ಶ್ವಾನಗಳ ಖರೀದಿ ಹೇಗೆ
ಪೊಲೀಸ್ ಶ್ವಾನದಳದ ಮುಖ್ಯಕಚೇರಿ ಬೆಂಗಳೂರಿನ ಆಡುಗೋಡಿಯಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಡಿಸಿಪಿ ಹಾಗೂ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅವುಗಳ ಬಗ್ಗೆ ಗಮನಹರಿಸುತ್ತಾರೆ.
ಹೆಚ್ಚಾಗಿ ಲ್ಯಾಬ್ರಡಾರ್, ಜರ್ಮನ್ ಷೆಫರ್ಡ್ ಹಾಗೂ ಡಾಬರ್‌ಮನ್ ತಳಿಯ ಶ್ವಾನಗಳನ್ನು ಪೊಲೀಸ್ ಇಲಾಖೆಯಲ್ಲಿ ಖರೀದಿಸಲಾಗುತ್ತದೆ. ಬೇರೆ ತಳಿಗಳ ಶ್ವಾನಗಳನ್ನು ತೆಗೆದುಕೊಳ್ಳುವುದಿಲ್ಲ.
ಬೆಂಗಳೂರಿನ ಕೇಂದ್ರದಲ್ಲಿ 45 ಶ್ವಾನಗಳಿವೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಿನ ವ್ಯಾಪ್ತಿ ಹಾಗೂ ದಾಖಲಾಗುವ ಅಪರಾಧ ಸಂಖ್ಯೆಗನುಗುಣವಾಗಿ ಶ್ವಾನಗಳ ಸಂಖ್ಯೆ ನಿಯೋಜಿಸಲಾಗಿದೆ. ಶ್ವಾನಗಳ ಅವಶ್ಯಕತೆ ಇದ್ದಲ್ಲಿ ಹತ್ತಿರದ ಜಿಲ್ಲೆಯಿಂದ ಕರೆಸಿಕೊಂಡು ಮತ್ತೆ ಅವುಗಳನ್ನು ವಾಪಸ್ ಕಳುಹಿಸಲಾಗುತ್ತದೆ.
ಶ್ವಾನಗಳನ್ನು ಹೆಚ್ಚಾಗಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಖರೀದಿಸಲಾಗುತ್ತದೆ. ಶ್ವಾನಗಳನ್ನು ಮಾರಾಟ ಮಾಡಲೆಂದೇ ಇರುವ ಕೆಲ ಉದ್ಯಮಿಗಳ ಬಳಿ ಪೊಲೀಸರು ಶ್ವಾನದ ಮರಿಗಳನ್ನು ಖರೀದಿಸುತ್ತಾರೆ.
ನಾಯಿ ಮರಿ 3 ಅಥವಾ 4 ತಿಂಗಳು ಇರುವಾಗ ಪೊಲೀಸ್ ಇಲಾಖೆ ಅದನ್ನು ಖರೀದಿಸುತ್ತದೆ. ಶ್ವಾನದ ಮರಿಯನ್ನು ಖರೀದಿಸುವ ಮುನ್ನ, ಅದರ ತಂದೆ, ತಾಯಿ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ.
ಅವರು(ನಾಯಿಗಳು) ಈ ಹಿಂದೆ ಎಲ್ಲಿದ್ದರು, ಯಾರ ಮನೆಯಲ್ಲಿದ್ದರು, ಕೆಲಸ ನಿರ್ವಹಿಸುತ್ತಿದ್ದರೇ, ಇಲ್ಲವೇ? ಒಂದು ವೇಳೆ ಕೆಲಸ ಮಾಡುತ್ತಿದ್ದರೆ ಎಂತಹ ಕೆಲಸ ಮಾಡುತ್ತಿದ್ದರು ಎಂಬಿತ್ಯಾದಿ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ.
ನಂತರ ತಂದೆ, ತಾಯಿ ಚುರುಕಾಗಿದ್ದರೆ ಅದರ ಮೇಲೆ ಅವುಗಳ ಮರಿಯ ಕೆಲಸ, ಚುರುಕುತನದ ಬಗ್ಗೆ ಲೆಕ್ಕಾಚಾರ ಮಾಡಿ ನಂತರ ಖರೀದಿಸಲಾಗುತ್ತದೆ.
- ಶಾಂತ ತಮ್ಮಯ್ಯ