ಏಕತಾನತೆಯ ಬೇಸರ
ದಿನವೂ ಅದೇ ರಾಗ, ಅದೇ ಹಾಡು. ಮಾಡಿದ್ದೇ ಮಾಡಿ ಬೇಸರವಾಗಿಬಿಟ್ಟಿದೆ, ಎಲ್ಲವನ್ನೂ ಬಿಟ್ಟು ಎಲ್ಲಾದರೂ ಹೋಗಿ ಬಿಡೋಣವೆನಿಸುತ್ತದೆ ಎಂದು ಯಾವಾಗಲಾದರೊಮ್ಮೆ ಅನ್ನಿಸುವುದು ಸಾಮಾನ್ಯ. ಎಲ್ಲರ ಗೊಣಗಾಟವೂ ಇದೇ. ಬದುಕು ಏಕತಾನತೆಗೆ ಕೆಲವೊಮ್ಮೆ ಬೇಸತ್ತು ಹೋಗುತ್ತದೆ. ಉದ್ಯೋಗಿಯಾಗಲಿ, ಕೃಷಿಕರೇ ಆಗಲಿ, ಗೃಹಿಣಿಯೇ ಆಗಲಿ, ಮಾಡಿದ ಕೆಲಸವನ್ನೇ ಮಾಡಿಮಾಡಿ ಅಸಹನೆ ತಾಂಡವವಾಡುತ್ತದೆ. 'ಇಷ್ಟು ದಿನ ಹೇಗೋ ಆಯ್ತು, ಇನ್ನು ಏನು ಮಾಡಲೂ ಸಾಧ್ಯವೇ ಇಲ್ಲ. ಗೊತ್ತುಗುರಿಯಿಲ್ಲದ ಜೀವನ ಎಷ್ಟು ಚೆಂದ. ಅದು ಮಾಡಬೇಕು, ಇದು ಆಗಿಲ್ಲವೆಂಬ ಒತ್ತಡ, ಗೋಜಲುಗಳೇ ಇರುವುದಿಲ್ಲ. ಎಲ್ಲಾದರೂ ಹೋಗಿ ಬಿಡುವುದು ವಾಸಿ' ಎಂದು ಒಂದಿಲ್ಲೊಂದು ದಿನ ಎಲ್ಲರೂ ಅಂದುಕೊಳ್ಳುವವರೇ. ಹಾಗಂತ ಎಲ್ಲಾದರೂ ಹೋಗಿಯೇ ಬಿಡುವುದಿಲ್ಲ. ಆದರೆ, ಹಾಗೆ ಯೋಚಿಸಿ, ಚಿಂತಿಸಿ ಸುಮ್ಮನೆ ಮನಸ್ಸು ಹಾಳು ಮಾಡಿಕೊಳ್ಳುವ ಬದಲು, 'ನಾವು ಇದ್ದ ಪ್ರಪಂಚವೇ ಸುಂದರ. ಇಷ್ಟಾದರೂ ಉತ್ತಮ ಬದುಕು ನನ್ನದಾಗಿದೆ. ಇದರಲ್ಲೇ ಏನಾದರೂ ಮಾಡಬೇಕೇ ವಿನಾ ಇಲ್ಲಿಂದ ದೂರ ಹೋಗಿ ಏನು ಮಾಡಲು ಸಾಧ್ಯ' ಎಂದು ಅಂದುಕೊಂಡರೆ ನೆಮ್ಮದಿಯ ಬದುಕು ನಮ್ಮದಾಗಬಲ್ಲದು. ಅಲ್ಲದೇ ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ಒಂದು ದಿನ ಬೆಳಿಗ್ಗೆ ಎದ್ದರೆ ನಿಮಗೆ ಮಾಡಲು ಏನೂ ಕೆಲಸವೇ ಇರುವುದಿಲ್ಲ. ಯಾವುದೇ ಗುರಿಯೂ ಇರುವುದಿಲ್ಲ. ಹಸಿವಾದರೆ, ಎಲ್ಲೋ ಏನೋ ತಿಂದರಾಯಿತು. ಅದು ಬಿಟ್ಟರೆ ಬೇಕಾದರೆ ಮಲಗಿದರಾಯಿತು. ಮನೆಯೂ ಇಲ್ಲವಾದರೆ..ಮಲಗಲೂ ಜಾಗವಿರುವುದಿಲ್ಲ ಅದು ಬೇರೆ ಪ್ರಶ್ನೆ. ಸರಿ, ಹೀಗೆ ಎಷ್ಟು ದಿನ ಇರಬಲ್ಲಿರಿ? ಒಂದು ಜವಾಬ್ದಾರಿ, ಕರ್ತವ್ಯ, ನಿಮ್ಮದೇ ಆದ ಒಂದು ಐಡೆಂಟಿಟಿ ಇಲ್ಲದೇ ಬದುಕಿದರೆ ಏನು ಚೆಂದ? ಹೀಗೆ ಯೋಚಿಸಿಕೊಂಡಷ್ಟೂ ದಿನ ನಿಮ್ಮ ಕೆಲಸದ ಬಗ್ಗೆ ನಿಮಗೆ ಬೋರಾಗುವುದಿಲ್ಲ. ಹೌದು, ಮಾಡಿದ ಕೆಲಸವನ್ನೇ ಮಾಡುತ್ತಿದ್ದರೂ, ಮಾಡಲು ಒಂದು ಕೆಲಸ ಅಂತ ಇದೆಯಲ್ಲವಾ? ಅದೂ ಇಲ್ಲದೇ ಇದ್ದರೆ ಜೀವಿತಕ್ಕೊಂದು ಅರ್ಥವಿದೆಯೇ? ತೀರಾ ಬೇಸರವಾದರೆ ನಿಮಗೆ ಸಂತಸವೆನಿಸುವ ಕಡೆ ಎರಡು ದಿನ ಇದ್ದುಬನ್ನಿ. ಆದರೆ, ನಿಮ್ಮ ಬದುಕು, ಮನೆಯ ಜನ, ನಿಮ್ಮ ಕೆಲಸದ ಮೇಲೆ ಬೇಸರ ಬೇಡ. ನಮ್ಮದೇ ವ್ಯಕ್ತಿತ್ವ, ನಾವು ಮಾಡುವ ಕೆಲಸ, ನಮ್ಮ ಜವಾಬ್ದಾರಿಗಳನ್ನು ಪ್ರೀತಿಸಲು ಕಲಿತರೆ ಇಂತಹ ನಕಾರಾತ್ಮಕ ಯೋಚನೆಗಳಿಂದ ಮುಕ್ತಿ ಸಿಗಬಲ್ಲದು.
- ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.