ಇಬ್ಬಗೆ ಬೇಗೆ
ಸ್ಕಿಜೋಫ್ರೇನಿಯಾ ಎಂಬ ಮನೋರೋಗಕ್ಕೆ ಈಗ ಸೂಕ್ತ ಚಿಕಿತ್ಸೆಗಳಿವೆ. ಕುಟುಂಬದ ನೆರವು ದೊರೆತರೆ ರೋಗಿ...
ಸ್ಕಿಜೋಫ್ರೇನಿಯಾ ಎಂಬ ಮನೋರೋಗಕ್ಕೆ ಈಗ ಸೂಕ್ತ ಚಿಕಿತ್ಸೆಗಳಿವೆ. ಕುಟುಂಬದ ನೆರವು ದೊರೆತರೆ ರೋಗಿ ಮೊದಲಿನಂತಾಗಬಹುದು. ಸ್ಕಿಜೋಫ್ರೇನಿಯಾ ದಿನದ ಹಿನ್ನೆಲೆಯಲ್ಲಿ ಇಲ್ಲೊಂದು ತಜ್ಞರ ಮಾತು.
ಸುಮಾರು ಇಪ್ಪತ್ತು ವರ್ಷದ, ಸ್ಫುರದ್ರೂಪಿಯಾದ ಮಗನನ್ನು ಸಲಹೆಗೆಂದು ಅವನ ತಾಯಿ ಕರೆತಂದಿದ್ದರು. ಯುವಕನ ಹೆಸರು ವಿಶಾಲ್. ತಾಯಿ ಹೇಳುವ ಪ್ರಕಾರ ಮಗ ಹತ್ತನೇ ತರಗತಿಯವರೆಗೆ ಚೆನ್ನಾಗಿ ಓದುತ್ತಿದ್ದ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 85 ಅಂಕ ತೆಗೆದು ಶಾಲೆಗೇ ಮೊದಲಿಗನಾಗಿದ್ದ. ಪಿಯುಸಿ ಸೇರಿದ. ಅದೇನಾಯಿಯೋ ಕ್ರಮೇಣ ಓದಿನಲ್ಲಿ ಹಿಂದುಳಿದ. ಎಲ್ಲರೂ ತನ್ನನ್ನೇ ಗಮನಿಸುತ್ತಾರೆ ಎನ್ನುತ್ತಿದ್ದ. ಉಪಾಧ್ಯಾಯರು ತನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಲು ಪ್ರಾರಂಭಿಸಿದ. ಯಾರೋ ತನ್ನನ್ನು ಫಾಲೋ ಮಾಡುತ್ತಿದ್ದಾರೆ, ತನ್ನ ಯೋಚನೆಗಳೆಲ್ಲ ಇತರರಿಗೆ ಗೊತ್ತಾಗುತ್ತದೆ ಎಂದು ಹೇಳಲು ಪ್ರಾರಂಭಿಸಿದ. ತನ್ನ ಬಗ್ಗೆ ಪಕ್ಕದ ಮನೆಯವರು ಏನೋ ಮೆಷೀನ್ ಇಟ್ಟು ಸ್ಪೈ ಮಾಡುತ್ತಿದ್ದಾರೆ ಎನ್ನಲು ಶುರು ಮಾಡಿದ. ಕ್ರಮೇಣ ಇವು ಹೆಚ್ಚಾಗಿ ಒಂದು ರೀತಿ ಮಂಕಾದಂತಾಗಿ, ತಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಹಟ ಹಿಡಿದ. ಕೆಲವು ವೇಳೆ ಅವನ ಕೋಪ ಹಿಡಿತದಲ್ಲಿರುತ್ತಿರಲಿಲ್ಲ. ಇದು ಪ್ರಾರಂಭವಾಗಿ ಎರಡು ವರ್ಷ ಕಳೆದರೂ ದೇವರು, ಗ್ರಹಚಾರ ಎಂದೇ ಭಾವಿಸಿ ಅದಕ್ಕೆ ಹೋಮ ಹವನ, ಪೂಜೆ ಮುಂತಾದವನ್ನು ಮಾಡಿಸಿದ್ದಾಯಿತು. ದೆವ್ವ ಬಿಡಿಸಿದ್ದೂ ಆಯಿತು. ಆದರೆ ಅದು ಯಾವುದೂ ಫಲ ಕೊಡದೇ ಇದ್ದಾಗ ಒಲ್ಲದ ಮನಸ್ಸಿನಿಂದ ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದರು ವಿಶಾಲನ ತಾಯಿ.
ವಿವರಗಳನ್ನು ಪಡೆದ ವೈದ್ಯರು ವಿಶಾಲನ ಮನೋಪರೀಕ್ಷೆ ಮಾಡಿದರು. ವಿಶಾಲ ಸ್ಕಿಜೋಫ್ರೇನಿಯಾ (Schizophrenia) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ, ಸರಿಯಾದ ಚಿಕಿತ್ಸೆ ಕೊಡಿಸಿದರೆ ವಾಸಿಯಾಗುತ್ತಾನೆ ಎಂದು ವಿಶಾಲನ ತಾಯಿಗೆ ಹೇಳಿದರು. ತಾಯಿ ಮಗನಿಗೆ ಚಿಕಿತ್ಸೆ ಕೊಡಿಸಲು ಅನುಮಾನದಿಂದಲೇ ಒಪ್ಪಿದರು. ಸುಮಾರು ನಾಲ್ಕು ವಾರಗಳ ಚಿಕಿತ್ಸೆಯ ನಂತರ ವಿಶಾಲನಲ್ಲಿ ಒಳ್ಳೆಯ ಬದಲಾವಣೆಗಳು ಕಂಡುಬಂದವು. ಸಂಶಯಗಳು ಮಾಯವಾಗಿದ್ದವು. ಎಲ್ಲರಲ್ಲಿ ವಿಶ್ವಾಸ, ನಂಬುಗೆ ಉಂಟಾಗಿತ್ತು. ಕ್ರಮೇಣ ಕಾಲೇಜಿಗೆ ಹೋಗಲು ಒಪ್ಪಿ ಮೊದಲಿನಂತೆ ಓದಿನಲ್ಲಿ ಮುಂದಾದನು. ಪಿಯುಸಿ ಮುಗಿಸಿ, ಬಿಎಸ್ಸಿಯನ್ನೂ ಮುಗಿಸಿದನು. ಕೆಲಸ ಸಿಕ್ಕದ್ದರಿಂದ ವೈದ್ಯರ ಸಲಹೆಯಂತ ವ್ಯಾಪಾರ ಪ್ರಾರಂಭಿಸಿದನು. ಈಗ ಸಾಮಾನ್ಯ ಜನರಂತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ಆದರೆ ಕನಿಷ್ಠ ಪ್ರಮಾಣದ ಔಷಧ ಸೇವಿಸುತ್ತಿದ್ದಾನೆ. ಅದರಿಂದ ಅವನಿಗೆ ಯಾವ ಅಡ್ಡ ಪರಿಣಾಮಗಳೂ ಆಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಇಷ್ಟರ ಮಧ್ಯೆ ಚಿಕಿತ್ಸೆ ಪ್ರಾರಂಭಿಸಿ ಸುಮಾರು ನಾಲ್ಕಾರು ತಿಂಗಳಾಗಿರಬಹುದು. ವಿಶಾಲನ ತಾಯಿ ವೈದ್ಯರ ಹತ್ತಿರ ಬಂದು 'ಡಾಕ್ಟ್ರೇ, ಇನ್ನೆಷ್ಟು ದಿನ ಅಂತ ಈ ಮಾತ್ರೆಗಳನ್ನು ಕೊಡಬೇಕು. ಇದರಿಂದ ಮುಂದೆ ಅವನು ಮಂಕಾಗುತ್ತಾನೆ. ಅವನು ಈ ಮಾತ್ರೆಗಳಿಗೇ ಅಡಿಕ್ಟ್ ಆಗ್ತಾನೆ. ಹಾಗಾಗಿ ಮಾತ್ರೆಗಳನ್ನು ನಿಲ್ಲಿಸಿ ಬಿಡಿ ಅಂತ ನನ್ನ ಗೆಳತಿಯರು ಹೇಳ್ತಾರೆ, ಏನು ಮಾಡಲಿ ಅಂತ ಹೇಳ್ತೀರಾ?' ಎಂದು ಕೇಳಿದರು. ಅದಕ್ಕೆ ವೈದ್ಯರು 'ಆ ರೀತಿಯ ಅಡ್ಡ ಪರಿಣಾಮಗಳಾಗುವುದಿಲ್ಲ. ಈಗ ವಿಶಾಲನಿಗೆ ಕೊಡುತ್ತಿರುವ ಮಾತ್ರೆಗಳನ್ನು ಕ್ರಮೇಣ ನಿಲ್ಲಿಸಲಾಗುತ್ತದೆ. ಒಮ್ಮೆ ಅವಶ್ಯವಿದ್ದಲ್ಲಿ ಕನಿಷ್ಠ ಪ್ರಮಾಣದ ಔಷಧ ಕೊಡಲಾಗುತ್ತದೆ. ಆದರೆ ಅದು ಅಡಿಕ್ಷನ್ ಆಗುವುದಿಲ್ಲ' ಎಂದ ವೈದ್ಯರು, ಚಿಕಿತ್ಸೆಯನ್ನು ಸರಿಯಾಗಿ ಪಾಲಿಸಿದ ತಾಯಿಗೆ ಅಭಿನಂದನೆ ಸಲ್ಲಿಸಿದರು.
ಪ್ರತಿಯೊಬ್ಬ ವ್ಯಕ್ತಿಗೂ ಯೋಚಿಸುವಾಗ ಬೇರೆ ಬೇರೆ ಯೋಚನೆಗಳು ಬರುವುದು ಸಹಜ. ಆದರೆ ಅವುಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆ. ಅವು ವಾಸ್ತವಿಕತೆಗೆ ಅನುಗುಣವಾಗಿರುತ್ತವೆ. ಇತರರಿಗೆ ಅರ್ಥವಾಗುವಂತೆ ಹೇಳುತ್ತಾನೆ. ಯೋಚನೆಗಳೊಂದಿಗೆ ಭಾವನೆಗಳ ಹೊಂದಾಣಿಕೆಯ ಮಿಳಿತವಿರುತ್ತದೆ. ಭ್ರಮೆಯಿಂದ ಕೂಡಿರುವುದಿಲ್ಲ. ಆಲೋಚನೆಗಳು ಅವನ ಹಿಡಿತದಲ್ಲಿರುತ್ತದೆ. ಎಮಿಲ್ ಕ್ರಿಪ್ಲಿನ್ ತನ್ನಲ್ಲಿ ಬರುವ ರೋಗಿಗಳಲ್ಲಿ ಇವುಗಳ ಬದಲಾಗಿ ಅಸಂಬದ್ಧ ಯೋಚನೆಗಳನ್ನು ಗುರುತಿಸಿದನು.
ಒಂದಕ್ಕೊಂದರ ಜೋಡಣೆ ಅವುಗಳಲ್ಲಿ ಕಾಣಿಸಲಿಲ್ಲ. ಹಾಗಾಗಿ ಅವು ಅರ್ಥಹೀನವಾಗಿದ್ದವು. ಅದರೊಂದಿಗೆ ಯೋಚನೆಗಳಿಗೆ ತಕ್ಕ ಭಾವನೆಗಳ ಮಿಳಿತವಿರಲಿಲ್ಲ. ಯೋಚನೆಗಳು ವಾಸ್ತವಿಕತೆಗೆ ಹೊಂದಿಕೊಂಡಿರದೆ ಭ್ರಮಾನಿರತವಾಗಿರುತ್ತಿದ್ದವು. ಆದರೆ ನೆನಪಿನ ಶಕ್ತಿ ಸರಿಯಾಗಿರುತ್ತಿತ್ತು. ಕ್ರಿಪ್ಲಿನ್, ಇದು ಹರೆಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿದನು. ಅದಕ್ಕಾಗಿ ಈ ಕಾಯಿಲೆಗೆ ಡೆಮೆನ್ಷಿಯಾ ಪ್ರಿಕಾಕ್ಸ್ ಎಂದು ಹೆಸರಿಸಿದನು. ವೈಜ್ಞಾನಿಕವಾದ ಮನೋವೈದ್ಯಕೀಯ ಚಿಕಿತ್ಸೆ ಆ ಕಾಲದಲ್ಲಿ ಇರಲಿಲ್ಲ. ಒಮ್ಮೆ ಒಬ್ಬ ವ್ಯಕ್ತಿಗೆ ಈ ಕಾಯಿಲೆ ಬಂದರೆ ಅವನ ಭವಿಷ್ಯವೇ ಕತ್ತಲಾಗುತ್ತಿತ್ತು. ಡೆಮೆನ್ಷಿಯಾ ಪ್ರಿಕಾಕ್ಸ್ ಅಥವಾ ಸ್ಕಿಜೋಫ್ರೇನಿಯಾ ಕಾಯಿಲೆಯು ಎಂದೂ ವಾಸಿಯಾದ ಉದಾಹರಣೆಗಳಿರಲಿಲ್ಲ.
ಮಾನಸಿಕ ಕಾಯಿಲೆಗಳಲ್ಲಿ ದೈಹಿಕ ಕಾಯಿಲೆಗಳಂತೆ ಬೇರೆ ಬೇರೆ ವಿಧಗಳಿವೆ ಎಂಬುದನ್ನು ಮೊದಲಿಗೆ ಗಮನಿಸಿದವನೂ ಕ್ರಿಪ್ಲಿನ್. ನಂತರ ಯೂಗಿನ್ ಬ್ಲಾಲರ್ ಸ್ಕಿಜೋಫ್ರೇನಿಯಾ ಎಂದು ಕರೆದು, ಅವುಗಳಲ್ಲಿಯೂ ವಿಧಗಳಿವೆ ಎಂಬುದನ್ನು ಗುರುತಿಸಿದನು. ಅವಕ್ಕೆ ಕ್ರಮವಾಗಿ ಸಿಂಪಲ್, ಕ್ಯಟಟಾನಿಕ್, ಪ್ಯಾರಾನಾಯ್ಡ್ ಮತ್ತು ಹೆಬಿಫ್ರೀನಿಕ್ ಸ್ಕಿಜೋಫ್ರೇನಿಯಾ ಎಂದು ಕರೆದನು. ಯಾವ ವಿಧದ ಸ್ಕಿಜೋಫ್ರೇನಿಯಾವೇ ಆಗಲಿ ಅವರು ಜೀವನದಲ್ಲಿ ಸಾಧನೆಗೈಯ್ಯುವುದರಲ್ಲಿ ಹಿಂದುಳಿಯುತ್ತಿದ್ದರು. ಇತರರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಾಸ್ತವಿಕ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದರಲ್ಲಿಯೂ ಪ್ಯಾರಾನಾಯ್ಡ್ ಸ್ಕಿಜೋಫ್ರೇನಿಯಾವನ್ನುಳಿದು ಉಳಿದವರು ಆಜೀವಪರ್ಯಂತ ಮಾನಸಿಕ ಆಸ್ಪತ್ರೆಗಳಲ್ಲಿಯೇ ಕಾಲ ಕಳೆಯಬೇಕಾಗುತ್ತಿತ್ತು. ಯಾರಿಗಾದರೂ ಸ್ಕಿಜೋಫ್ರೀನಿಯಾ ಇದೆ ಎಂದರೆ ಅವನ ಭವಿಷ್ಯ ಮುಗಿಯಿತೆಂದೇ ಭಾವಿಸುತ್ತಿದ್ದರು. ಕಾರಣ, ಅದಕ್ಕೆ ಸರಿಯಾದ ಚಿಕಿತ್ಸೆ ಇರಲಿಲ್ಲ.
ಚಿಕಿತ್ಸೆ ಇದೆ
ಈಗ ಕಾಲ ಬದಲಾಗಿದೆ. ಬೇರೆಲ್ಲ ಕಾಯಿಲೆಗಳಂತೆ ಮಾನಸಿಕ ಕಾಯಿಲೆಗಳಲ್ಲೂ ಬೇರೆ ಬೇರೆ ವಿಧಗಳಿವೆ. ಕಾಯಿಲೆಗಳಿಗೆ ಕಾರಣಗಳು ನಮಗೆ ತಿಳಿದಿವೆ. ಔಷಧ ಮತ್ತು ಮನೋಸಾಮಾಜಿಕ ಚಿಕಿತ್ಸೆಗಳಿಂದ ಸ್ಕಿಜೋಫ್ರೇನಿಯಾವೂ ಸೇರಿ ಎಲ್ಲ ಮಾನಸಿಕ ಕಾಯಿಲೆಗಳನ್ನು ಆದಿಯಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಹೆಚ್ಚಿನವರು ಗುಣಮುಖರಾಗುತ್ತಾರೆ. ಅವರೂ ಎಲ್ಲರಂತೆ ಸಮಾಜದಲ್ಲಿ ಸಾಧನೆಗೈಯ್ಯಬಹುದು. ನೆಮ್ಮದಿಯ ಕುಟುಂಬ ಜೀವನ ನಡೆಸಲು ಸಾಧ್ಯ ಎಂಬುದನ್ನು ಮನೋವೈದ್ಯರು ಸಾಬೀತುಪಡಿಸಿದ್ದಾರೆ.
ಇಷ್ಟೆಲ್ಲಾ ಇದ್ದೂ ಸಹ ಮಾನಸಿಕ ರೋಗಗಳ ಕುರಿತಾದ ತಪ್ಪು ಕಲ್ಪನೆಗಳು ಅಪಾರ. ಮನೋರೋಗಿ ಎಂಬ ಕಳಂಕ ಇನ್ನೂ ಸಮಾಜದಲ್ಲಿ ಆಳವಾಗಿದೆ. ಹಾಗಾಗಿ ಹೆಚ್ಚಿನ ಮಂದಿ ಚಿಕಿತ್ಸೆಗೆ ಮುಂದಾಗುವುದಿಲ್ಲ. ಕಾಯಿಲೆ ಉಲ್ಬಣವಾದ ನಂತರ ಇನ್ನೇನು ಬೇರೆ ದಾರಿಯೇ ಇಲ್ಲ ಎಂಬಂತಾದಾಗ ಮನೋವೈದ್ಯರಲ್ಲಿಗೆ ಹೋಗುತ್ತಾರೆ. ಇದರಿಂದ ಆದಿಯಲ್ಲೇ ಸರಿಯಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ, ಇದು ರೋಗಿಯ ಕುಟುಂಬದ ಮೇಲೂ, ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ತಾಯಿ ಈ ರೋಗದಿಂದ ಬಳಲುತ್ತಿದ್ದರೆ ಅದು ಮಕ್ಕಳ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಬೀರಬಹುದು.
ಈ ಮೇಲಿನ ಅಂಶಗಳನ್ನು ಗಮನಿಸಿ, ಸಮಾಜದಲ್ಲಿ ಅರಿವನ್ನು ಮೂಡಿಸಬೇಕು. ಸ್ಕಿಜೋಫ್ರೇನಿಯಾ ಬಗ್ಗೆ ನಕಾರಾತ್ಮಕ ಭಾವನೆ ತೋರದೆ, ಆದಿಯಲ್ಲೇ ಚಿಕಿತ್ಸೆ ತೆಗೆದುಕೊಂಡಲ್ಲಿ ಅದು ವಾಸಿಯಾಗುವ ಕಾಯಿಲೆ. ಮನೋರೋಗಕ್ಕೆ, ಅದರಲ್ಲಿಯೂ ವಿಶೇಷವಾಗಿ ಸ್ಕಿಜೋಫ್ರೇನಿಯಾಕ್ಕಿರುವ ಕಳಂಕ ಅಳಿಸಿ ಹಾಕಬೇಕು. ತಪ್ಪು ಕಲ್ಪನೆ ಹೊಡೆದೋಡಿಸಬೇಕು. ಹೀಗೆ ಹಲವು ಉದ್ದೇಶಗಳಿಂದ ವಿಶ್ವ ಸ್ಕಿಜೋಫ್ರೇನಿಯಾ ದಿನ ಆಚರಿಸಲಾಗುತ್ತಿದೆ.
ಇಚ್ಛಿತ್ತವಿಕಲತೆ
ಪ್ರತಿ ವರ್ಷ ಮೇ ಇಪ್ಪತ್ತಮೂರರಂದು 'ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆ'ಯನ್ನು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಐದು ವರ್ಷಗಳಿಂದ ಹಮ್ಮಿಕೊಳ್ಳುತ್ತಿದೆ. ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಗೆ ಕನ್ನಡದಲ್ಲಿ 'ಇಚ್ಛಿತ್ತವಿಕಲತೆ' ಎಂದು ಕರೆಯಬಹುದು. ಜರ್ಮನಿಯ ಮನೋವೈದ್ಯನಾದ ಎಮಿಲ್ ಕ್ರಿಪ್ಲಿನ್ 1887ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಿದನು. ಆಗ ಅವನು ಈ ಕಾಯಿಲೆಗೆ 'ಡೆಮೆನ್ಷಿಯಾ ಪ್ರೀಕಾಕ್ಸ್' ಎಂದು ಕರೆದನು. ನಂತರ ಯೂಗಿನ್ ಬ್ಲಾಲರ್ ಎಂಬ ಮನೋವೈದ್ಯನು 1911ರಲ್ಲಿ ಆ ಹೆಸರಿಗೆ ಬದಲಾಗಿ ಸ್ಕಿಜೋಫ್ರೇನಿಯಾ ಎಂದು ಹೆಸರಿಸಿದನು.
- ಡಾ.ಕೆ.ಆರ್. ಶ್ರೀಧರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.