾಥದತ್ತರನ್ನು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಕರೆ ತರುವುದಾಗಿತ್ತು. ಬಾಲಕ ನರೇಂದ್ರ ಸಾರೋಟುವಾಲನೊಡನೆ ತುಂಬಾ ಮಾತನಾಡುತ್ತಿದ್ದ. ಬಾಲಸಹಜ ಪ್ರಶ್ನೆಗಳಿಗೆಲ್ಲ ಉತ್ತರಿಸಲು ಸಾರೋಟುವಾಲನೇ ಸಮರ್ಥ ಎಂದು ಭಾವಿಸಿದ್ದ. ಅವನು ಜೀವನಾನುಭವದಿಂದ ನೀಡುತ್ತಿದ್ದ ಉತ್ತರಗಳು ನರೇಂದ್ರನ ಮನಸ್ಸಿಗೆ ಅಚ್ಚೊತ್ತುತ್ತಿದ್ದವು.
ಹೀಗಿರುವಾಗ ಒಮ್ಮೆ ವಿಶ್ವನಾಥದತ್ತರು ನರೇಂದ್ರನನ್ನು 'ದೊಡ್ಡವನಾದ ಮೇಲೆ ಏನಾಗಬೇಕು ಅಂತ ನಿನ್ನಿಷ್ಟ?' ಎಂದು ಕೇಳಿದ. ಅದಕ್ಕೆ ನರೇಂದ್ರ 'ನಾನು ಸಾರೋಟುವಾಲ ಆಗ್ತೀನಪ್ಪಾ' ಎಂದು ತಕ್ಷಣ ಉತ್ತರಿಸಿದ. ಅವನ ಉತ್ತರದಿಂದ ಕಸಿವಿಸಿಗೊಂಡ ವಿಶ್ವನಾಥರು ನರೇಂದ್ರನಿಗೆ ಶಿಕ್ಷಿಸಿದ್ದರು. ಆಗ ನರೇಂದ್ರ ತಾಯಿಯ ಬಳಿಗೆ ಹೋಗಿ ತನ್ನ ದುಃಖ ಹೇಳಿಕೊಂಡ. ತಾಯಿ ಮಗನನ್ನು ಸಮಾಧಾನಗೊಳಿಸಿ ಅವನ ಉತ್ತರವನ್ನು ಸಮರ್ಥಿಸುತ್ತಾ ಗಂಡನಿಗೆ, 'ರೀ, ನಮ್ಮ ಮಗ ಸಾರೋಟುವಾಲನಾಗುತ್ತೇನೆ ಎಂದರೆ ತಪ್ಪೇನು? ಶ್ರೀಕೃಷ್ಣನು ಸಾರಥಿಯಾಗಿ ಇಡೀ ಮಹಾಭಾರತವನ್ನೇ ಮುನ್ನಡೆಸಲಿಲ್ಲವೆ? ಶ್ರೀಕೃಷ್ಣನೂ ಒಬ್ಬ ಸಾರೋಟುವಾಲನಲ್ಲವೆ? ಹಾಗೆಯೇ ನಮ್ಮ ಮಗ ಇಡೀ ಜಗತ್ತಿಗೆ ಒಬ್ಬ ಸಾರಥಿಯಾಗಿ ಮುನ್ನಡೆಸುವ ನೇತಾರನಾಗುತ್ತಾನೆ ಎಂದು ತಿಳಿಯಿರಿ' ಎಂದಾಗ ವಿಶ್ವನಾಥರಿಗೆ ಸಮಾಧಾನವಾಯಿತು.
-ಆನಂದ ಎಸ್.ಎನ್.